ಆಶಾ ಕಾರ್ಯಕರ್ತೆಯರ ಪ್ರತಿಭಟನೆಗೆ ಬೆಂಬಲ ಸೂಚಿಸಿದ ವಾಟಾಳ್ ನಾಗರಾಜ್, ಬೇಡಿಕೆ ಈಡೇರಿಸದಿದ್ದರೆ ಕರ್ನಾಟಕ ಬಂದ್ ಮಾಡುವ ಎಚ್ಚರಿಕೆ ನೀಡಿದ್ದಾರೆ. ರಾಜ್ಯ ಸರ್ಕಾರ ಹಾಗೂ ವಿರೋಧ ಪಕ್ಷದ ನಿರ್ಲಕ್ಷ್ಯವನ್ನು ಅವರು ತೀವ್ರವಾಗಿ ಖಂಡಿಸಿದರು.

ಬೆಂಗಳೂರು (ನ.23): ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಫ್ರೀಡಂ ಪಾರ್ಕ್‌ನಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಬೆಂಬಲ ಸೂಚಿಸಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಅವರು, ರಾಜ್ಯ ಸರ್ಕಾರ ಹಾಗೂ ವಿರೋಧ ಪಕ್ಷ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ನಾಳೆ ಸಂಜೆಯೊಳಗೆ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳದಿದ್ದರೆ 'ಕರ್ನಾಟಕ ಬಂದ್'ಗೆ ಕರೆ ನೀಡುವುದಾಗಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಸರ್ಕಾರದ ವಿರುದ್ಧ ವಾಟಾಳ್ ನಾಗರಾಜ್ ಕಿಡಿ:

ಆಶಾ ಕಾರ್ಯಕರ್ತೆಯರನ್ನು ಉದ್ದೇಶಿಸಿ ಮಾತನಾಡಿದ ವಾಟಾಳ್ ನಾಗರಾಜ್, ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ತೀವ್ರವಾಗಿ ಖಂಡಿಸಿದರು.

ಕಳೆದ 5-6 ದಿನಗಳಿಂದ ನನ್ನ ಅಕ್ಕ-ತಂಗಿಯರಾದ ಆಶಾ ಕಾರ್ಯಕರ್ತೆಯರು ತಮ್ಮ ನ್ಯಾಯಯುತ ಬೇಡಿಕೆಗಳಿಗಾಗಿ ಬೀದಿಯಲ್ಲಿ ಹೋರಾಟ ಮಾಡುತ್ತಿದ್ದಾರೆ. ಇವರು ಧರಣಿ ಕುಳಿತಿರುವ ಫ್ರೀಡಂ ಪಾರ್ಕ್ ಹಿಂದೆ ಹಳೆಯ ಜೈಲಾಗಿತ್ತು; ನಾನೂ ಕೂಡ ಇಲ್ಲಿ 1 ತಿಂಗಳ ಕಾಲ ಜೈಲಿನಲ್ಲಿದ್ದೆ. ಇತ್ತ ಡಿಕೆಶಿ ಅವರು ಜಪಾನ್ ದೇಶಕ್ಕೆ ಹೋಗಿದ್ದಾರೆ. ಸಚಿವ ಮುನಿಯಪ್ಪ ಅವರು ನಾನು ಇದ್ದೇನೆ ಎನ್ನುತ್ತಾರೆ, ಸ್ಪೀಕರ್ ಖಾದರ್ ಹಳೆಯ ಕಥೆ ಬಿಡಿ ಎನ್ನುತ್ತಾರೆ. ರಾಜ್ಯದಲ್ಲಿ ಸರ್ಕಾರ ಇದೆಯಾ ಎಂಬ ಪ್ರಶ್ನೆ ಮೂಡುತ್ತಿದೆ ಎಂದು ಆಕ್ರೋಶ ಹೊರಹಾಕಿದರು.

ರಾಜ್ಯ ಸರ್ಕಾರ ಮಹಿಳೆಯರನ್ನು ಬಹಳ ಕ್ರೂರವಾಗಿ ನಡೆಸಿಕೊಳ್ಳುತ್ತಿದ್ದೀರಿ, ಹೆಣ್ಣು ಮಕ್ಕಳನ್ನು ಗೋಳು ಹೊಯ್ದುಕೊಳ್ಳಬೇಡಿ. ಪಾಪ ಆ ಹೆಣ್ಣು ಮಕ್ಕಳ ಕಷ್ಟ ಕೇಳುವುದಕ್ಕೆ ಸರ್ಕಾರದಲ್ಲಿ ಒಬ್ಬರೇ ಒಬ್ಬ ಮಹಿಳಾ ಮಂತ್ರಿ ಇಲ್ಲದಿರುವುದು ದುರಂತ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೂಡ ಈ ಬಗ್ಗೆ ಮಾತನಾಡಬೇಕಾಗುತ್ತದೆ. ಸರ್ಕಾರಕ್ಕೆ ನಾಳೆ ಸಂಜೆಯವರೆಗೆ ಗಡುವು (ಟೈಂ) ಕೊಡುತ್ತೇವೆ. ಅಷ್ಟರೊಳಗೆ ಯಾವುದೇ ನಿರ್ಧಾರ ಮಾಡದಿದ್ದರೆ ನಾವು ಬೀದಿಗಿಳಿದು ಹೋರಾಟ ಮಾಡುತ್ತೇವೆ, ಕರ್ನಾಟಕ ಬಂದ್ ಕೂಡ ಮಾಡುತ್ತೇವೆ ಎಂದು ವಾಟಾಳ್ ನಾಗರಾಜ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಕುಮಾರಕೃಪಾ ಹೆಸರು ಬದಲಾವಣೆಗಾಗಿ ದುಂದುವೆಚ್ಚ:

ಸರ್ಕಾರದ ವೆಚ್ಚಗಳು ಹಾಗೂ ಹೆಸರು ಬದಲಾವಣೆ ವಿಚಾರವನ್ನೂ ಪ್ರಸ್ತಾಪಿಸಿದ ವಾಟಾಳ್ ನಾಗರಾಜ್, "ನೀವು ಆರಾಮವಾಗಿ ಮಲಗಿಕೊಳ್ಳುವುದಕ್ಕೆ ಕುಮಾರಕೃಪಾಗೆ ₹100 ಕೋಟಿ ಖರ್ಚು ಮಾಡುತ್ತೀರಿ. ಕುಮಾರಕೃಪಾ ಎಂದರೆ ದೇವರ ಕೃಪೆ ಎಂದರ್ಥ, ಆದರೆ ಈಗ ಇವರು ಅದಕ್ಕೆ 'ಗಂಗಾ' ಎಂದು ಹೆಸರಿಟ್ಟಿದ್ದಾರೆ. ನಾಳೆ ದಿನ ವಿಧಾನಸೌಧಕ್ಕೂ ಕನಕಾರಸ ಎಂದು ಹೆಸರಿಡುತ್ತೀರಿ. ನಿಮಗೆ ಪ್ರಾಮಾಣಿಕತೆ ಇದ್ದರೆ ಕುಮಾರಕೃಪಾ ಎಂಬ ಹೆಸರನ್ನು ವಾಪಸ್ ತನ್ನಿ" ಎಂದು ಆಗ್ರಹಿಸಿದರು.

ವಿರೋಧ ಪಕ್ಷ ಬಿಜೆಪಿಗೂ ತರಾಟೆ:

ಇದೇ ವೇಳೆ ವಿರೋಧ ಪಕ್ಷ ಬಿಜೆಪಿಯ ಮೌನವನ್ನೂ ಪ್ರಶ್ನಿಸಿದ ಅವರು, "ಬಿಜೆಪಿಯವರಿಗೆ ಮಾನ ಮರ್ಯಾದೆ ಇಲ್ಲವಾ? ಆಶಾ ಕಾರ್ಯಕರ್ತೆಯರ ಪರವಾಗಿ ಹೋರಾಟ ಮಾಡುವ ಬದಲು ಊಟ ಮಾಡಲು ಹೋಗಿದ್ದೀರಾ? ನೀವೆಲ್ಲಾ ವಿರೋಧ ಪಕ್ಷದವರಾ? ತಾಕತ್ತಿದ್ದರೆ ನೀವು ಈಗ ಪಾದಯಾತ್ರೆ ಮಾಡಿ ನೋಡೋಣ" ಎಂದು ವಾಟಾಳ್ ನಾಗರಾಜ್ ಸವಾಲು ಹಾಕಿದರು.