ಕರಾವಳಿ, ಮಲೆನಾಡಲ್ಲಿ ಉಕ್ಕಿದ ನದಿಗಳು, ಪ್ರವಾಹ: ನೂರಾರು ಮನೆಗಳಿಗೆ ಹಾನಿ
ರಾಜ್ಯದ ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ 2-3 ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ಮಂಗಳವಾರವೂ ಮುಂದುವರಿದಿದೆ. ಮಳೆಯಿಂದಾಗಿ ಪ್ರವಾಹ, ಗುಡ್ಡ ಕುಸಿತ ಉಂಟಾಗುತ್ತಿದೆ.
ಬೆಂಗಳೂರು (ಜು.17): ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಎರಡೂರು ದಿನಗಳಿಂದ ಕಾಣಿಸಿಕೊಂಡಿರುವ ಮುಂಗಾರು ಮಳೆಯಬ್ಬರ ಮಂಗಳವಾರವೂ ಮುಂದುವರಿದಿದೆ. ಭಾರೀ ಮಳೆ, ಪ್ರವಾಹ ಹಾಗೂ ಗುಡ್ಡಕುಸಿತದಿಂದಾಗಿ ಉತ್ತರ ಕನ್ನಡ ಜಿಲ್ಲೆಯ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, 2 ಸಾವಿರಕ್ಕೂ ಹೆಚ್ಚು ಮಂದಿಯನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಇನ್ನು ಚಿಕ್ಕಮಗಳೂರಿನ ಶೃಂಗೇರಿ ಪಟ್ಟಣ ತುಂಗಾ ಪ್ರವಾಹದಿಂದಾಗಿ ಜಲದಿಗ್ಧಂಧನಕ್ಕೊಳಗಾಗಿದೆ.
ಮಳೆಯ ನಡುವೆಯೇ ಉತ್ತರ ಕನ್ನಡ, ಚಿಕ್ಕಮಗ ಳೂರು, ಕೊಡಗು ಜಿಲ್ಲೆಗಳಲ್ಲಿ ಹಲವೆಡೆ ಗುಡ್ಡಕುಸಿತದ ಪ್ರಕರಣಗಳೂ ಸಂಭವಿಸಿ, ಆತಂಕ ಸೃಷ್ಟಿಸಿದೆ. ಮಡಿ ಕೇರಿಯಲ್ಲಿ ಶಾಲೆಯೊಂದರ ಮೇಲೆ ಗುಡ್ಡಕುಸಿದು ಹಾನಿಯಾಗಿದ್ದರೆ, ಕಾರವಾರದಲ್ಲಿ ಮನೆಯೊಂದರ ಮೇಲೆ ಗುಡ್ಡಕುಸಿದು ಅವಶೇಷಗಳಡಿ ಸಿಲುಕಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
ಎಟಿಎಂ ಸಿಬ್ಬಂದಿಯಿಂದಲೇ 16 ಲಕ್ಷ ಲೂಟಿ: ದರೋಡೆ ಪ್ರಕರಣಕ್ಕೆ ಮಹತ್ವದ ತಿರುವು!
ಉತ್ತರ ಕನ್ನಡ ತತ್ತರ: ಹಲವು ದಿನಗಳಿಂದ ಸುರಿಯುತ್ತಿ ರುವ ಮಳೆಯಿಂದಾಗಿ ಉತ್ತರ ಕನ್ನಡ ಜಿಲ್ಲೆಯ ಅಘನಾಶಿನಿ, ಗಂಗಾವಳಿ ಸೇರಿ ಹಲವು ನದಿಗಳಲ್ಲಿ ಪ್ರವಾಹಕಾಣಿಸಿಕೊಂಡಿದ್ದು ಪ್ರಮುಖ ರಸ್ತೆಗಳೆಲ್ಲವೂ ಬಂದ್ ಆಗಿ ಜಿಲ್ಲೆಯ ಕರಾವಳಿ ಭಾಗ ಅಕ್ಷರಶಃ ದ್ವೀಪ ದಂತಾಗಿದೆ. ಕರಾವಳಿಯ ಐದೂ ತಾಲೂಕುಗಳಲ್ಲಿ ಬಹುತೇಕ ಕಡೆ ಜಲಾವೃತ ಪರಿಸ್ಥಿತಿ ಇದ್ದು, ಜನ ಮನೆಯಿಂದ ಹೊರಬರಲಾಗದಂಥ ಸ್ಥಿತಿ ನಿರ್ಮಾಣ ವಾಗಿದೆ. 20ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.
ರಾಜ್ಯದ ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ 2-3 ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ಮಂಗಳವಾರವೂ ಮುಂದುವರಿದಿದೆ. ಮಳೆಯಿಂದಾಗಿ ಪ್ರವಾಹ, ಗುಡ್ಡ ಕುಸಿತ ಉಂಟಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದ್ದು 2000ಕ್ಕೂ ಹೆಚ್ಚು ಮಂದಿಯನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ನೂರಾರು ಮನೆಗಳಿಗೆ ಹಾನಿಯಾಗಿದೆ.
ಮಲೆನಾಡು ತತ್ತರ: ಪುನರ್ವಸು ಮಳೆಯ ಆರ್ಭಟಕ್ಕೆ ಕಾಫಿಯ ನಾಡು ತತ್ತರಿಸಿದ್ದು, ಶ್ರೀ ಶಾರದಾಂಬೆಯ ತವರೂರು ಶೃಂಗೇರಿ ಜಲ ದಿಗ್ಬಂಧನಕ್ಕೆ ಒಳಗಾಗಿದೆ. ಹಲವು ಪ್ರಮುಖ ರಸ್ತೆಗಳು ಸೇರಿ ತಗ್ಗಿನ ಪ್ರದೇಶಗಳು ಜಲಾವ್ರತವಾಗಿವೆ. ಮರಗಳು ರಸ್ತೆಗೆ ಉರುಳಿ ಬಿದ್ದ ಪರಿಣಾಮ ಹಲವೆಡೆ ಧರೆ ಕುಸಿತದಿಂದ ರಸ್ತೆ ಸಂಪರ್ಕ ಕಡಿತವಾಗಿದೆ. ಬಲವಾಗಿ ಬೀಸುತ್ತಿರುವ ಗಾಳಿಗೆ ವಿದ್ಯುತ್ ಕಂಬಗಳು ಬಿದ್ದಿದ್ದರಿಂದ ಮಲೆನಾಡಿನ ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಕಳೆದ 24 ಗಂಟೆಗಳಲ್ಲಿ ವರುಣನ ರೌದ್ರನರ್ತನಕ್ಕೆ ತುಂಗಾ, ಭದ್ರಾ ಹಾಗೂ ಹೇಮಾವತಿ ನದಿಗಳು, ಹಳ್ಳಗಳು ಅಪಾಯ ಮಟ್ಟ ಮೀರಿ ಹರಿಯುತ್ತಿವೆ. ಹೊಲಗದ್ದೆಗಳು, ರಸ್ತೆಗಳು ಜಲಾವ್ರತವಾಗಿವೆ. ಶೃಂಗೇರಿ ಪಟ್ಟಣದಲ್ಲಿ 165 ಮಿ.ಮೀ ಮಳೆಯಾಗಿದ್ದರೆ, ಕಿಗ್ಗಾದಲ್ಲಿ 256.4 ಹಾಗೂ ಕೆರೆಕಟ್ಟೆಯಲ್ಲಿ 280 ಮಿ.ಮೀ. ಮಳೆಯಾಗಿದ್ದರಿಂದ ತುಂಗಾ ನದಿಯ ನೀರಿನ ಮಟ್ಟದಲ್ಲಿ ದಿಢೀರ್ ಏರಿಕೆಯಾದ ಪರಿಣಾಮ ಶೃಂಗೇರಿ ಪಟ್ಟಣ ಮಂಗಳವಾರ ಜಲ ದಿಗ್ಬಂಧನಕ್ಕೆ ಒಳಗಾಗಿತ್ತು.
ನೆಮ್ಮಾರ್ ಬಳಿ ಶೃಂಗೇರಿ-ಮಂಗಳೂರು ರಸ್ತೆ ಜಲಾವ್ರತವಾಗಿದ್ದು, ಶೃಂಗೇರಿ ಪಟ್ಟಣದಿಂದ ಕಿಗ್ಗಾಕ್ಕೆ ತೆರಳುವ ರಸ್ತೆ ಮಾಣಿಬೈಲು ಬಳಿ ಸಂಪರ್ಕ ಕಡಿತಗೊಂಡಿದೆ. ಶೃಂಗೇರಿ ಪಟ್ಟಣದಲ್ಲಿ ಭಾರತೀ ಬೀದಿ, ಕೆವಿಆರ್ ಸಂಪರ್ಕದ ಬೈಪಾಸ್ ರಸ್ತೆ, ಶ್ರೀ ಮಠದ ನರಸಿಂಹ ವನ ರಸ್ತೆ, ಶೃಂಗೇರಿ- ಕೊಪ್ಪ ಕಾವಾಡಿ ರಸ್ತೆ, ಗಾಂಧಿ ಮೈದಾನ ಹಾಗೂ ವಿದ್ಯಾರಣ್ಯಪುರ ರಸ್ತೆ ಸ್ಥಗಿತಗೊಂಡಿದೆ. ಶ್ರೀ ಮಠದ ಭೋಜನ ಶಾಲೆಗೆ ನೀರು ನುಗ್ಗಿದ್ದು, ಕಪ್ಪೆ ಶಂಕರ ದೇವಾಲಯ, ಸಂಧ್ಯಾವಂದನಾ ಮಂಟಪ ಮುಳುಗಡೆಯಾಗಿವೆ.
ರಸ್ತೆಯ ಉದ್ದಕ್ಕೂ ಬಿದ್ದ ಮರಗಳು: ಗಾಳಿ ರಭಸಕ್ಕೆ ಮರಗಳು, ವಿದ್ಯುತ್ ಕಂಬಗಳು ಧರೆಗುರುಳುತಿದ್ದು, ಇದರಿಂದಾಗಿ ಮಲೆನಾಡಿನ ಜನರು ಮನೆಯಿಂದ ಹೊರಗೆ ಬರಲು ಆತಂಕ ಪಡುತ್ತಿದ್ದಾರೆ. ಮೂಡಿಗೆರೆ ತಾಲೂಕಿನ ಜಾವಳಿ ಗ್ರಾಪಂ ವ್ಯಾಪ್ತಿಯಲ್ಲಿರುವ ಕೇಳಗೂರು ಸಮೀಪದ ಜೆ.ಹೊಸಳ್ಳಿ-ಮಾಳಿಗಾನಾಡು ರಸ್ತೆಯ ಉದಕ್ಕೂ ಹಲವು ಮರಗಳು ಬಿದ್ದಿದ್ದು, ಅವುಗಳ ತೆರವು ಕಾರ್ಯಾಚರಣೆ ಬೆಳಗ್ಗೆಯಿಂದಲೇ ಶುರುವಾಗಿದೆ. ಕೊಟ್ಟಿಗೆ ಹಾರದಲ್ಲಿರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಕಾಂಪೌಂಡ್ ಮಳೆಯಿಂದಾಗಿ ನೆಲಕ್ಕೆ ಅಪ್ಪಳಿಸಿದ್ದು, ಕೇಳಗೂರಿನ ಕಾಫಿ ಎಸ್ಟೇಟ್‌ನಲ್ಲಿರುವ ಮನೆಗಳ ಮೇಲೆ ಮರ ಬಿದ್ದ ಪರಿಣಾಮ ಮನೆಯಲ್ಲಿದ್ದ ಮೂವರಿಗೆ ಗಾಯವಾಗಿದ್ದು, ಅವರನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಚರಿತ್ರೆ ಪುಟಗಳಲ್ಲಿ ಅಚ್ಚಳಿಯದೆ ಉಳಿವ ಮೊಹರಂ: ಮುಸ್ಲಿಮರ ಪಾಲಿನ ಭಾವೈಕ್ಯತೆ ಸಾರುವ ಹಬ್ಬ
ಕಳಸ ತಾಲೂಕಿನಾದ್ಯಂತ ಸರಿದ ಮಳೆಗೆ ಭದ್ರಾ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾಗಿ ಕಳಸ-ಹೊರನಾಡು ಸಂಪರ್ಕ ಕಲ್ಪಿಸುವ ಹೆಬ್ಬಾಳ್ ಸೇತುವೆ ಸೋಮವಾರ ರಾತ್ರಿ ಮುಳುಗಡೆಯಾಗಿದ್ದು, ರಸ್ತೆಯ ಎರಡು ಬದಿಯಲ್ಲಿ ಬ್ಯಾರಿಕೇಡ್ ಹಾಕಿ ಸಾರ್ವಜನಿಕರು ಸಂಚರಿಸದಂತೆ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಮಂಗಳವಾರ ಬೆಳಗ್ಗೆ ನೀರಿನ ಪ್ರಮಾಣ ಇಳಿಮುಖವಾಗಿದ್ದರಿಂದ ಸೇತುವೆಯಲ್ಲಿ ಓಡಾಡಲು ದಾರಿ ಮುಕ್ತವಾಗಿತ್ತು.