ಜಗತ್ತಿನಲ್ಲೇ ಅತಿಹೆಚ್ಚು ಲಸಿಕೆ ಬುಕ್ ಮಾಡಿದ ಭಾರತ!
ಜಗತ್ತಿನಲ್ಲೇ ಅತಿಹೆಚ್ಚು ಲಸಿಕೆ ಬುಕ್ ಮಾಡಿದ ಭಾರತ!| ಭಾರತದಿಂದ 190 ಕೋಟಿ ಡೋಸ್ ಕೊರೋನಾ ಲಸಿಕೆ ಬುಕಿಂಗ್| ಆದರೆ ಪ್ರತಿಯೊಬ್ಬರಿಗೂ ನೀಡಲು ಇನ್ನೂ 70 ಕೋಟಿ ಡೋಸ್ ಕೊರತೆ| ಜಗತ್ತಿನ ಎಲ್ಲರಿಗೂ ಲಸಿಕೆ ನೀಡಲು 2024ರವರೆಗೂ ಸಮಯ ಬೇಕು?| ಶ್ರೀಮಂತ ದೇಶಗಳು ದಾಸ್ತಾನು ಮಾಡೋದ್ರಿಂದ ಬಡ ದೇಶಗಳಿಗೆ ಕಷ್ಟ
ನವದೆಹಲಿ(ನ.16): ಕೊರೋನಾ ವೈರಸ್ ಲಸಿಕೆಗಳನ್ನು ತಯಾರಿಸುತ್ತಿರುವ ವಿವಿಧ ಕಂಪನಿಗಳ ಬಳಿ ಭಾರತ ಈಗಾಗಲೇ 190 ಕೋಟಿ ಡೋಸ್ ಲಸಿಕೆ ‘ಬುಕ್’ ಮಾಡಿದ್ದು, ಜಗತ್ತಿನಲ್ಲೇ ಅತಿಹೆಚ್ಚು ಲಸಿಕೆ ಕಾಯ್ದಿರಿಸಿದ ದೇಶವಾಗಿ ಹೊರಹೊಮ್ಮಿದೆ. ಆದರೂ ಭಾರತದ ಪ್ರತಿಯೊಬ್ಬರಿಗೂ 2 ಡೋಸ್ ಲಸಿಕೆ ನೀಡಲು ಇನ್ನೂ 70 ಕೋಟಿ ಡೋಸ್ ಕೊರತೆಯಾಗುತ್ತದೆ ಎಂದು ಮೂಲಗಳು ಹೇಳಿವೆ.
"
ಜಗತ್ತಿನ ಬಹುತೇಕ ಎಲ್ಲಾ ಶ್ರೀಮಂತ ಹಾಗೂ ಮಧ್ಯಮ ಆದಾಯದ ರಾಷ್ಟ್ರಗಳು ದೊಡ್ಡ ಪ್ರಮಾಣದಲ್ಲಿ ಕೊರೋನಾ ಲಸಿಕೆಗಳನ್ನು ಕಾಯ್ದಿರಿಸುತ್ತಿವೆ. ಭಾರತ ಇದರಲ್ಲಿ ಎಲ್ಲರಿಗಿಂತ ಮುಂದಿದೆ ಎಂದು ಹೇಳಲಾಗಿದೆ. ಚೀನಾ ಎಷ್ಟುಲಸಿಕೆಗಳನ್ನು ಕಾಯ್ದಿರಿಸಿದೆ ಎಂಬ ಬಗ್ಗೆ ಮಾಹಿತಿ ದೊರೆತಿಲ್ಲ.
ಯಾರಿಂದ ಎಷ್ಟು ಲಸಿಕೆ ಬುಕಿಂಗ್?:
ಕೊರೋನಾ ಬಾರದಂತೆ ಲಸಿಕೆಗಳನ್ನು ಅಭಿವೃದ್ಧಿಪಡಿಸುತ್ತಿರುವ ಕಂಪನಿಗಳಲ್ಲಿ ಬೇರೆ ಬೇರೆ ದೇಶಗಳು ಎಷ್ಟೆಷ್ಟುಲಸಿಕೆ ಕಾಯ್ದಿರಿಸಿವೆ ಎಂಬ ಬಗ್ಗೆ ಕಲೆಹಾಕಿರುವ ಮಾಹಿತಿಯ ಪ್ರಕಾರ, ಕೆನಡಾ ತನ್ನ 3.8 ಕೋಟಿ ಜನರಿಗೆ 35.8 ಕೋಟಿ ಲಸಿಕೆ ಬುಕ್ ಮಾಡುವ ಮೂಲಕ ತಲಾ ಅತಿಹೆಚ್ಚು ಲಸಿಕೆ ಕಾಯ್ದಿರಿಸಿದ ದೇಶವಾಗಿ ಹೊರಹೊಮ್ಮಿದೆ. ಸದ್ಯ ಆ ದೇಶ ಬುಕ್ ಮಾಡಿದ ಲಸಿಕೆಗಳಿಂದ ಪ್ರತಿಯೊಬ್ಬರಿಗೂ 9 ಡೋಸ್ ನೀಡಬಹುದು. ಅಮೆರಿಕ 110 ಕೋಟಿ ಲಸಿಕೆ ಬುಕ್ ಮಾಡಿದ್ದು, ಅಲ್ಲಿನ ಪ್ರತಿಯೊಬ್ಬರಿಗೂ 3 ಡೋಸ್ ನೀಡಬಹುದು. ಆಸ್ಪ್ರೇಲಿಯಾ ಮತ್ತು ಬ್ರಿಟನ್ ತಮ್ಮ ಪ್ರಜೆಗಳಿಗೆ ತಲಾ 5 ಡೋಸ್ ನೀಡುವಷ್ಟು, ಜಪಾನ್ ಹಾಗೂ ಯುರೋಪಿಯನ್ ಒಕ್ಕೂಟದ ದೇಶಗಳು ತಮ್ಮ ಪ್ರಜೆಗಳಿಗೆ ತಲಾ 2 ಡೋಸ್ ನೀಡುವಷ್ಟುಲಸಿಕೆ ಬುಕ್ ಮಾಡಿವೆ. ಎಲ್ಲಾ ದೇಶಗಳೂ ಸೇರಿ ಒಟ್ಟು 960 ಕೋಟಿ ಲಸಿಕೆ ಕಾಯ್ದಿರಿಸಿವೆ.
ಬಡ ದೇಶಗಳಿಗೆ ಲಸಿಕೆ ಕೊರತೆ:
ಶ್ರೀಮಂತ ಹಾಗೂ ಮಧ್ಯಮ ಆದಾಯದ ದೇಶಗಳು ಅತಿಹೆಚ್ಚು ಲಸಿಕೆಗಳನ್ನು ಕಾಯ್ದಿರಿಸುತ್ತಿರುವುದರಿಂದ ಬಡ ದೇಶಗಳಲ್ಲಿ ಎಲ್ಲರಿಗೂ ಲಸಿಕೆ ದೊರೆಯಲು 2024ರ ಅಂತ್ಯದವರೆಗೂ ಸಮಯ ಹಿಡಿಯಬಹುದು ಎಂದು ಹೇಳಲಾಗಿದೆ. ಏಕೆಂದರೆ, ಈ ದೇಶಗಳಿಗೆ ಲಸಿಕೆಗಳನ್ನು ಕಾಯ್ದಿರಿಸುವ ಅಥವಾ ಕೊಳ್ಳುವ ಶಕ್ತಿಯಿಲ್ಲ.
ಇನ್ನು, ಕೋವ್ಯಾಕ್ಸ್ ಎಂಬ ಲಸಿಕೆಯನ್ನು ಯಾವುದೇ ಲೈಸನ್ಸ್ ಇಲ್ಲದೇ ಎಲ್ಲರಿಗೂ ಲಭ್ಯವಾಗಿಸಲು ಪ್ರಯತ್ನಗಳು ನಡೆದಿವೆ. ಆ ಲಸಿಕೆ ಯಶಸ್ವಿಯಾದರೂ 2021ರಲ್ಲಿ ಬಡ ದೇಶಗಳ ಶೇ.20ರಷ್ಟುಜನರಿಗೆ ಮಾತ್ರ ಲಸಿಕೆ ಸಿಗಲಿದೆ ಎಂದು ಹೇಳಲಾಗಿದೆ.
ಹೀಗಾಗಿ ಭಾರತ, ಬ್ರೆಜಿಲ್‌ನಂತಹ ಅಭಿವೃದ್ಧಿಶೀಲ ದೇಶಗಳು ಅಭಿವೃದ್ಧಿಪಡಿಸುತ್ತಿರುವ ದೇಸಿ ಲಸಿಕೆಗಳಿಗೆ ಮಹತ್ವ ಬಂದಿದೆ. ಈ ಲಸಿಕೆಗಳು ಯಶಸ್ವಿಯಾದರೆ ಜಗತ್ತಿನಲ್ಲಿ ಕೊರೋನಾ ಲಸಿಕೆಗಳ ಬೆಲೆ ಕಡಿಮೆಯಾಗುತ್ತದೆ. ಇಲ್ಲದಿದ್ದರೆ ಶ್ರೀಮಂತ ದೇಶಗಳು ದುಬಾರಿ ಬೆಲೆಗೆ ಲಸಿಕೆಗಳನ್ನು ಮಾರುವುದರಿಂದ ಬಡ ದೇಶಗಳಿಗೆ ಕಷ್ಟವಾಗಲಿದೆ.
ಯಾವ ದೇಶದಿಂದ ಎಷ್ಟು ಲಸಿಕೆ ಬುಕ್?
ಭಾರತ 190 ಕೋಟಿ
ಅಮೆರಿಕ 110 ಕೋಟಿ
ಕೆನಡಾ 35.8 ಕೋಟಿ
9 ಡೋಸ್: ಕೆನಡಾದಲ್ಲಿ ಜನಸಂಖ್ಯೆ ಕಡಿಮೆ. ಆ ದೇಶ ಬುಕ್ ಮಾಡಿರುವ ಲಸಿಕೆಯನ್ನು ಒಬ್ಬರಿಗೆ 9 ಬಾರಿ ಕೊಡಬಹುದು
5 ಡೋಸ್: ಬ್ರಿಟನ್, ಆಸ್ಪ್ರೇಲಿಯಾದಿಂದ ಒಬ್ಬರಿಗೆ 5 ಸಲ ನೀಡುವಷ್ಟುಲಸಿಕೆ ಬುಕಿಂಗ್
ಬೆಲೆ ಎಷ್ಟು?
ಅಮೆರಿಕದ ಫೈಝರ್ ಕಂಪನಿ ತನ್ನ ಲಸಿಕೆಗಳ 2 ಡೋಸ್‌ಗಳನ್ನು ಸುಮಾರು 2800 ರು.ಗೆ ಮಾರಾಟ ಮಾಡಲು ಮುಂದಾಗಿದೆ. ಆದರೆ, ಭಾರತದಲ್ಲಿ ತಯಾರಾಗುವ ಆಕ್ಸ್‌ಫರ್ಡ್-ಆಸ್ಟ್ರಾಜೆನೆಕಾದ ಕೋವಿಶೀಲ್ಡ್ ಲಸಿಕೆಯ 2 ಡೋಸ್ ಕೇವಲ 500 ರು.ಗೆ ಲಭಿಸುವ ಸಾಧ್ಯತೆಯಿದೆ.