ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ ಅವರು ಇಂದು (ಭಾನುವಾರ) ರಾಜ್ಯದ ಆರೋಗ್ಯ ಸಚಿವ ಹಾಗೂ ಸರ್ಕಾರ ಮುಖ್ಯಕಾರ್ಯದರ್ಶಿಗಳ ಜೊತೆ ಸಭೆ ನಡೆಸಿದ್ದು, ಕೇಂದ್ರದ ನೆರವು ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.

ಬೆಂಗಳೂರು, (ಏ.25): ಕೊರೊನಾ ವಿರುದ್ಧದ ಹೋರಾಟದಲ್ಲಿ ಅಗತ್ಯವಾದ ಔಷಧ, ಲಸಿಕೆ, ಆಮ್ಲಜನಕ ಪೂರೈಕೆ ಸೇರಿದಂತೆ ಎಲ್ಲ ನೆರವು ನೀಡುವುದಾಗಿ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ಭರವಸೆ ನೀಡಿದೆ ಎಂದು ಕೇಂದ್ರ ಸಚಿವ ಸದಾನಂದಗೌಡ ತಿಳಿಸಿದ್ದಾರೆ.

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ ಅವರು ವಿಧಾನಸೌಧದಲ್ಲಿ ಇಂದು (ಭಾನುವಾರ) ಆರೋಗ್ಯ ಸಚಿವ ಡಾ ಕೆ ಸುಧಾಕರ್, ಮುಖ್ಯಕಾರ್ಯದರ್ಶಿ ಪಿ ರವಿಕುಮಾರ್, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಜಾವೇದ್ ಅಕ್ತರ್, ಮುಖ್ಯಮ‍ಂತ್ರಿಯವರ ಪ್ರಧಾನ ಕಾರ್ಯದರ್ಶಿ ರಮಣ ರೆಡ್ಡಿ ಮತ್ತಿತರ ಹಿರಿಯ ಅಧಿಕಾರಿಗಳ ಜೊತೆ ಪರಿಣಾಮಕಾರಿಯಾಗಿ ಕೊರೋನಾ ನಿಯಂತ್ರಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದರು.

ಜಗತ್ತಿನಲ್ಲೇ ಅತಿಹೆಚ್ಚು ಲಸಿಕೆ ಬುಕ್‌ ಮಾಡಿದ ಭಾರತ!

ಈ ಸಾಂಕ್ರಾಮಿಕವನ್ನು ಮಣಿಸಲು ಎಲ್ಲರೂ ಸಂಯುಕ್ತವಾಗಿ ಕಾರ್ಯನಿರ್ವಹಿಸಬೇಕಿದೆ. ರಾಜ್ಯಕ್ಕೆ ಅಗತ್ಯವಾದ ಎಲ್ಲ ರೀತಿಯ ನೆರವು ನೀಡಲು ಕೇಂದ್ರ ಸರ್ಕಾರವು ಸದಾ ಸಿದ್ಧವಿದೆ. ಕೊರೋನಾ ಪರಿಸ್ಥಿತಿ ಬಗ್ಗೆ, ತುರ್ತು ನೆರವಿನ ಬಗ್ಗೆ, ರೆಮಿಡಿಸಿವರ್ ಮತ್ತಿತರ ಔಷಧಿಗಳ ಅಗತ್ಯತೆ ಬಗ್ಗೆ ನಿರಂತರವಾಗಿ ಮಾಹಿತಿ ವಿನಿಮಯ ಮಾಡಿಕೊಳ್ಳಿ. ರಾಜ್ಯಕ್ಕೆ ಅಗತ್ಯ ನೆರವು ಒದಗಿಸುವುದಕ್ಕಾಗಿಯೇ ದೆಹಲಿಯ ತಮ್ಮ ಕಚೇರಿಯಲ್ಲಿ ಹಿರಿಯ ಅಧಿಕಾರಿಯೊಬ್ಬರನ್ನು ನಿಯೋಜಿಸಿರುವುದಾಗಿ ಸಚಿವರು ಸಭೆಯಲ್ಲಿ ಹೇಳಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸದಾನಂದಗೌಡ, ರಾಜ್ಯಕ್ಕೆ ಏಪ್ರಿಲ್ 30ರವರೆಗಿನ ಬಳಕೆಗಾಗಿ ಕನಿಷ್ಠ ಪಕ್ಷ 1 ಲಕ್ಷ ರೆಮಿಡಿಸಿವರ್ ಬೇಕು ಎಂದು ರಾಜ್ಯ ಸರ್ಕಾರ ಬೇಡಿಕೆ ಇಟ್ಟಿತ್ತು. ಈಗ 1.22 ಲಕ್ಷ ವಯಲ್ಸ್ ಹಂಚಿಕೆ ಮಾಡಲಾಗಿದೆ. ಅದೇ ರೀತಿ 800 ಮೆಟ್ರಿಕ್ ಟನ್ ಆಮ್ಲಜನಕ ಹಂಚಿಕೆ ಮಾಡಲಾಗಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸುವುದಾಗಿ ತಿಳಿಸಿದರು.

ರಾಜ್ಯವೊಂದರಲ್ಲಿ ಕೊರೋನಾ ಸೋಂಕಿತರು ಬಳಸುವ ಆಮ್ಲಜನಕ ಪ್ರಮಾಣಕ್ಕೆ ಅನುಗುಣವಾಗಿ ರೆಮ್ಡೆಸಿವಿರ್ ಹಂಚಿಕೆ ಮಾಡಲಾಗುತ್ತಿತ್ತು. ಹೀಗಾಗಿ ರಾಜ್ಯಕ್ಕೆ ಆರಂಭದಲ್ಲಿ ಕೇವಲ 25 ಸಾವಿರ ವಯಲ್ಸ್ ಹಂಚಿಕೆಯಾಗಿತ್ತು. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಹೆಚ್ಚಿನ ವಯಲ್ಸ್ ಹಂಚಿಕೆಗೆ ಬೇಡಿಕೆ ಇಟ್ಟಿದ್ದರು. ನಂತರ ತಮ್ಮ ಮಧ್ಯಪ್ರವೇಶದಿಂದ ಮತ್ತೆ 25 ಸಾವಿರ ವಯಲ್ಸ್ ಒದಗಿಸಲಾಗಿತ್ತು. ಆಮ್ಲಜನಕ ಬಳಕೆ ಪ್ರಮಾಣ ಮೇಲೆ ರೆಮ್ಡೆಸಿವರ್ ಪ್ರಮಾಣ ನಿಗದಿ ಮಾಡುವುದು ಸರಿಯಲ್ಲ. ಕೊರೋನಾ ಪೀಡಿತರ ಸಂಖ್ಯೆಯ ಮೇಲೆ ಇದರ ಹಂಚಿಕೆಯಾಗಬೇಕು ಎಂಬುದು ರಾಜ್ಯಗಳ ಹಾಗೂ ನಮ್ಮೆಲ್ಲರ ಅಭಿಪ್ರಾಯವಾಗಿತ್ತು. ನಿನ್ನೆ (ಶನಿವಾರ) ಇದರ ಪ್ರಕಾರವೇ ರೆಮ್ಡೆಸಿವರ್ ಮರುಹಂಚಿಕೆ ಮಾಡಲಾಗಿದೆ ಎಂದರು.

ಲಸಿಕಾ ಅಭಿಯಾನಕ್ಕೆ ವೇಗ ನೀಡಲು ರಾಜ್ಯವು ಹೆಚ್ಚಿನ ಲಸಿಕೆ ಪೂರೈಕೆಗೆ ಬೇಡಿಕೆ ಇಟ್ಟಿದೆ. ಸದ್ಯ ಪ್ರತಿದಿನ ಸುಮಾರು 2.5 ಲಕ್ಷ ಜನರಿಗೆ ಕೊವಿಡ್ ಲಸಿಕೆ ನೀಡಲಾಗುತ್ತಿದ್ದು ಅದನ್ನು 4 ಲಕ್ಷಕ್ಕೆ ಏರಿಸಲು ಉದ್ದೇಶಿಸಿದೆ. ರಾಜ್ಯದ ಬೇಡಿಕೆ ಬಗ್ಗೆ ಮುಂದಿನ ಸಂಪುಟ ಸಭೆಯಲ್ಲಿ ಪ್ರಸ್ತಾವಿಸುವುದಾಗಿ ತಿಳಿಸಿದರು.

ಮುಂಬರುವ ದಿನಗಳಲ್ಲಿ ರಾಜ್ಯದ ಆಮ್ಲಜನಕ ಬಳಕೆ ಹೆಚ್ಚಳವಾಗಲಿದ್ದು 1400 ಮೆಟ್ರಿಕ್ ಟನ್ ಬೇಕು ಎಂಬ ಬೇಡಿಕೆ ಬಂದಿದೆ. ಅದನ್ನು ಪೂರೈಸಲೂ ನಾವು ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಬೆಂಗಳೂರು ಅತ್ಯಂತ ಹೆಚ್ಚು ಕೊರೋನಾ ಪ್ರಕರಣ ಕಂಡ ನಗರವಾಗಿದೆ. ಇನ್ನೂ ಹತ್ತು ದಿನ ಪರಿಸ್ಥಿತಿ ಕಠಿಣವಾಗಿಯೇ ಇರಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಎರಡನೇ ಸುತ್ತಿನ ಲಸಿಕೆ ಪಡೆಯಲು ಲಸಿಕೆ ಕೊರತೆಯಾದದ್ದು ತಮ್ಮ ಗಮನಕ್ಕೆ ಬಂದಿಲ್ಲ. ಇದಕ್ಕೆ ಯಾವುದೇ ತೊಂದರೆಯಾಗಬಾರದು. ಎಲ್ಲರಿಗೂ ಲಸಿಕೆ ನೀಡುವ ಜವಾಬ್ಧಾರಿ ನಮ್ಮದು (ಸರ್ಕಾರದ್ದು). ಹಾಗೆಯೇ ಲಸಿಕೆ ಪಡೆಯುವ ಜವಾಬ್ದಾರಿ ಜನರದ್ದು. ಕೊರೊನಾ ಮೂರನೇ ಅಲೆ ಎದುರಿಸಲು ಇದು ಅತ್ಯವಶ್ಯ ಎಂದರು.