Asianet Suvarna News Asianet Suvarna News

Karnataka Rains: ವರುಣನ ಆರ್ಭಟಕ್ಕೆ ಉತ್ತರ ಕರ್ನಾಟಕ ತತ್ತರ: 2 ಬಲಿ

ದಕ್ಷಿಣ ಕರ್ನಾಟಕದಲ್ಲಿ ಮಳೆಯಬ್ಬರ ಇಳಿಕೆ, ಬಾಗಲಕೋಟೆಯಲ್ಲಿ ಕೊಚ್ಚಿ ಹೋದ ಸೇತುವೆ, ಮಲಪ್ರಭಾ ಪ್ರವಾಹಕ್ಕೆ ಅಪಾರ ಬೆಳೆಹಾನಿ

Two Killed in North Karnataka Due to Heavy Rain grg
Author
First Published Sep 8, 2022, 5:44 AM IST

ಬೆಂಗಳೂರು(ಸೆ.08):   ದಕ್ಷಿಣ ಕರ್ನಾಟಕದ ಬಹುಭಾಗ ಮಳೆ ಕಡಿಮೆಯಾಗಿದ್ದರೂ ಉತ್ತರ ಕರ್ನಾಟಕದ 6 ಜಿಲ್ಲೆಗಳಲ್ಲಿ ಮಳೆಯಾರ್ಭಟ ಮುಂದುವರಿದಿದ್ದು ನದಿ ತೊರೆಗಳು ಉಕ್ಕಿ ಹರಿಯುತ್ತಿವೆ. ಜೊತೆಗೆ ಅಲ್ಲಲ್ಲಿ ಮಳೆ ಸಂಬಂಧಿ ಅನಾಹುತಗಳಾಗಿದ್ದು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಉತ್ತರ ಕರ್ನಾಟಕದ ಬಾಗಲಕೋಟೆ, ವಿಜಯಪುರ, ಹಾವೇರಿ, ಗದಗ, ಬಳ್ಳಾರಿ, ಕೊಪ್ಪಳ, ಬಾಗಲಕೋಟೆ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಿದೆ. ಇನ್ನು ದಕ್ಷಿಣ ಕರ್ನಾಟಕ ಭಾಗದ ಚಿಕ್ಕಬಳ್ಳಾಪುರ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸಾಧಾರಣ ಮತ್ತು ತುಂತುರು ಮಳೆ ಸುರಿದಿದೆ.

ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಎಮ್ಮಿಗನೂರಿನಲ್ಲಿ ಭಾರೀ ಮಳೆಗೆ ಮನೆ ಗೋಡೆ ಕುಸಿದು ಆಶಾ ಕಾರ್ಯಕರ್ತೆ ಉಮಾದೇವಿ(50) ಮೃತಪಟ್ಟಿದ್ದಾರೆ. ಅದೃಷ್ಟವಶಾತ್‌ ಅವರ ಪಕ್ಕದ ಮಲಗಿದ್ದ ಇಬ್ಬರು ಮಕ್ಕಳು ಜೀವಾಪಾಯದಿಂದ ಪಾರಾಗಿದ್ದಾರೆ. ಬಾಗಲಕೋಟೆಯ ಹುನಗುಂದ ತಾಲೂಕಿನಲ್ಲಿ ತುಂಬಿ ಹರಿಯುತ್ತಿರುವ ಮಲಪ್ರಭಾ ನದಿಯಲ್ಲಿ ದೇವರಾಜ ಕಂಬಾರ (19) ಎಂಬ ಯುವಕನೊಬ್ಬ ಕೊಚ್ಚಿಹೋಗಿರುವ ಘಟನೆ ವರದಿಯಾಗಿದೆ.

Karnataka Floods: ನೂರಾರು ಗ್ರಾಮಗಳಿಗೆ ಜಲದಿಗ್ಬಂಧನ

30 ಹಳ್ಳಿಗಳ ಸಂಪರ್ಕ ಕಡಿತ:

ಬಳ್ಳಾರಿ ತಾಲೂಕಿನ ಅಲ್ಲಿಪುರದಲ್ಲಿ ಮನೆಗಳಿಗೆ ನೀರು ನುಗ್ಗಿದು, ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ನೀರು ಹೊರ ಹಾಕಿದ್ದಾರೆ. ತಾಲೂಕಿನ ಚಾನಾಳ್‌ ಗ್ರಾಮದ ಹೊರ ವಲಯದಲ್ಲಿ ಹರಿಯುತ್ತಿರುವ ಹಳ್ಳದಿಂದ ಸುಮಾರು 30 ಹಳ್ಳಿಗಳು ಸೇರಿದಂತೆ ಆಂಧ್ರಪ್ರದೇಶದ ಸಂಪರ್ಕ ಕಡಿತಗೊಂಡಿದೆ.

120ಕ್ಕೂ ಹೆಚ್ಚು ಮನೆ ಕುಸಿತ:

ವಿಜಯನಗರ ಜಿಲ್ಲೆಯಲ್ಲಿ 120ಕ್ಕೂ ಮನೆಗಳು ಭಾಗಶಃ ಬಿದ್ದಿದ್ದು, ಜನರು ಪರದಾಡುವಂತಾಗಿದೆ. ಹಡಗಲಿಯಲ್ಲಿ 65, ಹರಪನಹಳ್ಳಿಯಲ್ಲಿ 30 ಮನೆ ಕುಸಿತವಾಗಿದೆ. ಹರಗನೂರು, ಹಿರೇ ಹಡಗಲಿ, ಮಾನ್ಯರ ಮಾಸಲವಾಡ ಕೆರೆಗಳು ಕೋಡಿಬಿದ್ದಿರುವುದರಿಂದ ನೂರಾರು ಎಕರೆ ಬೆಳೆ ಹಾನಿಯಾಗಿದೆ.

ಕೊಚ್ಚಿ ಹೋದ ಸೇತುವೆ:

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಚೊಳಚಗುಡ್ಡ ಗ್ರಾಮದ ಸೇತುವೆ, ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಅಡವಿ ಹುಲಗಬಾಳದಿಂದ ಅಡವಿ ಹುಲಗಬಾಳ ತಾಂಡಾ ಸಂಪರ್ಕಿಸುವ ಸೇತುವೆ ಕೊಚ್ಚಿ ಹೋಗಿದೆ.

ಬಾಗಲಕೋಟೆಯಲ್ಲಿ ಬೆಳೆ ಹಾನಿ:

ಬಾಗಲಕೋಟೆ ಜಿಲ್ಲೆಯಲ್ಲಿ ಮಲಪ್ರಭಾ ನದಿ ಹೆಚ್ಚಳಗೊಂಡಿದ್ದು, ಹಿರೇಮಾಗಿ ಹಾಗೂ ಚಿತ್ತರಗಿ ಗ್ರಾಮಗಳ ಹಲವು ಮನೆಗಳು ಜಲಾವೃತವಾಗಿದೆ. ಅಲ್ಲದೆ ಹೊಲ ಗದ್ದೆಗಳಿಗೆ ನದಿ ನೀರು ಹರಿದು ಅಪಾರ ಪ್ರಮಾಣ ಬೆಳೆ ಕೂಡ ಹಾನಿಯಾಗಿದೆ. ಇಳಕಲ್ಲ ತಾಲೂಕಿನ 5ಕ್ಕೂ ಹೆಚ್ಚು ಗ್ರಾಮಗಳಲ್ಲಿ ಸೂರ್ಯಕಾಂತಿ, ಹೆಸರು, ಹತ್ತಿ, ಈರುಳ್ಳಿ ನಾಶವಾಗಿವೆ. ಬಾದಾಮಿ ತಾಲೂಕಿನ ಹಿರೇಮಾಗಿಯ ಹುಲಿಗೆಮ್ಮ ದೇವಿ ದೇವಸ್ಥಾನ ಜಲಾವೃತವಾಗಿದೆ. 62 ಮಂದಿಯ ರಕ್ಷಣೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ದೊಡ್ಡ ಅಮಾನಿಕೆರೆ ತುಂಬಿ ಕೋಡಿ ಹರಿಯುತ್ತಿರುವ ಪರಿಣಾಮ 3 ಗ್ರಾಮಗಳಿಗೆ ನೀರು ನುಗ್ಗಿದೆ. ಆ ನೀರು ತಿರುಮಲಶೆಟ್ಟಿಹಳ್ಳಿ ಬಳಿ ಫಾರಂ ಹೌಸ್‌ ಹಾಗೂ ಪಾಲಿ ಹೌಸ್‌ಗೆ ನುಗ್ಗಿದ್ದು ಅದರೊಳಗೆ ಸಿಲುಕಿದ್ದ 62 ಜನರನ್ನು ವಿಪತ್ತು ನಿರ್ವಹಣಾ ತಂಡ ರಕ್ಷಣೆ ಮಾಡಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದೆ.

Bengaluru rain : ಬೊಮ್ಮನಹಳ್ಳಿಯಲ್ಲಿ 2000 ಜನ ಸಂಕಷ್ಟದಲ್ಲಿ!

ಮರಳುಕುಂಟೆ ಜಲಾವೃತ:

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಮರಳುಕುಂಟೆ ಗ್ರಾಮ ಸಂಪೂರ್ಣ ಮಳೆ ನೀರಿನಿಂದ ಜಲಾವೃತಗೊಂಡು ಗ್ರಾಮಸ್ಥರು ಪರದಾಡಿದರು. ಗ್ರಾಮದ ಸರ್ಕಾರಿ ಶಾಲೆಗೂ ನೀರು ನುಗ್ಗಿದ್ದು ಶಾಲೆಯ ಮಕ್ಕಳ ಆಟದ ಮೈದಾನ ಅಕ್ಷರಶಃ ಕೆರೆಯಂತಾಗಿದೆ.

ಹಂಪಿಯಲ್ಲಿ ಮಳೆಗೆ ಕುಸಿದ ಮತ್ತೊಂದು ಮಂಟಪದ ಕಲ್ಲು

ಹೊಸಪೇಟೆ: ಮಳೆಗೆ ಬುಧವಾರ ಹಂಪಿಯ ಕೃಷ್ಣ ಬಜಾರ್‌ನಲ್ಲಿ ಮಂಟಪವೊಂದರ ಕಲ್ಲುಗಳು ಕುಸಿದಿವೆ. ಕೆಲ ದಿನಗಳ ಹಿಂದೆ ನೆಲಸ್ತರದ ಶಿವಾಲಯದ ಮಂಟಪ ಕುಸಿದಿತ್ತು. ಈಗ ಮತ್ತೊಂದು ಮಂಟಪದ ಉತ್ಸವ ಕಟ್ಟೆಯ ಕಲ್ಲುಗಳು ಬಿದ್ದಿವೆ. ಶ್ರೀಕೃಷ್ಣ ದೇಗುಲದ ಎದುರಿನ ಕೃಷ್ಣ ಬಜಾರ್‌ನ ಮಂಟಪದ ಉತ್ಸವ ಕಟ್ಟೆಯ ಕಲ್ಲುಗಳು ಮಳೆಯ ಹೊಡೆತಕ್ಕೆ ಕುಸಿದಿವೆ.
 

Follow Us:
Download App:
  • android
  • ios