ಮತ್ತೆ ಭುಗಿಲೆದ್ದ ಉಡುಪಿ ಕಾಲೇಜಿನ ವೀಡಿಯೋ ವಿವಾದ
ವೀಡಿಯೋ ಬಗ್ಗೆ ಟ್ವೀಟ್ ಮಾಡಿದ್ದ ಹೋರಾಟಗಾರ್ತಿ ಪೋಷಕರ ವಿಚಾರಣೆ, ಹಿಂದೂಪರ ಸಂಘಟನೆಗಳ ಆಕ್ರೋಶ, ಚಿತ್ರೀಕರಣ ಮಾಡಿರುವ ಮೂವರು ವಿದ್ಯಾರ್ಥಿನಿಯರಿಂದ ತಪ್ಪೊಪ್ಪಿಗೆ: ಕಾಲೇಜು ಆಡಳಿತ ಮಂಡಳಿ ಸ್ಪಷ್ಟನೆ.
ಉಡುಪಿ(ಜು.26): ಉಡುಪಿಯ ಕಾಲೇಜೊಂದರ ಶೌಚಾಲಯದಲ್ಲಿ ವಿದ್ಯಾರ್ಥಿನಿಯರ ವಿಡಿಯೋ ಚಿತ್ರೀಕರಣ ನಡೆಸಲಾಗಿದೆ ಎಂಬ ವಿವಾದ ಮತ್ತೆ ಭುಗಿಲೆದ್ದಿದೆ. ಮೂವರು ವಿದ್ಯಾರ್ಥಿನಿಯರು ಶೌಚಾಲಯದಲ್ಲಿರುವ ದೃಶ್ಯವನ್ನು ಮತ್ತೊಂದು ಕೋಮಿಗೆ ಸೇರಿದ ವಿದ್ಯಾರ್ಥಿನಿಯರು ವೀಡಿಯೋ ಮಾಡಿ ಕೆಲ ವಾಟ್ಸಾಪ್ ಗ್ರೂಪ್‌ಗಳಲ್ಲಿ ಹಂಚಿದ್ದಾರೆ, ಈ ಬಗ್ಗೆ ಯಾರೂ ಚಕಾರ ಎತ್ತುತ್ತಿಲ್ಲ ಏಕೆ ಎಂದು ಉಡುಪಿ ಮೂಲದ ಹಿಂದೂಪರ ಹೋರಾಟಗಾರ್ತಿಯೊಬ್ಬರು ಮಾಡಿದ ಟ್ವೀಟ್ ವಿವಾದವನ್ನು ಮತ್ತೆ ಚರ್ಚೆಗೆ ಎಳೆದಿದೆ.
ಇದರ ಬೆನ್ನಲ್ಲೇ, ಹೋರಾಟಗಾರ್ತಿ ಮನೆಗೆ ಪೊಲೀಸರು ಭೇಟಿ ನೀಡಿ ಆಕೆಯ ಪೋಷಕರ ವಿಚಾರಣೆ ನಡೆಸಿದ್ದು, ಈ ಬಗ್ಗೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪೊಲೀಸರನ್ನು ಬಳಸಿ ಸತ್ಯವನ್ನು ಹತ್ತಿಕ್ಕುವ ಪ್ರಯತ್ನ ಮಾಡಿದೆ. ಇದು ಸಣ್ಣ ವಿಷಯವಲ್ಲ, ಹಿಂದೂ ಹುಡುಗಿಯರ ವಿರುದ್ಧ ಷಡ್ಯಂತ್ರವೇ ಎಂಬ ಅನುಮಾನಗಳಿವೆ. ಎಲ್ಲ ಕೋನಗಳಿಂದಲೂ ತನಿಖೆ ನಡೆಸಬೇಕು ಎಂದು ಅನೇಕ ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ.
ಉಡುಪಿ ಕಾಲೇಜು ಶೌಚಗೃಹದಲ್ಲಿ ಹಿಂದೂ ಹುಡ್ಗೀರ ಚಿತ್ರೀಕರಣ: ಮುಸ್ಲಿಂ ಯುವತಿಯರ ಕೃತ್ಯ ಒಪ್ಪಿಕೊಂಡ ಕಾಲೇಜು
ಆಡಳಿತ ಮಂಡಳಿ, ಪೊಲೀಸ್ ಸ್ಪಷ್ಟೀಕರಣ:
ಈ ನಡುವೆ ಕಾಲೇಜಿನ ನಿರ್ದೇಶಕಿ ರಶ್ಮಿ ಕೃಷ್ಣಪ್ರಸಾದ್ ಮಾತನಾಡಿ, ಈ ಕಾಲೇಜಿನ 3 ಮಂದಿ ವಿದ್ಯಾರ್ಥಿನಿಯರು ಕ್ಯಾಮರದ ಮೂಲಕ ಇನ್ನೊಬ್ಬ ವಿದ್ಯಾರ್ಥಿನಿಯನ್ನು ಅಸಭ್ಯವಾಗಿ ಚಿತ್ರೀಕರಿಸಿದ್ದರು. ಇದು ಕಾಲೇಜಿನ ಗಮನಕ್ಕೆ ಬಂದು ಆರೋಪಿ ವಿದ್ಯಾರ್ಥಿನಿಯರನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದೆ. ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡಿರುವ 3 ಮಂದಿ ವಿದ್ಯಾರ್ಥಿನಿಯರು ತಪ್ಪೊಪ್ಪಿಕೊಂಡಿದ್ದಾರೆ. ತಮಾಷೆಗಾಗಿ ವೀಡಿಯೋ ಮಾಡಿರುವುದಾಗಿ ಮೂವರು ಲಿಖಿತವಾಗಿ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.
ಉಡುಪಿ ಕಾಲೇಜು ಶೌಚಗೃಹದಲ್ಲಿ ಹಿಂದೂ ಯುವತಿಯರ ವೀಡಿಯೋ ಸೆರೆ: ಪ್ರಶ್ನಿಸಿದವರ ಮೇಲೆ ಪೊಲೀಸ್ ವಿಚಾರಣೆ
ಉಡುಪಿ ಎಸ್ಪಿ ಅಕ್ಷಯ್ ಮಚ್ಚೀಂದ್ರ ಮಾತನಾಡಿ, ಈ ಕಾಲೇಜಿನ ಶೌಚಾಲಯದಲ್ಲಿ ಹಿಡನ್ ಕ್ಯಾಮೆರಾ ಇಟ್ಟು ಚಿತ್ರೀಕರಿಸಿದ ಬಗ್ಗೆ ನಮಗೆ ದೂರು ಬಂದಿಲ್ಲ. ಚಿತ್ರೀಕರಿಸಿ ಬ್ಲ್ಯಾಕ್‌ಮೇಲ್ ಮಾಡಿದ ಬಗ್ಗೆ ಮಾಹಿತಿ ಇಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳ ಬಗ್ಗೆ ನಿಗಾ ಇಟ್ಟಿದ್ದೇವೆ. ಬೇರೆ ಯಾವುದೋ ಘಟನೆಯ ವಿಡಿಯೋಗಳನ್ನು ವಾಯ್ಸ್ ಎಡಿಟ್ ಮಾಡಿ ಶೇರ್ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಇದು ಅಪರಾಧ, ಈ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ. ಈ ಮಧ್ಯೆ, ಪ್ರಕರಣದ ಸಮಗ್ರ ತನಿಖೆಗೆ ವಿಶ್ವಹಿಂದೂ ಪರಿಷತ್-ಬಜರಂಗದಳ ಪಶ್ಚಿಮ ವಲಯ ಐಜಿಪಿ ಡಾ.ಚಂದ್ರಗುಪ್ತಾಗೆ ಮನವಿ ಸಲ್ಲಿಸಿವೆ.
ವಿವಾದವೇನು:?
ಉಡುಪಿಯ ನೇತ್ರ ಕಾಲೇಜಿನ ಟಾಯ್ಲೆಟ್‌ನಲ್ಲಿ ಮೂವರು ವಿದ್ಯಾರ್ಥಿನಿಯರಿಂದ ಭಿನ್ನ ಕೋಮಿಗೆ ಸೇರಿದ ಯುವತಿಯ ಚಿತ್ರೀಕರಣ ಮಾಡಲಾಗಿದೆ. ಕಳೆದ ವಾರ ಈ ಪ್ರಕರಣ ನಡೆದಿದ್ದು, ಅಕ್ಸ್‌ಫರ್ಡ್ ವಿವಿಯ ವಿದ್ಯಾರ್ಥಿ ನಾಯಕಿಯಾಗಿದ್ದ ಉಡುಪಿಯ ರಶ್ಮೀ ಸಾಮಂತ್, ಈ ವಿಡಿಯೋವನ್ನು ಟ್ವೀಟ್ ಮಾಡಿದ್ದು, ವಿವಾದಕ್ಕೆ ಕಾರಣವಾಗಿದೆ.