ರಾಯಚೂರಿನ ಉಡಮಗಲ್-ಖಾನಾಪುರದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯಲ್ಲಿ ವಾರ್ಡನ್ ಮತ್ತು ಸಿಬ್ಬಂದಿ ಮಕ್ಕಳ ಮೇಲೆ ದೈಹಿಕ ಹಲ್ಲೆ ನಡೆಸುತ್ತಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ಮಕ್ಕಳು ಭಯದಲ್ಲಿ ದಿನ ಕಳೆಯುತ್ತಿದ್ದಾರೆ. ಆದರೆ, ವಾರ್ಡನ್ ಈ ಎಲ್ಲಾ ಆರೋಪ ಸುಳ್ಳು ಎಂದು ತಳ್ಳಿಹಾಕಿದ್ದಾರೆ.

ರಾಯಚೂರು(ಡಿ.6): ಸಮಾಜ ಕಲ್ಯಾಣ ಇಲಾಖೆ ಸಚಿವರೇ ಒಮ್ಮೆ ಇತ್ತ ತಿರುಗಿ ನೋಡಿ, ರಾಯಚೂರು ತಾಲ್ಲೂಕಿನ ಉಡಮಗಲ್ - ಖಾನಾಪುರದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯಲ್ಲಿ ಚಿಕ್ಕ ಮಕ್ಕಳಿಗೆ ನಿತ್ಯ ಟಾರ್ಚರ್ ನಡೆಯುತ್ತಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಅಧಿಕಾರಿಗಳ ಸಂಪೂರ್ಣ ನಿರ್ಲಕ್ಷ್ಯದಿಂದಾಗಿ ವಾರ್ಡನ್ ಮತ್ತು ಸಿಬ್ಬಂದಿ ಅಂಧಾ ದರ್ಬಾರ್ ನಡೆಸುತ್ತಿದ್ದು, ಬಡ ಮಕ್ಕಳಿಗಾಗಿ ನಿರ್ಮಿಸಿದ ಈ ವಸತಿ ಶಾಲೆಯ ಮಕ್ಕಳು ಭಯ ಮತ್ತು ಕಣ್ಣೀರಲ್ಲೇ ದಿನ ಕಳೆಯುವಂತಾಗಿದೆ. ವಸತಿ ಶಾಲೆಯ ಕಿರುಕುಳದಿಂದ ಬೇಸತ್ತು ಕೆಲವು ಮಕ್ಕಳು ಶಾಲೆ ಬಿಟ್ಟು ಮನೆಗೆ ಹೋಗಲು ಮುಂದಾಗಿದ್ದು, 125 ಮಕ್ಕಳ ಪೈಕಿ ಕೇವಲ 85-90 ಮಕ್ಕಳು ಮಾತ್ರ ಸದ್ಯ ವಸತಿ ಶಾಲೆಯಲ್ಲಿ ಉಳಿದುಕೊಂಡಿದ್ದಾರೆ.

ಪೆನ್ನು, ಪುಸ್ತಕ ಕೇಳಿದರೆ ಮಕ್ಕಳ ಮೇಲೆ ಹಲ್ಲೆ:

ವಸತಿ ಶಾಲೆಯ ವಾರ್ಡನ್ ಮತ್ತು ಸಿಬ್ಬಂದಿಯಿಂದ ಮಕ್ಕಳಿಗೆ ನಿತ್ಯ ದೈಹಿಕ ಕಿರುಕುಳ ನೀಡಲಾಗುತ್ತಿದೆ ಎಂದು ಪೋಷಕರು ಆರೋಪಿಸಿದ್ದಾರೆ. 1 ರಿಂದ 5ನೇ ತರಗತಿಯವರೆಗಿನ ಈ ಚಿಕ್ಕ ಮಕ್ಕಳು ಪೆನ್, ಪೆನ್ಸಿಲ್ ಅಥವಾ ನೋಟ್ ಬುಕ್ ಕೇಳಿದರೆ, ವಾರ್ಡನ್ ಮತ್ತು ಸಿಬ್ಬಂದಿ ಕೋಣೆಯ ಬೀಗ, ಕಟ್ಟಿಗೆ ತೆಗೆದುಕೊಂಡು ಮನಬಂದಂತೆ ಹಲ್ಲೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಮಕ್ಕಳಿಗೆ ಕೈ, ಕಾಲು, ಕತ್ತು ಮತ್ತು ಬೆನ್ನಿನ ಮೇಲೆ ಗಾಯಗಳಾಗಿದ್ದು, ಪೋಷಕರು ಶಾಲೆಗೆ ಭೇಟಿ ನೀಡಿದಾಗ ಮಕ್ಕಳು ಕಣ್ಣೀರು ಹಾಕಿಕೊಂಡು ಸಮಸ್ಯೆ ಹೇಳಿಕೊಂಡಿದ್ದಾರೆ. ಮಕ್ಕಳಿಗಾಗಿ ಬರುವ ಬಟ್ಟೆ, ಪುಸ್ತಕ ಮತ್ತು ಶುಚಿ ಕಿಟ್‌ಗಳನ್ನು ಸಹ ನೀಡಲು ಸಿಬ್ಬಂದಿ ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.

ಕೆಟ್ಟು ನಿಂತ ಸಿಸಿಟಿವಿ, RO ಘಟಕ: ಕುಡಿಯಲು ಉಪ್ಪು ನೀರು!

ಹೊಸ ಕಟ್ಟಡ ಉದ್ಘಾಟನೆಯಾಗಿ ವರ್ಷ ಕಳೆಯುವ ಮುನ್ನವೇ ಇಲ್ಲಿ ದುರಾಡಳಿತ ಶುರುವಾಗಿದೆ. ಮಕ್ಕಳಿಗೆ ಟಾರ್ಚರ್ ನೀಡಲು ಅನುಕೂಲವಾಗುವಂತೆ ಸಿಬ್ಬಂದಿ ಮತ್ತು ವಾರ್ಡನ್ ಉದ್ದೇಶಪೂರ್ವಕವಾಗಿ ಸಿಸಿಟಿವಿಗಳನ್ನು ಬಂದ್ ಮಾಡಿದ್ದಾರೆ. ಕಳೆದ ಆರು ತಿಂಗಳಿಂದ ಸಿಸಿಟಿವಿ ಬಂದ್ ಆಗಿದ್ದರೂ ಅದನ್ನು ರಿಪೇರಿ ಮಾಡಿಸಿಲ್ಲ. ಅಷ್ಟೇ ಅಲ್ಲದೇ, ಶುದ್ಧ ಕುಡಿಯುವ ನೀರಿನ ಘಟಕ (RO ಘಟಕ) ಸಹ ಕೆಟ್ಟು ಹೋಗಿರುವುದರಿಂದ ಮಕ್ಕಳು ನಿತ್ಯ ಬೋರ್‌ವೆಲ್‌ನ ಉಪ್ಪು ನೀರನ್ನೇ ಸೇವಿಸುವಂತಾಗಿದೆ. ಮಕ್ಕಳು ಈ ಸಮಸ್ಯೆಗಳನ್ನು ಪೋಷಕರ ಮುಂದೆ ಹೇಳಿದರೆ ತೀವ್ರ ಸ್ವರೂಪದ ಬೆದರಿಕೆ ಹಾಕಲಾಗುತ್ತಿದೆ ಎಂಬ ಆರೋಪವೂ ಇದೆ. ರಾಯಚೂರು ಜಿಲ್ಲಾ ಕೇಂದ್ರದ ಪಕ್ಕದಲ್ಲೇ ಈ ವಸತಿ ಶಾಲೆ ಇದ್ದರೂ, ಯಾವುದೇ ಅಧಿಕಾರಿಗಳು ಇಲ್ಲಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಬಗೆಹರಿಸದಿರುವುದು ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ.

ಆರೋಪ ಸುಳ್ಳು, ಎಲ್ಲ ಸರಿ ಇದೆ ಅಂತಾ ವಾರ್ಡನ್:

ಈ ಎಲ್ಲಾ ಆರೋಪಗಳಿಗೆ ಸಂಬಂಧಿಸಿದಂತೆ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿರುವ ವಾರ್ಡನ್ ಬಡೇಸಾಬ್, ತಮ್ಮ ಮೇಲೆ ಬಂದಿರುವ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ್ದಾರೆ. 'ನಮ್ಮ ವಸತಿ ಶಾಲೆಯಲ್ಲಿ ಎಲ್ಲಾ ವ್ಯವಸ್ಥೆ ಸರಿಯಾಗಿದೆ. ಏನಾದರೂ ಸಣ್ಣ ಸಮಸ್ಯೆ ಇದ್ದರೆ ಸರಿ ಮಾಡಿಕೊಂಡು ಹೋಗುತ್ತೇವೆ. ನಾನು ಯಾವುದೇ ರೀತಿ ಹಲ್ಲೆ ಮಕ್ಕಳ ಮೇಲೆ ಮಾಡಿಲ್ಲ, ಅದು ಎಲ್ಲಾ ಸುಳ್ಳು ಆರೋಪ' ಎಂದು ಅವರು ಹೇಳಿದ್ದಾರೆ. ಆರ್.ಓ ವಾಟರ್ ಘಟಕ ಹಾಗೂ ಸಿಸಿಟಿವಿ ರಿಪೇರಿಯಲ್ಲಿದೆ ಎಂದು ಒಪ್ಪಿಕೊಂಡಿರುವ ಅವರು, ಇಲಾಖೆಯ ಯಾವುದೇ ಕ್ರಮಕ್ಕೆ ತಾನು ಸಿದ್ಧ ಎಂದು ಹೇಳಿಕೆ ನೀಡಿದ್ದಾರೆ. ಈ ಸಂಬಂಧ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ವಸತಿ ಶಾಲೆಗೆ ಭೇಟಿ ನೀಡಿ, ಮಕ್ಕಳ ಮೇಲೆ ಆಗುತ್ತಿರುವ ಹಲ್ಲೆ ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ.