ಡ್ರಗ್ಸ್ ಮುಕ್ತ ಭಾರತಕ್ಕೆಅಮಿತ್ ಶಾ ಪಣ: ಕಾಂಗ್ರೆಸ್ ಸರ್ಕಾರಕ್ಕೂ ಪರೋಕ್ಷ ಚಾಟಿ ಬೀಸಿದ ಕೇಂದ್ರ ಗೃಹ ಸಚಿವ
ಮಾದಕವಸ್ತುಗಳ ಕಳ್ಳಸಾಗಣೆ ಸಮಸ್ಯೆ ಕೇಂದ್ರ ಅಥವಾ ರಾಜ್ಯದ ಸಮಸ್ಯೆಯಾಗದೆ ರಾಷ್ಟ್ರೀಯ ಸಮಸ್ಯೆಯಾಗಿದೆ. ಭಾರತವನ್ನು ಮಾದಕವಸ್ತು ಮುಕ್ತ ದೇಶವನ್ನಾಗಿ ಮಾಡಲು ಕೇಂದ್ರ ಸರ್ಕಾರಕ್ಕೆ ಎಲ್ಲಾ ರಾಜ್ಯಗಳ ಸಹಕಾರ ಅತ್ಯಗತ್ಯ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಬೆಂಗಳೂರು (ಮಾ.25): ಮಾದಕವಸ್ತುಗಳ ಕಳ್ಳಸಾಗಣೆ ಸಮಸ್ಯೆ ಕೇಂದ್ರ ಅಥವಾ ರಾಜ್ಯದ ಸಮಸ್ಯೆಯಾಗದೆ ರಾಷ್ಟ್ರೀಯ ಸಮಸ್ಯೆಯಾಗಿದೆ. ಭಾರತವನ್ನು ಮಾದಕವಸ್ತು ಮುಕ್ತ ದೇಶವನ್ನಾಗಿ ಮಾಡಲು ಕೇಂದ್ರ ಸರ್ಕಾರಕ್ಕೆ ಎಲ್ಲಾ ರಾಜ್ಯಗಳ ಸಹಕಾರ ಅತ್ಯಗತ್ಯ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಹಿಂದೆ ಆಡಳಿತ ನಡೆಸಿದ ಸರ್ಕಾರಗಳು ಮಾದಕವಸ್ತುಗಳ ನಿಯಂತ್ರಣಕ್ಕೆ ಕ್ರಮ ತೆಗೆದುಕೊಂಡಿದ್ದರೆ ಇದು ಪೆಡಂಭೂತವಾಗಿ ಬೆಳೆಯುತ್ತಿರಲಿಲ್ಲ. ಹಿಂದಿನ ಎಲ್ಲ ಸರ್ಕಾರಗಳ ವೈಫಲ್ಯವೇ ದೇಶದಲ್ಲಿ ಮಾದಕ ವಸ್ತುಗಳು ವ್ಯಾಪಕವಾಗಿ ಬೆಳೆಯಲು ಕಾರಣವಾಗಿದೆ ಎಂದೂ ಅವರು ಹರಿಹಾಯ್ದರು.
ಶುಕ್ರವಾರ ಬೆಂಗಳೂರಿನ ಪಂಚತಾರಾ ಹೋಟೆಲ್‌ನಲ್ಲಿ ನಡೆದ ‘ಮಾದಕವಸ್ತುಗಳ ಕಳ್ಳಸಾಗಾಣೆ ಮತ್ತು ರಾಷ್ಟ್ರೀಯ ಭದ್ರತೆ’ ಕುರಿತ ದಕ್ಷಿಣ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪ್ರಾದೇಶಿಕ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ರಾಷ್ಟ್ರೀಯ ಸಮಸ್ಯೆಯಾಗಿರುವ ಮಾದಕವಸ್ತು ಕಳ್ಳಸಾಗಣೆ ನಿಯಂತ್ರಣಕ್ಕೆ ಹಾಕುವ ಪ್ರಯತ್ನಗಳು ರಾಷ್ಟ್ರೀಯವಾಗಿರಬೇಕು ಎಂದರು.
ರಾಹುಲ್ ಅನರ್ಹತೆಯಿಂದ 56 ಇಂಚು ಮೋದಿ ರಣಹೇಡಿಯೆಂದು ಸಾಬೀತು: ಬಿ.ಕೆ.ಹರಿಪ್ರಸಾದ್
ಮಾದಕ ದ್ರವ್ಯಗಳ ಹಾವಳಿಯನ್ನು ಪರಿಣಾಮಕಾರಿಯಾಗಿ ಎದುರಿಸಲು ಎಲ್ಲಾ ರಾಜ್ಯಗಳು ನಿಯಮಿತವಾಗಿ ಜಿಲ್ಲಾ ಮಟ್ಟದ ಮತ್ತು ರಾಜ್ಯ ಮಟ್ಟದ ರಾಷ್ಟ್ರೀಯ ನಾರ್ಕೊಟಿಕ್ಸ್ ಸಮನ್ವಯ ಪೋರ್ಟಲ್‌ನ (ಎನ್‌ಸಿಒಆರ್‌ಡಿ) ಸಭೆ ಕರೆಯಬೇಕು. ಮಾದಕ ದ್ರವ್ಯಗಳ ವಿರುದ್ಧದ ಹೋರಾಟದಲ್ಲಿ ಇತ್ತೀಚಿನ ಸುಧಾರಿತ ತಂತ್ರಜ್ಞಾನ ಬಳಸುವುದು ಮುಂದಿನ ದಾರಿಯಾಗಿರಬೇಕು. ಗಾಂಜಾ, ಅಫೀಮು ಬೆಳೆಯುವ ಪ್ರದೇಶಗಳ ಗುರುತಿಸುವಿಕೆ ಮತ್ತು ನಿಯಂತ್ರಣಕ್ಕಾಗಿ ಡ್ರೋನ್, ಕೃತಕ ಬುದ್ಧಿಮತ್ತೆ ಮತ್ತು ಉಪಗ್ರಹ ಮ್ಯಾಪಿಂಗ್ ಬಳಕೆಗೆ ಒತ್ತು ನೀಡಬೇಕು. ಮಾದಕ ವಸ್ತುಗಳ ಮಾರಾಟ, ಕಳ್ಳಸಾಗಣೆ ಪ್ರಕರಣಗಳಲ್ಲಿ ಅದರ ಮೂಲದಿಂದ ಗಮ್ಯ ಸ್ಥಾನದವರೆಗೆ ಅದರ ಸಂಪೂರ್ಣ ಜಾಲವನ್ನು ದಮನ ಮಾಡಲು ಸಂಪೂರ್ಣ ತನಿಖೆಯ ಅಗತ್ಯವಿದೆ ಎಂದು ಹೇಳಿದರು.
ಸಮಗ್ರ ಜಾಗೃತಿ ಅಭಿಯಾನ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಮಾದಕವಸ್ತುಗಳ ಸೇವನೆ ಮುಕ್ತ ಭಾರತ ಮಾಡಲು ಹೊರಟಿದೆ. ಮಾದಕ ವಸ್ತುಗಳ ವಿರುದ್ಧ ಕೇಂದ್ರ ಸರ್ಕಾರದ ಹಲವು ನೀತಿಗಳನ್ನ ತಂದಿದೆ. ಗೃಹ ಸಚಿವಾಲಯವು ಸಾಂಸ್ಥಿಕ ರಚನೆ, ಸಬಲೀಕರಣ ಮತ್ತು ಎಲ್ಲಾ ಮಾದಕ ದ್ರವ್ಯ ಏಜೆನ್ಸಿಗಳ ಸಮನ್ವಯ ಬಲಪಡಿಸುವ ಮೂರು ಅಂಶಗಳ ಸೂತ್ರ ಅಳವಡಿಸಿಕೊಂಡಿದೆ, ಮಾದಕ ದ್ರವ್ಯಗಳನ್ನು ಹತ್ತಿಕ್ಕಲು ಸಮಗ್ರ ಜಾಗೃತಿ ಅಭಿಯಾನ ಅಳವಡಿಸಿಕೊಂಡಿದೆ ಎಂದರು.
ಸಹಾಯ, ಸಹಕಾರ ಮತ್ತು ಸಹಯೋಗ ಎಂಬ ಮೂರು ಮಂತ್ರದಿಂದ ಬದಲಾವಣೆ ಸಾಧ್ಯ. ರಾಜ್ಯ ಸರ್ಕಾರಗಳು ಕೇಂದ್ರದ ಜೊತೆ ಕೈ ಜೋಡಿಸಬೇಕೆಂದು ಮನವಿ ಮಾಡಿದ ಅಮಿತ್ ಶಾ, ‘ನಮ್ಮ ಮಕ್ಕಳನ್ನು ಮಾದಕ ವ್ಯಸನದಿಂದ ಮುಕ್ತಗೊಳಿಸಬೇಕು. ನಾವು ಜಾಗೃತರಾದರೆ ಮಾತ್ರ ಇದನ್ನು ನಿಯಂತ್ರಿಸಲು ಸಾಧ್ಯ. ಯುವಕರು ಇದರ ಸುಳಿಗೆ ಸಿಲುಕುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆ. ಪೋಷಕರು ಮಕ್ಕಳ ಬಗ್ಗೆ ಹೆಚ್ಚು ನಿಗಾ ವಹಿಸಬೇಕು’ ಎಂದು ಸೂಚಿಸಿದರು. ಗೃಹ ಸಚಿವ ಆರಗ ಜ್ಞಾನೇಂದ್ರ, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಮತ್ತಿತರರು ಉಪಸ್ಥಿತರಿದ್ದರು.
8400 ಕೋಟಿ ಮೌಲ್ಯದ 5.94 ಲಕ್ಷ ಕೆ.ಜಿ. ಡ್ರಗ್ ನಾಶ: ಆಜಾದಿ ಕಾ ಅಮೃತ ಮಹೋತ್ಸವದ ಅಡಿ 2022 ಜೂನ್ 1ರಿಂದ ಆರಂಭವಾದ 75 ದಿನಗಳ ಅಭಿಯಾನದಲ್ಲಿ ದೇಶದಲ್ಲಿ 75 ಸಾವಿರ ಕೆ.ಜಿ. ಮಾದಕ ದ್ರವ್ಯಗಳನ್ನು ನಾಶಪಡಿಸುವ ಗುರಿ ನಿಗದಿಪಡಿಸಲಾಗಿತ್ತು. ಈವರೆಗೆ 8,409 ಕೋಟಿ ರು. ಮೌಲ್ಯದ 5.94 ಲಕ್ಷ ಕೆ.ಜಿ. ಮಾದಕ ವಸ್ತುಗಳನ್ನು ನಾಶಪಡಿಸಲಾಗಿದೆ. ಈ ಮೂಲಕ ನಿಗದಿತ ಗುರಿ ಮೀರಿದ ಸಾಧನೆ ಮಾಡಲಾಗಿದೆ. ನಾಶಪಡಿಸಿದ ಒಟ್ಟು ಮಾದಕವಸ್ತುಗಳ ಪೈಕಿ 3,138 ಕೋಟಿ ರು. ಮೌಲ್ಯದ 1.29 ಲಕ್ಷ ಕೆ.ಜಿ. ತೂಕದ ಮಾದಕವಸ್ತುಗಳನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೊ(ಎನ್‌ಸಿಬಿ) ಒಂದೇ ನಾಶಪಡಿಸಿದೆ ಎಂದು ಇದೇ ವೇಳೆ ಕೇಂದ್ರ ಸಚಿವರು ಮಾಹಿತಿ ನೀಡಿದರು.
ಹಿಂಬಾಗಿಲಿನಿಂದ ಬಂದ ಅನೈತಿಕ ಸರ್ಕಾರ ರಾಜ್ಯದಲ್ಲಿದೆ: ಡಬಲ್ ಇಂಜಿನ್ ಸರ್ಕಾರದ ವಿರುದ್ಧ ಸಿದ್ದು ವಾಗ್ದಾಳಿ
ಡ್ರಗ್ಸ್ ಬಗ್ಗೆ ಶೂನ್ಯ ಸಹಿಷ್ಣುತೆ: ‘ರಾಜ್ಯದಲ್ಲಿ ಮಾದಕವಸ್ತು ನಿಯಂತ್ರಣಕ್ಕೆ ಗಂಭೀರ ಕ್ರಮ ಕೈಗೊಳ್ಳಲಾಗಿದೆ. ಮಾದಕವಸ್ತು ನಿಯಂತ್ರಣ ವಿಚಾರದಲ್ಲಿ ಜೀರೊ ಟಾಲೆರೆನ್ಸ್ ಜಾರಿಗೊಳಿಸಲಾಗಿದ್ದು, ಇದಕ್ಕೆ ಸಮಾಜದ ಸಹಕಾರ ಮುಖ್ಯ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಮಾದಕ ವಸ್ತು ಕುರಿತ ಪ್ರಾದೇಶಿಕ ಸಮ್ಮೇಳನದಲ್ಲಿ ಮಾತನಾಡಿದ ಅವರು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ ಕಾನೂನಿನ ಮೂಲಕ ಅಪರಾಧವನ್ನು ನಿಯಂತ್ರಿಸುವ ಕೆಲಸವಾಗುತ್ತಿದೆ. ರಾಜ್ಯದಲ್ಲಿ ಈ ಹಿಂದೆ ಪ್ರತಿ ವರ್ಷ ಸಾವಿರ ಮಾದಕವಸ್ತು ಪ್ರಕರಣಗಳು ದಾಖಲಾಗುತ್ತಿದ್ದವು. ಆದರೆ ಈಗ ಪ್ರತಿ ವರ್ಷ ಐದು ಸಾವಿರ ಪ್ರಕರಣಗಳು ದಾಖಲಾಗುತ್ತಿವೆ. ಹೆಚ್ಚಿನ ಸಂಖ್ಯೆಯಲ್ಲಿ ಹೆಚ್ಚಿನ ಜನರನ್ನು ವಿಚಾರಣೆಗೆ ಒಳಪಡಿಸುವುದರ ಜತೆಗೆ ಬಹಳ ಪ್ರಕರಣಗಳಲ್ಲಿ ಶಿಕ್ಷೆಗೂ ಒಳಪಡಿಸಿದ್ದೇವೆ. ಬೆಂಗಳೂರು ಅಂತಾರಾಷ್ಟ್ರೀಯ ನಗರ ಕೇವಲ 60 ಕಿ.ಮಿ ಅಂತರದಲ್ಲಿ ತಮಿಳುನಾಡು ಗಡಿ ಇದೆ. ಹಾಗಾಗಿ ಮಾದಕ ವಸ್ತು ವಿಚಾರದಲ್ಲಿ ಎರಡೂ ರಾಜ್ಯಗಳ ನಡುವೆ ಸಹಕಾರ ಅತ್ಯಂತ ಮುಖ್ಯ’ ಎಂದು ಅಭಿಪ್ರಾಯಪಟ್ಟರು.