ಟ್ರಾಫಿಕ್‌ ಸಿಗ್ನಲ್‌ಗಳ ಬ್ಯಾಟರಿ ಕಳವು ಮಾಡುತ್ತಿದ್ದ ಖದೀಮನನ್ನು ಮೈಕೋ ಲೇಔಟ್‌ ಸಂಚಾರ ಠಾಣೆಯ ಕಾನ್‌ಸ್ಟೇಬಲ್‌ವೊಬ್ಬರು ಬೆನ್ನುಹತ್ತಿ ಹೋಗಿ ಸೆರೆ ಹಿಡಿದಿರುವ ಘಟನೆ ನಡೆದಿದೆ.

ಬೆಂಗಳೂರು (ಆ.10) :  ಟ್ರಾಫಿಕ್‌ ಸಿಗ್ನಲ್‌ಗಳ ಬ್ಯಾಟರಿ ಕಳವು ಮಾಡುತ್ತಿದ್ದ ಖದೀಮನನ್ನು ಮೈಕೋ ಲೇಔಟ್‌ ಸಂಚಾರ ಠಾಣೆಯ ಕಾನ್‌ಸ್ಟೇಬಲ್‌ವೊಬ್ಬರು ಬೆನ್ನುಹತ್ತಿ ಹೋಗಿ ಸೆರೆ ಹಿಡಿದಿರುವ ಘಟನೆ ನಡೆದಿದೆ.

ಸದ್ದುಗುಂಟೆಪಾಳ್ಯದ ನಿವಾಸಿ ಶಂಶುದ್ದೀನ್‌ ಬಂಧಿತನಾಗಿದ್ದು, ಬನ್ನೇರುಘಟ್ಟರಸ್ತೆಯ ವಿಜಯಾ ಬ್ಯಾಂಕ್‌ ಲೇಔಟ್‌ ಸಮೀಪ ‘ನಮನ ಜಂಕ್ಷನ್‌’ನಲ್ಲಿ ಮಂಗಳವಾರ ಆತ ಬ್ಯಾಟರಿ ಕಳ್ಳತನಕ್ಕೆ ಯತ್ನಿಸಿದ್ದಾನೆ. ಆ ವೇಳೆ ಅಲ್ಲೇ ಕರ್ತವ್ಯದಲ್ಲಿದ್ದ ಮೈಕೋ ಲೇಔಟ್‌ ಸಂಚಾರ ಠಾಣೆ ಕಾನ್‌ಸ್ಟೇಬಲ್‌ ಅರ್ಜುನ್‌ ಅವರನ್ನು ನೋಡಿದ ತಕ್ಷಣವೇ ಓಡಿ ಹೋಗಿದ್ದಾನೆ. ಆಗ ಆತನನ್ನು ಬೆನ್ನುಹತ್ತಿ ಹೋಗಿ ಅರ್ಜುನ್‌ ಬಂಧಿಸಿದ್ದಾರೆ. ಬಳಿಕ ಮೈಕೋ ಲೇಔಟ್‌ ಕಾನೂನು ಮತ್ತು ಸುವ್ಯವಸ್ಥೆ ಠಾಣೆ ಪೊಲೀಸರಿಗೆ ಆರೋಪಿಯನ್ನು ಒಪ್ಪಿಸಿದ್ದಾರೆ. ಬ್ಯಾಟರಿ ಕಳ್ಳನನ್ನು ಸೆರೆ ಹಿಡಿದ ಅರ್ಜುನ್‌ ಅವರ ಕಾರ್ಯ ವೈಖರಿಯನ್ನು ಶ್ಲಾಘಿಸಿ ಪ್ರಶಂಸನಾ ಪತ್ರ ನೀಡಿ ಜಂಟಿ ಆಯುಕ್ತ (ಸಂಚಾರ) ಎಂ.ಎನ್‌.ಅನುಚೇತ್‌ ಬುಧವಾರ ಅಭಿನಂದಿಸಿದ್ದಾರೆ.

ಬೆಂಗಳೂರಿಗೆ: ವಿಮಾನದಲ್ಲಿ ಬಂದು ಮನೆ ದೋಚುತ್ತಿದ್ದವರ ಬಂಧನ

ನಗರದ ಟ್ರಾಫಿಕ್‌ ಜಂಕ್ಷನ್‌ಗಳಲ್ಲಿ ಅಳವಡಿಸಿರುವ ಸಿಗ್ನಲ್‌ಗಳ ಬ್ಯಾಟರಿಗಳನ್ನು ಕೆಲವು ಕಿಡಿಗೇಡಿ ಕಳವು ಮಾಡುತ್ತಿದ್ದರು. ಅಂತೆಯೇ ಮೈಕೋ ಲೇಔಟ್‌ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಸಹ ಕೆಲವು ಸಿಗ್ನಲ್‌ಗಳಲ್ಲಿ ಬ್ಯಾಟರಿ ಕಳ್ಳತನವಾಗಿದ್ದವು. ಈ ಹಿನ್ನೆಲೆಯಲ್ಲಿ ಸಿಗ್ನಲ್‌ಗಳ ಬ್ಯಾಟರಿಗಳ ಮೇಲೆ ಪೊಲೀಸರು ನಿಗಾವಹಿಸಿದ್ದರು. ಹೀಗಿರುವಾಗ ವಿಜಯಾ ಬ್ಯಾಂಕ್‌ ಲೇಔಟ್‌ನ ನಮನ ಜಂಕ್ಷನ್‌ ಬಳಿ ಮಂಗಳವಾರ ಮಧ್ಯಾಹ್ನ 11 ಗಂಟೆ ಸುಮಾರಿಗೆ ಶಂಶುದ್ದೀನ್‌ ಬ್ಯಾಟರಿ ಕಳ್ಳತನಕ್ಕೆ ಯತ್ನಿಸಿದ್ದಾಗ ಅರ್ಜುನ್‌ ಗೆ ಸಿಕ್ಕಿಬಿದ್ದಿದ್ದಾನೆ.

ಇದಕ್ಕೂ ಮುನ್ನ ಬನ್ನೇರುಘಟ್ಟರಸ್ತೆಯ ರುಬಿ ಜಂಕ್ಷನ್‌ನಲ್ಲಿ ಬ್ಯಾಟರಿ ಕಳ್ಳತನಕ್ಕೆ ಆತ ಮುಂದಾಗಿದ್ದ. ಆಗ ಆತನನ್ನು ನೋಡಿ ಅರ್ಜುನ್‌ ಬಂಧಿಸಲು ಯತ್ನಿಸಿದಾಗ ತಪ್ಪಿಸಿಕೊಂಡು ಓಡಿ ಹೋಗಿದ್ದ. ಇದಾದ ಕೆಲ ಹೊತ್ತಿನ ಬಳಿಕ ಮತ್ತೆ ನಮನ ಜಂಕ್ಷನ್‌ನಲ್ಲಿ ಬ್ಯಾಟರಿ ಕದಿಯಲು ಬಂದು ಆರೋಪಿ ಕಾನ್‌ಸ್ಟೇಬಲ್‌ ಅರ್ಜುನ್‌ ಬಲೆಗೆ ಬಿದ್ದಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Crime news: ಜ್ಯುವೆಲರಿ ಅಂಗಡಿ ಬಾಗಿಲು ಮುರಿದು ಕಳ್ಳತನ: ನಾಲ್ವರು ಆರೋಪಿಗಳ ಬಂಧನ

ಚಿತ್ರ: ಬ್ಯಾಟರಿ ಕಳ್ಳನನ್ನು ಹಿಡಿದ ಪೊಲೀಸ್‌ ಅರ್ಜುನ್‌ಗೆ ಜಂಟಿ ಆಯುಕ್ತ ಅನುಚೇತ್‌ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿದರು.