ವರ್ಗಾವಣೆ ದಂಧೆ, ಬಹುಮತ, ಅನೈತಿಕ ಸರ್ಕಾರ ರಚನೆ ಹಾಗೂ ಹಿಂದಿನ ಸರ್ಕಾರಗಳಲ್ಲಿನ ಹಗರಣಗಳ ತನಿಖೆ’ ಬಗ್ಗೆ ಗುರುವಾರ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಡುವೆ ತೀವ್ರ ಜಟಾಪಟಿ ನಡೆಯಿತು.

ವಿಧಾನಸಭೆ (ಜು.14) :  ‘ವರ್ಗಾವಣೆ ದಂಧೆ, ಬಹುಮತ, ಅನೈತಿಕ ಸರ್ಕಾರ ರಚನೆ ಹಾಗೂ ಹಿಂದಿನ ಸರ್ಕಾರಗಳಲ್ಲಿನ ಹಗರಣಗಳ ತನಿಖೆ’ ಬಗ್ಗೆ ಗುರುವಾರ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಡುವೆ ತೀವ್ರ ಜಟಾಪಟಿ ನಡೆಯಿತು.

ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ತಮ್ಮ ಸರ್ಕಾರವನ್ನು ಸಮರ್ಥಿಸಿಕೊಳ್ಳುತ್ತಾ ಹಿಂದಿನ ಸರ್ಕಾರದ ಅಕ್ರಮಗಳು, ಆಪರೇಷನ್‌ ಕಮಲದ ಬಗ್ಗೆ ಕಿಡಿ ಕಾರಿದರು. ಈ ಬಗ್ಗೆ ಪ್ರತಿ ಹಂತದಲ್ಲೂ ತಿರುಗೇಟು ನೀಡಿದ ಬಸವರಾಜ ಬೊಮ್ಮಾಯಿ ಅವರು, ಬಿಜೆಪಿಯನ್ನು ಬಲವಾಗಿ ಸಮರ್ಥಿಸಿಕೊಂಡು ಕಾಂಗ್ರೆಸ್‌ ಪಕ್ಷ ಹಾಗೂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.

News Hour: ವಿಧಾನಸಭೆಯಲ್ಲಿ ಇಂದು ವರ್ಗಾವಣೆ ಜಟಾಪಟಿ!

1. ಹಗರಣಗಳ ತನಿಖೆ ಜಟಾಪಟಿ

ಸಿದ್ದರಾಮಯ್ಯ ಮಾತನಾಡಿ, ‘ಹಿಂದಿನ ಸರ್ಕಾರದ ಅಕ್ರಮಗಳ ತನಿಖೆಗೆ ವಹಿಸಿ ಎಸ್‌ಐಟಿ ರಚಿಸಿದ್ದೇವೆ. ಬೊಮ್ಮಾಯಿ ಅವರು 2013ರಿಂದಲೂ ತನಿಖೆ ನಡೆಸಿ ಎನ್ನುತ್ತಿದ್ದಾರೆ. ನೀವು ಕಳೆದ 3 ವರ್ಷ 10 ತಿಂಗಳ ಕಾಲ ಏನು ಮಾಡುತ್ತಿದ್ದಿರಿ? ಆಗ ಯಾಕೆ ತನಿಖೆ ನಡೆಸಲಿಲ್ಲ? ನಾವು 1947ರಿಂದಲೂ ತನಿಖೆ ನಡೆಸಲು ಬರುತ್ತದೆಯೇ? ನೀವು ನಮ್ಮ ಮೇಲೆ ತನಿಖೆ ನಡೆಸಲು ಯಾವುದೇ ಭ್ರಷ್ಟಾಚಾರದ ಆರೋಪದ ದಾಖಲೆಗಳಿರಲಿಲ್ಲ. ಹೀಗಾಗಿ ನಾವು 2013ರಿಂದ 18ರವರಗೆ ಹಗರಣ ಮುಕ್ತ ಸರ್ಕಾರ ನೀಡಿದ್ದೇವೆ ಎಂಬುದು ಸಾಬೀತಾಗಿದೆ’ ಎಂದು ಸಮರ್ಥಿಸಿಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ‘ನಾವು ರಾಜಕೀಯ ದ್ವೇಷದಿಂದ ಪ್ರತ್ಯೇಕ ಎಸ್‌ಐಟಿ ಮಾಡಿ ತನಿಖೆಗೆ ವಹಿಸಿಲ್ಲ. ಆದರೆ ನೀವು ನಿಷ್ಕಿ್ರಯ ಮಾಡಿದ್ದ ಲೋಕಾಯುಕ್ತಕ್ಕೆ ಬಲ ನೀಡಿ ನಿಮ್ಮ ಅವಧಿಯಲ್ಲಿನ ಎಲ್ಲಾ ಪ್ರಕರಣಗಳನ್ನೂ ಲೋಕಾಯುಕ್ತ ತನಿಖೆಗೆ ವಹಿಸಿದ್ದೇವೆ. ಎಲ್ಲವೂ ತನಿಖೆ ನಡೆಯುತ್ತಿದ್ದು ಸದ್ಯದಲ್ಲೇ ಹೊರ ಬರುತ್ತವೆ. ಎಸಿಬಿ ರಚನೆ ಮೂಲಕ ನೀವು ಲೋಕಾಯುಕ್ತ ನಿಷ್ಕಿ್ರಯ ಮಾಡಿದ್ದಿರಿ. ಇಲ್ಲರಿದ್ದರೆ ಆಗಲೇ ನಿಮ್ಮ ಹಗರಣಗಳು ಹೊರ ಬರುತ್ತಿದ್ದವು’ ಎಂದು ತಿರುಗೇಟು ನೀಡಿದರು.

ಈ ವೇಳೆ ಸಿದ್ದರಾಮಯ್ಯ ಅವರು, ‘ಬಿಜೆಪಿ ರಾಜ್ಯಗಳಲ್ಲಿ ಎಸಿಬಿ ಇದೆ. ನಾವು ಲೋಕಾಯುಕ್ತ ನಿಷ್ಕಿ್ರಯ ಮಾಡಿಲಿಲ್ಲ. ನಾವು ಅಧಿಕಾರಕ್ಕೆ ಬಂದ ತಕ್ಷಣ ಎಸಿಬಿ ರದ್ದು ಎಂದು ನ್ಯಾಯಾಲಯ ಹೇಳುವವರೆಗೂ ನೀವು ಮಾಡಿಲ್ಲ. ಹೀಗಾಗಿ ಎಸಿಬಿ ರದ್ದು ಮಾಡಿದ್ದು ನೀವಲ್ಲ’ ಎಂದು ಹೇಳಿದಾಗ ವಾದ- ಪ್ರತಿ ವಾದ ನಡೆಯಿತು.

2. ವರ್ಗಾವಣೆ ವಾಗ್ವಾದ:

ಇದೇ ವೇಳೆ ಸಿದ್ದರಾಮಯ್ಯ, ವರ್ಗಾವಣೆ ದಂಧೆ ನಡೆದಿರುವುದಾಗಿ ಬಸವರಾಜ ಬೊಮ್ಮಾಯಿ ಹಾಗೂ ಎಚ್‌.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ. ಪ್ರತಿ ನೂತನ ಸರ್ಕಾರ ಬಂದಾಗ ವರ್ಗಾವಣೆ ಮಾಡುವುದು ಸಹಜ. ಆದರೆ ದಂಧೆ ನಡೆದಿದೆ ಎಂಬ ಅವರ ಹೇಳಿಕೆಯನ್ನು ಖಂಡ ತುಂಡವಾಗಿ ಅಲ್ಲಗೆಳೆಯುತ್ತೇನೆ. ನನ್ನ ಇಲಾಖೆಯಲ್ಲಿ ಒಂದೂ ವರ್ಗಾವಣೆ ಮಾಡಿಯೇ ಇಲ್ಲ. ಹೀಗಾಗಿ ಭ್ರಷ್ಟಾಚಾರ ನಡೆಯಲು ಸಾಧ್ಯವೇ ಇಲ್ಲ. ನಮಗೆ ಗೊತ್ತಿಲ್ಲದೆ ರೀತಿಯಲ್ಲಿ ಯಾರಾದರೂ ಮಾಡಿರಬಹುದು. ಗೊತ್ತಿದ್ದೂ ಭ್ರಷ್ಟಾಚಾರ ಆಗಲು ಸಾಧ್ಯವಿಲ್ಲ ಎಂದು ಹೇಳಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬೊಮ್ಮಾಯಿ, ‘ನಾವು ವರ್ಗಾವಣೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ್ದೇವೆ. ನಿಮ್ಮ ಇಲಾಖೆ ಬಗ್ಗೆ ಸೀಮಿತವಾಗಿ ಆರೋಪ ಮಾಡಿಲ್ಲ. ವರ್ಗಾವಣೆಗಳು ಇಡೀ ಸರ್ಕಾರದಲ್ಲಿ ನಡೆಯುತ್ತಿವೆ. ನಿಮಗೆ ಗೊತ್ತಿಲ್ಲದೆ ಆಗಿರುವ ವರ್ಗಾವಣೆ ಭ್ರಷ್ಟಾಚಾರಕ್ಕೆ ನೀವು ಉತ್ತರದಾಯಿ ಆಗುವುದಿಲ್ಲವೇ?’ ಎಂದು ತಿರುಗೇಟು ನೀಡಿದರು.

3. ಬಹುಮತ ಸರ್ಕಾರ ಗುದ್ದಾಟ

ಬಹುಮತದ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, 2004ರಿಂದ ಈವರೆಗೆ ಬಿಜೆಪಿಗೆ ಜನರ ಬೆಂಬಲ ಕುಸಿಯುತ್ತಾ ಬಂದಿದ್ದು ಕಾಂಗ್ರೆಸ್‌ಗೆ ಹೆಚ್ಚಾಗುತ್ತಾ ಬಂದಿದೆ. ಈವರೆಗೆ ಬಿಜೆಪಿಯು ಒಮ್ಮೆಯೂ ಬಹುಮತ ಪಡೆದು ಜನರ ಆಶೀರ್ವಾದದೊಂದಿಗೆ ಸರ್ಕಾರ ರಚನೆ ಮಾಡಿಲ್ಲ. ಆಪರೇಷನ್‌ ಕಮಲದಂತಹ ಅನೈತಿಕವಾಗಿಯೇ ಸರ್ಕಾರ ರಚನೆ ಮಾಡಿದ್ದಾರೆ. ಯಾವುದಾದರೂ ಒಂದು ಚುನಾವಣೆಯಲ್ಲಿ ಬಹುಮತ ಸಿಕ್ಕಿದೆಯೇ? ಜನರ ಆಶೀರ್ವಾದ ಪಡೆದು ಅಧಿಕಾರಕ್ಕೆ ಬಂದಿದ್ದೀರಾ? ಎಂದು ಪ್ರಶ್ನಿಸಿದರು.

ಇದಕ್ಕೆ ಬೊಮ್ಮಾಯಿ ಅವರು, ರಾಜ್ಯದಲ್ಲಿ ಆಪರೇಷನ್‌ ಹಸ್ತ ಸಿದ್ದರಾಮಯ್ಯ ಅವರಿಂದಲೇ ಆರಂಭವಾಗಿದ್ದು, 2007 ರಲ್ಲಿ ನೀವು ಜೆಡಿಎಸ್‌ ತೊರೆದು ರಾಜಿನಾಮೆ ಕೊಟ್ಟು ಕಾಂಗ್ರೆಸ್‌ ಸೇರಿ ಚುನಾವಣೆ ಗೆದ್ದು ಬಂದಿದ್ದಿರಿ, ಅದೇ ರೀತಿ ಅವರೂ ಮಾಡಿದ್ದಾರೆ. ಇನ್ನು ನೀವು ಅಧಿಕಾರದಲ್ಲಿದ್ದಾಗ ರಾಜ್ಯಸಭೆ ಚುನಾವಣೆಗಾಗಿ ಜೆಡಿಎಸ್‌ ಸದಸ್ಯರನ್ನು ಸೆಳೆಯಲಿಲ್ಲವೇ? ಅವರಿಗೂ ನಿಮಗೂ ಏನು ವ್ಯತ್ಯಾಸ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು.

ಈ ವೇಳೆ ನನ್ನನ್ನು ಜೆಡಿಎಸ್‌ ಉಚ್ಚಾಟಿಸಿದ ಬಳಿಕ ನಾನು ಆಗ ಅಧಿಕಾರದಲ್ಲಿ ಇಲ್ಲದ ಕಾಂಗ್ರೆಸ್‌ಗೆ ಹೋಗಿದ್ದೇನೆ ಎಂದು ಸಿದ್ದರಾಮಯ್ಯ ಸಮರ್ಥಿಸಿಕೊಂಡರು.

ಮಾತು ಮುಂದುವರೆಸಿದ ಬೊಮ್ಮಾಯಿ, ಕಾಂಗ್ರೆಸ್‌ ಪಕ್ಷ 80 ರ ನಂತರ ಒಮ್ಮೆ ಅಧಿಕಾರಕ್ಕೆ ಬಂದ ಮೇಲೆ ಮತ್ತೆ ಸತತ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದಿಲ್ಲ. ನಿಮ್ಮ ಪರಿಸ್ಥಿತಿಯೂ ಹಾಗೇ ಇದೇ. 2013 ರಲ್ಲಿ ಅಧಿಕಾರ ನಡೆಸಿ ಎಲ್ಲ ಭಾಗ್ಯಗಳನ್ನು ಕೊಟ್ಟರೂ ನೀವು ಯಾಕೆ ಸೋತಿರಿ, ನಿಮ್ಮನ್ನೂ ಜನರು ತಿರಸ್ಕರಿಸಿದ್ದರು. ಕಾಂಗ್ರೆಸ್‌ ಹಲವರು ಬಾರಿ ಬೇರೆ ಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ಮಾಡಿದೆ. ಅದು ಅನೈತಿಕವಲ್ಲವೇ? ಎಂದು ತಿರುಗೇಟು ನೀಡಿದರು. ಈ ವೇಳೆ ಕಾಂಗ್ರೆಸ್‌ ಹಾಗೂ ಬಿಜೆಪಿ ಸದಸ್ಯರ ನಡುವೆ ತೀವ್ರ ಗದ್ದಲ ನಡೆಯಿತು.

ಸರ್ಕಾರದಿಂದ ವರ್ಗಾವಣೆ ಮಾರುಕಟ್ಟೆ, ಶಾಸಕರ ಭವನ, ಅತಿಥಿ ಗೃಹವೇ ದಂಧೆಯ ಕೇಂದ್ರ ಬಿಂದು: ಬೊಮ್ಮಾಯಿ

ಒಂದು ಹಂತದಲ್ಲಿ ಸಿದ್ದರಾಮಯ್ಯ ಅವರು, ‘12 ದಿನದ ಆದರೂ ನಿಮ್ಮ ಪಕ್ಷವು ಪ್ರತಿಪಕ್ಷ ನಾಯಕನ ನೇಮಕ ಮಾಡಿಲ್ಲ. ಆದರೆ, ಬಸವರಾಜ ಬೊಮ್ಮಾಯಿ ಅವರು ಆ್ಯಕ್ಟಿಂಗ್‌ ಪ್ರತಿಪಕ್ಷ ನಾಯಕರಾಗಿ ಸಮರ್ಥವಾಗಿ ಕೆಲಸ ಮಾಡುತ್ತಿದ್ದಾರೆ’ ಎಂದೂ ಹೇಳಿದರು.