Bengaluru: ನಗರದಲ್ಲಿ ಶೀಘ್ರ ಡಬಲ್ ಡೆಕ್ಕರ್ ಬಸ್ ಓಡಾಟ
ಹೆಚ್ಚು ಕಡಿಮೆ ಮೂರು ದಶಕಗಳ ಬಳಿಕ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮುಂದಿನ ವರ್ಷ ಮತ್ತೆ ಡಬಲ್ ಡೆಕ್ಕರ್ ಬಸ್‌ಗಳು ಓಡಾಟ ನಡೆಸಲಿವೆ!
ಜಯಪ್ರಕಾಶ್ ಬಿರಾದಾರ್
ಬೆಂಗಳೂರು (ನ.18): ಹೆಚ್ಚು ಕಡಿಮೆ ಮೂರು ದಶಕಗಳ ಬಳಿಕ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮುಂದಿನ ವರ್ಷ ಮತ್ತೆ ಡಬಲ್ ಡೆಕ್ಕರ್ ಬಸ್‌ಗಳು ಓಡಾಟ ನಡೆಸಲಿವೆ! ಬೆಂಗಳೂರು ನಗರಕ್ಕೆ ಸಾರಿಗೆ ಸೌಲಭ್ಯ ನೀಡುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಪ್ರಯಾಣಿಕರ ಸ್ನೇಹಿ ಮತ್ತು ವಾಹನ ದಟ್ಟಣೆ ತಗ್ಗಿಸುವ ನಿಟ್ಟಿನಲ್ಲಿ ಡಬಲ್ ಡೆಕ್ಕರ್ (ಎರಡು ಅಂತಸ್ತಿನ) ಬಸ್‌ಗಳನ್ನು ಓಡಾಟ ನಡೆಸಲು ಮುಂದಾಗಿದೆ. ಪ್ರಾಥಮಿಕವಾಗಿ 10 ಬಸ್‌ಗಳನ್ನು ಓಡಾಟ ನಡೆಸಲು ನಿರ್ಧರಿಸಿದ್ದು, ಈಗಾಗಲೇ ಬಸ್ ತಯಾರಿ ಮತ್ತು ನಿರ್ವಹಣಾ ಕಂಪನಿಗಳಿಗೆ ಟೆಂಡರ್ ಕರೆಯಲಾಗಿದೆ.
ಈ ಹಿಂದೆ 1970-1990ವರೆಗೂ ಬೆಂಗಳೂರಿನಲ್ಲಿ ಡಬಲ್ ಡೆಕ್ಕರ್ ಬಸ್‌ಗಳು ಓಡಾಟ ನಡೆಸಿದ್ದವು. ಆ ಬಳಿಕ ಕಾರಾಣಾಂತರಗಳಿಂದ ಬಸ್‌ಗಳ ಓಡಾಟ ಸ್ಥಗಿತಗೊಂಡಿತು. ಸದ್ಯ ವಿದ್ಯುತ್ ಚಾಲಿತ (ಎಲೆಕ್ಟ್ರಿಕ್) ಅವತಾರದೊಂದಿಗೆ ಮತ್ತೆ ಆರಂಭವಾಗುತ್ತಿವೆ. ಮುಂದಿನ ವರ್ಷ ಆರಂಭದಲ್ಲಿಯೇ ರಾಜಧಾನಿ ಆಕರ್ಷಕ ಜನ ಡಬಲ್ ಡೆಕ್ಕರ್ ಬಸ್‌ಗಳಲ್ಲಿ ಓಡಾಟ ನಡೆಸಲಿದ್ದಾರೆ. ಈ ಮೂಲಕ ಮುಂಬೈ ಹೊರತು ಪಡಿಸಿದರೆ ಎಲೆಕ್ಟ್ರಿಕ್ ಡಬಲ್ ಡೆಕ್ಕರ್ ಬಸ್ ಸಂಚಾರ ನಡೆಸಲಿರುವ ಎರಡನೇ ಮಹಾನಗರ ಎಂಬ ಹೆಗ್ಗಳಿಕೆಗೆ ಬೆಂಗಳೂರು ಪಾತ್ರವಾಗಲಿದೆ.
ಹಣದುಬ್ಬರ ಕಮ್ಮಿ ಆಗಿದೆ ಎಂಬುದು ಸುಳ್ಳು: ಸಿದ್ದರಾಮಯ್ಯ
2 ಕೋಟಿ-65 ಆಸನಗಳು: ಕೇಂದ್ರ ಸರ್ಕಾರದ ಡಲ್ಟ್ ಮತ್ತು ನ್ಯಾಷನಲ್ ಕ್ಲೀನ್ ಏರ್ ಪ್ರೋಂ (ಎನ್‌ಕ್ಯಾಪ್) ಯೋಜನೆಗಳಲ್ಲಿ ಬಸ್‌ಗಳನ್ನು ಖರೀದಿಸಲಾಗುತ್ತಿದೆ. ವಿದ್ಯುತ್ ಚಾಲಿತವಾಗಿರಬೇಕು, ಹವಾನಿಯಂತ್ರಿತ (ಎಸಿ) ಸೌಲಭ್ಯವಿರಬೇಕು. ಬಸ್‌ಗಳ ಎತ್ತರ 4.75 ಮೀ ಎತ್ತರ, 9.8 ಮೀ ಉದ್ದ, ಕೆಳಭಾಗದಲ್ಲಿ 30, ಮೇಲ್ಭಾಗದಲ್ಲಿ 35 ಸೇರಿ ಒಟ್ಟು 65 ಆಸನಗಳು ಇರಬೇಕು. ಸದ್ಯ ಜಾರಿಯಲ್ಲಿರುವ ಎಲೆಕ್ಟ್ರಿಕ್ ಬಸ್‌ಗಳಂತೆ ಈ ಬಸ್‌ಗಳನ್ನು ನಿರ್ಮಿಸಿದ ಕಂಪನಿಯೇ ಸಂಚಾರ ಮತ್ತು ನಿರ್ವಹಣೆ ಮಾಡಬೇಕು ಎಂದು ಟೆಂಡರ್‌ನಲ್ಲಿ ಬಸ್ ನಿರ್ಮಾಣ ಕಂಪನಿಗಳಿಗೆ ಬಿಎಂಟಿಸಿ ತಿಳಿಸಿದೆ. ಒಂದು ಬಸ್ ನಿರ್ಮಾಣ ವೆಚ್ಚ .2 ಕೋಟಿ ತಲುಪುವ ಸಾಧ್ಯತೆಗಳಿವೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
2 ದಶಕಗಳ ಕಾಲ ಸೇವೆ: 1970-90 ನಡುವೆ ಡಬಲ್ ಡೆಕ್ಕರ್ ಬಸ್‌ಗಳು ಇಂದಿರಾ ನಗರದಿಂದ ಕೆಂಪೇಗೌಡ ಬಸ್ ನಿಲ್ದಾಣ, ಶಿವಾಜಿ ನಗರದಿಂದ ಕೆ.ಆರ್.ಮಾರುಕಟ್ಟೆ, ಕೆಂಪೇಗೌಡ ಬಸ್ ನಿಲ್ದಾಣದಿಂದ ಜಯನಗರ 4ನೇ ಬ್ಲಾಕ್, ಗಾಂಧಿ ಬಜಾರ್‌ನಿಂದ ಮೆಜೆಸ್ಟಿಕ್ ಮತ್ತು ಜಯನಗರದಿಂದ ಶಿವಾಜಿನಗರ ಸೇರಿದಂತೆ ವಿವಿಧ ಮಾರ್ಗಗಳಲ್ಲಿ ಸಂಚರಿಸುತ್ತಿದ್ದವು. 1980ರ ದಶಕದಲ್ಲಿ ಶಾಲಾ ಮಕ್ಕಳನ್ನು ಕರೆದೊಯ್ಯುವ ಸೇವೆ ಒದಗಿಸಲಾಗಿತ್ತು. ಆ ಬಸ್‌ಗಳನ್ನು ಹತ್ತಲು ಮಕ್ಕಳು ಸೇರಿದಂತೆ ಎಲ್ಲಾ ವಯೋಮಾನದವರು ಸಂತಸಪಡುತ್ತಿದ್ದರು. 1990ರ ಬಳಿಕ ಕ್ರಮೇಣ ಕಡಿಮೆಯಾದವು ಎಂದು ಬಿಎಂಟಿಸಿ ನಿವೃತ್ತ ನೌಕರರೊಬ್ಬರು ಹಳೆಯ ದಿನಗಳನ್ನು ಮೆಲುಕು ಹಾಕಿದರು.
‘ವರ್ಕ್ ಫ್ರಂ ಬಸ್’ ಸೌಲಭ್ಯ?: ಟ್ರಾಫಿಕ್ ದಟ್ಟಣೆ ಹೆಚ್ಚಿರುವ ಪ್ರದೇಶಗಳಲ್ಲಿ ಮತ್ತು ನಗರದ ಒಂದು ದಿಕ್ಕಿನಿಂದ ಮತ್ತೊಂದು ದಿಕ್ಕಿಗೆ ಪ್ರಯಾಣ ಇದ್ದಾಗ ಐಟಿಬಿಟಿ ಉದ್ಯೋಗಿಗಳು ಕೆಲಸ ನಿರ್ವಹಿಸುತ್ತಾ ಕಚೇರಿಗೆ ತಲುಪಲು ಸ್ವಂತ ಕಾರ್, ಕ್ಯಾಬ್ ಕಾರ್‌ಗಳನ್ನು ಅವಲಂಭಿಸುತ್ತಾರೆ. ಅಂತಹ ಉದ್ಯೋಗಿಗಳಿಗೆ ಅನುಕೂಲವಾಗುವಂತೆ ಬಸ್‌ನಲ್ಲಿ ಲ್ಯಾಪ್‌ಟಾಪ್ ಇಟ್ಟುಕೊಳ್ಳುವ ಟೇಬಲ್, ಚಾಜ್‌ರ್‍ರ್ ಸೌಲಭ್ಯ ನೀಡುವ ಚಿಂತನೆಯನ್ನು ಬಿಎಂಟಿಸಿ ಮಾಡಿದೆ. ಈ ಸೌಲಭ್ಯದಿಂದ ಐಟಿ ಉದ್ಯೋಗಿಗಳ ಸಾರಿಗೆ ಬಸ್‌ಗಳ ಅವಲಂಬನೆ ಹೆಚ್ಚುವ ಸಾಧ್ಯತೆಗಳಿವೆ.
ಕೇಂದ್ರ ಸಚಿವರ ಸಲಹೆ: ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ರಾಜ್ಯದಲ್ಲಿ ನಡೆದ ಕೇಂದ್ರ ಸಾರಿಗೆ ಇಲಾಖೆಯ ಮಂಥನ್ ಸಮ್ಮೇಳದಲ್ಲಿ ಭಾಗಿಯಾಗಿದ್ದ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಬೆಂಗಳೂರಿನ ಸುಸ್ಥಿರ ಸಂಚಾರಿ ವ್ಯವಸ್ಥೆಗೆ ಎಲೆಕ್ಟ್ರಿಕ್ ಬಸ್ ಮತ್ತು ಡಬಲ್ ಡೆಕ್ಕರ್ ಬಸ್‌ಗಳನ್ನು ಅಳವಡಿಸಿಕೊಳ್ಳುವಂತೆ ಸ್ಥಳೀಯ ಸಾರಿಗೆ ಸಂಸ್ಥೆಗಳಿಗೆ ಸೂಚಿಸಿದ್ದರು. ಅದರಂತೆ ಸಾರಿಗೆ ಇಲಾಖೆ ಹೆಚ್ಚುವರಿಯಾಗಿ ಒಂದು ಸಾವಿರಕ್ಕೂ ಅಧಿಕ ಎಲೆಕ್ಟ್ರಿಕ್ ಬಸ್ ಖರೀಸುತ್ತಿದ್ದು, ಜತೆಗೆ ಡಬಲ್ ಡೆಕ್ಕರ್ ಬಸ್‌ಗಳನ್ನು ಆರಂಭಿಸಲು ನಿರ್ಧರಿಸಿದೆ.
ಜೆಡಿಎಸ್ ಪಂಚರತ್ನ ರಥಯಾತ್ರೆ ಇಂದಿನಿಂದ ಮತ್ತೆ ಪ್ರಾರಂಭ
ಮೆಟ್ರೋ ಫೀಡರ್‌ಗೆ 100 ಮಿನಿ ಬಸ್ ಸೇವೆ: ಬಿಎಂಟಿಸಿ ಮೆಟ್ರೋ ಫೀಡರ್ ಸೇವೆ ನೀಡುವ ಉದ್ದೇಶದಿಂದ 6/7 ಮೀಟರ್ ಉದ್ದದ 20 ಆಸನ ಸಾಮರ್ಥ್ಯದ ನಾನ್ ಎಸಿ 20 ಆಸನ ಸಾಮರ್ಥ್ಯದ 100 ಮಿನಿ ಬಸ್‌ಗಳಿಗೂ ಟೆಂಡರ್ ಕರೆಯಲಾಗಿದೆ. ಮೆಟ್ರೋ ನಿಲ್ದಾಣಗಳಿಂದ ಸ್ಥಳೀಯವಾಗಿ ಬಡಾವಣೆಗಳಲ್ಲಿ ಸಂಚಾರ ಸೇವೆ ನೀಡಲು ಸಹಕಾರಿಯಾಗಲಿವೆ. ಸದ್ಯ ವಿದ್ಯುತ್‌ಚಾಲಿತ 390 ಬಸ್‌ಗಳ ಟೆಂಡರ್ ಪೂರ್ಣಗೊಂಡು, 258 ಬಸ್‌ಗಳು ಓಡಾಟ ನಡೆಸುತ್ತಿವೆ. ಹೊಸದಾಗಿ 940 ಬಸ್ ಖರೀದಿಗೆ ಬಿಎಂಟಿಸಿ ಮುಂದಾಗಿದೆ.