Asianet Suvarna News Asianet Suvarna News

Davanagere Rains: ಭಾರೀ ಮಳೆಗೆ ಹಳ್ಳ, ರಸ್ತೆಗಳು ಮುಳುಗಡೆ

ಕಳೆದ ತಡರಾತ್ರಿಯಿಂದ ಸೋಮವಾರ ಬೆಳಿಗ್ಗೆ ಹಾಗೂ ಮತ್ತೆ ಸಂಜೆಯಿಂದ ರಾತ್ರಿವರೆಗೆ ಮುಂದುವರಿದ ಮಳೆಯು ಜನ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡಿದ್ದು, ತಾಲೂಕಿನ ಕಾಟೇಹಳ್ಳಿ-ಹುಣಸೆಕಟ್ಟೇ ಗ್ರಾಮದಿಂದ ಕಾಡೇಹಳ್ಳಿ ತಾಂಡಾಗೆ ಸಂಪರ್ಕಿಸುವ ರಸ್ತೆ ಸಂಪೂರ್ಣ ಮುಳುಗಡೆಯಾಗಿದೆ.

Heavy rains in Davanagere Roads are flooded rav
Author
First Published Oct 11, 2022, 10:37 AM IST

ದಾವಣಗೆರೆ (ಅ.11) : ಕಳೆದ ತಡರಾತ್ರಿಯಿಂದ ಸೋಮವಾರ ಬೆಳಿಗ್ಗೆ ಹಾಗೂ ಮತ್ತೆ ಸಂಜೆಯಿಂದ ರಾತ್ರಿವರೆಗೆ ಮುಂದುವರಿದ ಮಳೆಯು ಜನ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡಿದ್ದು, ತಾಲೂಕಿನ ಕಾಟೇಹಳ್ಳಿ-ಹುಣಸೆಕಟ್ಟೇ ಗ್ರಾಮದಿಂದ ಕಾಡೇಹಳ್ಳಿ ತಾಂಡಾಗೆ ಸಂಪರ್ಕಿಸುವ ರಸ್ತೆ ಸಂಪೂರ್ಣ ಮುಳುಗಡೆಯಾಗಿದ್ದರೆ, ಅನೇಕ ದಶಕಗಳ ನಂತರ ಕೋಡಿ ಬಿದ್ದ ಅಣಜಿ ಕೆರೆ ಏರಿಯು ಅಪಾಯಕ್ಕೆ ಸಿಲುಕಿದೆ.

ರಸ್ತೆ ಕೆಸರು ಗದ್ದೆ, ವಾಹನ ಸಂಚಾರ ದುಸ್ತರ; ಸೌಲಭ್ಯ ವಂಚಿತ ಗ್ರಾಮ ದಿಬ್ಬದಹಟ್ಟಿ

ತಾಲೂಕಿನ ಆನಗೋಡು, ಹೆಬ್ಬಾಳ್‌, ಮಾಯಕೊಂಡ, ನೀರ್ಥಡಿ, ಹುಣಸೇಕಟ್ಟೆ, ಅಣಜಿ, ಕೊಡಗನೂರು, ನಲ್ಕುಂದ, ನರಗನಹಳ್ಳಿ ಸೇರಿ ಅನೇಕ ಭಾಗದಲ್ಲಿ ಮಳೆಯಾಗುತ್ತಿದೆ. ನರಗನಹಳ್ಳಿ ಗ್ರಾಮಕ್ಕೆ ರಾಷ್ಟ್ರೀಯ ಹೆದ್ದಾರಿಯಿಂದ ಹಾಗೂ ಮಾಯಕೊಂಡ ರಸ್ತೆಯಿಂದ ಸಂಪರ್ಕಿಸುವ ರಸ್ತೆಗಳು ಮಳೆಯಿಂದ ಮೈದುಂಬಿರುವ ಹಳ್ಳದಲ್ಲಿ ಮುಳುಗಡೆಯಾಗಿದ್ದು, ಗ್ರಾಮಕ್ಕೆ ದ್ವಿಚಕ್ರ ವಾಹನ, ಲಘು ವಾಹನ, ಬಸ್‌ಗಳ ಸಂಚಾರ ಸ್ಥಗಿತವಾಗಿ ಇಡೀ ಗ್ರಾಮಕ್ಕೆ ಜಲ ದಿಗ್ಬಂಧನ ವಿಧಿಸಿದಂತಾಗಿದೆ.

ಸೇತುವೆ ನಿರ್ಮಾಣ ಮರಿಚೀಕೆ:

ಕಾಟೇಹಳ್ಳಿ ಹಾಗೂ ಹುಣಸೇಕಟ್ಟೆಭಾಗದಲ್ಲಿ ಕಳೆದ ರಾತ್ರಿಯಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕಾಟೇಹಳ್ಳಿ ಗ್ರಾಮದ ಹಳ್ಳಿ ಉಕ್ಕಿ ಹರಿಯುತ್ತಿದೆ. ಪರಿಣಾಮ ಕಾಟೇಹಳ್ಳಿ ತಾಂಡಾಕ್ಕೆ ರಸ್ತೆ ಸಂಪರ್ಕ ಕಡಿತವಾಗಿದೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು, ಇಂದಿಗೂ ಈ ಗ್ರಾಮಕ್ಕೆ ಒಂದು ಸೇತುವೆ ಇಲ್ಲದಿರುವುದು ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಿದೆ. ಗ್ರಾಮಕ್ಕೆ ಒಂದು ಸೇತುವೆ ನಿರ್ಮಿಸಿಕೊಡುವಂತೆ ಗ್ರಾಮಸ್ಥರು ಹಿಂದಿನಿಂದಲೂ ಮನವಿ ಮಾಡಿಕೊಂಡು ಬಂದಿದ್ದರೂ ಇಂದಿಗೂ ಸೇತುವೆ ನಿರ್ಮಾಣದ ವಿಚಾರವು ಮರೀಚಿಕೆಯಾಗಿಯೇ ಉಳಿದಿದೆ.

ಅಣಜಿ ಕೆರೆಯೂ ಕೋಡಿ:

ಅಣಜಿ ಕೆರೆಯು ದಶಕಗಳ ನಂತರ ಇದೇ ಮೊದಲ ಬಾರಿಗೆ ಅಂದರೆ ಒಂದು ತಿಂಗಳ ಅವಧಿಯಲ್ಲಿ 5ನೇ ಬಾರಿಗೆ ಕೋಡಿ ಬಿದ್ದಿದೆ. ಇಲ್ಲಿವರೆಗೂ ಒಣ ಕೆರೆಯಾಗಿರುತ್ತಿದ್ದ ಅಣಜಿ ಕೆರೆಯು ಸಂಪೂರ್ಣ ತುಂಬಿದೆ. ಒಂದು ಕಡೆ ತುಂಗಭದ್ರಾ ನದಿಯಿಂದ ನೀರನ್ನು ಅಷ್ಟೋ ಇಷ್ಟೋ ತುಂಬಿಸಿದ್ದಲ್ಲದೇ, ಈಗ ಸುರಿಯುತ್ತಿರುವ ಭಾರೀ ಮಳೆ, ಮೇಲ್ಭಾಗದ ಕೆರೆಗಳು ಒಂದೊಂದಾಗಿ ತುಂಬಿ ಕೋಡಿ ಬಿದ್ದ ಪರಿಣಾಮ ಅಣಜಿ ಕೆರೆಯೂ ತುಂಬಿ ಕೋಡಿ ಬಿದ್ದಿದೆ. ದಾವಣಗೆರೆ-ಜಗಳೂರು ಮಾರ್ಗದಲ್ಲಿ ವಾಹನ ಸಂಚಾರ ಬಂದ್‌ ಆಗಿತ್ತು. ಇದೀಗ ಅಣಜಿ ಕೆರೆಯ ಏರಿಯು ಹೆಚ್ಚು ನೀರು ಸಂಗ್ರಹವಾದ್ದರಿಂದ ಅಪಾಯದಂಚಿನಲ್ಲಿದೆಯೆಂಬ ಆತಂಕ ಮನೆ ಮಾಡಿದೆ.

ಮ್ಯಾಸರಹಳ್ಳಿ ಗ್ರಾಮದ ಅಮೃತ ಸರೋವರದಡಿ ನಿರ್ಮಿಸಿದ್ದ ಕೆರೆಯೂ ಕೋಡಿ ಬಿದ್ದಿದೆ. ತಾಲೂಕಿನ ಬಹುತೇಕ ಕೆರೆಗಳು ಕೋಡಿ ಬಿದ್ದಿದ್ದು, ಸೋಮವಾರ ರಾತ್ರಿವರೆಗೆ ಸುರಿಯುತ್ತಿದ್ದ ಮಳೆಯಿಂದಾಗಿ ಸಾಕಷ್ಟುನೀರು ಹಳ್ಳಗಳ ಮೂಲಕ ಕೆರೆಗಳಿಗೆ, ಕೆರೆಗಳು ಕೋಡಿ ಬಿದ್ದು ಮುಂದಕ್ಕೆ ಹರಿಯುತ್ತಿದ್ದು, ಇನ್ನು ಹಳ್ಳಗಳು ತುಂಬಿದ್ದರಿಂದ ಕೆಲಸ, ಶಾಲೆ-ಕಾಲೇಜಿಗೆ ತೆರಳಿದವರು ಊರಿಗೆ ವಾಪಾಸ್ಸಾಗಲಾಗದೇ, ಬಸ್ಸು ಇತರೆ ವಾಹನ ಸಂಚಾರ ಇಲ್ಲದೇ ಪರದಾಡುವ ಸ್ಥಿತಿ ಇತ್ತು. ಇನ್ನೂ ಅನೇಕರ ಸಮೀಪದ ಊರುಗಳು, ಪರಿಚಯಸ್ಥರು, ಸಂಬಂಧಿಗಳ ಮನೆಯಲ್ಲಿ ರಾತ್ರಿ ಕಳೆಯುವ ಲೆಕ್ಕಾಚಾರದಲ್ಲಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ. ದಾವಣಗೆರೆ ನಗರದಲ್ಲೂ ಸುರಿದ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿತ್ತು.

ಯಾವ ಸರ್ಕಾರ ಬಂದ್ರೂ ರಾಯಚೂರಿನ ಜ್ವಲಂತ ಸಮಸ್ಯೆಗಳಿಗೆ ಸಿಗದ ಪರಿಹಾರ..!

ದಾವಣಗೆರೆ ಬಹುತೇಕ ಕಡೆ ಜೋರು ಮಳೆ

ಜಿಲ್ಲೆಯಲ್ಲಿ ಭಾನುವಾರ ಸರಾಸರಿ 26.6 ಮಿಮೀ ಮಳೆಯಾಗಿದ್ದು, ಸುಮಾರು 24 ಮನೆಗಳಿಗೆ ತೀವ್ರ ಹಾನಿಯಾಗಿದೆ. ನ್ಯಾಮತಿಯಲ್ಲಿ 34.7 ಮಿಮೀ, ಜಗಳೂರಿನಲ್ಲಿ 26.6 ಮಿಮೀ, ದಾವಣಗೆರೆ-ಹರಿಹರ ತಾಲೂಕುಗಳಲ್ಲಿ ತಲಾ 30.7 ಮಿಮೀ, ಚನ್ನಗಿರಿಯಲ್ಲಿ 21.2 ಮಿಮೀ, ಹೊನ್ನಾಳಿಯಲ್ಲಿ 21.7 ಮಿಮೀ ಮಳೆಯಾಗಿದೆ. ಚನ್ನಗಿರಿಯಲ್ಲಿ 5 ಮನೆಗಳು ತೀವ್ರವಾಗಿ, 2 ಮನೆ ಭಾಗಶಃ ಹಾನಿಗೀಡಾಗಿವೆ. ಹೊನ್ನಾಳಿಯಲ್ಲಿ 3 ಮನೆ ತೀವ್ರ, 3 ಮನೆ ಭಾಗಶಃ, ದಾವಣಗೆರೆಯಲ್ಲಿ 3 ಮನೆ ಭಾಗಶಃ, ಹರಿಹರದಲ್ಲಿ 1 ಮನೆ ಭಾಗಶಃ, ಜಗಳೂರಿನಲ್ಲಿ 7 ಮನೆ ಭಾಗಶಃ ಹಾನಿಗೀಡಾಗಿವೆ ಎಂದು ಜಿಲ್ಲಾಡಳಿತ ತಿಳಿಸಿದೆ.

Follow Us:
Download App:
  • android
  • ios