ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್‌ನ ಮೇಲೆ ತುಳು ಧ್ವಜ ಹಾರಾಟ: ಇದು ಉಡುಪಿ ಯುವಕನ ಸಾಹಸಗಾಥೆ
ಉಡುಪಿ ಯುವಕ ಸಾಫ್ಟ್‌ವೇರ್ ಕೆಲಸವನ್ನು ಬಿಟ್ಟು 18,000 ಕಿ.ಮೀ. ಬೈಕ್‌ನಲ್ಲಿ ಪ್ರಯಾಣ ಮಾಡಿ ಮೌಂಟ್ ಎವರೆಸ್ಟ್ ಮೇಲೆ ತುಳು ಧ್ವಜವನ್ನು ಹಾರಿಸಿದ್ದಾನೆ.
ಉಡುಪಿ (ಆ.07): ಉತ್ತಮ ವೇತನ ಬರುತ್ತಿದ್ದ ಸಾಫ್ಟ್ ವೇರ್ ಕೆಲಸವನ್ನು ಬಿಟ್ಟು ಸುಮಾರು 18,000 ಕಿ.ಮೀ.ಗೂ ಅಧಿಕ ಪ್ರಯಾಣವನ್ನು ತನ್ನ ಬೈಕ್‌ನಲ್ಲಿಯೇ ಏಕಾಂಗಿಯಾಗಿ ಮುಗಿಸಿ ತುಳುನಾಡಿನ ಧ್ವಜವನ್ನು ವಿಶ್ವದ ಅತೀ ಎತ್ತರದ ಉಮ್ಲಿಂಗ್ ಲಾ ಮತ್ತು ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್ ನ ಮೇಲೆ ಹಾರಿಸಿ ಬಂದಿದ್ದಾರೆ.
ಟ್ರೆಕ್ಕಿಂಗ್ ಪ್ರೇಮಿಯಾಗಿರುವ ಸಿದ್ವೀನ್ ಶೆಟ್ಟಿ (28) ಉಡುಪಿಯ ಯುವಕ. 2023 ರ ಮೇ 6 ರಂದು ಉಡುಪಿಯಿಂದ ತನ್ನ ಹಿಮಾಲಯನ್ ಬೈಕ್ ನಲ್ಲಿ ಪ್ರಯಾಣ ಆರಂಭಿಸಿ ಭಾರತ, ನೇಪಾಳ ಮತ್ತು ಭೂತಾನ್ ದೇಶವನ್ನು ಸುತ್ತಿದ್ದು, ಭಾರತದ 21 ರಾಜ್ಯಗಳು, 5 ಕೇಂದ್ರಾಡಳಿತ ಪ್ರದೇಶಗಳನ್ನು ಸುತ್ತಿ ಜುಲೈ 19ರಂದು ಉಡುಪಿಗೆ ವಾಪಾಸಾಗಿದ್ದಾರೆ. ಇದರೊಂದಿಗೆ ವಿಶ್ವದ ಅತೀ ಎತ್ತರದ ಪ್ರದೇಶವಾದ ಉಮ್ಲಿಂಗ್ ಲಾ (19,024ಫೀಟ್), ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್ (17598 ಫೀಟ್ ಎತ್ತರ) ಮತ್ತು ವಿಶ್ವದ ಅತೀ ಎತ್ತರದ ಶಿವ ದೇವಾಲಯ ತುಂಗನಾಥ್ ಅನ್ನು ಕೂಡ ಸ್ಪರ್ಶಿಸಿ ಬಂದಿದ್ದಾರೆ.
ಜಸ್ಟೀಸ್ ಫಾರ್ ಸೌಜನ್ಯಾ ಕೇಸಿಗೆ ಮಣಿಯುತ್ತಾ ಸರ್ಕಾರ.! ನಾಲ್ವರ ವಿರು ...
ಉಡುಪಿಯ ಸುರೇಶ್ ಕೃಷ್ಣ ಶೆಟ್ಟಿ ಮತ್ತು ಸುಜಯ ಎಸ್ ಶೆಟ್ಟಿ ಅವರ ಪುತ್ರ ಸಿಧ್ವೀನ್ ಶೆಟ್ಟಿಯವರು ತನ್ನ ಪ್ರಾಥಮಿಕ ಹಾಗೂ ಹೈಸ್ಕೂಲ್ ಶಿಕ್ಷಣವನ್ನು ಉಡುಪಿಯ ಸೈಂಟ್ ಮೇರಿಸ್ ಶಾಲೆಯಲ್ಲಿ ಪೊರೈಸಿ, ಪಿಯು ಶಿಕ್ಷಣವನ್ನು ಬ್ರಹ್ಮಾವರದ ಜಿಎಮ್ ವಿದ್ಯಾನಿಕೇತನದಲ್ಲಿ ಮಾಡಿದ್ದಾರೆ. ಬಳಿಕ ಕಂಪ್ಯೂಟರ್ ಸೈನ್ಸ್ ನಲ್ಲಿ ಎಂಜಿನಿಯರಿಂಗ್ ಪದವಿಯನ್ನು ನಿಟ್ಟೆ ಕಾಲೇಜಿನಿಂದ ಪಡೆದಿದ್ದು ಚಿಕ್ಕಂದಿನಿಂದಲೇ ಚಾರಣದ ಬಗ್ಗೆ ವಿಶೇಷ ಆಸಕ್ತಿ ಹೊಂದಿದವರಾಗಿದ್ದಾರೆ. ಚಾರಣದೊಂದಿಗೆ ಇಡೀ ದೇಶವನ್ನು ಸುತ್ತಿ ಅಲ್ಲಿನ ಶಿವ ದೇವಾಲಯಗಳನ್ನು ಸಂದರ್ಶಿಸಬೇಕು ಎನ್ನುವುದು ಅವರ ಆಸೆಯಾಗಿತ್ತು ಅದರೊಂದಿಗೆ ತುಳುನಾಡಿನ ಧ್ವಜವನ್ನು ವಿಶ್ವದ ಎತ್ತರದ ಪ್ರದೇಶದಲ್ಲಿ ಇದುವರೆಗೆ ಉಡುಪಿಯ ಯಾವುದೇ ಚಾರಣಿಗರು ಹಾರಿಸಿಲ್ಲ ಈ ಸಾಧನೆಯನ್ನು ತಾನು ಮಾಡಬೇಕು ಎನ್ನುವ ಆಸೆಯಿಂದ ಕಠಿಣ ಪರಿಶ್ರಮದೊಂದಿಗೆ ತನ್ನ ಕನಸನ್ನು ನನಸು ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿದ ಸಿದ್ವಿನ್ ಶೆಟ್ಟಿ “ನಾನು ನನ್ನ ಪ್ರಯಾಣವನ್ನು ಯಾವುದೇ ರೀತಿಯ ಸುದ್ದಿಯನ್ನು ಮಾಡದೇ ಕೇವಲ ನನ್ನ ತಂದೆ ತಾಯಿ ಮತ್ತು ಸಹೋದರಿಗೆ ತಿಳಿಸುವ ಮೂಲಕ ಮೌನವಾಗಿ ಆರಂಭಿಸಿದೆ. ಏಕೆಂದರೆ 18000 ಕಿಮೀ ಪ್ರಯಾಣ ಕ್ರಮಿಸುವುದು ಎಷ್ಟು ಕಷ್ಟ ಸಾಧ್ಯ ಎನ್ನುವ ಅರಿವು ನನಗಿತ್ತು. ಆದರೆ ನನ್ನ ಮನೆಯವರ ಬೆಂಬಲ ನನ್ನೊಂದಿಗೆ ಇದ್ದ ಕಾರಣ ನಾನು ಅದನ್ನು ಕ್ರಮಿಸಲು ಸಾಧ್ಯವಾಯಿತು. ನನ್ನ ಬೈಕ್ ಸವಾರಿಯ ಸಮಯದಲ್ಲಿ ಹಲವಾರು ಸೇತುವೆಗಳು, ಭೂಕುಸಿತಗಳು, ಪ್ರವಾಹ ಪ್ರದೇಶಗಳು, ಹೊಳೆಗಳು, ಮಂಜುಗಡ್ಡೆಯ ಪ್ರದೇಶಗಳು, ಮರಳು, ಕಲ್ಲುಗಳು, ಪರ್ವತಗಳು, ದಟ್ಟವಾದ ಕಾಡುಗಳನ್ನು ದಾಟಿ ಮುಂದುವರೆದಿದ್ದೇನೆ.
ನನ್ನ ಕ್ರೀಡಾ ಟೀ ಶರ್ಟ್ನಲ್ಲಿ +50 ಡಿಗ್ರಿಗಳಿಂದ -16 ರವರೆಗೆ ತಾಪಮಾನವನ್ನು ತಡೆದುಕೊಂಡು ಪ್ರಯಾಣಿಸಿದ್ದೇನೆ. ಯಾವುದೇ ಚರ್ಮ ರಕ್ಷ ಕ್ರೀಮ್ಗಳು ಅಥವಾ ಥರ್ಮಲ್ಗಳಿಲ್ಲದೆ ಪ್ರಯಾಣಿಸಿದ್ದು ಮನೆ ಬಿಟ್ಟಾಗಿನಿಂದ ಇಂದಿನ ತನಕ ಯಾವುದೇ ರೀತಿ ಮಾತ್ರೆಗಳನ್ನು ಕೂಡ ಉಪಯೋಗಿಸದೆ ಇರುವುದು ಕೂಡ ವಿಶೇಷವಾಗಿದೆ. ಕೆಲವೊಮ್ಮೆ ದಿನಕ್ಕೆ ಒಂದೇ ಬಾರಿ ಊಟವನ್ನು ಮಾಡುತ್ತಿದ್ದೆ. ಈ ಎಲ್ಲಾ ಪರೀಕ್ಷೆಗಳನ್ನು ನಾನು ಉದ್ದೇಶಪೂರ್ವಕವಾಗಿ ಮಾಡಿದ್ದು ನಾನು ಈ ಪ್ರಯಾಣಕ್ಕೆ ಎಷ್ಟೊಂದು ಸಮರ್ಥನಿದ್ದೇನೆ ಮತ್ತು ಹೇಗೆ ನಿಭಾಯಿಸುತ್ತೇನೆ ಎನ್ನುವುದನ್ನು ಅರಿಯುವ ನಿಟ್ಟಿನಲ್ಲಿ ಹೊರಟಿದ್ದು ಅದರಲ್ಲಿ ನಾನು ಉತ್ತೀರ್ಣನಾಗಿದ್ದೇನೆ ಎಂಬ ಹೆಮ್ಮೆ ಇದೆ" ಎಂದಿದ್ದಾರೆ.
ರೈತನಿಗೆ ಹೆಣ್ಣು ಕೊಡೊಲ್ಲವೆಂದವರಿಗೆ ಸವಾಲು: ಟೊಮೆಟೊ ಮಾರಿ ಹೊಸ ಕಾರಿನಲ್ಲಿ ಕನ್ಯಾ ಕೇಳೋಕೆ ಹೋಗ್ತೀನೆಂದ ರೈತರು
ನನ್ನ ಬೈಕ್ ಪ್ರಯಾಣದಲ್ಲಿ 100ಕ್ಕೂ ಅಧಿಕ ದೇವಸ್ಥಾನಗಳು, ಗುರುದ್ವಾರ, ಚರ್ಚ್ ಮತ್ತು ಮಸೀದಿಗಳ ವಾಸ್ತು ಶಿಲ್ಪವನ್ನು ಅನುಭವಿಸುವ ಅವಕಾಶ ದೊರಕಿತು. ಈ ವೇಳೆ ಬಹುತೇಕ ಎಲ್ಲಾ ಧರ್ಮದ ಜನರೊಂದಿಗೆ ಬೆರೆಯುವ ಅವರೊಂದಿಗೆ ಸಂವಾದ ಮಾಡುವುದರೊಂದಿಗೆ ಅವರ ಸಂಸ್ಕೃತಿ ಆಚಾರ ವಿಚಾರಗಳನ್ನು ತಿಳಿಯಲು ಕೂಡ ಸಾಧ್ಯವಾಯಿತು. ಇದರೊಂದಿಗೆ ಭಾರತ, ನೇಪಾಳ, ಭೂತಾನ್ ದೇಶಗಳ ಸಶಸ್ತ್ರ ಪಡೆಗಳ ಅಧಿಕಾರಿಗಳನ್ನು ಕೂಡ ಭೇಟಿಯಾಗಿದ್ದು ಮತ್ತೊಂದು ವಿಶೇಷತೆ ಆಗಿದೆ. ನನ್ನ ಪ್ರಯಾಣದ ಉದ್ದಕ್ಕೂ ಎಲ್ಲಾ ರೀತಿಯ ಸಹಕಾರ ಪ್ರತಿ ಭಾಗದ ಜನರು ನನಗೆ ನೀಡಿದರು.
ನನ್ನ ಪ್ರಯಾಣದ ಮುಖ್ಯವಾದ ಸಾಧನೆ ಎಂದರೆ ಸುಮಾರು 17,598 ಅಡಿ ಎತ್ತರ ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪನ್ನು ಕೇವಲ 6 ದಿನಗಳಲ್ಲಿ ಯಾವುದೇ ರೀತಿ ಮಾರ್ಗದರ್ಶಕರಿಲ್ಲದೆ ಆರೋಹಣ ಮಾಡಿ ಪೂರ್ಣಗೊಳಿಸಿರುವುದಾಗಿದೆ. ಈ ಎತ್ತರದ ಪ್ರದೇಶಕ್ಕೆ ತೆರಳಿ ಅಲ್ಲಿ ತುಳುನಾಡಿನ ಧ್ವಜವನ್ನು ಹಾರಿಸಿದ್ದೇನೆ ಎಂಬ ಹೆಮ್ಮೆ ನನಗಿದೆ. ಒಂದು ವರ್ಷದ ಹಿಂದೆ ಅಪಘಾತದಿಂದ ನನ್ನ ಮಂಡಿಯ ಚಿಪ್ಪು ಮುರಿದ್ದಿದ್ದು ಇದರ ನಡುವೆಯೂ ಈ ಚಾರಣ ಮಾಡುವ ಅದೃಷ್ಠ ನನಗೆ ಸಿಕ್ಕಿದೆ. ಈ ನನ್ನ ಸಾಧನೆಗೆ ಅಲ್ಲಿನ ಅಧಿಕಾರಿಗಳು ಪ್ರಶಂಸಾ ಪತ್ರವನ್ನು ಕೂಡ ನೀಡಿದ್ದಾರೆ ಎಂದಿದ್ದಾರೆ.