ಟೊಮೆಟೋ ದರ 125: ಈವರೆಗಿನ ಗರಿಷ್ಠ ದಾಖಲೆ, ಗ್ರಾಹಕರ ಜೇಬಿಗೆ ಕತ್ತರಿ..!
ಟೊಮೆಟೋ ಬೆಳೆಯುವ ಪ್ರಮುಖ ರಾಜ್ಯವಾದ ಮಹಾರಾಷ್ಟ್ರದಲ್ಲಿ ಈ ಬಾರಿ ನಿರೀಕ್ಷೆಯಷ್ಟು ಬೆಳೆ ಮಾರುಕಟ್ಟೆಗೆ ಬಂದಿಲ್ಲ. ಪಶ್ಚಿಮ ಬಂಗಾಳ, ಒಡಿಶಾ, ಛತ್ತೀಸ್‌ಗಢದಲ್ಲೂ ಇದೇ ಪರಿಸ್ಥಿತಿ ಇದೆ. ಹೀಗಾಗಿ ದೇಶದಾದ್ಯಂತ ಖರೀದಿದಾರರು ಟೊಮೆಟೋ ಖರೀದಿಗೆ ಕೋಲಾರದತ್ತ ಮುಖ ಮಾಡುತ್ತಿದ್ದಾರೆ.
ಕೋಲಾರ/ಬೆಂಗಳೂರು(ಜೂ.27): ಮುಂಗಾರು ಮಳೆ ವಿಳಂಬ ಹಾಗೂ ಬೆಳೆ ನಷ್ಟದಿಂದಾಗಿ ರಾಜ್ಯದಲ್ಲಿ ಟೊಮೆಟೋ ಬೆಲೆ ದಿನೇ ದಿನೆ ಗಗನಕ್ಕೇರುತ್ತಿದೆ. ಬೆಂಗಳೂರಿನ ಹಾಪ್‌ಕಾಮ್ಸ್‌ನಲ್ಲಿ ಒಂದು ಕೆ.ಜಿ. ಟೊಮೆಟೋ 125ಕ್ಕೆ ಮಾರಾಟವಾಗುತ್ತಿದೆ. ರಾಜ್ಯದ ಉಳಿದೆಡೆ 90ರು ದಾಟಿದೆ.
ರಾಜ್ಯದಲ್ಲಿ ಟೊಮೆಟೋ ಬೆಳೆಯುವ ಪ್ರಮುಖ ಪ್ರದೇಶವಾದ ಕೋಲಾರದಲ್ಲಿ ಸೋಮವಾರ 15 ಕೆ.ಜಿ.ಯ ಒಂದು ಬಾಕ್ಸ್ ಟೊಮೆಟೋ .800ರಿಂದ .1,200ಗೆ (ಸಗಟು ಮಾರುಕಟ್ಟೆಯಲ್ಲಿ) ಮಾರಾಟವಾಗಿದೆ. ಅಂದರೆ ಭಾನುವಾರಕ್ಕೆ ಹೋಲಿಸಿದರೆ ಒಂದೇ ದಿನಕ್ಕೆ ದರ ಶೇ.100ರಷ್ಟು ಏರಿಕೆಯಾಗಿದೆ. ಸದ್ಯದ ಪರಿಸ್ಥಿತಿ ನೋಡಿದರೆ ರಾಜ್ಯದಲ್ಲಿ ಟೊಮೆಟೋ ದರ ಇನ್ನು ಕೆಲವೇ ದಿನಗಳಲ್ಲಿ 15 ಕೆ.ಜಿ. ಬಾಕ್ಸ್‌ಗೆ .1400ರಿಂದ .1500 ತಲುಪಿದರೂ ಅಚ್ಚರಿ ಇಲ್ಲ ಎಂದು ವ್ಯಾಪಾರಿಗಳು ಹೇಳುತ್ತಾರೆ.
ಐದು ಗ್ಯಾರಂಟಿ ಖುಷಿ ನಡುವೆ ಜನತೆಗೆ ಟೊಮೆಟೊ ದರ ಶಾಕ್: ನೂರರ ಸನಿಹಕ್ಕೆ 1 ಕೆ.ಜಿ ಟೊಮೆಟೊ
ಟೊಮೆಟೋ ಬೆಳೆಯುವ ಪ್ರಮುಖ ರಾಜ್ಯವಾದ ಮಹಾರಾಷ್ಟ್ರದಲ್ಲಿ ಈ ಬಾರಿ ನಿರೀಕ್ಷೆಯಷ್ಟು ಬೆಳೆ ಮಾರುಕಟ್ಟೆಗೆ ಬಂದಿಲ್ಲ. ಪಶ್ಚಿಮ ಬಂಗಾಳ, ಒಡಿಶಾ, ಛತ್ತೀಸ್‌ಗಢದಲ್ಲೂ ಇದೇ ಪರಿಸ್ಥಿತಿ ಇದೆ. ಹೀಗಾಗಿ ದೇಶದಾದ್ಯಂತ ಖರೀದಿದಾರರು ಟೊಮೆಟೋ ಖರೀದಿಗೆ ಕೋಲಾರದತ್ತ ಮುಖ ಮಾಡುತ್ತಿದ್ದಾರೆ. ಆದರೆ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಟೊಮೆಟೋ ಬೆಳೆಗೆ ಕಳೆದ ಎರಡ್ಮೂರು ತಿಂಗಳಿಂದ ಬಿಳಿ ಕೀಟ ಬಾಧೆ ಆವರಿಸಿದ್ದು, ಬೆಳೆ ಒಣಗಿ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ಅಳಿದುಳಿದ ಬೆಳೆಗೆ ಇಲ್ಲಿ ಉತ್ತಮ ಬೆಲೆ ಸಿಗುತ್ತಿದೆ. ಹೀಗಾಗಿ 10 ದಿನದ ಹಿಂದೆ ಸಗಟು ಮಾರುಕಟ್ಟೆಯಲ್ಲಿ .100ರಿಂದ .400 ವರೆಗೆ ಇದ್ದ 15 ಕೆ.ಜಿ. ಟೊಮೆಟೋ ಬಾಕ್ಸ್ ಇದೀಗ .800ರಿಂದ .1200 ವರೆಗೆ ಮಾರಾಟವಾಗಿದೆ. ಅಂದರೆ ಕಳೆದ 10 ದಿನಗಳಲ್ಲಿ ಟೊಮೆಟೋ ದರ ಶೇ.200ರಷ್ಟು ಜಾಸ್ತಿಯಾಗಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ದರ ಮತ್ತಷ್ಟುಏರಿಕೆಯಾಗಬಹುದು. 15 ಕೆ.ಜಿ.ಯ ಒಂದು ಬಾಕ್ಸ್ ಟೊಮೆಟೋ .1500ರ ವರೆಗೆ ಮಾರಾಟವಾಗಬಹುದು ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ.
ಸದ್ಯ ಕೋಲಾರದಲ್ಲಿ ಚಿಲ್ಲರೆ ಮಾರುಕಟ್ಟೆಯಲ್ಲಿ ಒಂದು ಕೆ.ಜಿ. ಟೊಮೆಟೋ .70ರಿಂದ .80, ಮಂಗಳೂರಿನಲ್ಲಿ .90ಗೆ ಮಾರಾಟವಾಗುತ್ತಿದೆ. ಆದರೆ, ಹುಬ್ಬಳ್ಳಿಯಲ್ಲಿ ಸ್ಥಳೀಯವಾಗಿ ಟೊಮೆಟೋ ಬೆಳೆಯುವ ಹಿನ್ನೆಲೆಯಲ್ಲಿ .35-.70 ವರೆಗೆ ಟೊಮೆಟೋ ಮಾರಾಟವಾಗುತ್ತಿದೆ. ಬೆಂಗಳೂರಿನಲ್ಲಿ ಮಾತ್ರ ಟೊಮೆಟೋ ದರ ಚಿಲ್ಲರೆ ಮಾರುಕಟ್ಟೆಯಲ್ಲಿ ನೂರರ ಗಡಿ ದಾಟಿದೆ. ಬಹುತೇಕ ಕಡೆ .100, .125ಕ್ಕೆ ಮಾರಾಟವಾಗುತ್ತಿದೆ.
ಬೆಂಗಳೂರಿನ ಸಗಟು ಮಾರುಕಟ್ಟೆಯಲ್ಲಿ ಟೊಮೆಟೋ ಒಂದು ಕೆ.ಜಿ. (ಗುಣಮಟ್ಟದ ಅನುಸಾರ) ಮೊದಲ ದರ್ಜೆ .80ರಿಂದ .90 ತಲುಪಿದ್ದರೆ, ಎರಡನೇ ಹಾಗೂ ಮೂರನೇ ದರ್ಜೆಯ ಟೊಮೆಟೋ ದರ .40-50 ಇತ್ತು.