ಕರ್ನಾಟಕ ಕೇರಳ ಗಡಿ ಬಂದ್‌ಗೆ ಕರೆ ಕೊಟ್ಟ ವಾಟಾಳ್ ನಾಗರಾಜ್, ಕನ್ನಡಿಗರ ಪರ ಹೋರಾಟ, ಕರ್ನಾಟಕ ಗಡಿಯಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಉದ್ದೇಶಪೂರ್ವಕವಾಗಿ ಮಲೆಯಾಳಿ ಮಾಡಲಾಗುತ್ತಿದೆ ಎಂದು ವಾಟಾಳ್ ಹೇಳಿದ್ದಾರೆ. ಬಂದ್ ದಿನಾಂಕ ಘೋಷಿಸಿದ್ದಾರೆ.
ಮಂಗಳೂರು (ನ.23) ಕನ್ನಡರ ಪರ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ನಿಲ್ಲುವ ನಾಯಕ ವಾಟಾಳ್ ನಾಗರಾಜ್ ಮತ್ತೆ ಅಖಾಡಕ್ಕೆ ಇಳಿದಿದ್ದಾರೆ. ಈ ಬಾರಿ ವಾಟಾಳ್ ನಾಗರಾಜ್ ಹೋರಾಟ ಕರ್ನಾಟಕ ಕೇರಳ ಗಡಿ ಭಾಗಕ್ಕೆ ತಲುಪಿದೆ. ಕಾಸರಗೋಡಿನಲ್ಲಿ ಕನ್ನಡಿಗರ ಮೇಲೆ ನಡೆಯುತ್ತಿರುವ ಭಾಷಾ ದೌರ್ಜನ್ಯದ ವಿರುದ್ಧ ಭಾರಿ ಹೋರಾಟಕ್ಕೆ ವಾಟಾಳ್ ನಾಗರಾಜ್ ಸಜ್ಜಾಗಿದ್ದಾರೆ. ಡಿಸೆಂಬರ್ ಮೂರನೇ ವಾರದಲ್ಲಿ ಕರ್ನಾಟಕ ಬಂದ್‌ಗೆ ವಾಟಾಳ್ ನಾಗರಾಜ್ ಕರೆ ನೀಡಿದ್ದಾರೆ. ಈ ಕುರಿತು ಮಂಗಳೂರಿನಲ್ಲಿ ಮಾತನಾಡಿದ ವಾಟಾಳ್, ಕಾಸರಗೋಡನ್ನು ಉದ್ದೇಶಪೂರ್ವಕವಾಗಿ ಮಲೆಯಾಳಿ ಮಾಡಲಾಗುತ್ತಿದೆ. ಭಾಷಾ ದೌರ್ಜನ್ಯದ ವಿರುದ್ಧ ಹೋರಾಟ ತೀವ್ರಗೊಳ್ಳಲಿದೆ ಎಂದು ಎಚ್ಚರಿಸಿದ್ದಾರೆ.
ಕನ್ನಡ ಶಾಲೆ ಮುಚ್ಚಲಾಗುತ್ತಿದೆ
ಕಾಸರಗೋಡಿನಲ್ಲಿರುವ ಕನ್ನಡ ಶಾಲೆಗಳನ್ನು ಮುಚ್ಚಲಾಗುತ್ತಿದೆ. ಕಡ್ಡಾಯವಾಗಿ ಮಲೆಯಾಳಿ ಮಾಡುತ್ತಿದ್ದಾರೆ. ಕನ್ನಡ ಶಾಲೆಗಳಿಗೆ ಮಲಯಾಳಿ ಶಿಕ್ಷಕರನ್ನು ನೇಮಕ ಮಾಡುತ್ತಿದ್ದಾರೆ. ಮಹಾಜನ್ ವರದಿ ಪ್ರಕಾರ ಕಾಸರಗೋಡು ಕರ್ನಾಟಕಕ್ಕೆ ಸೇರಿದೆ. ಈ ಕುರಿತ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿದೆ. ಕಾಸರಗೋಡು ಎಂದಿಗೂ ಕರ್ನಾಟಕಕ್ಕೆ ಸೇರಿದ್ದು, ಅಲ್ಲಿರವ ಕನ್ನಡ ಶಾಲೆಗಳನ್ನು ಮುಚ್ಚುವ ಕೆಲಸಕ್ಕೆ ಅವಕಾಶ ನೀಡುವುದಿಲ್ಲ. ಹೀಗಾಗಿ ಡಿಸೆಂಬರ್ ಮೂರನೇ ವಾರದಲ್ಲಿ ಕರ್ನಾಟಕ-ಕೇರಳ ಗಡಿ ಬಂದ್ ಮಾಡುತ್ತೇವೆ ಎಂದಿದ್ದಾರೆ.
ಬೆಂಗಳೂರಿನಲ್ಲಿ ಕಾಸರಗೋಡು ಸಮ್ಮೇಳನ
ಡಿಸೆಂಬರ್ ತಿಂಗಳ ಎರಡನೇ ವಾರದಲ್ಲಿ ಬೆಂಗಳೂರಿನಲ್ಲಿ ಕಾಸರಗೋಡು ಸಮ್ಮೇಳನ ಮಾಡುತ್ತಿದ್ದೇವೆ. ಕಾಸರಗೋಡಿನಲ್ಲೇ ಚಳುವಳಿ ನಡೆಸುವ ಚಿಂತನೆ ಮಾಡಿದ್ದೇವೆ. ಕರ್ನಾಟಕ ಸರ್ಕಾರ ಕಾಸರಗೋಡು ಬಗ್ಗೆ ಗಂಭೀರ ಚಿಂತನೆ ಮಾಡಬೇಕು. ಸಮ್ಮೇಳನ ಆದ ಬಳಿಕ ಕಾಸರಗೋಡು ಗಡಿ ಬಂದ್ ಮಾಡುತ್ತೇವೆ. ಗುಂಡ್ಲುಪೇಟೆ ಕಡೆಯಿಂದ, ಮಂಗಳೂರು ಕಡೆಯಿಂದ ಬಂದ್ ಮಾಡುತ್ತೇವೆ. ಗುಂಡ್ಲುಪೇಟೆ ಕಡೆಯಿಂದ ವಯನಾಡು, ಮಂಗಳೂರು ಕಡೆಯಿಂದ ಕಾಸರಗೋಡು ನೇರವಾಗಿ ಬರುತ್ತೆ. ಈ ಗಡಿಗಳನ್ನು ಬಂದ್ ಮಾಡುತ್ತೇವೆ ಎಂದು ವಾಟಾಳ್ ನಾಗರಾಜ್ ಎಚ್ಚರಿಸಿದ್ದಾರೆ.
ಈ ಹಿಂದೆ ಕಾಸರಗೋಡು ಬಗ್ಗೆ ರಾಷ್ಟ್ರೀಯ ಸತ್ಯಾಗ್ರಹ ಮಾಡಿದ್ದೆವು. ಮಂಗಳೂರು ರಸ್ತೆಯಲ್ಲಿ ನಮ್ಮನ್ನು ಬಂಧನ ಮಾಡಿದ್ದರು. ಗಡಿನಾಡಿನ ಬಗ್ಗೆ ವಿಧಾನಸಭೆ, ಪಾರ್ಲಿಮೆಂಟ್ ನಲ್ಲಿ ಯಾರು ಮಾತನಾಡಿಲ್ಲ. ಕರ್ನಾಟಕದಲ್ಲಿ ಪರಭಾಷಿಗರ ದಾಳಿ ಬಹಳಷ್ಟು ಆಗಿದೆ. ಕರಾವಳಿ ಜಿಲ್ಲೆಗಳ ಬಗ್ಗೆ ಪ್ರಾಮಾಣಿಕ ಚಿಂತನೆ ಮಾಡುತ್ತೇವೆ ಎಂದಿದ್ದಾರೆ.
ಮುಖ್ಯಮಂತ್ರಿ ಬದಲಾವಣೆ, ಸಿದ್ದರಾಮಯ್ಯ ಪರ ವಾಟಾಳ್ ಬ್ಯಾಟಿಂಗ್
ರಾಜ್ಯದಲ್ಲಿ ಸಿ.ಎಂ ಬದಲಾವಣೆ ಚರ್ಚೆ ವಿಚಾರ ಕುರಿತು ವಾಟಾಳ್ ನಾಗರಾಜ್ ಬ್ಯಾಟ್ ಬೀಸಿದ್ದಾರೆ. ಸಿ.ಎಂ ಸಿದ್ದರಾಮಯ್ಯ ಪರ ವಾಟಾಳ್ ನಾಗರಾಜ್ ಬ್ಯಾಟಿಂಗ್ ಮಾಡಿದ್ದಾರೆ. ಸಂವಿಧಾನ ಬದ್ಧವಾಗಿ ಮುಖ್ಯಮಂತ್ರಿ ಯಾರು ಬೇಕಾದರೂ ಆಗಬಹುದು. ಆದ್ರೆ ಸಿದ್ದರಾಮಯ್ಯನವರನ್ನು ಯಾಕೆ ತೆಗಿಬೇಕು, ಕಾರಣವೇನು..? ಅವರಂತಹ ವ್ಯಕ್ತಿ ಸದ್ಯಕ್ಕೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಲ್ಲಿ ಇಲ್ಲ. ಏಳು ವರ್ಷದಿಂದ ಅವರು ಮುಖ್ಯಮಂತ್ರಿ ಆಗಿದ್ದಾರೆ. ಈಗ ಅವರನ್ನು ತೆಗೆದು ಅವರ ಸ್ಥಾನಕ್ಕೆ ರಾಜಕೀಯವಾಗಿ ಬೇರೆಯವರನ್ನು ತರಬಹುದು. ಆದ್ರೆ ಸಿದ್ದರಾಮಯ್ಯ ರಂತ ವ್ಯಕ್ತಿಗಳು ಬೇರೆ ಯಾರು ಇಲ್ಲ. ಸಿದ್ದರಾಮಯ್ಯನವರನ್ನು ತೆಗೆದ್ರೆ ರಾಜ್ಯದಲ್ಲಿ ಬಾರಿ ದೊಡ್ಡ ಕ್ರಾಂತಿ ಆಗುತ್ತೆ, ಹೋರಾಟ ಆಗುತ್ತೆ ಎಂದು ವಾಟಾಳ್ ನಾಗರಾಜ್ ಎಚ್ಚರಿಸಿದ್ದಾರೆ. ಸಾವಿರಾರು ಜನ ಜೈಲಿಗೂ ಹೋಗೊಕೆ ಸಿದ್ದ ಸಿದ್ದರಾಮಯ್ಯರನ್ನು ತೆಗೆಯುವುದು ಅಷ್ಟು ಸುಲಭ ಅಲ್ಲ. ತೆಗೆಯುವುದರಿಂದ ರಾಜ್ಯಕ್ಕೆ ಒಳ್ಳೆದು ಆಗಲ್ಲ. ಸಿದ್ದರಾಮಯ್ಯ ಚಿಂತನೆ, ಅಭಿಮಾನ ಇರುವ ವ್ಯಕ್ತಿ. ಹೈಕಮಾಂಡ್ ಇದಕ್ಕೆ ಕೈ ಹಾಕಿದ್ರೆ ಬೆಂಕಿ ಜೊತೆ ಸರಸ ಆದಂಗೆ ಆಗುತ್ತೆ. ದಲಿತರು ಆಗಬಾರದು ಅಂತಾ ಯಾರ ವಿರೋಧವು ಇಲ್ಲ. ಸಿದ್ದರಾಮಯ್ಯರ ನಂತ್ರ ದಲಿತರು ಆಗಬಹುದು. ಅದರ ಬಗ್ಗೆ ಯಾವುದೇ ತಕರಾರು ಇಲ್ಲ. ಆದ್ರೆ ಸಿದ್ದರಾಮಯ್ಯನವರನ್ನು ತೆಗೆಯುವ ಉದ್ದೇಶ ಏನು ಎಂದು ವಾಟಾಳ್ ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯ ಮಾಡಿರುವ ಅಪರಾಧ ಏನು, ಸಿದ್ದರಾಮಯ್ಯ ಸಿ.ಎಂ ಆಗಿ 14 ಬಾರಿ ಆಯವ್ಯಯ ಮಂಡನೆ ಮಾಡಿದ್ದಾರೆ. ಕಾಂಗ್ರೆಸ್ ಗೆ ಸಿದ್ದರಾಮಯ್ಯ ಗೌರವ, ಶಕ್ತಿಯಾಗಿದ್ದಾರೆ. ಸಿದ್ದರಾಮಯ್ಯರನ್ನು ತೆಗೆಯುವಂತದ್ದು ಗೌರವ ಅಲ್ಲ, ಸಿದ್ದರಾಮಯ್ಯರನ್ನು ತೆಗೆಯೋದು ಬೇಡ ಅಂದಾಗ ಬೇರೆಯವರ ಬಗ್ಗೆ ಮಾತಾಡುವ ಪ್ರಶ್ನೆಯೆ ಬರಲ್ಲ ಎಂದು ವಾಟಾಳ್ ಹೇಳಿದ್ದಾರೆ.


