ಹಾಸನ ಜೆಡಿಎಸ್‌ ಸಂಸದ ಹಾಗೂ ಎನ್‌ಡಿಎ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ವಿರುದ್ಧ ಕೇಳಿ ಬಂದಿರುವ ಲೈಂಗಿಕ ದೌರ್ಜನ್ಯ ಆರೋಪಗಳ ಕುರಿತು ತನಿಖೆಗೆ ಸಿಐಡಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಬಿಜಯ್ ಕುಮಾರ್‌ ಸಿಂಗ್‌ (ಬಿ.ಕೆ. ಸಿಂಗ್‌) ನೇತೃತ್ವದಲ್ಲಿ ವಿಶೇಷ ತನಿಖಾ ದಳವನ್ನು (ಎಸ್‌ಐಟಿ) ರಚಿಸಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.  

ಬೆಂಗಳೂರು (ಏ.29): ಹಾಸನ ಜೆಡಿಎಸ್‌ ಸಂಸದ ಹಾಗೂ ಎನ್‌ಡಿಎ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ವಿರುದ್ಧ ಕೇಳಿ ಬಂದಿರುವ ಲೈಂಗಿಕ ದೌರ್ಜನ್ಯ ಆರೋಪಗಳ ಕುರಿತು ತನಿಖೆಗೆ ಸಿಐಡಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಬಿಜಯ್ ಕುಮಾರ್‌ ಸಿಂಗ್‌ (ಬಿ.ಕೆ. ಸಿಂಗ್‌) ನೇತೃತ್ವದಲ್ಲಿ ವಿಶೇಷ ತನಿಖಾ ದಳವನ್ನು (ಎಸ್‌ಐಟಿ) ರಚಿಸಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ತನಿಖೆ ನಡೆಸಿದ್ದ ಎಸ್‌ಐಟಿಯನ್ನು ಮುನ್ನಡೆಸಿದ್ದ ಬಿ.ಕೆ. ಸಿಂಗ್‌ ಅವರಿಗೆ ವಿಶೇಷ ತನಿಖಾ ದಳದ ನೇತೃತ್ವ ವಹಿಸಿದ್ದು, ಸಹಾಯಕ ಪೊಲೀಸ್‌ ಮಹಾ ನಿರೀಕ್ಷಕರಾದ ಸುಮನ್‌ ಡಿ. ಪೆನ್ನೇಕರ್‌ ಹಾಗೂ ಮೈಸೂರು ಪೊಲೀಸ್‌ ಅಧೀಕ್ಷಕರಾದ ಸೀಮಾ ಲಾಠ್ಕರ್‌ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ.

ಭಾನುವಾರ ಈ ಕುರಿತು ಆದೇಶ ಹೊರಡಿಸಿರುವ ಒಳಾಡಳಿತ ಇಲಾಖೆಯು, ಮಹಿಳೆಯೊಬ್ಬರ ದೂರಿನ ಮೇರೆಗೆ ಹಾಸನ ಜಿಲ್ಲೆಯ ಹೊಳೆನರಸೀಪುರ ಟೌನ್‌ ಪೊಲೀಸ್‌ ಠಾಣೆಯಲ್ಲಿ ಏ.28ರಂದು ಭಾನುವಾರ ಕಲಂ 345ಎ, 354ಡಿ, 506, 509 ಐಪಿಸಿ ಅಡಿ ಕ್ರಿಮಿನಲ್‌ ಪ್ರಕರಣ ದಾಖಲಾಗಿದೆ. ಈ ಪ್ರಕರಣದ ಸಮಗ್ರ ತನಿಖೆಯನ್ನು ಕೈಗೊಳ್ಳಲು ತಾಂತ್ರಿಕ ಪರಿಣತಿ ಇರುವ ರಾಜ್ಯದ ವಿಶೇಷ ತನಿಖಾ ಸಂಸ್ಥೆಯಾದ ಸಿಐಡಿಯ ಒಂದು ವಿಶೇಷ ತನಿಖಾ ತಂಡ ರಚಿಸುವುದು ಸೂಕ್ತ ಎಂದು ಸರ್ಕಾರ ತೀರ್ಮಾನಿಸಿ ಈ ಆದೇಶ ಹೊರಡಿಸಿದೆ ಎಂದು ತಿಳಿಸಲಾಗಿದೆ.

ಪ್ರಜ್ವಲ್‌ ರೇವಣ್ಣದು ವಿಶ್ವದಲ್ಲೇ ದೊಡ್ಡ ಲೈಂಗಿಕ ಹಗರಣ: ಸಚಿವ ಕೃಷ್ಣ ಬೈರೇಗೌಡ

ಅಲ್ಲದೆ ಈ ಪ್ರಕರಣದ ಕುರಿತು ರಾಜ್ಯದ ಇತರೆ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಹಾಗೂ ದಾಖಲಾಗಬಹುದಾದ ಪ್ರಕರಣಗಳನ್ನು ಡಿಜಿ ಮತ್ತು ಐಜಿಪಿಯವರು ವಿಶೇಷ ತನಿಖಾ ತಂಡಕ್ಕೆ ವರ್ಗಾಯಿಸಬೇಕು. ಜತೆಗೆ ವಿಶೇಷ ತನಿಖಾ ತಂಡಕ್ಕೆ ಪ್ರಕರಣದ ತನಿಖೆಗಾಗಿ ಇತರೆ ಸದಸ್ಯರುಗಳ ಅವಶ್ಯಕತೆ ಇದ್ದರೆ ಡಿಜಿ-ಐಜಿಪಿ ಅನುಮೋದನೆಯೊಂದಿಗೆ ತನಿಖಾ ತಂಡಕ್ಕೆ ಸೇರಿಸಿಕೊಳ್ಳಬಹುದು. ಎಸ್‌ಐಟಿಯು ಪ್ರಕರಣದ ಸಮಗ್ರ ತನಿಖೆ ನಡೆಸಿ ತನಿಖಾ ವರದಿಯನ್ನು ಶೀಘ್ರವಾಗಿ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಸ್ಪಷ್ಟ ಸೂಚನೆ ನೀಡಲಾಗಿದೆ.

ಮೊದಲ ಹಂತದ ಲೋಕಸಭಾ ಚುನಾವಣಾ ಸಮರದ ಅಂತಿಮ ಹಂತದಲ್ಲಿ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧ ಲೈಂಗಿಕ ಶೋಷಣೆ ಆರೋಪ ಕೇಳಿ ಬಂದಿತ್ತು. ಹಲವು ಮಹಿಳೆಯರನ್ನು ಲೈಂಗಿಕ ಶೋಷಿಸಿದ್ದಾರೆ ಎಂದು ಸಂಸದರ ಮೇಲೆ ಆರೋಪ ಬಂದಿತ್ತು. ಇನ್ನು ಮಹಿಳೆಯರ ಜತೆ ಸಂಸದರು ರಾಸಲೀಲೆ ನಡೆಸಿದ್ದಾರೆ ಎನ್ನಲಾದ ವಿಡಿಯೋಗಳ ‘ಪೆನ್‌ ಡ್ರೈವ್‌’ ಬಹಿರಂಗಗೊಂಡಿತ್ತು.

ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿ ಸಂಸದರ ವಿರುದ್ಧ ರಾಜ್ಯ ಮಹಿಳಾ ಆಯೋಗಕ್ಕೆ ಮಹಿಳಾ ಸಂಘಟನೆಗಳು ದೂರು ನೀಡಿದ್ದವು. ಈ ದೂರನ್ನು ಗಂಭೀರವಾಗಿ ಪರಿಗಣಿಸಿದ ಆಯೋಗವು, ಲೈಂಗಿಕ ಹಗರಣದ ಕುರಿತು ತನಿಖೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿತು. ಆಯೋಗದ ಶಿಫಾರಸಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು, ಈಗ ಎಡಿಜಿಪಿ ನೇತೃತ್ವದಲ್ಲಿ ಎಸ್‌ಐಟಿ ರಚಿಸಲು ಆದೇಶಿಸಿದ್ದರು. ಇದೀಗ ಭಾನುವಾರ ಹಾಸನದಲ್ಲಿ ದಾಖಲಾಗಿರುವ ಕ್ರಿಮಿನಲ್‌ ಪ್ರಕರಣದ ತನಿಖೆ ಹೆಸರಿನಲ್ಲಿ ವಿಶೇಷ ತನಿಖಾ ದಳವನ್ನು ರಚಿಸಲಾಗಿದೆ.

ಬಳ್ಳಾರಿ ಜೀನ್ಸ್‌ಗೆ ಜಾಗತಿಕ ಮಟ್ಟದಲ್ಲಿ ಸ್ಥಾನ: ಪ್ರಧಾನಿ ಮೋದಿ

ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಎಸ್ಐಟಿ ತಂಡದಿಂದ ಸಭೆ ನಡೆಯಲಿದೆ. ಎಸ್ಐಟಿ ಮುಖ್ಯಸ್ಥ ಬಿ ಕೆ ಸಿಂಗ್ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಸಿಐಡಿ ಕಚೇರಿಯಲ್ಲಿ ಮಹತ್ವದ ಮೀಟಿಂಗ್ ನಡೆಯಲಿದೆ. ಎಸ್ಐಟಿ ತಂಡದಲ್ಲಿರುವ ಸುಮನ್ ಡಿ ಪನ್ನೇಕರ್ ಹಾಗೂ ಸೀಮಾ ಲಾಟ್ಕರ್ ಜೊತೆ ಸಭೆ ನಡೆಸಲಾಗುತ್ತಿದ್ದು, ತನಿಖೆ ವಿಧಾನ, ಎಸ್ಐಟಿಗೆ ಬೇಕಾದ ಇತರ ಅಧಿಕಾರಿ, ಸಿಬ್ಬಂದಿ ಆಯ್ಕೆ ಮಾಡಲಾಗುತ್ತೆ. ಜೊತೆಗೆ ಪ್ರಕರಣದಲ್ಲಿ ಕಲೆ ಹಾಕಬೇಕಾದ ಮಾಹಿತಿಗಳ ಬಗ್ಗೆ ಚರ್ಚೆಯೂ ಕೂಡಾ ನಡೆಯಲಿದೆ.