Asianet Suvarna News Asianet Suvarna News

ದೈವ ನರ್ತಕರಿಗೆ ಮಾಶಾಸನ ಬೇಡ ಎಂಬ ಬಿ.ಟಿ. ಲಲಿತಾ ನಾಯಕ್‌ ಹೇಳಿಕೆಗೆ ಯು.ಟಿ.ಖಾದರ್‌ ಖಂಡನೆ

ರಾಜ್ಯ ಸರ್ಕಾರ ದೈವ ನರ್ತಕರಿಗೆ ಘೋಷಿಸಿರುವ ಮಾಶಾಸನದ ಕುರಿತು ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ನೀಡಿದ ಹೇಳಿಕೆಯನ್ನು  ವಿಪಕ್ಷ ಉಪ ನಾಯಕ ಯು.ಟಿ.ಖಾದರ್‌ ಖಂಡಿಸಿದ್ದಾರೆ.  ನನ್ನ ಕ್ಷೇತ್ರ ಹಾಗೂ ಸಂಪೂರ್ಣ ಕರಾವಳಿ ಜನರ ಪರವಾಗಿ ನಾನು ನಿಮ್ಮ ಮಾತನ್ನು ಖಂಡಿಸುತ್ತೇನೆ ಎಂದಿದ್ದಾರೆ.

UT Khader condemns BT Lalitha Naik statement against  daiva nartana gow
Author
First Published Nov 7, 2022, 5:36 PM IST

ಮಂಗಳೂರು (ನ.7): ರಾಜ್ಯ ಸರ್ಕಾರ ದೈವ ನರ್ತಕರಿಗೆ ಘೋಷಿಸಿರುವ ಮಾಶಾಸನದ ಕುರಿತು ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ನೀಡಿದ ಹೇಳಿಕೆಯನ್ನು ಮಾಜಿ ಸಚಿವ, ವಿಪಕ್ಷ ಉಪ ನಾಯಕ ಯು.ಟಿ.ಖಾದರ್‌ ಖಂಡಿಸಿದ್ದಾರೆ. ಈ ಬಗ್ಗೆ ಶನಿವಾರ ಟ್ವೀಟ್‌ ಮಾಡಿರುವ ಯು.ಟಿ.ಖಾದರ್‌, ‘ಬಿ.ಟಿ. ಲಲಿತಾ ನಾಯಕ್‌ ಅವರೇ, ನಿಮ್ಮ ಬಗ್ಗೆ ನಮಗೆ ಗೌರವವಿದೆ. ಆದರೆ ದೈವ ನರ್ತಕರಿಗೆ ನೀಡಿರುವ ಮಾಶಾಸನ ಸರಿ ಅಲ್ಲ ಎಂಬ ಮಾತನ್ನು ನಾನು ಒಪ್ಪಲು ಸಿದ್ದವಿಲ್ಲ. ನನ್ನ ಕ್ಷೇತ್ರ ಹಾಗೂ ಸಂಪೂರ್ಣ ಕರಾವಳಿ ಜನರ ಪರವಾಗಿ ನಾನು ನಿಮ್ಮ ಮಾತನ್ನು ಖಂಡಿಸುತ್ತೇನೆ. ದೈವ ನರ್ತಕರ ಪವಿತ್ರ ಆಚರಣೆ ಗೌರವಿಸಿ ಹಾಗೂ ಕರಾವಳಿ ಸಂಸ್ಕೃತಿಯನ್ನ ಅರ್ಥೈಸಿಕೊಂಡು ನಿಮ್ಮ ನಿಲುವಿನ ಬಗ್ಗೆ ಮರು ಚಿಂತನೆ ಮಾಡುವುದು ಒಳಿತು’ ಎಂದು ಪ್ರತಿಕ್ರಿಯಿಸಿದ್ದಾರೆ.

ದೇವರು ಎಂದು 2 ಸಾವಿರ ಕೊಡುವ ಬದಲು ದುಡಿಯುವಂತೆ ಮಾಡಿ ಎಂದಿದ್ದ ಲಲಿತಾ ನಾಯಕ್:
ಈಗಿರುವ ಎಲ್ಲ ದೇವರು ಮನುಷ್ಯರೇ. ನಾವು ಅವ​ರ​ನ್ನು ದೇವರು ಅಂತಾ ಮಾಡ್ಕೊಂಡಿರೋದು. ದೇವರು ಎಂದು  2 ಸಾವಿರ ಕೊಡುವ ಬದಲು ದುಡಿಯುವಂತೆ ಮಾಡಿ. ಆದರೆ, ಅವರಿಗೆ 100 ಕೊಟ್ಟು, 1 ಇಸ್ಕೊಂಡು ಕಣ್ಣಿಗೆ ಒತ್ತಿಕೊಳ್ತಾರೆ. ಅವರು ದೇವರು, ಆಶೀರ್ವಾದ ಮಾಡುತ್ತಾ​ರೆ ಎಂದು ಮೂಢನಂಬಿಕೆ ಬಿತ್ತುತ್ತಿದ್ದಾರೆ ಎಂದು ಜನತಾ ಪಕ್ಷ ಅಧ್ಯಕ್ಷೆ ಬಿ.ಟಿ. ಲಲಿತಾ ನಾಯಕ್‌ ಹೇಳಿದ್ದರು.

 ಘನತೆಯಿಂದ ದುಡಿದು 5/10 ಸಾವಿರ ದುಡಿಯುವಂತೆ ಮಾಡಬೇ​ಕು. ಮಂಗಳಮುಖಿಯರೂ ಒಳ್ಳೆಯ ರೀತಿಯಿಂದ ದುಡಿಯಲು ಸಾಧ್ಯವಿದೆ. ಬೆಂಗಳೂರಲ್ಲಿ ಒಬ್ಬರೆ ಸಿಕ್ಕರೆ ಕೊಂದು ಹಾಕಿಬಿಡ್ತಾರೆ, ಅಷ್ಟು ಗಟ್ಟಿಅವರು. ಅವರನ್ನು ದುಡಿಸಿಕೊಳ್ಳಬೇಕು. ರಾಮಕೃಷ್ಣ ಹೆಗಡೆ ಆ ಕೆಲಸ ಮಾಡಿದವರು. ಮಾನವ ಶ್ರಮವನ್ನು ಸರ್ಕಾರ ಬಳಸಿಕೊಳ್ಳಬೇಕು. ದೇವರ ಹೆಸರಲ್ಲಿ ದಣಿದವನಿಗೆ  2 ಸಾವಿರ ಕೊಟ್ಟರೆ ಸಾಲಲ್ಲ. ಪೂಜೆ ಮನೆಗಳಲ್ಲಿ ಮಾಡಿಕೊಳ್ಳಲಿ, ದೇವಸ್ಥಾನದಲ್ಲೂ ಜ್ಞಾನ ಸಿಗಲ್ಲ. ದುಡಿದವರ ಹಣವನ್ನು ಅಲ್ಲೇಕೆ ಕೊಡಬೇಕು? ದೇವರ ಹೆಸರಲ್ಲಿ ದುಡ್ಡು ಕೊಡಿ ಅಂತಾರೆ. ಈಗ ತಿಳಿವಳಿಕೆ ಇದೆ ಕೊಡಲ್ಲ. ಹಣ ಕೊಡದಿದ್ರೆ ತೀರ್ಥ ಕೊಡಲ್ಲ. ಆ ತೀರ್ಥ ಕುಡಿಬೇಡಿ. ಎಷ್ಟೊ ದಿನದ ಕಿಲುಬು ಇರುತ್ತದೆ.

 

ಈ ಹಿಂದೆ ಕೃಷ್ಣಯ್ಯ ಶೆಟ್ಟಿ ಗಂಗಾಜಲ ಕೊಟ್ಟರು. ಟ್ಯಾಂಕರ್‌ನಲ್ಲಿ ಗಂಗಾಜಲ ತರಿಸಿದ್ದೀವಿ ಎಂದ​ರು. ನಮಗೂ ಸ್ವಲ್ಪ ಕೊಟ್ಟಿದ್ದರು. ಮುಖಕ್ಕೆ ಉಗಿದು ವಾಪಸ್‌ ಕಳುಹಿ​ಸಿದ್ದೀವಿ. ಅಲ್ಲಿಗೆ ಹೋಗಿ ನೋಡಿ ಗಂಗೆಯಲ್ಲಿ ಹೆಣಗಳು ತೇಲುತ್ತಿವೆ. ಬೋಟ್‌ನಲ್ಲಿ ಹೋದರೆ ತಲೆ ಬುರುಡೆಗಳು ತಾಗುತ್ತವೆ. ಅಷ್ಟು ಹೊಲಸು ಮಾಡಿಟ್ಟಿದ್ದೀವಿ. ಪೂಜೆ ಅಂದರೆ ಕೆರೆ ಸ್ವಚ್ಛವಾಗಿಡುವುದು ಮನಸ್ಸನ್ನು ಸ್ವಚ್ಛವಾಗಿಟ್ಟುಕೊಳ್ಳೋದು. ದೇವರ ಹೆಸರು ಹೇಳಿ ಕುಣಿಯುವವನಿಗೆ ಸಾರ್ವಜನಿಕ ಹಣ ಕೊಡೋದು ಇಷ್ಟಇಲ್ಲ. ಅವನಿಗೆ ಕೆಲಸ ಕೊಡಿ. ದುಡಿದು ಊಟ ಮಾಡಲು ಹಚ್ಚಿ ಎಂದಿದ್ದರು.

ದೈವ ನರ್ತಕರಿಗೆ ಸರ್ಕಾರವೇಕೆ 2 ಸಾವಿರ ನೀಡಬೇಕು: ಬಿಟಿ ಲಲಿತಾ ನಾಯಕ್‌!

ಕಾಂತಾರದ ಬಗ್ಗೆ ವಿವಾದಿತ ಹೇಳಿಕೆ ನೀಡಿದ್ದ ಲಲಿತಾ ನಾಯಕ್ : ಈ ಹಿಂದೆ ಕೂಡ ಲಲಿತಾ ನಾಯಕ್ ವಿವಾದಿತ ಹೇಳಿಕೆ ನೀಡಿದ್ದರು.  ಕಾಂತಾರ ಚಿತ್ರ ವೀಕ್ಷಿಸಲು ಬಹಳ ಬುದ್ಧಿವಂತಿಕೆ ಬೇಕು. ಇನ್ನು ಭೂತಾರಾಧನೆಯ ಸಮಯದಲ್ಲಿ ದೇವರು ಬರುತ್ತಾರೆ ಅನ್ನೋದೆಲ್ಲಾ ಸುಳ್ಳು. ದೈವ ನರ್ತಕರು ಓಹೋ ಎಂದು ಚೀರಾಟ ಮಾಡುವುದು ಕುಣಿಯುವುದರ ಹಿಂದೆ ಬೇರೆಯದೇ ಆದ ಕಾರಣವಿದೆ. ಅವರ ಮೇಲೆ ದೇವರು ಬಂದಾಗ ಮಾಡುವ ವರ್ತನೆ ಇದಲ್ಲ. ಕಾಂತಾರ ಚಿತ್ರ ಕಾಡಿನ ಜನರ ನೋವಿನ ಕಥೆ. ಜಮೀನ್ದಾರ ಪದ್ಧತಿಯ ಮೂಲಕ ಅವರನ್ನು ಒಕ್ಕಲೆಬ್ಬಿಸಲು ನೋಡಿದರು. ಅವರಿಗೆ ಕೊಡಬಾರದ ಚಿತ್ರಹಿಂಸೆಗಳನ್ನೆಲ್ಲಾ ನೀಡಿದರು. ಕೊನೆಗೆ ತಮ್ಮ ಉಳಿವಿಗಾಗಿ ಹಾಗೂ ನ್ಯಾಯಕ್ಕಾಗಿ ಸರ್ಕಾರದ ಮೊರೆ ಹೋದರು. ಅವರಿಂದಲೂ ಕೂಡ ನ್ಯಾಯ ಸಿಗದೇ ಇದ್ದಾಗ, ತಮ್ಮ ನೋವನ್ನು ಈ ರೀತಿ ಚೀರಾಡುವ ಮೂಲಕ ಹೊರಹಾಕಿದರು. ಅದನ್ನೇ ಈಗ ದೈವ ಎಂದು ನಂಬುತ್ತಿದ್ದಾರೆ ಎಂದು ವಿವಾದಿತವಾಗಿ ಹೇಳಿದ್ದರು.

ಮಂದಿರಗಳಲ್ಲಿ ಕೊಡುವ ತೀರ್ಥವನ್ನು ಕುಡಿಯಬಾರದು: ಮಾಜಿ ಸಚಿವೆ ಬಿ ಟಿ ಲಲಿತಾ ನಾಯಕ್

ಇನ್ನು ನಿರ್ದೇಶದ ರಿಷಬ್‌ ಶೆಟ್ಟಿ ಕುರಿತಾಗಿ  ಮಾತನಾಡಿ,  ರಿಷಬ್‌ ಏನಾದರೂ ಚಿತ್ರದಲ್ಲಿ ಹೇಳಿರುವ ವಿಚಾರವನ್ನು ನೇರವಾಗಿ ಹೇಳಿದ್ದರೆ, ಖಂಡಿತವಾಗಿ ಜನರಿಂದ ಹೊಡೆಸಿಕೊಳ್ಳುತ್ತಿದ್ದರು. ಹಾಗಾಗಿ ಈ ಮಾರ್ಗ ಅನುಸರಿಸಿದ್ದಾನೆ. ರಿಷಭ್‌ ಹೇಳಿರುವ ವಿಚಾರವನ್ನು ನೇರವಾಗಿ ತಿಳಿಸಿದ್ದರೆ, ನಮ್ಮ ಮೂರ್ಖ ಜನರು ಥಿಯೇಟರ್‌ಗೆ ಬೆಂಕಿ ಹಚ್ಚಿ ಪ್ರತಿಭಟಿಸುತ್ತಿದ್ದರು. ಅಷ್ಟರ ಮಟ್ಟಿಗೆ ನಮ್ಮ ಜನರ ತಲೆಕೆಟ್ಟಿದೆ. ಸದ್ಯವನ್ನು ನೇರವಾಗಿ ಹೇಳಿದ್ರೆ ಅವರು ಖಂಡಿತವಾಗಿ ಸಾಯುತ್ತಾರೆ. ಇದು ಅವರಿಗೆ ಬೇಕಿಲ್ಲ. ಅದಕ್ಕಾಗಿ ಬುದ್ಧಿವಂತಿಕೆಯಿಂದ ಈ ಚಿತ್ರ ಮಾಡಿದ್ದಾನೆ ಎಂದಿದ್ದರು.

Follow Us:
Download App:
  • android
  • ios