ಉತ್ತರಪ್ರದೇಶ ರಾಜ್ಯದ ಹರಿಶ್ಚಂದ್ರ, ಜಸ್ವೀರ್‌, ಚಂದ್ರಭಾನು ಹಾಗೂ ದೆಹಲಿಯ ಮಿಂಟು ವಿಶ್ವಾಸ್‌ ಬಂಧಿತರಾಗಿದ್ದು, ಆರೋಪಿಗಳಿಂದ 1 ಕೇಜಿ 450 ಗ್ರಾಂ ಚಿನ್ನಾಭರಣ ಹಾಗೂ ವಜ್ರ ಸೇರಿದಂತೆ ಒಟ್ಟು .78 ಲಕ್ಷ ಮೌಲ್ಯದ ವಸ್ತುಗಳು ಜಪ್ತಿ. 

ಬೆಂಗಳೂರು(ಆ.06):  ಉದ್ಯಾನ ನಗರಿಯಲ್ಲಿ ಮನೆಗಳ್ಳತನ ಮಾಡಲು ದೆಹಲಿಯಿಂದ ವಿಮಾನದಲ್ಲಿ ಬಂದು ಶ್ರೀಮಂತರು ವಾಸಿಸುವ ಪ್ರದೇಶಗಳಲ್ಲಿ ಕಳ್ಳತನ ಎಸಗಿ ಬಸ್‌ನಲ್ಲಿ ಪರಾರಿಯಾಗುತ್ತಿದ್ದ ನಾಲ್ವರು ವೃತ್ತಿಪರ ಖದೀಮರು ಸಂಜಯನಗರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಉತ್ತರಪ್ರದೇಶ ರಾಜ್ಯದ ಹರಿಶ್ಚಂದ್ರ, ಜಸ್ವೀರ್‌, ಚಂದ್ರಭಾನು ಹಾಗೂ ದೆಹಲಿಯ ಮಿಂಟು ವಿಶ್ವಾಸ್‌ ಬಂಧಿತರಾಗಿದ್ದು, ಆರೋಪಿಗಳಿಂದ 1 ಕೇಜಿ 450 ಗ್ರಾಂ ಚಿನ್ನಾಭರಣ ಹಾಗೂ ವಜ್ರ ಸೇರಿದಂತೆ ಒಟ್ಟು .78 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಆರ್‌ಎಂವಿ ಎರಡನೇ ಹಂತದ ಡಾಲ​ರ್ಸ್‌ ಕಾಲೋನಿಯ ಮೆಬಲ್‌ ಲಿವೀಸ್‌ ಎಂಬುವರ ಮನೆಗೆ ಕನ್ನ ಹಾಕಿ ಲಕ್ಷಾಂತರ ಮೌಲ್ಯದ ಚಿನ್ನಾಭರಣವನ್ನು ದುಷ್ಕರ್ಮಿಗಳು ದೋಚಿದ್ದರು. ಸಂಜಯನಗರ ಠಾಣೆ ಇನ್‌ಸ್ಪೆಕ್ಟರ್‌ ಗುರುಪ್ರಸಾದ್‌ ನೇತೃತ್ವದ ತಂಡ, ಸಿಸಿಟಿವಿ ಕ್ಯಾಮೆರಾ ಹಾಗೂ ಮೊಬೈಲ್‌ ಕರೆಗಳ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿ ಆಂಧ್ರಪ್ರದೇಶ ಹಾಗೂ ದೆಹಲಿಯಲ್ಲಿ ಕಳ್ಳರನ್ನು ಸೆರೆ ಹಿಡಿದಿದೆ.

ಮಂಗಳೂರು: ಜೆಸಿಬಿ ನುಗ್ಗಿಸಿ ಎಟಿಎಂ ಕಳವು ಯತ್ನ

ಶ್ರೀಮಂತರ ಮನೆಗಳೇ ಟಾರ್ಗೆಟ್‌:

ವೃತ್ತಿಪರ ಕ್ರಿಮಿನಲ್‌ಗಳಾಗಿರುವ ಈ ನಾಲ್ವರ ವಿರುದ್ಧ ದೆಹಲಿ, ಕೇರಳ ಹಾಗೂ ಬೆಂಗಳೂರು ಸೇರಿದಂತೆ ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಇವರು ಮನೆಗಳ್ಳತನ ಮಾಡಲು ವಿಮಾನದಲ್ಲಿ ಬೆಂಗಳೂರಿಗೆ ಬಂದ ನಂತರ ಸೆಕೆಂಡ್‌ ಹ್ಯಾಂಡ್‌ ಬೈಕ್‌ ಖರೀದಿಸುತ್ತಿದ್ದರು. ನಂತರ ನಗರದ ಶ್ರೀಮಂತರು ನೆಲೆಸಿರುವ ಪ್ರದೇಶಗಳಲ್ಲಿ ಹಗಲು ಸುತ್ತಾಟ ನಡೆಸಿ ಬೀಗ ಹಾಕಿದ ಮನೆಗಳನ್ನು ಗುರುತಿಸುತ್ತಿದ್ದರು. ತರುವಾಯ ರಾತ್ರಿ ನಿಗದಿತ ಮನೆಗಳಿಗೆ ಕನ್ನ ಹಾಕಿ ನಗ-ನಾಣ್ಯ ದೋಚುತ್ತಿದ್ದರು. ಪೊಲೀಸರ ದಾರಿ ತಪ್ಪಿಸಲು ನಗರದಿಂದ ಬಸ್‌ ಮೂಲಕ ದೆಹಲಿಗೆ ಪ್ರಯಾಣ ಬೆಳೆಸುತ್ತಿದ್ದರು. ಹೀಗೆ ಸಂಪಾದಿಸಿದ ಆಭರಣಗಳನ್ನು ಕೃತ್ಯ ಎಸಗಿದ ಬಳಿಕ ನಾಲ್ವರು ಹಂಚಿಕೊಂಡು ದೆಹಲಿ ಹಾಗೂ ಉತ್ತರ ಪ್ರದೇಶದಲ್ಲಿ ವಿಲೇವಾರಿ ಮಾಡಿ ಹಣ ಪಡೆಯುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಜು.24ರಂದು ವಿಮಾನದಲ್ಲಿ ಹರಿಶ್ಚಂದ್ರ, ಜಸ್ವೀರ್‌, ಚಂದ್ರಭಾನು ಹಾಗೂ ವಿಶ್ವಾಸ್‌ ಬಂದಿದ್ದರು. ಬಳಿಕ .22 ಸಾವಿರಕ್ಕೆ ಆಕ್ಟಿವಾ ಖರೀದಿಸಿದ ಆರೋಪಿಗಳು, ಕೆಲ ದಿನಗಳ ಬಳಿಕ ದಾಖಲೆ ಪಡೆಯುತ್ತೇವೆ ಎಂದು ಸ್ಕೂಟರ್‌ ಮಾಲಿಕನಿಗೆ ಹೇಳಿ ಬಂದಿದ್ದರು. ಆ ಸ್ಕೂಟರ್‌ ಬಳಸಿ ಸುತ್ತಾಟ ನಡೆಸಿದ್ದ ಆರೋಪಿಗಳಿಗೆ ಡಾಲ​ರ್‍ಸ್ ಕಾಲೋನಿಯಲ್ಲಿ ಲಿವೀಸ್‌ ಅವರ ಮನೆಗೆ ಕಣ್ಣಿಗೆ ಬಿದ್ದಿದೆ. ದುಬೈನಲ್ಲಿ ಉದ್ಯೋಗದಲ್ಲಿದ್ದ ತಮ್ಮ ಪತಿ ನಿಧನರಾದ ಬಳಿಕ ಏಕಾಂಗಿಯಾಗಿ ಅವರು ನೆಲೆಸಿದ್ದರು. ಸಾಫ್‌್ಟವೇರ್‌ ಉದ್ಯೋಗಿಗಳಾಗಿರುವ ಲಿವೀಸ್‌ ಅವರ ಇಬ್ಬರು ಗಂಡು ಮಕ್ಕಳು ಪ್ರತ್ಯೇಕವಾಗಿ ವಾಸವಾಗಿದ್ದಾರೆ. ತಮ್ಮ ಕುಟುಂಬ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಜು.28ರಂದು ರಾತ್ರಿ ಮನೆಗೆ ಬೀಗ ಹಾಕಿಕೊಂಡು ವೈಟ್‌ಫೀಲ್ಡ್‌ಗೆ ಲಿವೀಸ್‌ ತೆರಳಿದ್ದರು. ಆಗ ಅವರ ಮನೆ ಬೀಗ ಮುರಿದು 1.450 ಕೇಜಿ ಒಡವೆ ದೋಚಿ ಆರೋಪಿಗಳು ಪರಾರಿಯಾಗಿದ್ದರು. ಮರುದಿನ ಕಳ್ಳತನ ಕೃತ್ಯ ಬೆಳಕಿಗೆ ಬಂದಿತ್ತು ಎಂದು ಪೊಲೀಸರು ವಿವರಿಸಿದ್ದಾರೆ.

ಈ ಕೃತ್ಯದ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಸಿಸಿಟಿವಿ ಕ್ಯಾಮೆರಾ ಆಧರಿಸಿ ಕಳ್ಳರ ಬೆನ್ನುಹತ್ತಿದ್ದರು. ಆಗ ಕನ್ಯಾಕುಮಾರಿ-ಆಗ್ರಾ ಹೆದ್ದಾರಿಯಲ್ಲಿ ಮೂವರು ಹಾಗೂ ಮತ್ತೊಬ್ಬ ದೆಹಲಿಯ ತಿಲಕನಗರದ ಸಮೀಪ ಖಾಕಿ ಗಾಳಕ್ಕೆ ಕಳ್ಳರು ಸಿಕ್ಕಿಬಿದ್ದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.