ವಾಹನ ಸವಾರರಿಗೆ ಗುಡ್ ನ್ಯೂಸ್: ಟ್ರಾಫಿಕ್ ನಿಯಮ ಉಲ್ಲಂಘನೆ- ಶೇ.50 ದಂಡ ವಿನಾಯಿತಿ ಅವಧಿ ವಿಸ್ತರಣೆ
ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದ ವಾಹನ ಸವಾರರಿಗೆ ದಂಡ ಪಾವತಿಯಲ್ಲಿನ ಶೇ.50 ರಿಯಾಯಿತಿ ಅವಧಿ ವಿಸ್ತರಣೆ ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಆದ್ದರಿಂದ ಮತ್ತೆ ಎರಡು ವಾರಗಳ ಕಾಲ ದಂಡ ವಿನಾಯಿತಿಗೆ ಅವಕಾಶ ಲಭ್ಯವಾಗಲಿದೆ.
ಬೆಂಗಳೂರು (ಫೆ.13): ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದ ವಾಹನ ಸವಾರರಿಗೆ ಸಂಚಾರ ಪೊಲೀಸ್ ಇಲಾಖೆ ನೀಡಿದ್ದ ದಂಡ ಪಾವತಿಯಲ್ಲಿನ ಶೇ.50 ರಿಯಾಯಿತಿ ಅವಧಿಯಲ್ಲಿ ದಂಡ ಪಾವತಿಸಲು ಸಾಧ್ಯವಾಗಿಲ್ಲ. ಹೀಗಾಗಿ, ಅವಧಿ ವಿಸ್ತರಣೆ ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು, ಮತ್ತೆ ಎರಡು ವಾರಗಳ ಕಾಲ ದಂಡ ವಿನಾಯಿತಿಗೆ ಅವಕಾಶ ಲಭ್ಯವಾಗಲಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೈಕೋರ್ಟ್ ನ್ಯಾಯಮೂರ್ತಿ ಬಿ.ವೀರಪ್ಪ ಅವರು, ಸಂಚಾರಿ ಪೊಲೀಸ್ ಇಲಾಖೆ ಮತ್ತು ವಾಹನ ಸವಾರರ ನಿಯಮ ಉಲ್ಲಂಘನೆ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದವು. ಈ ಹಿನ್ನೆಲೆಯಲ್ಲಿ ಸಂಚಾರ ನಿಯಮ ಉಲ್ಲಂಘನೆ ದಂಡ ಕಡಿಮೆಮಾಡಲು 3 ತಿಂಗಳು ಹೋರಾಟ ಮಾಡಬೇಕಾಯಿತು. ಸರ್ಕಾರವನ್ನು ಒಪ್ಪಿಸಲು ಸಾಕಷ್ಟು ಹೋರಾಟ ಮಾಡಿದ್ದೇವೆ. ಅದರಲ್ಲಿ ಮುಖ್ಯವಾಗಿ ಹಣಕಾಸು ಇಲಾಖೆ ದಂಡ ಕಡಿಮೆ ಮಾಡಲು ಒಪ್ಪಿರಲಿಲ್ಲ. ಕೊನೆಗೆ, ಮುಖ್ಯ ಕಾರ್ಯದರ್ಶಿ ಮತ್ತು ಮುಖ್ಯಮಂತ್ರಿ ಕಚೇರಿ ಅವರನ್ನು ಒಪ್ಪಿಸಿ ದಂಡ ಪಾವತಿಯಲ್ಲಿ ಶೇ.50 ಕಡಿಮೆ ಮಾಡಲಾಯಿತು ಎಂದರು.
ಟ್ರಾಫಿಕ್ ದಂಡಕ್ಕೆ ಶೇ.50 ವಿನಾಯಿತಿ ವಿಸ್ತರಣೆ ಆಗುತ್ತಾ?
1.1 ಕೋಟಿ ನಿಯಮ ಉಲ್ಲಂಘನೆ ಪ್ರಕರಣ ಇತ್ಯರ್ಥ: ನಮ್ಮ ಹೋರಾಟಕ್ಕೆ ಪ್ರತಿಫಲವಾಗಿ ಸಿಕ್ಕ ಟ್ರಾಫಿಕ್ ನಿಯಮ ಉಲ್ಲಂಘನೆಗೆ ದಂಡದಲ್ಲಿ 50% ವಿನಾಯಿತಿಯನ್ನು ಘೋಷಣೆ ಮಾಡಿದ ಅವಧಿಯಲ್ಲಿ ಜನರು ಕೂಡ ಉತ್ತಮವಾಗಿ ಸ್ಪಂದಿಸಿದ್ದಾರೆ. ಒಟ್ಟಾರೆ 2 ಕೋಟಿಗೂ ಅಧಿಕ ಸಂಚಾರ ದಂಡ ಬಾಕಿ ಇದ್ದವು. ಅದರಲ್ಲಿ ವಿಯಾಯಿತಿ ಘೋಷಣೆಯ ಅವಧಿಯಲ್ಲಿ ಬರೋಬ್ಬರಿ 1.1 ಕೋಟಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಬಗೆಹರಿದಿವೆ. 120 ಕೋಟಿ ರೂ.ಗಿಂತ ಅಧಿಕ ದಂಡ ಸಂಗ್ರಹವಾಗಿದೆ. ಆದರೆ, ಸುಮಾರು ಇನ್ನೂ ಒಂದು ಕೋಟಿ ಜನರು ದಂಡ ಪಾವತಿ ಮಾಡುವುದು ಬಾಕಿಯಿದೆ. ಹೀಗಾಗಿ, ದಂಡದ ಮೊತ್ತ ವಿನಾಯಿತಿ ಅವಧಿಯನ್ನು ವಿಸ್ತರಣೆ ಮಾಡುವಂತೆ ಮನವಿ ಮಾಡಲಾಗಿದೆ. ಇನ್ನು ದಂಡದ ಶೇ.50 ವಿನಾಯಿತಿ ಅವಧಿಯನ್ನು ವಿಸ್ತರಣೆ ಮಾಡುವಂತೆ ಮನವಿ ಮಾಡಿರುವ ಹಿನ್ನೆಲೆಯಲ್ಲಿ ಸರ್ಕಾರದ ಮನವಿ ಮೇರೆಗೆ ನಾಳೆ ಸಭೆ ಕರೆಯಲಾಗಿದೆ. ಈ ದಂಡ ವಿನಾಯಿತಿಯ ಬಗ್ಗೆ ನಾಳೆ ಅಧಿಕೃತ ಆದೇಶ ಹೊರಬೀಳಬಹುದು ಎಂದು ಸುದ್ದಿಗೋಷ್ಟಿಯಲ್ಲಿ ನ್ಯಾ.ಬಿ.ವೀರಪ್ಪ ಹೇಳಿದ್ದಾರೆ.
ಬೆಂಗಳೂರು (ಫೆ.12): ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಬಾಕಿ ಮೊತ್ತ ಪಾವತಿಗೆ ರಾಜ್ಯ ಸರ್ಕಾರ ನೀಡಿದ್ದ ಶೇ.50ರ ರಿಯಾಯ್ತಿ ಸೌಲಭ್ಯ ಶನಿವಾರ ಅಂತ್ಯಗೊಂಡಿದ್ದು, ರಾಜ್ಯಾದ್ಯಂತ ಕಳೆದ 9 ದಿನಗಳಲ್ಲಿ 52.49 ಲಕ್ಷಕ್ಕೂ ಹೆಚ್ಚು ಪ್ರಕರಣಗಳಿಂದ ಒಟ್ಟು 122.07 ಕೋಟಿ ರು.ಗೂ ಹೆಚ್ಚು ಬಾಕಿ ದಂಡ ಸಂಗ್ರಹವಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಕಳೆದ 9 ದಿನಗಳಲ್ಲಿ 41.20 ಲಕ್ಷ ಪ್ರಕರಣಗಳಿಂದ ಒಟ್ಟು 120.76 ಕೋಟಿ ರು.ಬಾಕಿ ದಂಡ ಸಂಗ್ರಹವಾಗಿದೆ. ಇದೇ ವೇಳೆ, ಹುಬ್ಬಳ್ಳಿ-ಧಾರವಾಡದಲ್ಲಿ 73.31 ಲಕ್ಷ ದಂಡ ವಸೂಲಿಯಾಗಿದೆ. ಬೆಳಗಾವಿಯಲ್ಲಿ 29,520 ಪ್ರಕರಣಗಳಲ್ಲಿ 57.94 ಲಕ್ಷ ದಂಡ ಪಾವತಿಯಾಗಿದೆ.
9 ದಿನದಲ್ಲಿ 122 ಕೋಟಿ ಟ್ರಾಫಿಕ್ ದಂಡ ಸಂಗ್ರಹ: ರಾಜ್ಯಾದ್ಯಂತ 52.49 ಲಕ್ಷ ಕೇಸು ಇತ್ಯರ್ಥ
ಕೊನೆಯ ದಿನವಾದ ಶನಿವಾರ, ಬೆಂಗಳೂರಿನಲ್ಲಿ 9.45 ಲಕ್ಷ ಪ್ರಕರಣಗಳಿಂದ 31.26 ಕೋಟಿ ರು. ದಂಡ ಸಂಗ್ರಹವಾಗಿದೆ. ಕಳೆದ 9 ದಿನಗಳಲ್ಲಿ ದಿನವೊಂದರಲ್ಲಿ ಸಂಗ್ರಹವಾದ ಅತಿ ಹೆಚ್ಚು ದಂಡದ ಮೊತ್ತ ಇದಾಗಿದೆ. ಇದೇ ವೇಳೆ, ಹುಬ್ಬಳ್ಳಿ-ಧಾರವಾಡ ಕಮಿನಷರೇಟ್ ವ್ಯಾಪ್ತಿಯಲ್ಲಿ .25,61,175 ದಂಡ ಸಂಗ್ರಹಿಸಲಾಗಿದೆ. ದಂಡ ಪಾವತಿಸಲು ಕೊನೆಯ ದಿನವಾದ ಶನಿವಾರ ಸಂಚಾರಿ ಪೊಲೀಸ್ ಠಾಣೆಗಳ ಮುಂಭಾಗದಲ್ಲಿ ಜನರು ಸರದಿ ಸಾಲಿನಲ್ಲಿ ನಿಂತಿದ್ದು ಕಂಡುಬಂತು.