Rajeev Chandrasekhar: ಗ್ಯಾಲಿಯಂ ನೈಟ್ರೇಟ್ ತಂತ್ರಜ್ಞಾನಕ್ಕೆ ಮಹತ್ವ
ದೇಶದಲ್ಲಿ ಮುಂದಿನ 2-3 ವರ್ಷದಲ್ಲಿ ವೈರ್‌ಲೆಸ್ ಕಮ್ಯುನಿಕೇಷನ್ ಹಾಗೂ ವಿದ್ಯುತ್‌ಚಾಲಿತ ವಾಹನ ಸೇರಿದಂತೆ ಆಟೋಮೊಬೈಲ್ ಕ್ಷೇತ್ರದಲ್ಲಿ ಗ್ಯಾಲಿಯಂ ನೈಟ್ರೇಟ್ ತಂತ್ರಜ್ಞಾನ ಬಹುಮುಖ್ಯ ಪಾತ್ರ ವಹಿಸಲಿದೆ ಎಂದು ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ಇಲಾಖೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು (ಮಾ.14): ದೇಶದಲ್ಲಿ ಮುಂದಿನ 2-3 ವರ್ಷದಲ್ಲಿ ವೈರ್‌ಲೆಸ್ ಕಮ್ಯುನಿಕೇಷನ್ ಹಾಗೂ ವಿದ್ಯುತ್‌ಚಾಲಿತ ವಾಹನ ಸೇರಿದಂತೆ ಆಟೋಮೊಬೈಲ್ ಕ್ಷೇತ್ರದಲ್ಲಿ ಗ್ಯಾಲಿಯಂ ನೈಟ್ರೇಟ್ ತಂತ್ರಜ್ಞಾನ (Gallium Nitride Technology) ಬಹುಮುಖ್ಯ ಪಾತ್ರ ವಹಿಸಲಿದೆ ಎಂದು ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ಇಲಾಖೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ (Rajeev Chandrasekhar) ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (ಐಐಎಸ್‌ಸಿ) ಸ್ಥಾಪಿಸುತ್ತಿರುವ ಗ್ಯಾಲಿಯಂ ನೈಟ್ರೇಟ್ ಇಕೊಸಿಸ್ಟಂ ಎನೇಬಲಿಂಗ್ ಟೆಕ್ನಾಲಜಿ ಸೆಂಟರ್ (ಜಿಇಇಸಿಐ)ನಲ್ಲಿ ಭಾನುವಾರ ಪರಿಶೀಲನೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಗ್ಯಾಲಿಯಂ ನೈಟ್ರೇಟ್ ತಂತ್ರಜ್ಞಾನವು 5ಜಿ, ಬಾಹ್ಯಾಕಾಶ ಹಾಗೂ ರಕ್ಷಣಾ ಇಲಾಖೆ ಸಾಧನಗಳ ಹಿನ್ನೆಲೆಯಲ್ಲಿ ಸಾಕಷ್ಟುಮಹತ್ವ ಪಡೆದುಕೊಂಡಿದೆ. ಹೀಗಾಗಿ ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಂಸ್ಥೆಯಿಂದ ಬೆಂಗಳೂರಿನ ಐಐಎಸ್‌ಸಿ ಸಂಸ್ಥೆಯಲ್ಲಿ ಫೌಂಡ್ರಿ (ಎರಕ), ಆರ್‌ಎಫ್, ವಿದ್ಯುತ್ ಸಾಧನಗಳ ಕ್ಷೇತ್ರಗಳ ಅಭಿವೃದ್ಧಿ ದೃಷ್ಟಿಯಿಂದ ಜಿಇಇಸಿಐ ಸ್ಥಾಪಿಸಲಾಗುತ್ತಿದೆ ಎಂದರು.
ತಂತ್ರಜ್ಞಾನದ ಅಭಿವೃದ್ಧಿಯಲ್ಲಿ ಜಾಗತಿಕ ಮಟ್ಟದ ನಾಯಕತ್ವ ವೃದ್ಧಿಸುವುದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಡಿಜಿಟಲ್ ಇಂಡಿಯಾ ಕಾರ್ಯಕ್ರಮದ ಪ್ರಮುಖ ಉದ್ದೇಶ. ಇದನ್ನು ಸಾಧಿಸಲು ಇಲಾಖೆಯು 1000 ದಿನಗಳ ‘ಭವಿಷ್ಯದ ಹಾದಿ’ಯನ್ನು ರೂಪಿಸಿಕೊಂಡಿದೆ. ಹೈಟೆಕ್ ಹಾಗೂ ಸ್ಟ್ರಾಟಜಿಕ್ ಟೆಕ್ ಅಭಿವೃದ್ಧಿಯನ್ನು ಮುಖ್ಯ ಧ್ಯೇಯವಾಗಿಸಿಕೊಂಡು ಕೆಲಸ ಮಾಡುತ್ತಿದೆ ಎಂದು ಹೇಳಿದರು.
Election Result 2022: ಹೊಸ ಆಡಳಿತ ಪದ್ಧತಿಗೆ ಸಿಕ್ಕ ಜನಾದೇಶ: ರಾಜೀವ್ ಚಂದ್ರಶೇಖರ್
ದೇಶದಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕ್ಷೇತ್ರ, ಎಲೆಕ್ಟ್ರಾನಿಕ್ಸ್ ಹಾಗೂ ಸೆಮಿ ಕಂಡಕ್ಟರ್ ವಿನ್ಯಾಸ ಕ್ಷೇತ್ರಗಳಲ್ಲಿ ವಿಫುಲ ಅವಕಾಶಗಳಿವೆ. ದೇಶದ ಸೆಮಿ ಕಂಡಕ್ಟರ್ ಫ್ಯಾಬ್ ಘಟಕಗಳಿಗೆ ಉತ್ತೇಜನ ನೀಡಲು ಹಾಗೂ ಎಲೆಕ್ಟ್ರಾನಿಕ್ಸ್ ಸಿಸ್ಟಮ್ಸ್ ವಿನ್ಯಾಸ ಹಾಗೂ ಉತ್ಪಾದನಾ ಕ್ಷೇತ್ರದಲ್ಲಿ ಭಾರತವನ್ನು ವಿಶ್ವದಲ್ಲಿ ಪ್ರಮುಖ ಕೇಂದ್ರವನ್ನಾಗಿ ಮಾಡಲು 10 ಬಿಲಿಯನ್ ಡಾಲರ್ ಪ್ರೋತ್ಸಾಹ ಪ್ಯಾಕೇಜ್ ನೀಡಲಾಗಿದೆ. ಹೀಗಾಗಿ ಐಐಎಸ್‌ಸಿ, ಐಐಟಿಯಂತಹ ಸಂಸ್ಥೆಗಳು ಸೆಮಿ ಕಂಡಕ್ಟರ್ ಉತ್ಪಾದನೆಯಂತಹ ಕ್ಷೇತ್ರದಲ್ಲಿ ಸಂಶೋಧನೆ, ತಂತ್ರಜ್ಞಾನ ಅಭಿವೃದ್ಧಿ, ಶಿಕ್ಷಣ ಹಾಗೂ ತರಬೇತಿ ನೀಡುವ ಅಗತ್ಯವಿದೆ. ಇದು ಡಿಜಿಟಲ್ ಇಂಡಿಯಾ ಕನಸನ್ನು ನನಸು ಮಾಡಲು ಸಹಕಾರಿ ಎಂದು ರಾಜೀವ್ ಚಂದ್ರಶೇಖರ್ ಅಭಿಪ್ರಾಯಪಟ್ಟರು.
ಕೇಂದ್ರದ ಯೋಜನೆಗಳು ಇನ್ನೋವೇಷನ್ ಹಾಗೂ ಸ್ಟಾರ್ಟ್‌ಅಪ್‌ಗಳಿಗೆ ಉತ್ತೇಜನ ನೀಡಲು, ಉದ್ಯಮಿಗಳನ್ನು ವ್ಯಾಪಾರ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಗಂಭೀರವಾಗಿ ತೊಡಗಿಸಿಕೊಳ್ಳಲು ಉತ್ತೇಜನ ನೀಡಲಿದೆ. ಅಗ್ನಿಟ್ (ಎಜಿಎನ್‌ಐಟಿ) ಸೆಮಿ ಕಂಡಕ್ಟರ್ಸ್ ಪ್ರೈ ಲಿಮಿಟೆಡ್ ಮೊದಲ ಸ್ಟಾರ್ಟ್‌ಅಪ್ ಆಗಿ ಇದರ ಸದುಪಯೋಗ ಪಡೆದಿದೆ ಎಂದರು.
ಕೇಂದ್ರ ಸರ್ಕಾರದ ನೀತಿಯಿಂದ ಸ್ಟಾರ್ಟಪ್ ಹೆಚ್ಚಳ: ನವೋದ್ಯಮಗಳು ಕೇವಲ ಮಹಾನಗರಗಳಿಗೆ ಮಾತ್ರ ಸೀಮಿತವಾಗದಂತೆ ಕೇಂದ್ರ ಸರ್ಕಾರ (Central Government) ನೋಡಿಕೊಳ್ಳುತ್ತಿದೆ. ಎರಡು ಮತ್ತು ಮೂರನೇ ಹಂತದ ನಗರಗಳಲ್ಲೂ ಸ್ಟಾರ್ಟಪ್‌ಗಳಿಗೆ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. ಸೋಮವಾರ ಇಂಡಿಯಾ ಗ್ಲೋಬಲ್ ಫೋರಂ (IGF) ನಿಂದ ಏರ್ಪಡಿಸಿದ್ದ ಉದ್ಯಮಿಗಳ ಜೊತೆಗಿನ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
Bengaluru India Nano: ಕೆಲವೇ ವರ್ಷಗಳಲ್ಲಿ ಬೆಂಗ್ಳೂರಿನ ಚಿತ್ರಣವೇ ಬದಲು: ಆರ್‌ಸಿ
ಇಂದು ನವೋದ್ಯಮಗಳು ಮಹಾನಗರಗಳಿಗೆ ಮಾತ್ರ ಸೀಮಿತವಾಗದೆ ರಾಜ್ಯಗಳ ಎರಡು ಮತ್ತು ಮೂರನೇ ಹಂತದ ನಗರಗಳಲ್ಲೂ ಸ್ಥಾಪನೆಯಾಗುತ್ತಿವೆ. ಇದಕ್ಕೆ ಕೇಂದ್ರ ಸರ್ಕಾರದ ನೀತಿಗಳೇ ಕಾರಣ. ಇದರಿಂದಾಗಿ ಉದ್ಯಮಿಗಳು ಅದರಲ್ಲೂ ಯುವ ಜನರು ಸ್ಟಾರ್ಟಪ್‌ಗಳನ್ನು (Startup) ಸ್ಥಾಪಿಸಲು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರುತ್ತಿದ್ದಾರೆ ಎಂದು ವಿವರಿಸಿದರು.