ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ವಾಯುವಿಹಾರಕ್ಕೆಂದು ಬಂದಿದ್ದ ಇಬ್ಬರು ವಿದ್ಯಾರ್ಥಿನಿಯರ ಮೇಲೆ ಬೀದಿನಾಯಿಗಳ ಹಿಂಡು ದಾಳಿ ನಡೆಸಿ ಗಾಯಗೊಳಿಸಿದೆ. ಘಟನೆಯಲ್ಲಿ ಗಾಯಗೊಂಡ ವಿದ್ಯಾರ್ಥಿನಿಯರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಂಗಳೂರು (ಆ.13): ರಾಜಧಾನಿ ಬೆಂಗಳೂರಿನಲ್ಲಿ ಬೀದಿ ನಾಯಿಗಳ ದಾಳಿ ಮುಂದುವರೆದಿದ್ದು, ಮಂಗಳವಾರ ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ವಾಯುವಿಹಾರಕ್ಕೆ ಆಗಮಿಸಿದ್ದ ಇಬ್ಬರು ವಿದ್ಯಾರ್ಥಿಗಳ ಮೇಲೆ ಶ್ವಾನಗಳ ಹಿಂಡು ದಾಳಿ ಮಾಡಿ ಗಾಯಗೊಳಿಸಿದೆ.

ಬೆಳಗ್ಗೆ 7 ಗಂಟೆ ವೇಳೆ ವಾಯುವಿಹಾರಕ್ಕೆಂದು ಬಂದಿದ್ದ ಅಂಬೇಡ್ಕರ್ ಸ್ಕೂಲ್ ಆಫ್‌ ಎಕಾನಾಮಿಕ್ಸ್ ನ ಎಂಎಸ್ಸಿ 3ನೇ ವರ್ಷದ ನಿಕ್ಷಿತಾ ಮತ್ತು ಸೌಜನ್ಯಾ ಎಂಬ ವಿದ್ಯಾರ್ಥಿಗಳ ಮೇಲೆ ಬೀದಿನಾಯಿಗಳು ದಾಳಿ ಮಾಡಿವೆ. ಈ ವೇಳೆ ವಿದ್ಯಾರ್ಥಿನಿಯರ ಕೈ ಹಾಗೂ ಕಾಲಿನ ವಿವಿಧ ಭಾಗಕ್ಕೆ ಕಚ್ಚಿ ಗಾಯಗೊಳಿಸಿವೆ. ತಕ್ಷಣ ಭದ್ರತಾ ಸಿಬ್ಬಂದಿ ಸೇರಿ ಸಾರ್ವಜನಿಕರು ವಿದ್ಯಾರ್ಥಿನಿಯರ ನೆರವಿಗೆ ಧಾವಿಸಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಬ್ಬರೂ ವಿದ್ಯಾರ್ಥಿನಿಯರನ್ನು ಐಸಿಯುನಲ್ಲಿ ಚಿಕಿತ್ಸೆ ನೀಡಿ ಮಂಗಳವಾರ ಸಂಜೆ ವೇಳೆ ಸಾಮಾನ್ಯ ಕೊಠಡಿಗೆ ಸ್ಥಳಾಂತರಿಸಲಾಗಿದೆ.

ಇಂದು ನಾಯಿ ಸೆರೆ:

ಸುಮಾರು 10 ರಿಂದ 12 ಬೀದಿ ನಾಯಿಗಳು ದಾಳಿ ನಡೆಸಿವೆ ಎಂದು ತಿಳಿದು ಬಂದಿದ್ದು, ಅವು ಸ್ಥಳೀಯ ಬೀದಿ ನಾಯಿಗಳಾಗಿವೆ. ಬೆಂಗಳೂರು ವಿವಿ ಆವರಣ ದೊಡ್ಡದಾಗಿರುವುದರಿಂದ ಬೀದಿ ನಾಯಿಗಳನ್ನು ಸೆರೆ ಹಿಡಿಯುವುದು ಕಷ್ಟವಾಗಿದ್ದು, ಬುಧವಾರ ಸೂಕ್ತ ವ್ಯವಸ್ಥೆ ಮಾಡಿಕೊಂಡು ಕಾರ್ಯಾಚರಣೆ ನಡೆಸಲಾಗುವುದು ಎಂದು ಬಿಬಿಎಂಪಿ ಅಧಿಕಾರಿ ವೆಂಕಟೇಶ್‌ ತಿಳಿಸಿದ್ದಾರೆ.

ಕಳೆದ ಎರಡು ವಾರದ ಹಿಂದೆ ಬೀದಿ ನಾಯಿಗಳ ದಾಳಿಯಿಂದ ವೃದ್ದ ಸೀತಪ್ಪ ಎಂಬುವವರು ಮೃತಪಟ್ಟಿದ್ದರು. ಆ ಬಳಿಕ ಜೆ.ಪಿ.ನಗರದಲ್ಲಿ ಮೂರು ವರ್ಷದ ಮಗುವಿನ ಮೇಲೆ ದಾಳಿಯಾಗಿತ್ತು. ದಾಳಿ ಮಾಡಿದ ನಾಯಿಯಲ್ಲಿ ರೇಬಿಸ್‌ ಅಂಶ ಪತ್ತೆಯಾಗಿ ಆತಂಕ ಮೂಡಿಸಿತ್ತು.