ರಾಜ್ಯದಲ್ಲಿ ಇರುವುದು ಕಾಂಗ್ರೆಸ್‌ನ ಲೂಟಿ ಸರ್ಕಾರ. ಒಬ್ಬ ಆರ್ಥಿಕ ಸಚಿವರಿಗೆ ಗೃಹಲಕ್ಷ್ಮೀ ಯೋಜನೆಯ ₹5 ಸಾವಿರ ಕೋಟಿ ಬಗ್ಗೆ ಮಾಹಿತಿಯೇ ಇಲ್ಲವೆಂದರೆ ಹೇಗೆ? ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ದಾವಣಗೆರೆ (ಡಿ.26): ರಾಜ್ಯದಲ್ಲಿ ಇರುವುದು ಕಾಂಗ್ರೆಸ್‌ನ ಲೂಟಿ ಸರ್ಕಾರ. ಒಬ್ಬ ಆರ್ಥಿಕ ಸಚಿವರಿಗೆ ಗೃಹಲಕ್ಷ್ಮೀ ಯೋಜನೆಯ ₹5 ಸಾವಿರ ಕೋಟಿ ಬಗ್ಗೆ ಮಾಹಿತಿಯೇ ಇಲ್ಲವೆಂದರೆ ಹೇಗೆ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ದಾವಣಗೆರೆ ದಕ್ಷಿಣ ಕ್ಷೇತ್ರ ಶಾಸಕರಾಗಿದ್ದ ದಿವಂಗತ ಶಾಮನೂರು ಶಿವಶಂಕರಪ್ಪ ಕ್ರಿಯಾಸಮಾಧಿಗೆ ಗೌರವ ಸಮರ್ಪಿಸಿ, ದುಃಖತಪ್ತ ಶಾಮನೂರು ಕುಟುಂಬಕ್ಕೆ ಸಾಂತ್ವನ ಹೇಳಿದ ಬಳಿಕ, ನಗರದ ಬಾಪೂಜಿ ಎಂಬಿಎ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ರಾಜ್ಯದ ಖಜಾನೆಯನ್ನೇ ಕಾಂಗ್ರೆಸ್‌ನವರು ಲೂಟಿ ಮಾಡುತ್ತಿದ್ದಾರೆ. ಇನ್ನು, ಎಸ್‌ಸಿಪಿ-ಟಿಎಸ್‌ಪಿ ಅನುದಾನವೆಲ್ಲಾ ಈ ಸಿದ್ದರಾಮಯ್ಯಗೆ ಏನು ಮಹಾ ಎಂದು ಪ್ರಶ್ನಿಸಿದರು.
ಪ್ರಸ್ತುತ ಬಾರ್ ಲೈಸೆನ್ಸ್ ಪಡೆಯಲು ₹1.75 ಕೋಟಿಯನ್ನು ಕಾಂಗ್ರೆಸ್ ಸರ್ಕಾರಕ್ಕೆ ನೀಡಬೇಕಿದೆ. ಇದೇ ಕಾಂಗ್ರೆಸ್ ಪಕ್ಷದ ಹೊಸ ವರ್ಷದ ಕೊಡುಗೆ ಎಂದು ರಾಜ್ಯ ಸರ್ಕಾರವನ್ನು ಕುಟುಕಿದರು. ಕಾಂಗ್ರೆಸ್ ಪಕ್ಷದ ಚಟುವಟಿಕೆಗಳ ಬಗ್ಗೆ ನಾನಾಗಲಿ, ರಾಜ್ಯದ ಜನತೆಯಾಗಲಿ ಯಾವುದೇ ಆಸಕ್ತಿ ಹೊಂದಿಲ್ಲ. ಪ್ರಪಂಚದಲ್ಲೇ ಸಿದ್ದರಾಮಯ್ಯನಂತಹ ಆರ್ಥಿಕ ತಜ್ಞನನ್ನು ನಾವು ನೋಡಿಯೇ ಇಲ್ಲ. ಅಮೆರಿಕದಂತಹ ದೇಶವೇ ಇಂದು ಆರ್ಥಿಕ ಸಂಕಷ್ಟದಲ್ಲಿದೆ. ಜಗತ್ತಿನ ದೊಡ್ಡಣ್ಣ ಅಂತಲೇ ಕರೆಯಲ್ಪಡುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರಲ್ಲಿ ಹೋಗಿ ಆರ್ಥಿಕ ತಜ್ಞರೂ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಆರ್ಥಿಕ ಸಲಹೆ ನೀಡಲಿ ಎಂದು ವ್ಯಂಗ್ಯವಾಡಿದರು.
ಶಾಮನೂರು ಕ್ರಿಯಾಸಮಾಧಿಗೆ ಎಚ್‌ಡಿಕೆ ಪುಷ್ಪನಮನ
ನಗರದ ಶ್ರೀ ಕಲ್ಲೇಶ್ವರ ಮಿಲ್ ಆವರಣದಲ್ಲಿ ಲಿಂಗೈಕ್ಯ ಡಾ.ಶಾಮನೂರು ಶಿವಶಂಕರಪ್ಪ ಸಮಾಧಿಗೆ ಕುಮಾರಸ್ವಾಮಿ ಅವರು ಜೆಡಿಎಸ್ ಮುಖಂಡರ ಸಮೇತ ತೆರಳಿ ಪುಷ್ಪನಮನ ಸಲ್ಲಿಸಿ, ಪ್ರದಕ್ಷಿಣೆ ಹಾಕಿದರು. ನಂತರ ಶಾಮನೂರು ನಿವಾಸ ಶಿವ ಪಾರ್ವತಿಗೆ ಬಂದು, ಶಾಮನೂರು ಪುತ್ರರಾದ ಎಸ್.ಎಸ್. ಬಕ್ಕೇಶ್, ಎಸ್.ಎಸ್. ಗಣೇಶ್, ಎಸ್.ಎಸ್. ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಶಾಮನೂರು ಪುತ್ರಿಯರು ಹಾಗೂ ಮಕ್ಕಳು, ಮೊಮ್ಮಕ್ಕಳು, ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದರು. ಇದೇ ವೇಳೆ ತಮ್ಮ ಹಾಗೂ ಶಾಮನೂರು ಕುಟುಂಬದ ಬಾಂಧವ್ಯವನ್ನು ಉಭಯ ಮುಖಂಡರು ಮೆಲುಕು ಹಾಕಿದರು.

