Asianet Suvarna News Asianet Suvarna News

ನಿಜವಾದ ಕಾಂಗ್ರೆಸ್ಸಿಗರು ಮದ್ಯಪಾನ ಮಾಡಲ್ಲ: ಮೊಯ್ಲಿ

  •  ನಿಜವಾದ ಕಾಂಗ್ರೆಸ್ಸಿಗರು ಮದ್ಯಪಾನ ಮಾಡುವುದಿಲ್ಲ
  • ಕಾಂಗ್ರೆಸ್ಸಿನಲ್ಲಿರುವವರು ಈವರೆಗೆ ಮಾಡುತ್ತಿದ್ದರೂ ಇನ್ನು ಮುಂದೆ ಮದ್ಯಪಾನ ತ್ಯಜಿಸುತ್ತೇವೆ ಎಂಬ ಪ್ರತಿಜ್ಞೆ ಮಾಡಿ
true Congress leaders Never Drink alcohol snr
Author
Bengaluru, First Published Nov 15, 2021, 9:23 AM IST

ಬೆಂಗಳೂರು (ನ.15):  ರಾಜ್ಯ ಕಾಂಗ್ರೆಸ್‌ (Congress) ವತಿಯಿಂದ 50 ಲಕ್ಷ ಸದಸ್ಯತ್ವ ನೋಂದಣಿಯ ಮಹತ್ವಾಕಾಂಕ್ಷೆಯೊಂದಿಗೆ ಹಮ್ಮಿಕೊಂಡಿರುವ ಕಾಂಗ್ರೆಸ್‌ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ (Randeep Singh Surjewala) ಅವರು ಭಾನುವಾರ ಚಾಲನೆ ನೀಡಿದ್ದು, ರಾಜ್ಯದ ಮೂಲೆ-ಮೂಲೆಯಲ್ಲೂ ಸದಸ್ಯತ್ವ ನೋಂದಣಿ ಯಶಸ್ವಿಗೊಳಿಸುವ ಮೂಲಕ 2023ರಲ್ಲಿ ಕಾಂಗ್ರೆಸ್‌ ಪಕ್ಷವನ್ನು ಶತಾಯಗತಾಯ ಅಧಿಕಾರಕ್ಕೆ ತರಬೇಕು ಎಂದು ಕರೆ ನೀಡಿದರು.

ಭಾನುವಾರ ನಗರದ ಅರಮನೆ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುರ್ಜೇವಾಲಾ ನೇತೃತ್ವದಲ್ಲಿ ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ. ಶಿವಕುಮಾರ್‌ (DK Shivakumar), ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah), ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ಹಿರಿಯ ನಾಯಕರು ವೇದಿಕೆಯ ಮೇಲೆ ಸದಸ್ಯತ್ವ ನೋಂದಣಿ ಅರ್ಜಿ ತುಂಬುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಸುರ್ಜೇವಾಲಾ, ದೇಶದ ಪಾಲಿಗೆ ಸಂವಿಧಾನವೇ ಧರ್ಮ. ಸಂವಿಧಾನಕ್ಕಿಂತ ದೊಡ್ಡ ಧರ್ಮ ಬೇರೊಂದಿಲ್ಲ. ಸಂವಿಧಾನ ಇಂದು ಅಪಾಯದಲ್ಲಿದ್ದು, ಅದರ ರಕ್ಷಣೆಗೆ ರಾಜ್ಯ ಹಾಗೂ ದೇಶದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಬೇಕು. ಇದಕ್ಕಾಗಿ ಸದಸ್ಯತ್ವ ನೋಂದಣಿಯನ್ನು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.

ನಿಜವಾದ ಕಾಂಗ್ರೆಸ್ಸಿಗರು ಮದ್ಯಪಾನ ಮಾಡುವುದಿಲ್ಲ:   ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ (M Veerappa moily) ಮಾತನಾಡಿ, ನಿಜವಾದ ಕಾಂಗ್ರೆಸ್ಸಿಗರು ಮದ್ಯಪಾನ ಮಾಡುವುದಿಲ್ಲ, ಮಾಡಬಾರದು.

ಕಾಂಗ್ರೆಸ್ಸಿನಲ್ಲಿರುವವರು ಈವರೆಗೆ ಮಾಡುತ್ತಿದ್ದರೂ ಇನ್ನು ಮುಂದೆ ಮದ್ಯಪಾನ ತ್ಯಜಿಸುತ್ತೇವೆ ಎಂಬ ಪ್ರತಿಜ್ಞೆ ಮಾಡಿ ಎಂದು ಹೇಳಿದರು. ಮಾಜಿ ಕೇಂದ್ರ ಸಚಿವ ಕೆ.ಎಚ್‌. ಮುನಿಯಪ್ಪ ಮಾತನಾಡಿ ಮಹಾತ್ಮಾ ಗಾಂಧೀಜಿ ಹೆಸರು ಹೇಳುವವರು, ಗಾಂಧೀಜಿ ಹೇಳಿರುವ ಏಳರಲ್ಲಿ ಒಂದಾದರೂ ಸತ್ಯ ವ್ರತ ಪಾಲಿಸಬೇಕು. ನಾನು ಮದ್ಯ ಸೇವಿಸಿಲ್ಲ, ಸೇವಿಸಲ್ಲ ಎಂದರು.

ರಾಜ್ಯಾದ್ಯಂತ ಜನಜಾಗೃತಿ ಯಾತ್ರೆ: ಡಿಕೆಶಿ

ರಾಜ್ಯಾದ್ಯಂತ ಜನರಿಗೆ ಬೆಲೆ ಏರಿಕೆ, ಬಿಜೆಪಿ (BJP) ದುರಾಡಳಿತದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿ 3-4 ಕಿ.ಮೀ.ಪಾದಯಾತ್ರೆ ನಡೆಸುವ ಮೂಲಕ ಜನಜಾಗೃತಿ ಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಸೋನಿಯಾ ತಾಯಿ ಇದ್ದಂತೆ :  ರಾಷ್ಟ್ರೀಯ ಕಾಂಗ್ರೆಸ್‌ನ ನಾಯಕತ್ವ ಬದಲಾವಣೆಯ ಕುರಿತು ಪಕ್ಷದ 23 ಹಿರಿಯ ನಾಯಕರು ಸೋನಿಯಾ ಗಾಂಧಿ ಅವರಿಗೆ ಬರೆದ ಪತ್ರ ಸೋರಿಕೆಯಾದ ನಂತರ ಪಕ್ಷದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಮತ್ತು ಹೊರಗೆ ಹೊತ್ತಿಕೊಂಡ ‘ಬೆಂಕಿ’ ಆರಿಸಲು ಹಿರಿಯ ನಾಯಕರಾದ ಎಂ.ವೀರಪ್ಪ ಮೊಯ್ಲಿ ಮತ್ತು ಕಪಿಲ್‌ ಸಿಬಲ್‌  ಯತ್ನಿಸಿದ್ದರು. 

ಪಕ್ಷದ ಸಾಂಸ್ಥಿಕ ರಚನೆಯಲ್ಲಿ ಆಮೂಲಾಗ್ರ ಬದಲಾವಣೆ ತರಬೇಕೆಂದು ಆಗ್ರಹಿಸಿ ಪತ್ರ ಬರೆದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ (Rahul Gandi )ಸೇರಿದಂತೆ ಗಾಂಧಿ ಕುಟುಂಬದ ಕೆಂಗಣ್ಣಿಗೆ ಗುರಿಯಾದ 23 ನಾಯಕರಲ್ಲಿ ಮೊಯ್ಲಿ ಹಾಗೂ ಸಿಬಲ್‌ ಸೇರಿದ್ದಾರೆ.   ರಾಹುಲ್‌ರ ಕಟು ನುಡಿಗೆ ಬೇಸತ್ತು ತೀಕ್ಷ್ಣ ಪ್ರತಿಕ್ರಿಯೆ ನೀಡಿ, ನಂತರ ಅದನ್ನು ಹಿಂಪಡೆದಿದ್ದ ಕಪಿಲ್‌ ಸಿಬಲ್‌   ಮತ್ತೆ ಈ ಕುರಿತು ಟ್ವೀಟ್‌ ಮಾಡಿದ್ದು, ‘ಇದೆಲ್ಲ ಹುದ್ದೆಯ ಬಗ್ಗೆ ಅಲ್ಲ. ನಮಗೆ ಅತಿಹೆಚ್ಚು ಕಳಕಳಿಯಿರುವುದು ನಮ್ಮ ದೇಶದ ಬಗ್ಗೆ’ ಎಂದು ಚುಟುಕಾಗಿ, ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದಾರೆ.

ಬೇಸರವಾಗಿದ್ದರೆ ಕ್ಷಮೆ ಕೇಳುತ್ತೇವೆ:

ಇದೇ ವೇಳೆ, ಘಟನೆಯ ಕುರಿತು ಪ್ರತಿಕ್ರಿಯೆ ನೀಡಿದ ಮಾಜಿ ಮುಖ್ಯಮಂತ್ರಿ ಹಾಗೂ ಪಕ್ಷದ ಹಿರಿಯ ರಾಷ್ಟ್ರೀಯ ನಾಯಕ ಎಂ.ವೀರಪ್ಪ ಮೊಯ್ಲಿ, ನಾವು ಸೋನಿಯಾ ಗಾಂಧಿಯವರ (Sonia Gandhi) ಭಾವನೆಗಳಿಗೆ ನೋವು ತಂದಿದ್ದರೆ ಕ್ಷಮೆ ಕೇಳುತ್ತೇವೆ. ಅವರು ನಮ್ಮ ಪಕ್ಷಕ್ಕೆ ಮತ್ತು ನಮಗೆಲ್ಲ ತಾಯಿಯಿದ್ದಂತೆ. ಅವರ ನಾಯಕತ್ವವನ್ನು ನಾವು ಎಂದೂ ಪ್ರಶ್ನೆ ಮಾಡಿಲ್ಲ. ಪತ್ರಕ್ಕೆ ಸಹಿ ಮಾಡಿದ 23 ನಾಯಕರಲ್ಲಿ ಯಾರೊಬ್ಬರಿಗೂ ಪಕ್ಷ ತೊರೆಯುವ ಯೋಚನೆಯಾಗಲೀ, ಬಿಜೆಪಿಯ ಜೊತೆಗೆ ನಂಟಾಗಲೀ ಇಲ್ಲ ಎಂದು ಹೇಳಿದ್ದರು.

ಪಕ್ಷ ಇಂದು ಸಂಕಷ್ಟದ ಸಮಯವನ್ನು ಹಾದುಹೋಗುತ್ತಿದೆ. ಸಾಕಷ್ಟುಬದ್ಧತೆ ಹಾಗೂ ತ್ಯಾಗದಿಂದ ಕಟ್ಟಿದ ಪಕ್ಷವನ್ನು ಕಳೆದುಕೊಳ್ಳಲು ನಮಗೆ ಇಷ್ಟವಿಲ್ಲ. ಸೋನಿಯಾ ಮಾಡಿದ ತ್ಯಾಗ ನಮಗೆಲ್ಲರಿಗೂ ಗೊತ್ತು. ಹಿಂದೆ ಅವರು ಈ ಹುದ್ದೆ ಒಪ್ಪಿಕೊಳ್ಳುವುದಕ್ಕೇ ನಿರಾಕರಿಸಿದ್ದರು. ಆದರೆ, ನಂತರ ಪಕ್ಷಕ್ಕಾಗಿ ಜೀವನವನ್ನೇ ನೀಡಿದರು. ಅವರಿಗೆ ದ್ರೋಹ ಬಗೆಯಲು ಯಾರಿಂದಲೂ ಸಾಧ್ಯವಿಲ್ಲ. ಇಂದಿಗೂ ನಾವು ಅವರನ್ನು ತಾಯಿಯಂತೆ ಗೌರವಿಸುತ್ತೇವೆ. ಪಕ್ಷದ ಹಾಗೂ ದೇಶದ ಭವಿಷ್ಯಕ್ಕೆ ಅವರು ಮಾರ್ಗದರ್ಶನ ನೀಡಬೇಕೆಂದು ಬಯಸುತ್ತೇವೆ ಎಂದು ತಿಳಿಸಿದರು.

ಸೋನಿಯಾ ಬಗ್ಗೆ ನಮಗಿರುವ ಗೌರವ ಹೀಗೇ ಮುಂದುವರೆಯುತ್ತದೆ. ಆದರೆ, ಇದೇ ವೇಳೆ ಪಕ್ಷಕ್ಕೆ ಮರುಜೀವ ನೀಡಬೇಕಿದೆ. ಪಕ್ಷವನ್ನು ಎಲ್ಲಾ ಹಂತದಲ್ಲೂ ಪುನರುಜ್ಜೀವನಗೊಳಿಸುವುದು ನಮ್ಮ ಪತ್ರದ ಮುಖ್ಯ ಆಶಯವಾಗಿತ್ತು. ಅದರರ್ಥ ಸೋನಿಯಾ ಅಧ್ಯಕ್ಷೆಯಾಗಬಾರದು ಎಂದಲ್ಲ. ಅವರು ಮತ್ತೆ ಹಂಗಾಮಿ ಅಧ್ಯಕ್ಷರಾಗಿರುವುದು ಸ್ವಾಗತಾರ್ಹ. ನಾವೆಲ್ಲರೂ ಅವರನ್ನು ಪ್ರೀತಿಸುತ್ತೇವೆ ಎಂದು ಹೇಳಿದ್ದರು.

ಕಿತಾಪತಿಗಳಿಂದ ಪತ್ರ ಸೋರಿಕೆ:  ಪಕ್ಷದಲ್ಲಿರುವ ಕೆಲ ಕಿತಾಪತಿಗಳು ಈ ಪತ್ರವನ್ನು ಸೋರಿಕೆ ಮಾಡಿದ್ದಾರೆ. ಅದು ಎಲ್ಲಿಂದ ಸೋರಿಕೆಯಾಯಿತು ಎಂಬುದು ಗೊತ್ತಿಲ್ಲ. ಒಟ್ಟಿನಲ್ಲಿ ಸೋರಿಕೆ ಮಾಡಿದ್ದು ಸರಿಯಲ್ಲ. ಅದರ ಬಗ್ಗೆ ಪಕ್ಷದಲ್ಲಿ ಆಂತರಿಕ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಎಂದೂ ಮೊಯ್ಲಿ ಅಭಿಪ್ರಾಯಪಟ್ಟರು.

ಸಿಡಬ್ಲ್ಯುಸಿ ಸಭೆಯ ನಂತರ ಕಪಿಲ್‌ ಸಿಬಲ್‌ (Kapin sibal), ಶಶಿ ತರೂರ್‌ ಮುಂತಾದ ನಾಯಕರು ಸೋಮವಾರ ರಾತ್ರಿ ದೆಹಲಿಯ ಗುಲಾಂ ನಬಿ ಆಜಾದ್‌ ಮನೆಯಲ್ಲಿ ಸಭೆ ನಡೆಸಿದ್ದರ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ನಾನು ದೆಹಲಿಯಲ್ಲಿರಲಿಲ್ಲ. ಹೀಗಾಗಿ ಇದರ ಬಗ್ಗೆ ನನಗೆ ಗೊತ್ತಿಲ್ಲ. ಅದೇನೇ ಇದ್ದರೂ, ನಮಗ್ಯಾರಿಗೂ ಪಕ್ಷದಿಂದ ದೂರವಾಗುವ ಉದ್ದೇಶ ಇಲ್ಲ. ಬಿಜೆಪಿ ಜೊತೆ ಕೈಜೋಡಿಸುವ ಪ್ರಶ್ನೆಯಂತೂ ಬರುವುದೇ ಇಲ್ಲ. ನಾವು ಬಿಜೆಪಿಯನ್ನು ದ್ವೇಷಿಸುತ್ತೇವೆ. ನರೇಂದ್ರ ಮೋದಿಯವರ ನೀತಿಯನ್ನು ದ್ವೇಷಿಸುತ್ತೇವೆ’ ಎಂದಿದ್ದರು.

Follow Us:
Download App:
  • android
  • ios