ಸಾಹಿತ್ಯ ಸಮ್ಮೇಳನದಿಂದ ಕನ್ನಡಕ್ಕೆ ಏನೂ ಪ್ರಯೋಜನವಿಲ್ಲ, ಸುಮ್ಮನೆ ಹೋಳಿಗೆ ಕೋಸಂಬರಿ ತಿನ್ನೋಕೆ ಮಾಡ್ತಾರೆ: ವಾಟಾಳ್ ಕಿಡಿ
ಹಿರಿಯ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಮಂಡ್ಯದಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನವನ್ನು ವಿರೋಧಿಸಿದ್ದಾರೆ. ಸಮ್ಮೇಳನವು ಕನ್ನಡ ಭಾಷೆಯನ್ನು ಉಳಿಸಲು ಅಥವಾ ಬೆಳೆಸಲು ಏನನ್ನೂ ಮಾಡುತ್ತಿಲ್ಲ, ಬದಲಿಗೆ ರಾಜಕೀಯ ವೇದಿಕೆಯಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಮಂಡ್ಯ (ಡಿ.19) ನಮಗೆ ಸಮ್ಮೇಳನ ಬೇಡ. ಸಾಹಿತ್ಯ ಸಮ್ಮೇಳನದಿಂದ ಏನೂ ಪ್ರಯೋಜನವಿಲ್ಲ. ಕನ್ನಡ ಭಾಷೆ ಬೆಳೆಸಿ, ಕನ್ನಡ ಭಾಷೆ ಉಳಿಸುವ ಕೆಲಸ ಆಗಬೇಕು ಎಂದು ಹಿರಿಯ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಮಂಡ್ಯ ಸಾಹಿತ್ಯ ಸಮ್ಮೇಳನ ವಿರೋಧಿಸಿ ಘೋಷಣೆ ಕೂಗಿದರು.
ಮಂಡ್ಯದಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನ ವಿರೋಧಿಸಿ ಇಂದು ರಾಮನಗರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಮಾತನಾಡಿದ ವಾಟಾಳ್ ನಾಗರಾಜ್ ಅವರು, ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಾಕಷ್ಟು ರಾಜಕಾರಣಿಗಳು ಬರ್ತಾರೆ. ಆದರೆ ಸದನದಲ್ಲಿ ಯಾರೂ ಕನ್ನಡದ ಬಗ್ಗೆ ಮಾತನಾಡೋಲ್ಲ. ಸಾಹಿತ್ಯ ಸಮ್ಮೇಳನಕ್ಕೆ ಸುಮ್ಮನೆ ಹೋಳಿಗೆ ಕೋಸಂಬರಿ ತಿನ್ನೋದಕ್ಕೆ ಸಮ್ಮೇಳನ ಮಾಡ್ತಾರೆ. ಇದುಬಿಟ್ಟರೆ ಈ ಸಮ್ಮೇಳನದಿಂದ ಕನ್ನಡ ನಾಡು ನುಡಿಗೆ ಏನೂ ಪ್ರಯೋಜನವಿಲ್ಲ ಎಂದು ಹರಿಹಾಯ್ದರು.
ಕಸಾಪ ನೀಡಿದ ಗೌರವಕ್ಕೆ ನಾನು ಬೆರಗಾಗಿದ್ದೇನೆ..; ಡಾ.ಗೊ.ರು.ಚನ್ನಬಸಪ್ಪ ಮಾತಿಗೆ ಮಾತಿಗೆ ಚಪ್ಪಾಳೆಗಳ ಸುರಿಮಳೆ!
ಕನ್ನಡ ಸಮ್ಮೇಳನದಲ್ಲಿ ರಾಜಕೀಯ ನಡೆಯುತ್ತಿದೆ. ಕನ್ನಡ ಉಳಿಸುವುದಕ್ಕಾಗಿ, ಕನ್ನಡ ಬೆಳೆಸುವುದಕ್ಕೆ ಈ ಸಮ್ಮೇಳನ ನಡೆಯುತ್ತಿಲ್ಲ. ಇಂದು ಬೆಂಗಳೂರು ಅನ್ಯ ಭಾಷಿಕರ ಪಾಲಾಗುತ್ತಿದೆ. ಇದನ್ನ ತಪ್ಪಿಸಬೇಕು. ಸಮ್ಮೇಳನದಲ್ಲಿ ಇದರ ಬಗ್ಗೆ ಏನಾದರೂ ಚರ್ಚೆ ಆಗುತ್ತದ? ಇದ್ಯಾವುದರ ಚರ್ಚೆ ಇಲ್ಲದೆ ಕೇವಲ ರಾಜಕೀಯ ಸಭೆಯಂತೆ ತರಹೇವಾರಿ ಊಟ ಸವಿಯುವುದು ಬಿಟ್ಟರೆ ಏನೂ ಉದ್ದಾರವಾಗೋಲ್ಲ. ಕನ್ನಡ ಭಾಷೆ, ನೆಲದ ಮೇಲೆ ನಿಜವಾಗಿಯೂ ಕಾಳಜಿ ಇದ್ದರೆ ಸರೋಜಿನಿ ಮಹಿಷಿ ಜಾರಿ ಮಾಡಬೇಕು ಎಂದು ಆಗ್ರಹಿಸಿದರು. ಈ ವೇಳೆ ಜಿಲ್ಲಾಧಿಕಾರಿ ಕಚೇರಿ ಒಳಗೆ ಹೋಗಲು ಮುಂದಾದ ವಾಟಾಳ್ ನಾಗರಾಜ್‌ರನ್ನ ತಡೆದ ಪೊಲೀಸರು. ಡಿಸಿ ಕಚೇರಿ ಒಳಗೆ ಬಿಡದ ಪೊಲೀಸರೊಂದಿಗೆ ವಾಗ್ವಾದ ನಡೆಸಿದದರು. ಬಳಿಕ ವಾಟಾಳ್ ನಾಗರಾಜ್‌ರನ್ನ ವಶಕ್ಕೆ ಪಡೆದ ಪೊಲೀಸರು.