ಕಸಾಪ ನೀಡಿದ ಗೌರವಕ್ಕೆ ನಾನು ಬೆರಗಾಗಿದ್ದೇನೆ..; ಡಾ.ಗೊ.ರು.ಚನ್ನಬಸಪ್ಪ ಮಾತಿಗೆ ಮಾತಿಗೆ ಚಪ್ಪಾಳೆಗಳ ಸುರಿಮಳೆ!
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಡಾ. ಗೊ.ರು. ಚನ್ನಬಸಪ್ಪ ಅವರು ಕಸಾಪದಿಂದ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿರುವುದಕ್ಕೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಸಾಮಾನ್ಯ ಹಳ್ಳಿಯ ಹಿನ್ನೆಲೆಯಿಂದ ಬಂದ ತಮ್ಮನ್ನು ಈ ಗೌರವಕ್ಕೆ ಪಾತ್ರರನ್ನಾಗಿ ಮಾಡಿರುವುದು ಅದೃಷ್ಟ ಎಂದು ಬಣ್ಣಿಸಿದ್ದಾರೆ.
ಮೈಸೂರು (ಡಿ.19): ಕನ್ನಡ ಸಾಹಿತ್ಯ ಪರಿಷತ್ತು ನನ್ನನ್ನು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರನ್ನಾಗಿ ಏಕೆ ಆಯ್ಕೆ ಮಾಡಿತೋ ನನಗೆ ಗೊತ್ತಿಲ್ಲ. ಕಸಾಪ ಈ ಗೌರವ ನೀಡಿರುವುದಕ್ಕೆ ನಿಜಕ್ಕೂ ಬೆರಗಾಗಿದ್ದೇನೆ ಎಂದು 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಡಾ.ಗೊ.ರು. ಚನ್ನಬಸಪ್ಪ ಹೇಳಿದರು.
ನಗರದ ಸರಸ್ವತಿಪುರಂನ ಜೆಎಸ್ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಶರಣ ಸಾಹಿತ್ಯ ಪರಿಷತ್ತು ನಗರ ಹಾಗೂ ಜಿಲ್ಲಾ ಘಟಕ, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ, ಕದಳಿ ಮಹಿಳಾ ವೇದಿಕೆ ಮತ್ತು ಕನ್ನಡ ಸಾಹಿತ್ಯ ಕಲಾಕೂಟದ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶರಣ ದರ್ಶನ ಕೃತಿ ಬಿಡುಗಡೆ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರ ನನಗೆ ಅತ್ಯಂತ ಉನ್ನತವಾದ ರಾಷ್ಟ್ರೀಯ ಬಸವ ಪುರಸ್ಕಾರ ನೀಡಿದೆ. ಜಾನಪದ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್, ಕನ್ನಡ ವಿವಿಯು ನಾಡೋಜ ನೀಡಿ ಗೌರವಿಸಿದೆ. ರೆಡ್ ಕ್ರಾಸ್ ಸೇವೆಗಾಗಿ ಸಿಲ್ವರ್ ಎಲಿಫೆಂಟ್ ಎಂಬ ಉನ್ನತ ಪ್ರಶಸ್ತಿಯನ್ನು ರಾಷ್ಟ್ರಪತಿಗಳು ನೀಡಿದ್ದಾರೆ. ಆದರೆ ಈಗ ಕನ್ನಡ ಸಾಹಿತ್ಯ ಪರಿಷತ್ತು ನೀಡಿರುವ ಗೌರವ ದೊಡ್ಡದು ಎಂದರು.
ಸಾಮಾನ್ಯ ಹಳ್ಳಿಯಲ್ಲಿ ಹುಟ್ಟಿದ ವ್ಯಕ್ತಿ ಅಧ್ಯಕ್ಷನಾಗಿರುವುದಕ್ಕೆ ಅದೃಷ್ಟ ಎಂದು ಭಾವಿಸಿದ್ದೇನೆ. ಸಣ್ಣ ಹಳ್ಳಿಯಲ್ಲಿ ಹುಟ್ಟಿದ್ದಲ್ಲದೆ, ಹರಿದ ಚಾಪೆ ಮೇಲೆ, ಹರಿದ ಕಂಬಳಿ ಹೊದ್ದು ಮಲಗುತ್ತಿದ್ದ ಅರೆಹೊಟ್ಟೆಯ, ಅರೆ ಮೈಯಲ್ಲಿ ಇರುತ್ತಿದ್ದಂತಹ ಹಾಗೂ ಉನ್ನತ ಶಿಕ್ಷಣದ ಅವಕಾಶದಿಂದ ವಂಚಿತನಾದ ಸಾಮಾನ್ಯ ವ್ಯಕ್ತಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಸ್ಥಾನ ಪಡೆದಿದ್ದೇ ಒಂದು ಸೋಜಿಗ. ಇದೆಲ್ಲವೂ ಹೇಗೆ ಸಾಧ್ಯವಾಯಿತು ಎಂದು ಹೇಳಲಿಕ್ಕೂ ಹಾಗೂ ಕೇಳಿಸಿಕೊಳ್ಳಲಿಕ್ಕೂ ಆಗದ ಅವಸ್ಥೆ ನನ್ನದಾಗಿದೆ ಎಂದು ಅವರು ಹೇಳಿದರು.
'ಮನೆಗೊಂದು ಕೋಳಿ, ಊರಿಗೊಂದು ಕುರಿ' ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರ ನಿಷೇಧ ವಿರೋಧಿಸಿ ಅಭಿಯಾನ
ಸಾಹಿತ್ಯ ಪರಿಷತ್ತಿನಲ್ಲಿ ಅಷ್ಟಿಷ್ಟೋ ಪರಿಚಾರಿಕೆ ಕೆಲಸ ಮಾಡಿಕೊಂಡಿದ್ದ ನನ್ನನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಸುದ್ದಿ ಪ್ರಕಟವಾದ ಬಳಿಕ ದೊರೆಯುತ್ತಿರುವ ಅಭಿನಂದನೆ ಮತ್ತು ಅಭಿಮಾನದ ಸುರಿಮಳೆಯಲ್ಲಿ ತೋಯ್ದು ಹೋಗಿದ್ದೇನೆ. ಸಿಕ್ಕ ಅವಕಾಶವನ್ನು ನಿಷ್ಠೆಯಿಂದ ಬಳಸಿಕೊಳ್ಳಬೇಕು ಎಂಬ ತಂದೆ- ತಾಯಿಯ ಮಾತನ್ನು ಪಾಲಿಸುತ್ತಾ ಬಂದಿದ್ದೇನೆ. ನನ್ನ ಬದುಕಿನಲ್ಲಿ ಗೋಚರಿಸದ ಅನೇಕ ಶಕ್ತಿಗಳು ಕೆಲಸ ಮಾಡಿವೆ ಎಂದು ಅವರು ತಿಳಿಸಿದರು.
ಅಭಿನಂದನಾ ಭಾಷಣ ಮಾಡಿದ ವಾಗ್ಮಿ ಪ್ರೊ.ಎಂ. ಕೃಷ್ಣೇಗೌಡ ಮಾತನಾಡಿ, ಡಾ.ಗೊ.ರು. ಚನ್ನಬಸಪ್ಪ ಅವರ ಘನ ವ್ಯಕ್ತಿತ್ವ ಕನ್ನಡ ಸಾಹಿತ್ಯ ಪರಿಷತ್ತನ್ನು ದೊಡ್ಡ ತೊಂದರೆಯಿಂದ ಪಾರು ಮಾಡಿದೆ. ಮಂಡ್ಯದಲ್ಲಿ ನಡೆಯುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಡಾ.ಗೊ.ರು. ಚನ್ನಬಸಪ್ಪ ಅವರನ್ನು ಆಯ್ಕೆ ಮಾಡಿದ ಕಾರಣ ಕಸಾಪ ಮುಖವನ್ನೂ ಉಳಿಸಿಕೊಂಡಂತಾಗಿದೆ. ಅವರಲ್ಲದೇ, ಬೇರೆ ಯಾರನ್ನಾದರೂ ಆಯ್ಕೆ ಮಾಡಿದಿದ್ದರೆ ಎಲ್ಲೆಡೆ ಇನ್ನೊಂದು ರೀತಿಯ ಚರ್ಚೆ, ಮತ್ತೊಂದು ಅಸಹ್ಯ ನಡೆಯುತ್ತಿತ್ತು ಎಂದರು.
ಕಸಾಪ ಸ್ವಾವಲಂಬಿ ಆಗಬೇಕು ಎಂದು ತುಡಿದವರು ಗೊರುಚ. ಅವರು ಜಾನಪದ ವಿಶ್ವವಿದ್ಯಾಲಯ ಸ್ಥಾಪನೆಗೆ ಕಾರಣವಾದರು. ಮನುಸ್ಸು ಸ್ವಚ್ಛವಾಗಿದ್ದರೆ ಮಾಡುವುದೆಲ್ಲವೂ ಸ್ವಚ್ಛವಾಗಿರುತ್ತದೆ. ಅಂತಹ ಕೆಲಸವನ್ನು ಅವರು ಮಾಡಿದ್ದಾರೆ. ಅವರ ಸಾಹಿತ್ಯಕ್ಕಿಂತ ಅವರ ಬದುಕು ಬಹಳ ದೊಡ್ಡದು ಎಂದು ಅವರು ಹೇಳಿದರು.ಯಾವುದು ಒಡೆದು ಹೋಗಿದೆಯೋ ಅದನ್ನು ಜೋಡಿಸುವ ಕೆಲಸವನ್ನು ಸಾಹಿತ್ಯ ಸಮ್ಮೇಳನ ಮಾಡಬೇಕು. ಸಮ್ಮೇಳನವನ್ನು ಪರಿಷತ್ತು ನಡೆಸಬೇಕಿತ್ತು. ಆದರೀಗ ಸರ್ಕಾರ ನಡೆಸುತ್ತಿದೆ. ಇದು ವಿಷಾದನೀಯ. ಸಮ್ಮೇಳನದಲ್ಲಿ ಕೈಗೊಳ್ಳುವ ನಿರ್ಣಯ ಅನುಷ್ಠಾನ ಆಗದ ಬಗ್ಗೆ ಕಸಾಪ ಅಧ್ಯಕ್ಷರು ಹಾಗೂ ಸಮ್ಮೇಳನಾಧ್ಯಕ್ಷರು ಪದೇ ಪದೇ ಮಾತನಾಡುತ್ತಿರಬೇಕು. ಆಗಾಗ, ಸರ್ಕಾರದ ಗಮನಕ್ಕೆ ತರುತ್ತಿರಬೇಕು ಎಂದರು.
ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಸಮ್ಮೇಳನದ ವೇಳೆ ಸಾರ್ವತ್ರಿಕವಾಗಿ ಚರ್ಚೆ ಆಗಬೇಕಾದ ವಿಷಯಗಳ ಬದಲಿಗೆ ತಾತ್ಕಾಲಿಕವಾಗಿ, ಆ ಸಂದರ್ಭಕ್ಕೆ ಬೇಕಾದ ವಿಷಯಗಳ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.ನಾಡಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆ ಅಪಾರ. ಅದರಲ್ಲಿ ಕಸಾಪ ಕೂಡ ಒಂದು ಎಂದರು.
ಮ.ಗು. ಸದಾನಂದಯ್ಯ ಹಾಗೂ ಪ್ರೊ.ಎಸ್.ಜಿ. ಶಿವಶಂಕರ ಸಂಪಾದನೆಯ ‘ಶರಣ ದರ್ಶನ’ ಕೃತಿಯನ್ನು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಬಿಡುಗಡೆಗೊಳಿಸಿದರು. ಕರ್ನಾಟಕ ರಾಜ್ಯ ಮುಕ್ತ ವಿವಿಯ ಕನ್ನಡ ವಿಭಾಗದ ಡಾ. ಜ್ಯೋತಿ ಶಂಕರ್ ಅವರು ‘ಶರಣ ದರ್ಶನ’ ಕೃತಿಯ ಕುರಿತು ಮಾತನಾಡಿದರು. ಶರಣ ಸಾಹಿತ್ಯ ಪರಿಷತ್ತು ನಗರ ಘಟಕದ ಅಧ್ಯಕ್ಷ ಮ.ಗು. ಸದಾನಂದಯ್ಯ, ಜಿಲ್ಲಾ ಘಟಕದ ಅಧ್ಯಕ್ಷ ಹೆಳವರಹುಂಡಿ ಸಿದ್ದಪ್ಪ, ಕಸಾಪ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಶಾರದಾ ಶಿವಲಿಂಗಸ್ವಾಮಿ, ಕನ್ನಡ ಸಾಹಿತ್ಯ ಕಲಾ ಕೂಟದ ಅಧ್ಯಕ್ಷ ಎಂ. ಚಂದ್ರಶೇಖರ್ ಇದ್ದರು.
ಗೊ.ರು.ಚ ಮಾತಿಗೆ ಚಪ್ಪಾಳೆಗಳ ಸುರಿಮಳೆ: ಅಪಘಾತದಿಂದ ಪಾರಾದಾಗ, ಡೊನೇಷನ್ ಇಲ್ಲದೆ ಕಾಲೇಜಿನಲ್ಲಿ ಸೀಟು ಸಿಕ್ಕಾಗ, ಚುನಾವಣೆಯಲ್ಲಿ ಗೆದ್ದಾಗ, ಕಳೆದ ವಸ್ತು ಸಿಕ್ಕಾಗ, ಲಾಟರಿ ಹೊಡೆದಾಗ, ಅನುಕೂಲಸ್ಥರ ಮನೆಯ ಹೆಣ್ಣು ದೊರೆತಾಗ, ಪರೀಕ್ಷೆಯಲ್ಲಿ ಅನಿರೀಕ್ಷಿತವಾಗಿ ಪಾಸಾದಾಗ, ಕಳ್ಳತನ ಮಾಡಿ ಯಾರ ಕೈಗೂ ಸಿಗದಿದ್ದಾಗ, ಜೂಜಿನಲ್ಲಿ ಗೆದ್ದಾಗ, ಸಮೃದ್ಧ ಬೆಳೆ ಬಂದಾಗ, ವರ್ಗಾವಣೆಯಲ್ಲಿ ಕೇಳಿದ ಸ್ಥಳ ದೊರೆತಾಗ, ಬಹಳ ಕಾಲದ ನಂತರ ಮಕ್ಕಳಾದಾಗ, ನ್ಯಾಯಾಲಯದಲ್ಲಿ ಪ್ರಕರಣ ಗೆದ್ದಾಗ, ಭ್ರಷ್ಟಾಚಾರದ ಆರೋಪದಿಂದ ಮುಕ್ತವಾದಾಗ, ಸಂಚಾರ ನಿಯಮ ಉಲ್ಲಂಘಿಸಿದರೂ ಪೊಲೀಸರ ಕೈಗೆ ಸಿಕ್ಕದಿದ್ದಾಗ ಅದೃಷ್ಟ ಅಥವಾ ಅದೃಷ್ಟಶಾಲಿ ಎನ್ನುತ್ತಾರೆ. ಆದರೆ, ಈ ಯಾವ ಸಂದರ್ಭಕ್ಕೂ ಸಲ್ಲದ ನಾನೂ ಅದೃಷ್ಟವಂತನೇ ಸರಿ ಎಂದಾಗ ನೆರೆದಿದ್ದ ಪ್ರೇಕ್ಷಕರು ಚಪ್ಪಾಳೆಗಳ ಸುರಿಮಳೆ ಗೈದರು.
ಮಂಡ್ಯ ಸಾಹಿತ್ಯ ಸಮ್ಮೇಳನ : ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್‌ವೇ ಸಂಚಾರಿ ಮಾರ್ಗದಲ್ಲಿ ಬದಲಾವಣೆ
ನಕಾರಾತ್ಮಕ ಸಂಗತಿಗಳಿಂದ ದೊರೆಯುವ ಅದೃಷ್ಟ ಬೇರೆ. ಸಕಾರಾತ್ಮಕ ಸಂಗತಿಗಳ ಕಾರಣಕ್ಕೆ ಅದೃಷ್ಟವಂತರಾದವರು ನಿಜಕ್ಕೂ ಅದೃಷ್ಟವಂತರು. ಅದಕ್ಕೆ ಗೊರುಚ ಸೇರುತ್ತಾರೆ. ಗ್ರಾಮೀಣ ಹಾಗೂ ಜನಪದ ಪ್ರತಿಭೆಗೆ ಸ್ಥಾನಮಾನ ಸಿಕ್ಕಿರುವುದು ಅರ್ಹರಿಗೆ ಸೂಕ್ತವಾದ ಸ್ಥಾನಮಾನ ಅಪರೂಪಕ್ಕೆ ಒಮ್ಮೊಮ್ಮೆ ಸಿಗುತ್ತದೆ ಎಂಬುದು ಗೊತ್ತಾಗಿದೆ. ಅವರು ಅದನ್ನು ಕನಸಿನಲ್ಲೂ ಬಯಸಿರಲಿಲ್ಲ. ಅವರ ಮಾತು ಹಾಗೂ ಬರವಣಿಗೆಯಲ್ಲಿ ಸ್ಪಷ್ಟತೆ ಇದೆ.-ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸುತ್ತೂರು ಮಠ.