Asianet Suvarna News Asianet Suvarna News

ಕರ್ನಾಟಕದಲ್ಲಿ ಮಳೆ ಅಬ್ಬರಕ್ಕೆ 2 ಬಲಿ: ಬೈಲಹೊಂಗಲದಲ್ಲಿ ಪ್ರವಾಹದ ನೀರಲ್ಲಿ ಕೊಚ್ಚಿಹೋದ ಬೈಕ್‌ ಸವಾರ

ಬಾಗಲಕೋಟೆ, ಗದಗದಲ್ಲಿ ಮನೆ ಕುಸಿದು ದುರಂತ, ಸಿರವಾರದಲ್ಲಿ ಎತ್ತಿನಬಂಡಿಯಲ್ಲಿ ಗರ್ಭಿಣಿಯನ್ನು ಸಾಗಿಸಿದ ಗ್ರಾಮಸ್ಥರು

Two Killed Due to House Collapsed in Karnataka grg
Author
First Published Oct 14, 2022, 8:23 AM IST | Last Updated Oct 14, 2022, 8:23 AM IST

ಬೆಂಗಳೂರು(ಅ.14):  ರಾಜ್ಯದ ಹಲವೆಡೆ ಗುರುವಾರವೂ ಮಳೆಯಾಗಿದ್ದು, ಬಾಗಲಕೋಟೆ ಹಾಗೂ ಗದಗ ಜಿಲ್ಲೆಗಳಲ್ಲಿ ಮಳೆಗೆ ಮನೆ ಕುಸಿದು ಇಬ್ಬರು ಮೃತಪಟ್ಟಿದ್ದಾರೆ. ಮತ್ತಿಬ್ಬರು ಗಾಯಗೊಂಡಿದ್ದಾರೆ. ಬಾಗಲಕೋಟೆಯ ಕಿಲ್ಲಾ ಗಲ್ಲಿಯಲ್ಲಿ ಮನೆಯ ಛಾವಣಿ ಕುಸಿದು ಸುಧಾಬಾಯಿ ಪ್ರಹ್ಲಾದರಾವ್‌ ಕಾವೇರಿ (81) ಎಂಬುವರು ಮೃತಪಟ್ಟಿದ್ದಾರೆ. ಗದ​ಗ ಜಿಲ್ಲೆ ಬೆಟಗೇರಿಯ ಕನ್ಯಾಳ ಅಗಸಿಯಲ್ಲಿ ಮನೆಯ ಗೋಡೆ ಕುಸಿದು ಸುಶೀಲವ್ವ ಅಡಿ​ವಯ್ಯ ಕಲ್ಮಠ (60) ಎಂಬುವರು ಮೃತಪಟ್ಟಿದ್ದಾರೆ. ಇದೇ ವೇಳೆ, ಅಡಿ​ವಯ್ಯ ಹಾಗೂ ಬಸಮ್ಮ ಎಂಬು​​ವರು ಗಾಯಗೊಂಡಿದ್ದಾರೆ.

ಈ ಮಧ್ಯೆ, ಬೈಲಹೊಂಗಲ ತಾಲೂಕಿನ ಸಾಣಿಕೊಪ್ಪದಲ್ಲಿ ತುಂಬಿ ಹರಿಯುತ್ತಿದ್ದ ಹಳ್ಳ ದಾಟಲು ಯತ್ನಿಸಿದಾಗ, ಬೈಕ್‌ ಸವಾರನೊಬ್ಬ ಕೊಚ್ಚಿಕೊಂಡು ಹೋಗಿದ್ದು, ಸ್ಥಳೀಯರು ಆತನನ್ನು ರಕ್ಷಣೆ ಮಾಡಿದ್ದಾರೆ. ಕೊಪ್ಪಳ ಜಿಲ್ಲೆಯ ಬಂಡರಗಲ್‌ ಗ್ರಾಮದಲ್ಲಿ ಹಳ್ಳ ದಾಟಲು ಗ್ರಾಮಸ್ಥರು ಜೆಸಿಬಿ ಮೊರೆಹೋಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ವೈರಲ್‌ ಆಗಿದೆ. ಇದೇ ವೇಳೆ, ರಾಯಚೂರು ನಗರದ ಸಿಯಾತಲಾಬ್‌ ಬಡಾವಣೆ ಜಲಾವೃತಗೊಂಡು ಅಲ್ಲಿನ ಮನೆಗಳಿಗೆ ನೀರು ನುಗ್ಗಿದ್ದರಿಂದ ಶಸ್ತ್ರಚಿಕಿತ್ಸೆಗೊಳಗಾಗಿರುವ ಬಾಣಂತಿ, ಪಲ್ಲವಿ ಎಂಬುವರು ನವಜಾತ ಶಿಶುವಿನೊಂದಿಗೆ ಬುಧವಾರ ಇಡೀ ರಾತ್ರಿ ಮಂಚದ ಮೇಲೆಯೇ ಇರುವ ದು:ಸ್ಥಿತಿ ನಿರ್ಮಾಣಗೊಂಡಿತ್ತು.

Davanagere Rains: ಭಾರೀ ಮಳೆಗೆ ಹಳ್ಳ, ರಸ್ತೆಗಳು ಮುಳುಗಡೆ

ಸಿರವಾರ ತಾಲೂಕಿನ ಕೆ.ತುಪ್ಪದೂರು ಗ್ರಾಮದ ಹಳ್ಳ ಭರ್ತಿಯಾಗಿದ್ದು, ವಾಹನಗಳ ಸಂಚಾರಕ್ಕೆ ಸಮಸ್ಯೆ ಉಂಟಾಗಿದೆ. ಈ ವೇಳೆ, ಗ್ರಾಮದ ಗರ್ಭಿಣಿಯೊಬ್ಬಳಿಗೆ ನೋವು ಕಾಣಿಸಿಕೊಂಡಿದ್ದರಿಂದ ಎತ್ತಿನ ಬಂಡಿಯಲ್ಲಿ ಆಕೆಯನ್ನು ಸಿರವಾರದ ಆಸ್ಪತ್ರೆಗೆ ಸಾಗಿಸಲಾಯಿತು. ಇದೇ ವೇಳೆ, ಚಳ್ಳಕೆರೆಯ ಪಿ.ಗೌರಿಪುರದ ಹೊರಭಾಗದಲ್ಲಿ ಸುಮಾರು 20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ನಿವಾಸಿಗಳು ಪರದಾಡುವಂತಾಗಿದೆ.

ಮಳೆ ಹಿನ್ನೆಲೆಯಲ್ಲಿ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 1.86 ಲಕ್ಷ ಕ್ಯುಸೆಕ್‌ ನೀರನ್ನು ಬಿಡುಗಡೆ ಮಾಡಲಾಗಿದ್ದು, ನದಿ ತೀರದ ಜನರು ಎಚ್ಚರಿಕೆಯಿಂದಿರಲು ಸೂಚನೆ ನೀಡಲಾಗಿದೆ. ಇದೇ ವೇಳೆ, ರಾಜಧಾನಿ ಬೆಂಗಳೂರು, ತುಮಕೂರು, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ಇತರೆಡೆಯೂ ಮಳೆಯಾದ ವರದಿಯಾಗಿದೆ.
 

Latest Videos
Follow Us:
Download App:
  • android
  • ios