ರಬಕವಿ ಬನಹಟ್ಟಿ ತಾಲೂಕಿನ ಗೋದಾವರಿ ಸಕ್ಕರೆ ಕಾರ್ಖಾನೆಯಲ್ಲಿ ನಡೆದ ಬೆಂಕಿ ಅವಘಡದ ನಂತರ ಎರಡು ಗುಂಪುಗಳ ನಡುವೆ ಕಲ್ಲು ತೂರಾಟ ನಡೆದಿದೆ. ಈ ಘಟನೆಯಲ್ಲಿ ಬಾಗಲಕೋಟೆ ಎಎಸ್ಪಿ ಮಹಾಂತೇಶ್ವರ ಜಿದ್ದಿ ಗಂಭೀರವಾಗಿ ಗಾಯಗೊಂಡಿದ್ದು, ಮೂರು ತಾಲೂಕುಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಬಾಗಲಕೋಟೆ, (ನ.13): ರಬಕವಿ ಬನಹಟ್ಟಿ ತಾಲೂಕಿನ ಸೈದಾಪೂರ್‌ನ ಗೋದಾವರಿ ಸಕ್ಕರೆ ಕಾರ್ಖಾನೆಯಲ್ಲಿ ನಡೆದ ಬೆಂಕಿ ಅವಘಡದ ಸಂದರ್ಭದಲ್ಲಿ ಎರಡು ಗುಂಪುಗಳ ನಡುವೆ ಕಲ್ಲು ತೂರಾಟ ಸಂಭವಿಸಿತು. ಈ ಘಟನೆಯಲ್ಲಿ ಬಾಗಲಕೋಟೆ ಜಿಲ್ಲಾ ಆಡಿಷನಲ್ ಎಸ್‌ಪಿ (ಎಎಸ್ಪಿ) ಮಹಾಂತೇಶ್ವರ ಜಿದ್ದಿ ಅವರ ಕಾಲಿಗೆ ಕಲ್ಲು ಬಲವಾಗಿ ತಾಗಿ ಗಂಭೀರ ಗಾಯವಾದಿದ್ದು, ಕಾಲು ಪ್ರ್ಯಾಕ್ಚರ್ ಆಗಿದೆ.

ಹೆಚ್ಚಿನ ಚಿಕಿತ್ಸೆಗೆ ಎಎಸ್ಪಿ ಮಹಾಂತೇಶ್ವರ ಜಿದ್ದಿ ಬೆಂಗಳೂರಿಗೆ ಶಿಫ್ಟ್:

ಕಲ್ಲು ತೂರಾಟ ನಡೆದ ವೇಳೆ ಪರಿಸ್ಥಿತಿ ನಿಯಂತ್ರಿಸಲು ತೊಡಗಿದ್ದ ಮಹಾಂತೇಶ್ವರ್ ಜಿದ್ದಿ ಅವರು ಉದ್ರಿಕ್ತ ಗುಂಪುಗಳ ಕಲ್ಲು ತೂರಾಟದಲ್ಲಿ ತೀವ್ರವಾಗಿ ಗಾಯಗೊಂಡರು. ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ತಕ್ಷಣ ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ರವಾನಿಸಲಾಯಿತು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ, ಹೆಚ್ಚಿನ ಚಿಕಿತ್ಸೆಗಾಗಿ ಅಂಬ್ಯುಲೆನ್ಸ್ ಮೂಲಕ ಬೆಂಗಳೂರಿಗೆ ರವಾನಿಸಲಾಗಿದೆ.

ಮೂರು ತಾಲೂಕುಗಳಲ್ಲಿ ಮೂರು ದಿನಗಳ ನಿಷೇಧಾಜ್ಞೆ ಜಾರಿ

ಈ ಘಟನೆಯ ಹಿನ್ನೆಲೆಯಲ್ಲಿ ಶಾಂತಿ-ಸುರಕ್ಷತೆ ಕಾಪಾಡಲು ಜಿಲ್ಲಾಡಳಿತವು ಮೂರು ತಾಲೂಕುಗಳಲ್ಲಿ ಮೂರು ದಿನಗಳ ನಿಷೇಧಾಜ್ಞೆ ಜಾರಿಗೊಳಿಸಿದೆ. ಜಿಲ್ಲಾಧಿಕಾರಿಯ ಅಧಿಕೃತ ಆದೇಶ ಪ್ರಕಾರ, ಈ ಕ್ಷಣದಿಂದಲೇ (ನ.13ರ ಸಂಜೆ) ನವೆಂಬರ್ 16ರ ಬೆಳಿಗ್ಗೆ 8 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಈ ಕಾಲಾವಧಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಗುಂಪುಗಳ ಸೇರ್ಪಡೆ, ಧರಣೆಗಳು ಮತ್ತು ಇತರ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ. ಪೊಲೀಸ್ ಇಲಾಖೆಯು ಈ ಪ್ರದೇಶದಲ್ಲಿ ಕಟ್ಟುನಿಟ್ಟು ಭದ್ರತಾ ವ್ಯವಸ್ಥೆಗಳನ್ನು ಜಾರಿಗೊಳಿಸಿದೆ.