ಇಲ್ಲಿಗೆ ಸಮೀಪದ ಕೋಡಿಬೆಂಗ್ರೆ ಬೀಚ್‌ನಲ್ಲಿ ಗುರುವಾರ ಮೀನಿನ ಸುಗ್ಗಿಯೋ ಸುಗ್ಗಿ. ಸಮುದ್ರಕ್ಕೆ ಬಲೆ ಬೀಸಿದ್ದ ಮೀನುಗಾರರಿಗೆ ಬಂಪರ್‌ ಲಾಟರಿ ಹೊಡೆದಿತ್ತು. 

ಉಡುಪಿ (ಆ.11): ಇಲ್ಲಿಗೆ ಸಮೀಪದ ಕೋಡಿಬೆಂಗ್ರೆ ಬೀಚ್‌ನಲ್ಲಿ ಗುರುವಾರ ಮೀನಿನ ಸುಗ್ಗಿಯೋ ಸುಗ್ಗಿ. ಸಮುದ್ರಕ್ಕೆ ಬಲೆ ಬೀಸಿದ್ದ ಮೀನುಗಾರರಿಗೆ ಬಂಪರ್‌ ಲಾಟರಿ ಹೊಡೆದಿತ್ತು. ಪ್ರಸ್ತುತ ಆಳಸಮುದ್ರ ಮೀನುಗಾರಿಕೆ ನಿಷೇಧ ಇರುವುದರಿಂದ ಹತ್ತಾರು ಮೀನುಗಾರರು ಸಮುದ್ರ ದಡದಲ್ಲಿ ನಿಂತು ಕೈರಂಪಣಿ ಬಲೆ ಬೀಸಿ ಮೀನು ಹಿಡಿಯುತ್ತಾರೆ. ಈ ರೀತಿ ಗುರುವಾರ ಮೀನುಗಾರರು ಕೋಡಿಬೆಂಗ್ರೆಯಲ್ಲಿ ಬೀಸಿದ್ದ ಕೈರಂಪಣಿ ಬಲೆಗೆ ಟನ್ನುಗಟ್ಟಲೇ ಮೀನುಗಳು ಸಿಕ್ಕಿದ್ದವು.

ಮುಂಜಾನೆ ಸಮುದ್ರಕ್ಕೆ ಬೀಸಿದ್ದ ಬಲೆಯನ್ನು ಮೀನುಗಾರರು ಕಷ್ಟಪಟ್ಟು ಎಳೆದಾಗ ಲಕ್ಷಗಟ್ಟಲೆ ಸಂಖ್ಯೆಯಲ್ಲಿ ಬೂತಾಯಿ, ಬುಂಗುಡೆ ಇತ್ಯಾದಿ ರಾಶಿರಾಶಿ ಮೀನುಗಳು ದೊರಕಿವೆ. ಸಮುದ್ರ ದಡದಲ್ಲೇ ಬಲೆ ಹಾಕುವುದರಿಂದ ಸಾಧಾರಣವಾಗಿ ಕೈರಂಪಣಿ ಬಲೆಗೆ ಸಿಗುವ ಮೀನುಗಳ ಸಂಖ್ಯೆ ಬಹಳ ಕಡಿಮೆ. ಆದರೆ ಗುರುವಾರ ಸಿಕ್ಕಿದ ಬಂಪರ್‌ ಮೀನುಗಳಿಂದ ಮೀನುಗಾರರು ಫುಲ್‌ ಖುಷ್‌ ಆದರು.

ಹತ್ಯೆ ಯತ್ನ ಆರೋಪ, ಪ್ರಭು ಚೌಹಾಣ್‌ ಜತೆ ಚರ್ಚಿಸುವೆ: ಕಟೀಲ್‌

ಮಳೆಗಾಲದಲ್ಲಿ ಆಹಾರ ಹುಡುಕುತ್ತಾ ಮೀನುಗಳು ಗುಂಪುಗುಂಪಾಗಿ ಸಮುದ್ರ ತೀರಕ್ಕೆ ಬರುತ್ತವೆ. ಅಂಥ ಮೀನಿನ ಗುಂಪು ಆಕಸ್ಮಿಕವಾಗಿ ಬಲೆಗೆ ಬೀಳುತ್ತವೆ ಎನ್ನುತ್ತಾರೆ ಹಿರಿಯ ಮೀನುಗಾರರು. ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಕೋಡಿಬೆಂಗ್ರೆ ಬೀಚಿಗೆ ಧಾವಿಸಿ ಬಂದರು. ಕೆಲವರು ರಾಶಿರಾಶಿ ಮೀನುಗಳನ್ನು ನೋಡಿ ಅಚ್ಚರಿಗೊಂಡರೆ, ಇನ್ನು ಕೆಲವರು ಬಲೆಯಿಂದ ಹಾರಿ ಹೊರಗೆ ಬಿದ್ದ ತಾಜಾ ಮೀನುಗಳನ್ನು ಪ್ಲಾಸ್ಟಿಕ್‌ ಕವರ್‌ಗಳಲ್ಲಿ ತುಂಬಿಕೊಂಡು ಹೋದರು. ನಂತರ ಬಲೆ ಬೀಸಿದ ಮೀನುಗಾರರು ಬುಟ್ಟಿಯಲ್ಲಿ ತುಂಬಿ ಮಾರುಕಟ್ಟೆಗೆ ಕಳುಹಿಸಿದರು.