Asianet Suvarna News Asianet Suvarna News

Hijab Controversy: ಹಿಜಾಬ್‌ ಧರಿಸುವ ವಿದ್ಯಾರ್ಥಿನಿಯರಿಗೆ ಆನ್‌ಲೈನ್‌ ಪಾಠ ಎಂದ ಶಾಸಕ ರಘುಪತಿ ಭಟ್‌

* ಹಿಜಾಬ್‌ ಧರಿಸಿ ತರಗತಿಗೆ ಪ್ರವೇಶವಿಲ್ಲ, 
* ಮುಂದಿನ ವರ್ಷ ಬೇರೆ ಕಾಲೇಜಿಗೆ ಹೋಗಬಹುದು
* ಸರ್ಕಾರ ಯಥಾಸ್ಥಿತಿ ಕಾಪಾಡಲಿದೆ ಎಂದ ಶಾಸಕ ರಘುಪತಿ ಭಟ್

Udupi News Give up on Hijab or attend classes online says MLA Raghupati Bhat
Author
Bengaluru, First Published Jan 27, 2022, 2:15 AM IST

ಉಡುಪಿ (ಜ. 26): ರಾಜ್ಯಾದ್ಯಂತ ವಿವಾದಕ್ಕೆ ಕಾರಣವಾಗಿರುವ ನಗರದ ಬಾಲಕಿಯರ ಸರ್ಕಾರಿ ಪ.ಪೂ. ಕಾಲೇಜಿನ 6 ವಿದ್ಯಾರ್ಥಿನಿಯರಿಗೆ ಹಾಗೂ ಅವರ ಪೋಷಕರಿಗೆ ಹಿಜಾಬ್‌ (ತಲೆವಸ್ತ್ರ) ಧರಿಸದೆ ತರಗತಿಗೆ ಬರುವಂತೆ ವಿನಂತಿ ಮಾಡಲಾಗುತ್ತದೆ. ಅದಕ್ಕೆ ಒಪ್ಪದಿದ್ದರೆ ಅವರಿಗೆ ಆನ್‌ಲೈನ್‌ ತರಗತಿ ಮಾಡಿ ಪರೀಕ್ಷೆಗೆ ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ಉಡುಪಿ ಶಾಸಕ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ರಘುಪತಿ ಭಟ್‌  (MLA Raghupati Bhat) ಹೇಳಿದ್ದಾರೆ.

ಕಳೆದ ವರ್ಷ ಹಿಜಾಬ್‌ (Hijab)ಧರಿಸದೆ ಈ ವಿದ್ಯಾರ್ಥಿನಿಯರು (Students) ತರಗತಿಗೆ ಬಂದಿದ್ದಾರೆ. ಇನ್ನು ಕೇವಲ ಒಂದು ತಿಂಗಳು ತರಗತಿ ಇದೆ. ಹಿಜಾಬ್‌ ಧರಿಸಿ ಬಂದರೆ ತರಗತಿ ಪ್ರವೇಶ ನೀಡುವುದಿಲ್ಲ. ಬೇಕಿದ್ದರೆ ಆನ್‌ಲೈನ್‌ ತರಗತಿ ಮಾಡಿ ಪರೀಕ್ಷೆಗೆ ಅವಕಾಶ ಮಾಡಿಕೊಡಲಾಗುವುದು. ಮುಂದಿನ ವರ್ಷ ಬೇರೆ ಕಾಲೇಜಿಗೆ ಅವರು ಸೇರಿಕೊಳ್ಳಬಹುದು ಎಂದು ಭಟ್‌ ಹೇಳಿದ್ದಾರೆ.
ಹಿಜಾಬ್‌ ವಿವಾದದಲ್ಲಿ ಸರ್ಕಾರ ಯಥಾಸ್ಥಿತಿ ಕಾಪಾಡುವಂತೆ ಆದೇಶ ಹೊರಡಿಸಿದೆ. ನಿವೃತ್ತ ಪೊಲೀಸ್‌ ಅಧಿಕಾರಿ ಜಿ.ಎ. ಬಾವ ನೇತೃತ್ವದಲ್ಲಿ ಮುಸ್ಲಿಂ ಮುಖಂಡರು ಕಾಲೇಜು ಅಭಿವೃದ್ಧಿ ಸಮಿತಿ ಜೊತೆ ಚರ್ಚಿಸಿದ್ದಾರೆ. ಹಿಜಾಬ್‌ ಹಾಕಲು ಅವಕಾಶ ನೀಡಿದರೆ, ಪ್ರತಿರೋಧವಾಗಿ ಇತರ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಬಹುದು. ಜಿಲ್ಲೆಯ ಸೌಹಾರ್ದತೆಗೆ ಧಕ್ಕೆಯಾಗದಂತೆ ಮುಸ್ಲಿಂ ಮುಖಂಡರಿಗೆ ಮನವಿ ಮಾಡಿದ್ದೇವೆ. ಅವರು ಪೋಷಕರೊಂದಿಗೆ ಮಾತನಾಡಿ 2 ದಿನಗಳಲ್ಲಿ ಮತ್ತೆ ನಮ್ಮನ್ನು ಭೇಟಿಯಾಗುವುದಾಗಿ ಹೇಳಿದ್ದಾರೆ ಎಂದು ಶಾಸಕ ಭಟ್‌ ತಿಳಿಸಿದರು.

ಕೆಪಿಸಿಸಿ ನಿಯೋಗ ಮನವಿ: ರಾಜ್ಯ ಪ್ರದೇಶ ಕಾಂಗ್ರೆಸ್‌ ಸಮಿತಿ ನಿಯೋಗವು ಮಂಗಳವಾರ ಉಡುಪಿ ಜಿಲ್ಲಾಧಿಕಾರಿ ಅವರನ್ನು ಭೇಟಿ ಮಾಡಿ ಈ ಹಿಜಾಬ್‌ ವಿವಾದವನ್ನು ಸೌಹಾರ್ದಯುತವಾಗಿ ಪರಿಹರಿಸುವಂತೆ ಮನವಿ ಮಾಡಿದೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ. ಗಫರ್‌, ಕೆಪಿಸಿಸಿ ಸಂಯೋಜಕ ಹಬೀಬ್‌ ಅಲಿ ಖಾದರ್‌, ಜಿಲ್ಲಾ ಕಾಂಗ್ರೆಸ್‌ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಇಸ್ಮಾಯಿಲ್‌ ಅತ್ರಾಡಿ, ದ.ಕ. ಜಿಲ್ಲಾ ಅಲ್ಪಸಂಖ್ಯಾತ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಶಾಹುಲ್‌ ಹಮೀದ್‌, ಮುಖಂಡರಾದ ನೂರುದ್ದಿನ್‌ ಸಾಲ್ಮರ, ಎ.ಸಿ. ಜಯರಾಜ್‌, ಹಸನ್‌ ಮಣಿಪುರ, ಅಬ್ದುಲ್‌ ರೆಹಮನ್‌ ಮತ್ತು ಹಾರುನ್‌ ರಶೀದ್‌ ಮೊದಲಾದವರಿದ್ದರು.

ಸಮವಸ್ತ್ರದ ಕುರಿತಾಗಿ ಮಾರ್ಗಸೂಚಿ: ಈ ನಡುವೆ ರಾಜ್ಯ ಶಿಕ್ಷಣ ಇಲಾಖೆಯು ಮಂಗಳವಾರ ರಾಜ್ಯಾದ್ಯಂತ ಪಿಯು ಕಾಲೇಜುಗಳಲ್ಲಿ ಸಮವಸ್ತ್ರದ ಕುರಿತು ಮಾರ್ಗಸೂಚಿಗಳನ್ನು ರೂಪಿಸಲು ಸಮಿತಿಯನ್ನು ರಚಿಸುವುದಾಗಿ ಹೇಳಿದೆ. "ಸದ್ಯ ಇಲಾಖೆಯ ಸೂಚಿಸಿದ ಸಮವಸ್ತ್ರವನ್ನು ಪಾಲನೆ ಮಾಡುವ ನಿಯಮಗಳಿಲ್ಲ. ಸಮವಸ್ತ್ರದ ನಿಯಮಗಳನ್ನು ಆಯಾ ಕಾಲೇಜುಗಳಿಗೆ ಬಿಡಲಾಗಿದೆ. ಆದರೆ ಉಡುಪಿ ಜಿಲ್ಲೆಯಲ್ಲಿ ವಿದ್ಯಾರ್ಥಿಗಳು ತಮ್ಮ ಇಚ್ಛೆಯ ಬಟ್ಟೆಯಲ್ಲಿ (ಹಿಜಾಬ್) ಕಾಲೇಜಿಗೆ ಹಾಜರಾಗಲು ಒತ್ತಾಯಿಸಿದ ಘಟನೆಯ ನಂತರ ಈ ವಿಷಯದಲ್ಲಿ ನ್ಯಾಯಾಲಯದ ಆದೇಶಗಳನ್ನು ವಿಶ್ಲೇಷಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಮತ್ತು ಸಮಿತಿಯನ್ನು ರಚಿಸಲಾಗುವುದು ಎಂದು ಶಿಕ್ಷಣ ಇಲಾಖೆಯ (ಪೂರ್ವ ವಿಶ್ವವಿದ್ಯಾಲಯ ಶಿಕ್ಷಣ) ಅಧೀನ ಕಾರ್ಯದರ್ಶಿ ಪದ್ಮಿನಿ ಎಸ್‌ಎನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Hijab Controversy: ಹಿಜಾಬ್‌ ವಿವಾದ ತಡೆಗೆ ಪಿಯುಸಿಗೂ ಸಮವಸ್ತ್ರ?
ಈ ಬಗ್ಗೆ ಮಾತನಾಡಿರುವ ಶಿಕ್ಷಣ ಸಚಿವ ಬಿ.ಸಿ ನಾಗೇಶ್ (BC Nagesh)  "ಹಾಟ್ ಆಗಿ ಕಾಣಿಸುತ್ತೇನೆ ಎಂದು ನಾಳೆ ಕಾಲೇಜಿಗೆ ಯಾರಾದರೂ ಶಾರ್ಟ್ಸ್ ಹಾಕಿಕೊಂಡು ಬಂದರೆ ನಾವೇನು ಮಾಡೋದು? ಯಾವುದೇ ಕಾರಣಕ್ಕೂ ಇಂಥವುಗಳಿಗೆ ಅನುಮತಿ ನೀಡಲಾಗುವುದಿಲ್ಲ. ಈವರೆಗೂ ಕಾಲೇಜುಗಳು ತಮ್ಮದೇ ಆದ ನಿಯಮಗಳನ್ನು ಹೊಂದಿದ್ದವು. ರಾಜ್ಯದಲ್ಲಿ ಕೆಲ ಕ್ರಿಶ್ಚಿಯನ್ ಮಿಷನರಿ ಶಾಲೆಗಳು ಹಿಂದು ವಿದ್ಯಾರ್ಥಿಗಳಿಗೆ ಬಳೆ ಹಾಗೂ ಬಿಂದಿಗಳನ್ನು ಧರಿಸಲು ಅನುಮತಿ ನೀಡುವುದಿಲ್ಲ. ಯಾರೂ ಇದನ್ನು ಪ್ರಶ್ನೆ ಮಾಡಿರಲಿಲ್ಲ. ಯಾಕೆಂದರೆ ಇದು ಕಾಲೇಜಿನ ನಿರ್ಧಾರವಾಗಿತ್ತು. ಉಡುಪಿ (Udupi) ಜಿಲ್ಲೆಯಲ್ಲೂಇಲ್ಲಿಯವರೆಗೂ ಯಾವುದೇ ಸಮಸ್ಯೆಗಳು ಇದ್ದಿರಲಿಲ್ಲ.ಆದರೆ, ಈಗ ಹೊಸ ವಿವಾದ ಸೃಷ್ಟಿಯಾಗಿದೆ. ಖಂಡಿತಾ ಇದನ್ನು ಪರಿಹಾರ ಮಾಡುತ್ತೇವೆ ಎಂದರು.

Follow Us:
Download App:
  • android
  • ios