ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು 2028ರ ವಿಧಾನಸಭಾ ಚುನಾವಣೆಗೆ ರಾಜ್ಯ ರಾಜಕಾರಣಕ್ಕೆ ಮರಳುವ ಸ್ಪಷ್ಟ ಸುಳಿವನ್ನು ನೀಡಿದ್ದಾರೆ. ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿಯನ್ನು ಟೀಕಿಸಿದ ಅವರು, ಅಧಿಕಾರಿಗಳ ಮೇಲಿನ ದೌರ್ಜನ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು (ಜ.15): 'ನಾನು ಸದ್ಯಕ್ಕೆ ಮೈತ್ರಿ ಸರ್ಕಾರದ ಭಾಗವಾಗಿ ಕೇಂದ್ರದಲ್ಲಿ ಸಚಿವನಾಗಿದ್ದೇನೆ. ಹಾಗಂತ ನಾನು ರಾಜ್ಯ ರಾಜಕಾರಣದಿಂದ ದೂರ ಸರಿಯುತ್ತೇನೆ ಎಂದು ಯಾರೂ ಅಂದುಕೊಳ್ಳಬೇಡಿ. ನಾನು ಎಲ್ಲಿರಬೇಕು ಎಂಬುದನ್ನು ರಾಜ್ಯದ ಜನತೆ ನಿರ್ಧಾರ ಮಾಡುತ್ತಾರೆ ಎಂದು ಹೇಳುವ ಮೂಲಕ 2028ರ ವಿಧಾನಸಭಾ ಚುನಾವಣೆಗೆ ವಾಪಸ್ ರಾಜ್ಯ ರಾಜಕಾರಣಕ್ಕೆ ವಾಪಸ್ ಬರುವ ಸುಳಿವನ್ನು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನೀಡಿದ್ದಾರೆ.

ಬೆಂಗಳೂರಿನಲ್ಲಿ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಅಧಿಕಾರಿಗಳ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ. ಸರ್ಕಾರವೇ ಸರಿ ಇಲ್ಲದಿದ್ದಾಗ ಇಂತಹ ಅರಾಜಕತೆ ಸೃಷ್ಟಿಯಾಗುವುದು ಸಹಜ. ಶಿಡ್ಲಘಟ್ಟ ಪೌರಾಯುಕ್ತರಿಗೆ ಕಾಂಗ್ರೆಸ್ ಮುಖಂಡನೊಬ್ಬ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಆಡಳಿತ ಯಂತ್ರದ ದುಸ್ಥಿತಿಯ ಬಗ್ಗೆ ಆತಂಕ ವ್ಯಕ್ತಪಡಿಸಿದರು.

ಅಧಿಕಾರಿಗಳಿಗೆ ಕುಮಾರಸ್ವಾಮಿ ಕಿವಿಮಾತು

'ಯಾವುದೇ ಸರ್ಕಾರ ಇರಲಿ, ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಇಂದು ಜನಸಾಮಾನ್ಯರು ಮತ್ತು ರಾಜಕೀಯ ಕಾರ್ಯಕರ್ತರು ಅಧಿಕಾರಿಗಳ ಮೇಲೆ ದಬ್ಬಾಳಿಕೆ ಮಾಡುವುದು ಪದ್ಧತಿಯಾಗಿ ಬೆಳೆದುಬರುತ್ತಿದೆ. ಅಧಿಕಾರಿಗಳು ಕೂಡ ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿಯಬಾರದು. ನೀವು ಕೆಲಸಕ್ಕೆ ಸೇರಿದಾಗ ಸಂವಿಧಾನಬದ್ಧವಾಗಿ ಯಾವ ನಿಯಮಾವಳಿಗಳು ಇರುತ್ತವೆಯೋ, ಅದಕ್ಕೆ ತಕ್ಕಂತೆ ಧೈರ್ಯದಿಂದ ಕೆಲಸ ಮಾಡಿ. ಸರ್ಕಾರ ನಿಮ್ಮನ್ನು ಎಲ್ಲಿಗಾದರೂ ಪೋಸ್ಟಿಂಗ್ ಹಾಕಲಿ, ನೀವು ಪ್ರಾಮಾಣಿಕವಾಗಿರಿ' ಎಂದು ಅವರು ಅಧಿಕಾರಿಗಳಿಗೆ ಧೈರ್ಯ ತುಂಬಿದರು. ಇದೇ ವೇಳೆ, ತಾವು ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಕರೆ ಮಾಡಿದ್ದರೂ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.

ರಾಜ್ಯ ರಾಜಕಾರಣಕ್ಕೆ ರೀ-ಎಂಟ್ರಿ ಫಿಕ್ಸ್?

ಕುಮಾರಸ್ವಾಮಿ ಅವರು ರಾಜ್ಯ ರಾಜಕಾರಣಕ್ಕೆ ಮರಳುತ್ತಾರಾ? ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, 'ನಾನು ಸದ್ಯಕ್ಕೆ ಮೈತ್ರಿ ಸರ್ಕಾರದ ಭಾಗವಾಗಿ ಕೇಂದ್ರದಲ್ಲಿ ಸಚಿವನಾಗಿದ್ದೇನೆ. ಹಾಗಂತ ನಾನು ರಾಜ್ಯ ರಾಜಕಾರಣದಿಂದ ದೂರ ಸರಿಯುತ್ತೇನೆ ಎಂದು ಯಾರೂ ಅಂದುಕೊಳ್ಳಬೇಡಿ. ನಾನು ಎಲ್ಲಿರಬೇಕು ಎಂಬುದನ್ನು ರಾಜ್ಯದ ಜನತೆ ನಿರ್ಧಾರ ಮಾಡುತ್ತಾರೆ. ರಾಜ್ಯ ರಾಜಕಾರಣಕ್ಕೆ ಯಾವ ಸಂದರ್ಭದಲ್ಲಿ ಬರಬೇಕು ಎಂಬ ಬಗ್ಗೆ ಸಮಯ ಬಂದಾಗ ತೀರ್ಮಾನ ಮಾಡುತ್ತೇನೆ. ಆದರೆ ರಾಜ್ಯಕ್ಕೆ ಮರಳಲೇಬೇಕಲ್ಲವೇ? ಖಂಡಿತ ಬರುತ್ತೇನೆ," ಎಂದು ಹೇಳುವ ಮೂಲಕ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಸಕ್ರಿಯರಾಗುವ ಸ್ಪಷ್ಟ ಮುನ್ಸೂಚನೆ ನೀಡಿದರು. ಈ ಸಂಬಂಧಪಟ್ಟ ವಿಡಿಯೋ ಭಾರೀ ವಯರಲ್ ಆಗಿತ್ತು. ಆದರೆ, ಇದಕ್ಕೆ ಕಾಂಗ್ರೆಸ್ ಕೂಡ ತಿರುಕನ ಕನಸು ಎಂದು ತಿರುಗೇಟು ಕೂಡ ಕೊಟ್ಟಿತ್ತು.

ಕುಮಾರಸ್ವಾಮಿ ಅವರ ಈ ಹೇಳಿಕೆಗಳು ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದ್ದು, ಮುಂದಿನ ದಿನಗಳಲ್ಲಿ ರಾಜಕೀಯ ಧ್ರುವೀಕರಣಕ್ಕೆ ನಾಂದಿ ಹಾಡಲಿವೆಯೇ ಎಂಬ ಕುತೂಹಲ ಮೂಡಿಸಿದೆ.

ಇತ್ತೀಚೆಗೆ ವಿಡಿಯೋ ಬಿಡುಗಡೆ:

ಇತ್ತೀಚೆಗೆ ಜೆಡಿಎಸ್ ಪಕ್ಷದಿಂದ ಟಾಕ್ಸಿಕ್ ಸಿನಿಮಾದ ಟೀಸರ್ ಶೈಲಿಯಲ್ಲೇ ಒಂದು ವಿಡಿಯೋ ಬಿಡುಗಡೆ ಮಾಡಲಾಗಿತ್ತು. ಈ ವೇಳೆ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರಿಗೆ ಶಾಕ್ ಆಗುವಂತೆ ಕುಮಾರಸ್ವಾಮಿ ಅವರು ನಾಯಕನಂತೆ ಎಂಟ್ರಿಕೊಟ್ಟು 'ಡ್ಯಾಡಿ ಈಸ್ ಹೋಮ್' ಎನ್ನುವ ಡೈಲಾಗ್ ಹೇಳಿದ್ದರು. ಇದನ್ನು ವಿಶ್ಲೇಷಣೆ ಮಾಡಿದ್ದ ಏಷ್ಯಾನೆಟ್ ಸುವರ್ಣ ನ್ಯೂಸ್ ಕೇಂದ್ರ ಸಚಿವರೂ ಆಗಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ರಾಜ್ಯ ರಾಜಕಾರಣಕ್ಕೆ ವಾಪಸ್ ಬರಲಿದ್ದಾರೆ ಎಂದು ತಿಳಿಸಿತ್ತು. ಇದೀಗ ಸುವರ್ಣ ನ್ಯೂಸ್ ರಾಜಕೀಯ ವಿಶ್ಲೇಷಣೆ ಸತ್ಯವಾಗಿದೆ.