Asianet Suvarna News Asianet Suvarna News

ಮಂಗಳೂರು- ಗೋವಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಘೋರ ದುರಂತ: ನದಿಯಲ್ಲಿ ತೇಲಿ ಹೋದ ಗ್ಯಾಸ್​​ ಟ್ಯಾಂಕರ್!

ಈ ಬಾರಿ ಮುಂಗಾರು ಮಳೆ ಅಬ್ಬರ ಆರಂಭವಾದಾಗಿನಿಂದ ಪದೇ ಪದೇ ಗುಡ್ಡಕುಸಿತಕ್ಕೆ ಸಾಕ್ಷಿಯಾಗುತ್ತಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ಭಾರೀ ದುರಂತವೊಂದು ಸಂಭವಿಸಿದೆ. 

Tragedy on Mangalore Goa National Highway Gas tanker floated in river gvd
Author
First Published Jul 17, 2024, 10:35 AM IST | Last Updated Jul 17, 2024, 10:42 AM IST

ಕಾರವಾರ (ಜು.17): ಈ ಬಾರಿ ಮುಂಗಾರು ಮಳೆ ಅಬ್ಬರ ಆರಂಭವಾದಾಗಿನಿಂದ ಪದೇ ಪದೇ ಗುಡ್ಡಕುಸಿತಕ್ಕೆ ಸಾಕ್ಷಿಯಾಗುತ್ತಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ಭಾರೀ ದುರಂತವೊಂದು ಸಂಭವಿಸಿದೆ. ಅಂಕೋಲಾ ತಾಲೂಕಿನ ಶಿರೂರು ಬಳಿ ಚತುಷ್ಪಥ ಹೆದ್ದಾರಿ(ಮಂಗಳೂರು-ಗೋವಾ ಹೆದ್ದಾರಿ)ಗೆ ಹೊಂದಿಕೊಂಡಂತಿರುವ 125ಕ್ಕೂ ಹೆಚ್ಚು ಅಡಿ ಎತ್ತರದ ಗುಡ್ಡ ಕುಸಿದು ಮನೆ, ಚಹಾ ಅಂಗಡಿ ಮೇಲೆ ಬಿದ್ದು ಒಂದೇ ಕುಟುಂಬದ ಐವರು ಸೇರಿ 10 ಮಂದಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. 

ಈಗಾಗಲೇ ನಾಲ್ವರ ಶವ ಪತ್ತೆಯಾಗಿದ್ದು, ಉಳಿದವರ ಶವಕ್ಕಾಗಿ ಹುಡುಕಾಟ ಮುಂದುವರಿದಿದೆ.  7 ಮಂದಿ ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುಡ್ಡಕುಸಿತದ ತೀವ್ರತೆಗೆ ಕಲ್ಲು, ಮಣ್ಣುಗಳ ರಾಶಿ ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಟ್ಯಾಂಕರ್‌ವೊಂದರ ಸಮೇತ ಎದುರಿಗೆ ಸಿಕ್ಕ ಎಲ್ಲವನ್ನೂ ನೇರವಾಗಿ ರಸ್ತೆಯ ಇನ್ನೊಂದು ಭಾಗದಲ್ಲಿದ್ದ ಗಂಗಾವಳಿ ನದಿಯ ಅರ್ಧ ಭಾಗದವರೆಗೆ ತಳ್ಳಿಕೊಂಡು ಹೋಗಿ ಎಸೆದಿದೆ. ಇದರಿಂದ ಅನಿಲ ಟ್ಯಾಂಕರ್‌ವೊಂದು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದೆ. 

ಕರಾವಳಿ, ಮಲೆನಾಡಲ್ಲಿ ಭಾರಿ ಮಳೆ, ನಷ್ಟ: ನೂರಾರು ಮನೆಗಳಿಗೆ ಹಾನಿ

ಮಣ್ಣು, ಕಲ್ಲಿನ ರಾಶಿ ಅರ್ಧ ನದಿವರೆಗೆ ರಾಶಿ ಬಿದ್ದಿದ್ದರಿಂದ ನದಿಯ ಇನ್ನೊಂದು ಭಾಗಕ್ಕೆ ಸುನಾಮಿಯ ರೀತಿ ನೀರು ನುಗ್ಗಿದ್ದು, ಉಳುವರೆ ಗ್ರಾಮದ ಐದು ಮನೆಗಳಿಗೆ ಹಾನಿಯಾಗಿದೆ. ಈ ವೇಳೆ ಮನೆಯಲ್ಲಿದ್ದ ಮಹಿಳೆಯೊಬ್ಬರು ನಾಪತ್ತೆಯಾಗಿದ್ದು, 16 ಮಂದಿ ಗಾಯಗೊಂಡಿದ್ದಾರೆ. ಈ ಮಧ್ಯೆ ಘಟನೆಯಲ್ಲಿ ನಾಪತ್ತೆಯಾಗಿದ್ದವರ ಪೈಕಿ ನಾಲ್ವರ ಶವ ಗೋಕರ್ಣ ಸಮೀಪ ಸಮುದ್ರದಲ್ಲಿ ಪತ್ತೆಯಾಗಿದೆ. ಈ ವೇಳೆ ಸಮುದ್ರದಲ್ಲಿ ಕೊಚ್ಚಿಕೊಂಡು ಹೋಗಿರುವ ಅನಿಲದ ಟ್ಯಾಂಕರ್‌ನಿಂದಾಗಿ ನದಿ ತೀರದಲ್ಲಿ ಅನಿಲ ಸೋರಿಕೆಯ ಆತಂಕ ವ್ಯಕ್ತವಾಗಿದೆ.

ಆಗಿದ್ದೇನು?: ಅಂಕೋಲಾ ತಾಲೂಕಿನ ಶಿರೂರು ಬಳಿ ಮಂಗಳೂರು-ಗೋವಾ ಚತುಷ್ಪಥ ಹೆದ್ದಾರಿ ರಾಷ್ಟ್ರೀಯ ಹೆದ್ದಾರಿ ಮೇಲೆ ಬೆಳಗ್ಗೆ 8 ಗಂಟೆ ಸುಮಾರಿಗೆ ಏಕಾಏಕಿ 125 ಅಡಿ ಎತ್ತರದ ಗುಡ್ಡವೊಂದು ಕುಸಿದು ಬಿದ್ದಿದೆ. ಈ ವೇಳೆ ಆ ಗುಡ್ಡದ ಕೆಳಗಿದ್ದ ಮನೆ ಮತ್ತು ಆ ಮನೆಯವರೇ ನಡೆಸುತ್ತಿದ್ದ ಕ್ಯಾಂಟಿನ್‌ ಮಣ್ಣಿನಲ್ಲಿ ಮುಚ್ಚಿ ಹೋಗಿದೆ. ರಸ್ತೆ ಪಕ್ಕ ನಿಲ್ಲಿಸಿದ್ದ ಒಂದು ಅನಿಲದ ಟ್ಯಾಂಕರ್‌ ರಸ್ತೆಯ ಇನ್ನೊಂದು ಭಾಗದಲ್ಲಿರುವ ಗಂಗಾವಳಿ ನದಿಗೆ ಎಸೆಯಲ್ಪಟ್ಟಿದೆ.

ಮನೆಯಲ್ಲಿದ್ದ ಲಕ್ಷ್ಮಣ ಬೊಮ್ಮಯ್ಯ ನಾಯ್ಕ,(45), ಪತ್ನಿ ಶಾಂತಿ ನಾಯ್ಕ ಲಕ್ಷ್ಮಣ ನಾಯ್ಕ್‌(35), ಪುತ್ರ ರೋಷನ್‌ ನಾಯ್ಕ್‌(10), ಪುತ್ರಿ ಅವಂತಿಕಾ(5) ಹಾಗೂ ಇವರ ಸಂಬಂಧಿ ಉಪೇಂದ್ರ (50) ಮತ್ತು ಟೀ ಕುಡಿಯಲು ಬಂದಿದ್ದ ಟ್ಯಾಂಕರ್ ಚಾಲಕ ಮಣ್ಣಿನ ರಾಶಿಯೊಂದಿಗೆ ಗಂಗಾವತಿ ನದಿಗೆ ಎಸೆಯಲ್ಪಟ್ಟಿದ್ದಾರೆ ಎನ್ನಲಾಗಿದೆ. ಘಟನೆಯ ತೀವ್ರತೆ ಎಷ್ಟಿತ್ತೆಂದರೆ ಗುಡ್ಡದ ಕೆಳಗಿದ್ದ ಮನೆ, ಕ್ಯಾಂಟೀನ್‌ ಹಾಗೂ ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಅನಿಲ ಟ್ಯಾಂಕರ್‌ ಹೀಗೆ ಎದುರಿಗೆ ಸಿಕ್ಕಿದ್ದನ್ನೆಲ್ಲ ಮಣ್ಣು, ಕಲ್ಲುಗಳ ರಾಶಿ ತನ್ನ ಜತೆಗೆ 200 ಮೀಟರ್‌ ದೂರದವರೆಗೆ ಎಳೆದೊಯ್ದಿದೆ. ರಸ್ತೆಯ ಇನ್ನೊಂದು ಭಾಗದಲ್ಲಿರುವ ಗಂಗಾವಳಿ ನದಿಯ ಮಧ್ಯಭಾಗದವರೆಗೆ ಟ್ಯಾಂಕರ್‌ ಸಮೇತ ಎಸೆದಿದೆ.

ಸುನಾಮಿ ರೀತಿ ಪ್ರವಾಹ: ಗುಡ್ಡಕುಸಿತದ ಬಳಿಕ ಕಲ್ಲು, ಮಣ್ಣುಗಳ ರಾಶಿ ಗಂಗಾವತಿ ನದಿಯ ಅರ್ಧಭಾಗದವರೆಗೆ ತಳ್ಳಿಕೊಂಡು ಹೋಗಿದ್ದರಿಂದ ನದಿಯ ಇನ್ನೊಂದು ಭಾಗದಲ್ಲಿ ಸುನಾಮಿಯ ರೀತಿಯಲ್ಲಿ ಪ್ರವಾಹ ಕಾಣಿಸಿಕೊಂಡಿದ್ದು, ಉಳುವರೆ ಗ್ರಾಮದ ಐದು ಮನೆಗಳಿಗೆ ಹಾನಿಯಾಗಿದೆ. ಆಗ ಮನೆಯಲ್ಲಿದ್ದ ಸಣ್ಣು ಹನುಮಂತ ಗೌಡ ಎಂಬ ಮಹಿಳೆ ನಾಪತ್ತೆಯಾಗಿದ್ದು, 16 ಮಂದಿ ಗಂಭೀರ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಗೋಕರ್ಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗ್ಯಾಸ್‌ ಸೋರಿಕೆ ಆತಂಕ: ನದಿಗೆಸೆಯಲ್ಟಟ್ಟ ಟ್ಯಾಂಕರ್‌ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದು ಇದೀಗ ನದಿ ಪಕ್ಕದ ಗ್ರಾಮಸ್ಥರಲ್ಲಿ ಗ್ಯಾಸ್‌ ಸೋರಿಕೆಯ ಆತಂಕ ಶುರುವಾಗಿದೆ. ಆದರೆ, ಜಿಲ್ಲಾಧಿಕಾರಿ ಮಾತ್ರ ಇಂಥ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ. ಎನ್‌ಡಿಆರ್‌ಎಫ್‌ ಜತೆಗೆ ಮಂಗಳೂರಿನ ತಜ್ಞರನ್ನು ಕರೆದುಕೊಂಡು ಬರಲಾಗಿದ್ದು, ಅವರು ಸುರಕ್ಷಿತವಾಗಿ ಟ್ಯಾಂಕರ್‌ ಮೇಲೆತ್ತುವ ಪ್ರಯತ್ನ ನಡೆಸಲಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ನದಿ ತೀರದ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ.

ಪ್ರಜ್ವಲ್‌ ತಪ್ಪು ಮಾಡಿದ್ದರೆ ಗಲ್ಲಿಗೇರಿಸಿ: ಸದನದಲ್ಲಿ ಎಚ್.ಡಿ.ರೇವಣ್ಣ ಭಾವುಕ

ಕಾರು ಸಿಕ್ಕಿಹಾಕಿಕೊಂಡಿರೋ ಸಾಧ್ಯತೆ: ಘಟನೆ ನಡೆದಾಗ ಇದೇ ರಸ್ತೆಯಲ್ಲಿ ಕಾರೊಂದು ಸಾಗುತ್ತಿತ್ತು ಎಂದು ಪ್ರತ್ಯಕ್ಷ ದರ್ಶಿಯೊಬ್ಬರು ಹೇಳಿದ್ದು, ಅದು ಕೂಡ ಮಣ್ಣಿನ ರಾಶಿಯಡಿ ಸಿಲುಕಿರುವ ಶಂಕೆ ಇದೆ. ಇದು ನಿಜವಾಗಿದ್ದರೆ ಸಾವಿನ ಸಂಖ್ಯೆ ಮತ್ತಷ್ಚು ಹೆಚ್ಚಾಗಲಿದೆ. ಹೆದ್ದಾರಿ ಕಾಮಗಾರಿಗಾಗಿ ಅವೈಜ್ಞಾನಿಕವಾಗಿ ಗುಡ್ಡ ಕತ್ತರಿಸಲಾಗಿತ್ತು. ಈ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಮಣ್ಣು ಸಡಿಲಗೊಂಡು ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ.

Latest Videos
Follow Us:
Download App:
  • android
  • ios