ಬೆಂಗಳೂರು, (ಅ.15) : ಕರ್ನಾಟಕದಲ್ಲಿ ರಾಜ್ಯ ಸರ್ಕಾರವು ಸಾರಿಗೆ ವ್ಯವಸ್ಥೆಯಲ್ಲಿ ಕೈಗೊಂಡ ವ್ಯಾಪಕ ಸುಧಾರಿತ ಕ್ರಮಗಳಿಂದಾಗಿ ವಾಹನ ಅಪಘಾತಗಳಿಗೆ ಕಡಿವಾಣ ಹಾಕಲಾಗಿರುವ ಬಗ್ಗೆ ಕೇಂದ್ರ ಭೂ ಸಾರಿಗೆ, ಹೆದ್ದಾರಿ ಹಾಗೂ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಸಾರಿಗೆ ಸುಧಾರಣೆಯ ಕುರಿತು ಉಪ ಮುಖ್ಯಮಂತ್ರಿಗಳು ಮತ್ತು ಸಾರಿಗೆ ಸಚಿವರಾಗಿರುವ ಶ್ರೀ ಲಕ್ಷ್ಮಣ ಸವದಿ ಅವರೊಂದಿಗೆ ವರ್ಚುವಲ್ ಸಭೆ ನಡೆಸಿ ಮಾಹಿತಿ ಪಡೆದುಕೊಂಡ ಅವರು, ಸದ್ಯದಲ್ಲಿಯೇ ನವದೆಹಲಿಯಲ್ಲಿ ಮತ್ತೊಮ್ಮೆ ಸಭೆ ನಡೆಸಿ ಕೇಂದ್ರ ಸರ್ಕಾರವು ಕರ್ನಾಟಕದಲ್ಲಿ ಜಾರಿಗೊಳಿಸಲಿರುವ ಸಾರಿಗೆ ಮತ್ತು ಹೆದ್ದಾರಿ ವಿಸ್ತರಣೆ ಕುರಿತು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ಭರವಸೆ ನೀಡಿದರು.

ಮೈಸೂರಿನಲ್ಲಿ 2015 ರಿಂದ ಇಂಟಲಿಜೆನ್ಸ್ ಟ್ರಾನ್ಸ್‍ಫೋರ್ಟ್ ಸಿಸ್ಟಂ (ಜಾಣ ಸಾರಿಗೆ ವ್ಯವಸ್ಥೆ) ಜಾರಿಗೆ ತಂದಿರುವುದರಿಂದ ಅಪಘಾತಗಳ ಪ್ರಮಾಣವನ್ನು ಹಿಂದಿಗಿಂತ ಸುಮಾರು ಅರ್ಧದಷ್ಟು ಕಡಿಮೆಗೊಳಿಸಲಾಗಿದೆ ಎಂದು ಸವದಿ ಅವರು ಕೇಂದ್ರ ಸಚಿವರಿಗೆ ಮಾಹಿತಿ ನೀಡಿದರು. 

ಅಪ​ಘಾತವಾದ​ರೆ ವಿಮೆ ಕಂಪ​ನಿಯಿಂದಲೇ ಪರಿ​ಹಾರ

ಈ ಬಗ್ಗೆ ಶ್ಲಾಘಿಸಿದ ಗಡ್ಕರಿ, ಈ ಮಾದರಿ ಪ್ರಯತ್ನವನ್ನು ಉಳಿದ ಕಡೆಗಳಲ್ಲೂ ಜಾರಿಗೊಳಿಸಲು ಕೇಂದ್ರ ಸರ್ಕಾರವು ಕರ್ನಾಟಕದಿಂದ ವರದಿ ತರಿಸಿಕೊಂಡು ಮುಂದುವರೆಯಲಿದೆ ಎಂದು ತಿಳಿಸಿದರು. ಈ ಯಶಸ್ವಿ ಪ್ರಯೋಗವನ್ನು ಕರ್ನಾಟಕದ ಉಳಿದ ಕಡೆಗಳಲ್ಲೂ ಜಾರಿಗೊಳಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಸವದಿ ಸ್ಪಷ್ಟಪಡಿಸಿದರು.

ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ವಿಶ್ವ ಬ್ಯಾಂಕ್ ಹಾಗೂ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಚಾಲಕರಿಗೆ ಚಾಲನಾ ಆಧಾರಿತ ಬಸ್ ಸಿಮ್ಯೂಲೇಟರ್‍ಗಳನ್ನು ಅಳವಡಿಸಿ ವಿಶೇಷ ತರಬೇತಿ ನೀಡಲು ಕೇಂದ್ರವನ್ನು ಸ್ಥಾಪಿಸಲಾಗಿದೆ. ಇಂಧನ ಉಳಿತಾಯದ ಕುರಿತು ನಾಲ್ಕೂ ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ಸುಮಾರು 10 ಸಾವಿರ ಚಾಲಕರಿಗೆ ತರಬೇತಿ ನೀಡಲಾಗುತ್ತಿದೆ. ಇದರಿಂದ ಇಂಧನ ಉಳಿತಾಯ ಹಾಗೂ ರಸ್ತೆ ಸುರಕ್ಷತೆಯ ಬಗ್ಗೆ ತಿಳಿವಳಿಕೆ ನೀಡಲಾಗುವುದು. ತಾವು ತಿಳಿಸಿದಂತೆ ಹೆಚ್ಚಾಗಿ ಸಂಭವಿಸುವ ಅಪಘಾತದ ವಲಯಗಳನ್ನು ರಾಜ್ಯಾದ್ಯಂತ ಗುರುತಿಸಲಾಗುವುದು ಎಂದು ಸವದಿ ಅವರು ಗಡ್ಕರಿ ಅವರಿಗೆ ಪ್ರತಿಕ್ರಿಯಿಸಿದರು.

ಇದೇ ರೀತಿ ಕರ್ನಾಟಕ ಸರ್ಕಾರದ ಸಾರಿಗೆ ಇಲಾಖೆಯಲ್ಲಿ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಟೆಕ್ನಾಲಜಿ ಆಧಾರಿತ ವಿಎಲ್‍ಟಿಎಸ್ - (ವೆಹಿಕಲ್ ಲೊಕೇಷನ್ ಟ್ರ್ಯಾಕಿಂಗ್ ಸಿಸ್ಟಂ - VLTS) ಅಳವಡಿಕೆಯನ್ನು ಜಾರಿಗೆ ತಂದು ರಸ್ತೆ ಸುರಕ್ಷತೆಗೆ ಹೆಚ್ಚು ಮಹತ್ವ ನೀಡಲು ನಮ್ಮ ಸರ್ಕಾರ ಅನೇಕ ನೂತನ ಕಾರ್ಯಯೋಜನೆಗಳನ್ನು ಹಮ್ಮಿಕೊಂಡಿರುತ್ತದೆ. ಅದಲ್ಲದೇ, ವಾಹನಗಳ ವೇಗವನ್ನು ನಿಯಂತ್ರಿಸಲು ಕೇಂದ್ರ ಸರ್ಕಾರದ ಹಾಗೂ ಉಚ್ಛ-ನ್ಯಾಯಾಲಯದ ನಿರ್ದೇಶನದಂತೆ ವಾಹನಗಳಿಗೆ ಸ್ಪೀಡ್ ಗೌರ್ನರ್‍ಗಳನ್ನು ಅಳವಡಿಸಲಾಗುತ್ತಿದೆ ಎಂದು ಸವದಿ ಅವರು ಸ್ಪಷ್ಟಪಡಿಸಿದರು.

ಅಪಘಾತದ ಅಂಕಿ-ಸಂಖ್ಯೆ
ಕಳೆದ 2019 ಜನವರಿಯಿಂದ ಡಿಸೆಂಬರ್ ವರೆಗೆ ಕರ್ನಾಟಕದಲ್ಲಿ ಒಟ್ಟು 41,707 ಅಪಘಾತಗಳು ಸಂಭವಿಸಿದ್ದು, 10,990 ಮಂದಿ ಸಾವನ್ನಪ್ಪಿದ್ದಾರೆ. 2020 ಜನವರಿಯಿಂದ ಆಗಸ್ಟ್ ವರೆಗೆ ಒಟ್ಟು 21,297 ಅಪಘಾತಗಳು ಸಂಭವಿಸಿದ್ದು, 5,738 ಮಂದಿ ಮೃತರಾಗಿದ್ದಾರೆ. ಆದರೆ ಇಂಟೆಲ್, ಇಸ್ರೋ ಮುಂತಾದ ಸಂಸ್ಥೆಗಳ ಸಹಯೋಗದೊಂದಿಗೆ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಈ ಅಪಘಾತಗಳ ಪ್ರಮಾಣವನ್ನು ಮತ್ತಷ್ಟು ತಗ್ಗಿಸಲು ಪ್ರಯತ್ನಿಸಲಾಗುತ್ತಿದೆ ಎಂದು ವಿವರಿಸಿದರು.