ವಿಧಾನಸೌಧದೆದುರು ಬಸವಣ್ಣ, ಕೆಂಪೇಗೌಡ ಪ್ರತಿಮೆ ಅನಾವರಣಗೊಳಿಸಿದ ಅಮಿತ್ ಶಾ

ಜಗಜ್ಯೋತಿ ಬಸವಣ್ಣನವರು ಸಾರಿದ ಸಾಮಾಜಿಕ ನ್ಯಾಯ ಹಾಗೂ ಸರ್ವರೂ ಸಮಾನರೆಂಬ ತತ್ವಾದರ್ಶಗಳು ಮತ್ತು ಆ ತತ್ವಗಳಡಿ ನಾಡಪ್ರಭು ಕೆಂಪೇಗೌಡರು ನಡೆಸಿದ ಉತ್ತಮ ಆಡಳಿತ ಮತ್ತು ಅಭಿವೃದ್ಧಿಯ ಮಂತ್ರ ಭವಿಷ್ಯದಲ್ಲಿ ಕರ್ನಾಟಕ ವಿಧಾನಸಭೆಗೆ ಚುನಾಯಿತರಾಗಿ ಬರುವ ಎಲ್ಲ ಜನಪ್ರತಿನಿಧಿಗಳಿಗೆ ಆದರ್ಶವಾಗಬೇಕು. 

union minister amit shah unveils basaveshwara and kempegowda statue infront of vidhana soudha gvd

ಬೆಂಗಳೂರು (ಮಾ.27): ಜಗಜ್ಯೋತಿ ಬಸವಣ್ಣನವರು ಸಾರಿದ ಸಾಮಾಜಿಕ ನ್ಯಾಯ ಹಾಗೂ ಸರ್ವರೂ ಸಮಾನರೆಂಬ ತತ್ವಾದರ್ಶಗಳು ಮತ್ತು ಆ ತತ್ವಗಳಡಿ ನಾಡಪ್ರಭು ಕೆಂಪೇಗೌಡರು ನಡೆಸಿದ ಉತ್ತಮ ಆಡಳಿತ ಮತ್ತು ಅಭಿವೃದ್ಧಿಯ ಮಂತ್ರ ಭವಿಷ್ಯದಲ್ಲಿ ಕರ್ನಾಟಕ ವಿಧಾನಸಭೆಗೆ ಚುನಾಯಿತರಾಗಿ ಬರುವ ಎಲ್ಲ ಜನಪ್ರತಿನಿಧಿಗಳಿಗೆ ಆದರ್ಶವಾಗಬೇಕು. ಕರ್ನಾಟಕದ ಮೂಲಕ ಇಡೀ ದೇಶ ಹಾಗೂ ಜಗತ್ತಿಗೇ ಈ ಮಹಾಪುರುಷರ ತತ್ವ, ಆದರ್ಶ ಹಾಗೂ ಆಡಳಿತಗಳ ಸಂದೇಶ ಸಾರುವಂತಾಗಬೇಕು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

ವಿಧಾನಸೌಧದ ಮುಂಭಾಗದಲ್ಲಿ ಸ್ಥಾಪಿಸಿರುವ ಜಗಜ್ಯೋತಿ ಬಸವೇಶ್ವರ ಹಾಗೂ ನಾಡಪ್ರಭು ಕೆಂಪೇಗೌಡರ ಪ್ರತಿಮೆಗಳ ಅನಾವರಣ ಹಾಗೂ ನಮ್ಮ ಬೆಂಗಳೂರು ಹಬ್ಬದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ಜಗಜ್ಯೋತಿ ಬಸವೇಶ್ವರರು 12ನೇ ಶತಮಾನದಲ್ಲಿಯೇ ಅನುಭವ ಮಂಟಪದಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಯಿಂದ ಉನ್ನತ ಸ್ತರದ ವ್ಯಕ್ತಿಗಳೆಲ್ಲರನ್ನೂ ಒಂದೆಡೆ ಸೇರಿಸಿ ಚರ್ಚೆಗೆ ಅವಕಾಶ ನೀಡಿ ಸಮಾನತೆ, ಸಮಾಜಿಕ ನ್ಯಾಯದ ಮೂಲಕ ಸಮಾಜದ ಸಶಕ್ತೀಕರಣ ಸಾಧ್ಯ ಎಂದು ತೋರಿಸಿಕೊಟ್ಟವರು. ಕೆಂಪೇಗೌಡರು ಇದೇ ಸಮಾನತೆ, ಸಾಮಾಜಿಕ ನ್ಯಾಯದ ತಳಹದಿಯ ಮೇಲೆ ಬೆಂಗಳೂರು ನಗರವನ್ನು ನಿರ್ಮಾಣ ಮಾಡಿ ಉತ್ತಮ ಆಡಳಿತ ಮತ್ತು ಅಭಿವೃದ್ಧಿಯನ್ನು ಮಾಡಿ ತೋರಿಸಿದವರು. 

ಟ್ರ್ಯಾಲಿ ಕುರ್ಚಿಯಲ್ಲಿ ದೇವೇಗೌಡ ರ್ಯಾಲಿ: ಜೆಡಿಎಸ್‌ಗೆ ಬಹುಮತ ಕೊಡಿಯೆಂದ ಮಾಜಿ ಪ್ರಧಾನಿ

ಹಾಗಾಗಿ ಈ ಇಬ್ಬರೂ ಮಹಾಪುರುಷರ ಪ್ರತಿಮೆಗಳನ್ನು ತನ್ನದೇ ಇತಿಹಾಸವಿರುವ ಕರ್ನಾಟಕದ ಶಕ್ತಿಕೇಂದ್ರ ವಿಧಾನಸೌಧದ ಮುಂದೆ ಸ್ಥಾಪಿಸಲಾಗಿದೆ. ಈ ಇಬ್ಬರೂ ಮಹಾಪುರುಷರ ತತ್ವ, ಆದರ್ಶಗಳು, ಆಡಳಿತ ಮತ್ತು ಅಭಿವೃದ್ಧಿಯ ಮಂತ್ರಗಳು ಮುಂದೆ ವಿಧಾನಸಭೆಗೆ ಆರಿಸಿ ಬರುವ ಎಲ್ಲರಿಗೂ ಆದರ್ಶಪ್ರಾಯವಾಗಬೇಕು. ಕರ್ನಾಟಕದ ಮೂಲಕ ಇಡೀ ದೇಶಕ್ಕೆ ಅವರ ತತ್ವ ಆದರ್ಶ, ಆಡಳಿತದ ಸಂದೇಶಗಳನ್ನು ಸಾರಬೇಕು ಎಂದರು. ಇಂತಹ ಮಹನೀಯರ ಪುತ್ಥಳಿಗಳ ಅನಾವರಣ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿದ್ದಕ್ಕೆ ರಾಜ್ಯದ ಮುಖ್ಯಮಂತ್ರಿ ಹಾಗೂ ಸ್ಪೀಕರ್‌ ಅವರಿಗೆ ಅಭಿನಂದನೆ ತಿಳಿಸುತ್ತೇನೆ. ಭಾರತ ಲೋಕತಂತ್ರದ ಜನನಿ. ಅದು 12ನೇ ಶತಮಾನದ ವಚನಕಾರರ ಅನುಭವ ಮಂಟಪದ ಮೂಲಕ ಆರಂಭವಾಗುತ್ತದೆ. 

ಅಲ್ಲಿ ಸಾಮಾಜಿಕ ನ್ಯಾಯದ ಜತೆಗೆ ಮಹಿಳೆಯರಿಗೂ ಸಮಾನ ಸ್ಥಾನ ನೀಡಲಾಗುತ್ತದೆ. ವಚನಕಾರರ ವಚನಗಳು ನಮ್ಮ ಜೀವನಕ್ಕೆ ಆದರ್ಶವಾಗಬೇಕು. ಕೆಂಪೇಗೌಡರ ತಾಕತ್ತು ಅವರ ಧ್ವನಿಯಲ್ಲಿರಲಿಲ್ಲ, ಬದಲಿಗೆ ಅವರ ಆಡಳಿತ ವೈಖರಿ, ಆಚಾರ ವಿಚಾರಗಳಲ್ಲಿತ್ತು. ನದಿ, ಸರೋವರದಂತಹ ಯಾವುದೇ ನೀರಿನ ಮೂಲ ಇಲ್ಲದ ಕಡೆ ನಗರವನ್ನು ನಿರ್ಮಿಸಿ ಅಲ್ಲಿ ನೂರಾರು ಕೆರೆಗಳು, ಉದ್ಯಾನಗಳನ್ನು ಕಟ್ಟಿನೀರು ಹಾಗೂ ಪರಿಸರದ ಮಹತ್ವವನ್ನು ಇಡೀ ಜಗತ್ತಿಗೆ ಸಾರಿದವರು. ವಿಜಯನಗರ ಸಾಮ್ರಾಜ್ಯದ ಅಚ್ಯುತದೇವರಾಯರ ಸಾಮಂತರಾಗಿದ್ದ ಕೆಂಪೇಗೌಡರು ಅತ್ಯಂತ ದೂರದೃಷ್ಟಿಯ ಆಡಳಿತಗಾರರಾಗಿದ್ದರು. ಅವರು ಸ್ಥಾಪಿಸಿದ ನಗರ ಇಂದು ವಿಶ್ವಮಾನ್ಯವಾಗಿ ಬೆಳೆದಿರುವುದೇ ಇದಕ್ಕೆ ಸಾಕ್ಷಿ. ಇಂದು ಬೆಂಗಳೂರು ವಿದೇಶಿ ಬಂಡವಾಳ ಹೂಡಿಕೆ, ರಕ್ಷಣಾ ಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ ಎಂದರು.

ಡ್ರಗ್ಸ್‌ ಮುಕ್ತ ಭಾರತಕ್ಕೆಅಮಿತ್‌ ಶಾ ಪಣ: ಕಾಂಗ್ರೆಸ್‌ ಸರ್ಕಾರಕ್ಕೂ ಪರೋಕ್ಷ ಚಾಟಿ ಬೀಸಿದ ಕೇಂದ್ರ ಗೃಹ ಸಚಿವ

ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರು ಮಠದ ಡಾ.ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ, ಪಟ್ಟನಾಯಕನಹಳ್ಳಿ ಸ್ಫಟಿಕಪುರಿ ಮಠದ ನಂಜಾವಧೂತ ಸ್ವಾಮೀಜಿ, ಕೆಂಗೇರಿಯ ಒಕ್ಕಲಿಗ ಮಹಾಸಂಸ್ಥಾನದ ಚಂದ್ರಶೇಖರ ಸ್ವಾಮೀಜಿ, ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ , ಸಚಿವರಾದ ಆರ್‌.ಅಶೋಕ್‌, ಸಿ.ಸಿ.ಪಾಟೀಲ, ಗೋವಿಂದ ಕಾರಜೋಳ, ಮುರುಗೇಶ್‌ ನಿರಾಣಿ, ಡಾ.ಸಿ.ಎನ್‌.ಆಶ್ವತ್ಥನಾರಾಯಣ, ಡಾ.ಕೆ.ಸುಧಾಕರ್‌, ಮುನಿರತ್ನ, ಸಂಸದರಾದ ಪಿ.ಸಿ.ಮೋಹನ್‌, ತೇಜಸ್ವಿ ಸೂರ್ಯ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios