ಪ್ರದೇಶದ ಬೀದಿ ನಾಯಿಗಳಿಗೆ ಲಸಿಕೆ ಹಾಕುವ ಕ್ರಮ ಕೈಗೊಳ್ಳಲಾಗುವುದು ಎಂದು ಪೋತ್ತನ್‌ಕೋಡ್ ಪಂಚಾಯತ್ ಅಧ್ಯಕ್ಷ ಟಿ.ಆರ್. ಅನಿಲ್ ಹೇಳಿದ್ದಾರೆ.

ತಿರುವನಂತಪುರ (ಜು.4): ದೇಶದ್ಯಾಂತ ಬೀದಿನಾಯಿಗಳ ಕಡಿತ ಪ್ರಕರಣ ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ. ಈ ನಡುವೆ ಪೋತ್ತನ್‌ಕೋಡ್‌ನಲ್ಲಿ ಬೀದಿನಾಯಿಯೊಂದು ಸುಮಾರು ಇಪ್ಪತ್ತು ಜನರನ್ನು ಕಚ್ಚಿದ ಘಟನೆ ನಡೆದಿದ್ದು, ಬೀದಿ ನಾಯಿಯನ್ನು ಹಿಡಿಯಲಾಗಿದೆ.

ಮಾಣಿಕಲ್ ಶಾಂತಿಗಿರಿ ಪಂಚಾಯತ್‌ನಲ್ಲಿ ನಾಯಿ ಪತ್ತೆಯಾಗಿದೆ. ನಾಯಿಯನ್ನು ನಿಗಾದಲ್ಲಿ ಇರಿಸಲಾಗಿದೆ ಮತ್ತು ಇಂದು ಪ್ರದೇಶದ ಬೀದಿ ನಾಯಿಗಳಿಗೆ ಲಸಿಕೆ ಹಾಕುವ ಕಾರ್ಯಕ್ರಮ ಕೈಗೊಳ್ಳಲಾಗುವುದು ಎಂದು ಪೋತ್ತನ್‌ಕೋಡ್ ಪಂಚಾಯತ್ ಅಧ್ಯಕ್ಷ ಟಿ.ಆರ್. ಅನಿಲ್ ತಿಳಿಸಿದ್ದಾರೆ.

ಬುಧವಾರ ಮತ್ತು ಗುರುವಾರದಂದು ವಿದ್ಯಾರ್ಥಿನಿ, ಮೂವರು ಮಹಿಳೆಯರು ಮತ್ತು ಒಂಬತ್ತು ವಲಸೆ ಕಾರ್ಮಿಕರು ಸೇರಿದಂತೆ ಇಪ್ಪತ್ತು ಜನರಿಗೆ ನಾಯಿ ಕಚ್ಚಿದೆ. ಪೋತ್ತನ್‌ಕೋಡ್ ಜಂಕ್ಷನ್‌ನಿಂದ ಒಂದೂವರೆ ಕಿಲೋಮೀಟರ್ ದೂರದಲ್ಲಿರುವ ಪೂಲಂತರದವರೆಗೆ ಜನರಿಗೆ ನಾಯಿ ಕಚ್ಚಿದೆ.

ನಂತರ ಶಾಂತಿಗಿರಿ ಪ್ರದೇಶಕ್ಕೆ ಬಂದ ನಾಯಿಯನ್ನು ಸ್ಥಳೀಯರು ಹಿಡಿದಿದ್ದಾರೆ. ನಾಯಿ ಕಡಿತಕ್ಕೊಳಗಾದವರು ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಪಂಚಾಯತ್ ವತಿಯಿಂದ ಅವರಿಗೆ ಮುಂದಿನ ಚಿಕಿತ್ಸೆ ಒದಗಿಸಲಾಗುವುದು ಎಂದು ಅಧ್ಯಕ್ಷರು ತಿಳಿಸಿದ್ದಾರೆ. ಬುಧವಾರ ರಾತ್ರಿ ಏಳು ಗಂಟೆಗೆ ಪೋತ್ತನ್‌ಕೋಡ್, ಆಲಿಂತರ, ಶಾಂತಿಗಿರಿ ಪ್ರದೇಶಗಳಲ್ಲಿ ಮತ್ತು ಗುರುವಾರ ಬೆಳಿಗ್ಗೆ ತೋಣಕ್ಕಲ್ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಗೆ ನಾಯಿ ಕಚ್ಚಿದೆ.

ಟ್ಯೂಷನ್‌ಗೆ ಹೋಗುತ್ತಿದ್ದ ಆರನೇ ತರಗತಿ ವಿದ್ಯಾರ್ಥಿನಿ ಆದ್ಯ ವಿನೀಶ್‌ಗೆ ನಾಯಿ ಮೂರು ಬಾರಿ ಕಚ್ಚಿದೆ. ನಂತರ ಶಾಲೆಯ ಬಳಿ ಹೋಟೆಲ್ ನಡೆಸುತ್ತಿದ್ದ ಮುಜೀಬ್ ಎಂಬುವವರು ನಾಯಿಯನ್ನು ಓಡಿಸಿದ್ದಾರೆ. ಪೋತ್ತನ್‌ಕೋಡ್ ಮೇಲೆ ಮುಕ್ಕಿನಲ್ಲಿ ಮೂವರು ಮಹಿಳೆಯರಿಗೂ ನಾಯಿ ಕಚ್ಚಿದೆ. ಕಲ್ಲೂರು ಭಾಗದಲ್ಲೂ ನಾಯಿ ದಾಳಿ ನಡೆದಿದೆ. ಪ್ರದೇಶದಲ್ಲಿ ಬೀದಿ ನಾಯಿಗಳ ಹಾವಳಿ ತೀವ್ರವಾಗಿದ್ದು, ಶಾಶ್ವತ ಪರಿಹಾರ ಕಂಡುಕೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.