ಕೇಂದ್ರ ಸರ್ಕಾರ ೨೦೨೫ರ ಸೆಪ್ಟೆಂಬರ್‌ನಿಂದ ಜನಗಣತಿ ಜೊತೆಗೆ ಜಾತಿಗಣತಿ ನಡೆಸಲಿದೆ. ರಾಜ್ಯ ಸರ್ಕಾರ ಈ ಹಿಂದೆ ನಡೆಸಿದ ಜಾತಿ ಸಮೀಕ್ಷಾ ವರದಿಯನ್ನು ಹತ್ತು ವರ್ಷಗಳಿಂದ ಬಳಸಿಕೊಳ್ಳದೆ ರಾಜಕೀಯ ಲಾಭ ಪಡೆಯುತ್ತಿದೆ. ಈಗ ಕೇಂದ್ರದ ನಿರ್ಧಾರದಿಂದ ರಾಜ್ಯದ ವರದಿ ಮೂಲೆಗುಂಪಾಗುವ ಸಾಧ್ಯತೆ ಇದೆ. ಸರ್ಕಾರ ವರದಿಯನ್ನು ಅಂಗೀಕರಿಸಬೇಕೋ ಬೇಡವೋ ಎಂಬ ಗೊಂದಲದಲ್ಲಿದೆ.
ಬೆಂಗಳೂರು (ಏ.30): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ಬಾರಿ ಅಧಿಕಾರದಲ್ಲಿದ್ದಾಗ 150 ಕೋಟಿ ರೂ. ಖರ್ಚು ಮಾಡಿಸಿ ಮಾಡಿಸಿದ್ದ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ (ಜಾತಿಗಣತಿ) ವರದಿಯನ್ನು 10 ವರ್ಷಗಳು ಕಳೆದರೂ ಜಾರಿಗೆ ತರದೇ ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಲೇ ಬಂದಿದ್ದಾರೆ. ಆದರೆ, ಇದೀಗ ಕೇಂದ್ರ ಸರ್ಕಾರ ಇದೇ 2025ರ ಸೆಪ್ಟಂಬರ್ ತಿಂಗಳಿಂದ ನಡೆಸಲಾಗುವ ಜನಗಣತಿಯ ಜೊತೆಗೆ ಜಾತಿಗಣತಿ ಮಾಡುವುದಕ್ಕೂ ಮುಂದಾಗಿದೆ. ಈ ವರದಿ ಒಂದು ವರ್ಷದಲ್ಲಿ 2026ರಲ್ಲಿ ಬಹಿರಂಗ ಆಗಲಿದ್ದು, ರಾಜ್ಯ ಸರ್ಕಾರದ ವರದಿ ಮೂಲೆಗುಂಪಾಗುವುದು ನಿಶ್ಚಿತವಾಗಿದೆ ಎಂದು ಹೇಳಲಾಗುತ್ತಿದೆ.
ಹೌದು, ಕಾಶ್ಮೀರ ಪೆಹಲ್ಗಾಮ್‌ನಲ್ಲಿ ಇಸ್ಲಾಮಿಕ್ ಉಗ್ರರು ನಡೆಸಿದ ಹಿಂದೂ ನರಮೇಧದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಮೇಲೆ ಯುದ್ಧ ಮಾಡುವ ಸಿದ್ಧತೆಯಲ್ಲಿ ಭಾರತ ತೊಡಗಿದೆ ಎಂದು ಹೇಳಲಾಗುತ್ತಿದೆ. ಇಂತಹ ಗಂಭೀರ ಸ್ಥಿತಿಯಲ್ಲಿ ಧರ್ಮದ ಆಧಾರಿತ ಧಾಳಿಯಿಂದ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ ಯಾವ ಜಾತಿ, ಧರ್ಮದವರು ಎಷ್ಟಿದ್ದಾರೆ ಎಂಬುದನ್ನು ಲೆಕ್ಕ ಹಾಕಲು ಮುಂದಾಗಿದೆ. ಹೀಗಾಗಿ, ಪಾಕಿಸ್ತಾನದ ಮೇಲೆ ಯುದ್ಧ ಘೋಷಣೆ ಮಾಡುತ್ತಾರೆಂದು ಕಾಯುತ್ತಿದ್ದ ಜನರಿಗೆ 2025ರ ಸೆಪ್ಟಂಬರ್‌ನಿಂದ ನಡೆಯುವ ಜನಗಣತಿ ಜೊತೆಗೆ ಜಾತಿ ಗಣತಿಯನ್ನೂ ಮಾಡುವುದಾಗೊ ಘೋಷಣೆ ಮಾಡಿದೆ. ಈ ಘೋಷಣೆಯಿಂದ ರಾಜ್ಯ ಸರ್ಕಾರ ಮತ್ತು ಸಿದ್ದರಾಮಯ್ಯ ಬಣಕ್ಕೆ ಬರಸಿಡಿಲು ಬಡಿದಂತಾಗಿದೆ.
ಕೇಂದ್ರ ಸರ್ಕಾರ ಮುಂದಿನ ವರ್ಷ ದೇಶದಲ್ಲಿ ನಡೆಸಲಾಗುವ ಜನಗಣತಿ ವೇಳೆಯೇ ಜಾತಿ ಗಣತಿಯನ್ನು ಮಾಡುವುದಕ್ಕೂ ಮುಂದಾಗಿದೆ. ಆದರೆ, ನಮ್ಮ ಕರ್ನಾಟಕ ರಾಜ್ಯದಲ್ಲಿ ಸಿದ್ದರಾಮಯ್ಯ ಕಳೆದ ಅವಧಿಯಲ್ಲಿ ಸಿಎಂ ಆಗಿದ್ದಾ ಮಾಡಿಸಿದ್ದ ಜಾತಿಗಣತಿ ವರದಿಯನ್ನು 10 ವರ್ಷಗಳಾದರೂ ಜಾರಿಗೆ ತರದೇ ರಾಜಕೀಯ ಅಸ್ತ್ರವಾಗಿ ಬಳಕೆ ಮಾಡಿಕೊಂಡು ಮುಂದೂಡಿಕೆ ಮಾಡುತ್ತಲೇ ಇದ್ದಾರೆ.
ಜಾತಿಗಣತಿಯನ್ನೇ ಮಾಡಿಲ್ಲ ಎಂದಿದ್ದ ಸರ್ಕಾರ:
ಕೇಂದ್ರ ಸರ್ಕಾರ ಜನಗಣತಿ ಜೊತೆಗೆ ಜಾತಿ ಗಣತಿ ಮಾಡಲು ತೀರ್ಮಾನ ಮಾಡಿದ ಬೆನ್ನಲ್ಲಿಯೇ ರಾಜ್ಯ ಸರ್ಕಾರ ಮಾಡಿದ್ದ ಜಾತಿ ಗಣತಿ ಸಮೀಕ್ಷೆಗಳು ಮೂಲೆ ಸೇರುತ್ತಾ? ಎಂಬ ಅನುಮಾನ ಮೂಡುತ್ತಿವೆ. ಆದ್ದರಿಂದ ಸಿದ್ದರಾಮಯ್ಯ ಅವರು ಮಾಡಿಸಿದ್ದ ಜಾತಿಗಣತಿ ಭವಿಷ್ಯ ಪುಸ್ತಕದಲ್ಲಿಯೇ ಗೆದ್ದಲು ಹಿಡಿಯುತ್ತದೆಯೇ ಎಂಬ ಕುತೂಹಲ ಎದುರಾಗಿದೆ. ಈವರೆಗೆ ರಾಜ್ಯ ಸರ್ಕಾರ ಜಾತಿಗಣತಿ ಮಾಡಿಲ್ಲ, ಕೇವಲ ಸಮೀಕ್ಷೆ ಮಾಡಿದ್ದೇವೆ ಎಂದು ಹೇಳುತ್ತಿತ್ತು. ಆದರೆ ಜಾತಿಗಳ ವಿವರ ಸಾರ್ವಜನಿಕ ವಲಯದಲ್ಲಿ ಬಹಿರಂಗವಾದ ಬೆನ್ನಲ್ಲಿಯೇ ಈ ಜಾತಿಗಣತಿ ವರದಿಗೆ ಭಾರೀ ವಿರೋಧ ವ್ಯಕ್ತವಾಗಿತ್ತು.
ಕೇಂದ್ರ ಸರ್ಕಾರದ ನಿರ್ಧಾರದ ಬೆನ್ನಲ್ಲೇ ರಾಜ್ಯದ ಜಾತಿಜನಗಣತಿ ಮಾನ್ಯತೆ ಸಿಗುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಈ ಸಮೀಕ್ಷೆಯನ್ನು ಮಾನ್ಯ ಮಾಡಲು ಕಾನೂನಿನಲ್ಲಿ ಅವಕಾಶ ಇಲ್ಲ. ಈ ಕುರಿತು ಸಂಪುಟ ಸಭೆಯಲ್ಲಿ ತಿರ್ಮಾನ ತೆಗೆದುಕೊಳ್ಳುವ ಅನಿವಾರ್ಯತೆಗೆ ರಾಜ್ಯ ಸರ್ಕಾರ ಸಿಲುಕಿದೆ. ಈಗಾಗಲೇ ರಾಜ್ಯದ ಎಲ್ಲ ಸಚಿವರಿಗೂ ಜಾತಿಗಣತಿ ವರದಿಯ ಪ್ರತಿಗಳನ್ನು ಕೊಡಲಾಗಿದ್ದು, ಇದನ್ನು ಒಮ್ಮೆ ಅಧ್ಯಯನ ಮಾಡಿಕೊಂಡು ಬಂದು ಸಚಿವ ಸಂಪುಟದಲ್ಲಿ ಚರ್ಚೆ ಮಾಡುವುದಕ್ಕೂ ವಿಶೇಷ ಸಂಪುಟ ಸಭೆಯನ್ನೂ ಆಯೋಜನೆ ಮಾಡಲಾಗಿತ್ತು. ಆದರೆ, ಜಾತಿ ಗಣತಿ ವರ್ಚೆ ಕುರಿತ ಸಂಪುಟ ಸಭೆಯಲ್ಲಿ ಯಾರೊಬ್ಬರೂ ಒಮ್ಮತದ ತೀರ್ಮಾನಕ್ಕೆ ಬಾರದ ಹಿನ್ನೆಲೆಯಲ್ಲಿ ಯಾವುದೇ ತೀರ್ಮಾನ ಕೈಗೊಳ್ಳದೇ ಅನಿರ್ಧಿಷ್ಟಾವಧಿವರೆಗೆ ಚರ್ಚೆಯನ್ನು ಮುಂದೂಡಿಕೆ ಮಾಡಲಾಗಿದೆ.
10 ವರ್ಷ ಕಳೆದರೂ ಅಂಗೀಕಾರವಾದ ರಾಜ್ಯ ಜನಗಣತಿ, ಊಟಕ್ಕಿಲ್ಲದ ಉಪ್ಪಿನಕಾಯಿ: ಇದೀಗ ಕೇಂದ್ರ ಸರ್ಕಾರವೇ ಅಧಿಕೃತವಾಗಿ ಜನ+ಜಾತಿಗಣತಿ ಎರಡನ್ನೂ ಮಾಡುವುದಕ್ಕೆ ಮುಂದಾಗಿದೆ. ಈ ವರದಿಯ ಫಲಿತಾಂಶ ಮತ್ತು ಅಂಕಿ-ಅಂಶಗಳು 2026ರಲ್ಲಿ ದೇಶದ ಜನರ ಕೈ ಸೇರಲಿವೆ. ಆಗ ರಾಜ್ಯದಲ್ಲಿ ನಡೆಸಲಾದ ಜಾತಿ ಗಣತಿ ವರದಿಯ ಲೆಕ್ಕಾಚಾರಗಳು ಊಟಕ್ಕಿಲ್ಲದ ಉಪ್ಪಿನಕಾಯಿಯಂತೆ ಆಗುತ್ತದೆ. ಜನರು 10 ವರ್ಷಗಳಿಂದ ಕಾಯುತ್ತಿದದರೂ ಅದನ್ನು ಅಂಗೀಕಾರ ಮಾಡದೇ ಅದರ ಹೆಸರು ಹೇಳಿಕೊಂಡು, ವರದಿಯ ಪ್ರತಿ ತೋರಿಸಿಕೊಂಡು ರಾಜಕೀಯ ಮಾಡುತ್ತಲೇ ಬಂದಿದೆ. ಇದೀಗ ತುರ್ತಾಗಿ ಮುಂಬರುವ ಸಂಪುಟ ಸಭೆಗಳಲ್ಲಿ ಹಿಂದುಳಿದ ವರ್ಗಗಳ ಆಯೋಗದಿಂದ ಮಾಡಲಾದ ಜಾತಿಗಣತಿ ವರದಿಯನ್ನು ಅಂಗೀಕಾರಕ್ಕೆ ತರಬೇಕೋ ಅಥವಾ ತಿರಸ್ಕಾರ ಮಾಡಬೇಕೋ ಎಂಬುದನ್ನು ತೀರ್ಮಾನಿಸುವ ಅಗತ್ಯತೆ ಹೆಚ್ಚಾಗಿದೆ. ಆದರೆ, ಮುಂಬರುವ ಸಂಪುಟ ಸಭೆಯಲ್ಲಿ ಸರ್ಕಾರ ಏನು ತೀರ್ಮಾನ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.


