Asianet Suvarna News Asianet Suvarna News

Bengaluru: ನಿಜವಾದ ಸಂತೋಷ ಆತ್ಮಸಾಕ್ಷಿಯಲ್ಲಿದೆ: ಸಿಎಂ ಬೊಮ್ಮಾಯಿ

ನಿಜವಾದ ಸಂತೋಷ, ಸುಖ, ಸಮಾಧಾನ ಆತ್ಮಸಾಕ್ಷಿಗೆ ಬದ್ಧರಾಗಿ ವಿಚಾರ ಮಾಡುವುದರಲ್ಲಿದೆ. ನಾವು ಎಷ್ಟುಅಸ್ತಿ ಮಾಡಿದರೂ, ಆಸ್ತಿ ನಮ್ಮದಾಗುವುದಿಲ್ಲ, ನಾವು ಭೂಮಿಯ ಪಾಲಾಗುತ್ತೇವೆ. ಆದ್ದರಿಂದ ತಮ್ಮ ಅಸ್ತಿತ್ವಕ್ಕೆ ಒಂದು ಉದ್ದೇಶವಿದೆ ಎಂದು ಅರ್ಥ ಮಾಡಿಕೊಂಡವರು ಹೆಚ್ಚು ಕ್ರಿಯಾಶೀಲರಾಗಿದ್ದು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

True happiness lies in conscience says CM Basavaraj Bommai gvd
Author
First Published Nov 18, 2022, 7:06 AM IST

ಬೆಂಗಳೂರು (ನ.18): ನಿಜವಾದ ಸಂತೋಷ, ಸುಖ, ಸಮಾಧಾನ ಆತ್ಮಸಾಕ್ಷಿಗೆ ಬದ್ಧರಾಗಿ ವಿಚಾರ ಮಾಡುವುದರಲ್ಲಿದೆ. ನಾವು ಎಷ್ಟುಅಸ್ತಿ ಮಾಡಿದರೂ, ಆಸ್ತಿ ನಮ್ಮದಾಗುವುದಿಲ್ಲ, ನಾವು ಭೂಮಿಯ ಪಾಲಾಗುತ್ತೇವೆ. ಆದ್ದರಿಂದ ತಮ್ಮ ಅಸ್ತಿತ್ವಕ್ಕೆ ಒಂದು ಉದ್ದೇಶವಿದೆ ಎಂದು ಅರ್ಥ ಮಾಡಿಕೊಂಡವರು ಹೆಚ್ಚು ಕ್ರಿಯಾಶೀಲರಾಗಿದ್ದು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಅವರು ಗುರುವಾರ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ರಮಣಶ್ರೀ ಪ್ರತಿಷ್ಠಾನ, ಬೆಂಗಳೂರು ಇವರ ಸಹಯೋಗದೊಂದಿಗೆ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ 17ನೇ ರಮಣಶ್ರೀ ಶರಣ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಾಗೂ ಎಸ್‌.ಷಡಕ್ಷರಿ ಅವರ ‘ಕ್ಷಣ ಹೊತ್ತು- ಆಣಿ ಮುತ್ತು’ ಪುಸ್ತಕ ಭಾಗ 10, 11 ಲೋಕಾರ್ಪಣೆ ಮಾಡಿ ಮಾತನಾಡಿದರು.ನಮ್ಮ ಅಸ್ತಿತ್ವದ ಬಗ್ಗೆ ನಾವು ಯಾರೂ ಚಿಂತನೆ ಮಾಡುವುದಿಲ್ಲ. ಈ ಬಗ್ಗೆ ಚಿಂತನೆ ಮಾಡಿದರೆ ನಮ್ಮ ಆಲೋಚನಾ ಲಹರಿ ಬದಲಾಗುತ್ತದೆ. ನಮ್ಮ ಆತ್ಮಸಾಕ್ಷಿಯಾಗಿ ಬದುಕುವ ಪ್ರಯತ್ನ ಮಾಡಿದರೆ ಅದು ಅಮೃತ ಗಳಿಗೆಯಾಗುತ್ತದೆ. ಷಡಕ್ಷರಿಯವರು ತಮ್ಮ ಬದುಕಿನ ಕಷ್ಟದ ದಿನಗಳಲ್ಲಿ ಕಷ್ಟಪಟ್ಟು ಸಾಧನೆ ಮಾಡಿದ್ದಾರೆ ಎಂದರು.

Bengaluru: ನಗರದಲ್ಲಿ ಶೀಘ್ರ ಡಬಲ್‌ ಡೆಕ್ಕರ್‌ ಬಸ್‌ ಓಡಾಟ

ಎಸ್‌.ಷಡಕ್ಷರಿ ಅವರ ಆಸ್ತಿಗಿಂತ ಪುಸ್ತಕ ಬರಹದ ಸಾಧನೆಯೇ ಹೆಚ್ಚು ತೂಕವುಳ್ಳದ್ದಾಗಿದೆ. ನಾನು ಷಡಕ್ಷರಿ ಅವರ ಪುಸ್ತಕಗಳನ್ನು ಓದುತ್ತೇನೆ. ಕಥೆಗಳ ಸಂಶೋಧನೆ, ಸರಿಯಾದ ನಿರೂಪಣೆ, ಅದರ ಒಳಾರ್ಥವನ್ನು ಹೇಳುವ ಶೈಲಿ ಅಪರೂಪದ್ದು. ಇತ್ತೀಚಿನ ದಿನಗಳಲ್ಲಿ ವಿಷಯಾಧಾರಿತವಾಗಿ ಈ ರೀತಿಯ ಬರಹ ಹಾಗೂ ಸಂಕಲನವನ್ನು ಯಾರೂ ಪ್ರಕಟಿಸಿಲ್ಲ. ಷಡಕ್ಷರಿ ಅವರಿಗೆ ವಯಸ್ಸು 73 ಆದರೂ ಅವರ ಚಟುವಟಿಕೆ ಯುವಕರನ್ನೂ ನಾಚಿಸುವಂತಿದೆ. ಷಡಕ್ಷರಿ ತಮ್ಮ ಮುಗ್ಧತೆಯನ್ನು ಕಾಪಾಡಿಕೊಂಡಿದ್ದು ಉತ್ತಮ ಹಾಸ್ಯಪ್ರಜ್ಞೆ ಹೊಂದಿದ್ದಾರೆ ಎಂದು ಶ್ಲಾಘಿಸಿದರು.

‘ಕ್ಷಣ ಹೊತ್ತು- ಆಣಿ ಮುತ್ತು’ ಪುಸ್ತಕದ ಬಗ್ಗೆ ಮಾತನಾಡಿದ ಕನ್ನಡ ಪ್ರಭ ಮತ್ತು ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ ಪ್ರಧಾನ ಸಂಪಾದಕ ರವಿ ಹೆಗಡೆ, ಈ ಪುಸ್ತಕದ 3.60 ಲಕ್ಷ ಪ್ರತಿ ಈಗಾಗಲೇ ಮಾರಾಟವಾಗಿದೆ. ಸಣ್ಣ ಸಣ್ಣ ಒಂದೆರಡು ಪುಟಗಳ ಬರಹವನ್ನು ಒಳಗೊಂಡಿರುವ ಕೃತಿಯಿದು. ಷಡಕ್ಷರಿ ಅವರ ಅನುಭವ, ಚಿಂತನೆ, ನೀತಿ ಮಾತುಗಳ ಲೇಖನಗಳು ಈ ಕೃತಿಯಲ್ಲಿ ಅಡಕವಾಗಿದೆ. ನಾವು ಮಕ್ಕಳಾಗಿದ್ದಾಗ ಪಂಚತಂತ್ರ, ದಿನಕ್ಕೊಂದು ಕಥೆ ಎಂಬ ಪುಸ್ತಕಗಳನ್ನು ಹೇಗೇ ಓದಿ ನಮ್ಮ ಜ್ಞಾನದ ಹರವನ್ನು ವಿಸ್ತರಿಸಿಕೊಂಡೆವೋ ಅದೇ ಮಾದರಿಯಲ್ಲಿ ಈ ಪುಸ್ತಕವನ್ನು ಓದಬಹುದಾಗಿದೆ. 

ಈ ಪುಸ್ತಕದಲ್ಲಿನ ಸಂಗತಿಗಳನ್ನು ನಾವು ನಮ್ಮ ದಿನನಿತ್ಯದ ಚಟುವಟಿಕೆಗಳ ಮಧ್ಯೆ ಪ್ರಸ್ತಾಪಿಸಬಹುದು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಚಿವ ವಿ.ಸೋಮಣ್ಣ, ಬರಹಗಾರ ಎಸ್‌.ಷಡಕ್ಷರಿ, ಗೊ.ರು.ಚನ್ನಬಸಪ್ಪ, ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಮನು ಬಳಿಗಾರ್‌, ನಿರ್ದೇಶಕ ಟಿ.ಎನ್‌.ಸೀತಾರಾನ್, ಪ್ರತಿಷ್ಠಾನದ ವೀರೇಂದ್ರ ಷಡಕ್ಷರಿ ಹಾಗೂ ಅರುಣಾ ಸತೀಶ್‌ ಉಪಸ್ಥಿತರಿದ್ದರು.

ವಚನ ಬಿಂಬಿಸುವ ಥೀಮ್‌ ಪಾರ್ಕ್ ಸ್ಥಾಪಿಸಿ: ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ.ಸೋಮಶೇಖರ್‌ ಮಾತನಾಡಿ, ವಿಧಾನ ಸೌಧದಲ್ಲಿನ ‘ಸರ್ಕಾರಿ ಕೆಲಸ ದೇವರ ಕೆಲಸ’ ಎಂಬ ಘೋಷವಾಕ್ಯದ ಮಾದರಿಯಲ್ಲಿ ಬೆಳಗಾವಿಯ ಸುವರ್ಣ ಸೌಧದಲ್ಲಿ ’ಕಾಯಕವೇ ಕೈಲಾಸ’ ಎಂದು ಕೆತ್ತನೆ ಮಾಡಬೇಕು. ಹಾಗೆಯೇ ಬಸವಣ್ಣ ಸೇರಿದಂತೆ ಇನ್ನಿತರ ಶರಣರ ವಚನಗಳನ್ನು ಬಿಂಬಿಸುವ ಥೀಮ್‌ ಪಾರ್ಕ್ ಒಂದನ್ನು ಸ್ಥಾಪಿಸುವಂತೆ ಮನವಿ ಮಾಡಿದರು.

ಸೂರ್ಯ, ಚಂದ್ರ ಇರುವವರೆಗೆ ಕನ್ನಡಕ್ಕೆ ಆಪತ್ತಿಲ್ಲ; ಸಿಎಂ ಬೊಮ್ಮಾಯಿ

ಬೇಲಿ ಮಠಶ್ರೀಗಳಿಗೆ ಸಾಧಕ ಪ್ರಶಸ್ತಿ: ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಬೇಲಿಮಠದ ಶಿವರುದ್ರ ಸ್ವಾಮೀಜಿಗಳಿಗೆ ‘ರಮಣಶ್ರೀ ಶರಣ ಜೀವಮಾನ ಸಾಧಕ ಪ್ರಶಸ್ತಿ’ ಪ್ರದಾನ ಮಾಡಿದರು. ರಮಣಶ್ರೀ ಶರಣ ಹಿರಿಯ ಶ್ರೇಣಿ ಪ್ರಶಸ್ತಿಯನ್ನು ಶರಣ ಸಾಹಿತ್ಯ ವಿಭಾಗದಲ್ಲಿ ಡಾ. ಜಿ.ವ್ಹಿ.ಶಿರೂರ, ಆಧುನಿಕ ವಚನ ರಚನೆಗೆ ಪ.ಗು.ಸಿದ್ಧಾಪುರ, ವಚನ ಸಂಗೀತ ಕ್ಷೇತ್ರದಲ್ಲಿ ಮೃತ್ಯುಂಜಯ ದೊಡ್ಡವಾಡ, ಶರಣ ಸಂಸ್ಕೃತಿ ಪ್ರಸಾರ ಸೇವಾ ಸಂಸ್ಥೆ ಚಿತ್ತರಗಿ ವಿಜಯ ಮಹಾಂತೇಶ್ವರ ಸಂಸ್ಥಾನ ಮಠ ಹಾಗೆಯೇ ರಮಣಶ್ರೀ ಶರಣ ಉತ್ತೇಜನ ಪ್ರಶಸ್ತಿಯನ್ನು ಶರಣ ಸಾಹಿತ್ಯ ಸಂಶೋಧನೆಗೆ ಶಿವಬಸವ ನಗರದ ಕಾರಂಜಿ ಮಠದ ಶಿವಯೋಗಿ ದೇವರು, ವಚನ ರಚನೆಗೆ ಶಿವಮೊಗ್ಗದ ದಾಕ್ಷಾಯಿಣಿ ಜಯದೇವಪ್ಪ, ವಚನ ಸಂಗೀತಕ್ಕೆ ಬೆಂಗಳೂರಿನ ಸಿದ್ದರಾಮ ಕೇಸಾಪುರ ಹಾಗೂ ಶರಣ ಸಂಸ್ಕೃತಿ ಪ್ರಸಾರಕ್ಕೆ ನಂಜನಗೂಡಿನ ವಿಶ್ವಬಸವ ಸೇನೆಯ ಬಸವ ಯೋಗೇಶ್‌ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

Follow Us:
Download App:
  • android
  • ios