ನೂತನ ಆರ್ಥಿಕ ವರ್ಷ ಆರಂಭದಲ್ಲೇ ರಾಜ್ಯದ ವಾಹನ ಮಾಲೀಕರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಟೋಲ್‌ ಶುಲ್ಕ ಹೆಚ್ಚಳದ ಹೊರೆ ಹಾಕುತ್ತಿದೆ. ರಾಜ್ಯದ ಪ್ರಮುಖ ಟೋಲ್‌ಗಳಲ್ಲಿನ ಟೋಲ್‌ ಶುಲ್ಕದಲ್ಲಿ ಶೇ.3ರಿಂದ 5ರಷ್ಟು ಹೆಚ್ಚಳ

ಬೆಂಗಳೂರು : ನೂತನ ಆರ್ಥಿಕ ವರ್ಷ ಆರಂಭದಲ್ಲೇ ರಾಜ್ಯದ ವಾಹನ ಮಾಲೀಕರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಟೋಲ್‌ ಶುಲ್ಕ ಹೆಚ್ಚಳದ ಹೊರೆ ಹಾಕುತ್ತಿದೆ. ರಾಜ್ಯದ ಪ್ರಮುಖ ಟೋಲ್‌ಗಳಲ್ಲಿನ ಟೋಲ್‌ ಶುಲ್ಕದಲ್ಲಿ ಶೇ.3ರಿಂದ 5ರಷ್ಟು ಹೆಚ್ಚಳ ಮಾಡಲಾಗುತ್ತಿದ್ದು, ಈ ಕುರಿತು ಎನ್‌ಎಚ್‌ಎಐ ಇನ್ನೆರಡು ದಿನಗಳಲ್ಲಿ ಅಧಿಕೃತ ಆದೇಶ ಹೊರಡಿಸಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಆಧಾರದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಟೋಲ್‌ ಶುಲ್ಕ ಹೆಚ್ಚಳ ಮಾಡಲಾಗುತ್ತಿದೆ. ಸದ್ಯದ ಮಾಹಿತಿಯಂತೆ ಎನ್‌ಎಚ್‌ಎಐ ನಿರ್ಧರಿಸಿರುವಂತೆ ರಾಜ್ಯದ ಪ್ರಮುಖ 9 ರಾಷ್ಟ್ರೀಯ ಹೆದ್ದಾರಿಯ ಟೋಲ್‌ ಶುಲ್ಕ ಹೆಚ್ಚಿಸಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಶುಲ್ಕ (ದರಗಳು ಮತ್ತು ಸಂಗ್ರಹದ ನಿರ್ಣಯ) ನಿಯಮಗಳು 2008ರ ಅನ್ವಯ ಶುಲ್ಕ ಪರಿಷ್ಕರಿಸಲಾಗುತ್ತಿದೆ. ಏ.1ರಿಂದ ಅನ್ವಯವಾಗುವಂತೆ ಶೇ.3ರಿಂದ 5ರಷ್ಟು ಶುಲ್ಕ ಹೆಚ್ಚಳ ಮಾಡಲಾಗುತ್ತಿದೆ. ಅದರ ಪ್ರಕಾರ ಕನಿಷ್ಠ 5ರು.ನಿಂದ 30 ರು.ವರೆಗೆ ವಾಹನಗಳ ವಿಧವನ್ನಾಧರಿಸಿ ಟೋಲ್ ಶುಲ್ಕ ಹೆಚ್ಚಿಸಲಾಗುತ್ತಿದೆ.

₹30 ವರೆಗೆ ಹೆಚ್ಚಳ:

ಇನ್ನು, ಟೋಲ್ ಶುಲ್ಕ ಹೆಚ್ಚಳದ ಪೈಕಿ ಕಾರು, ಜೀಪ್‌, ವ್ಯಾನ್‌ ಸೇರಿ ಲಘು ಮೋಟಾರು ವಾಹನಗಳ ಟೋಲ್‌ ಶುಲ್ಕದಲ್ಲಿ ಅಷ್ಟಾಗಿ ವ್ಯತ್ಯಾಸವಾಗುವುದಿಲ್ಲ. ಉದಾಹರಣೆಗೆ ಬಾಗೇಪಲ್ಲಿ, ಗಡ್ಡೂರು, ವಿಮಾನನಿಲ್ದಾಣ ಟೋಲ್‌ ಪ್ಲಾಜಾಗಳಲ್ಲಿ ಈ ಮಾದರಿಯ ವಾಹನಗಳ ಟೋಲ್‌ ಶುಲ್ಕದಲ್ಲಿ ಯಾವುದೇ ವ್ಯತ್ಯಾಸ ಆಗುವುದಿಲ್ಲ. ಅದೇ ಕಣಿಮಿಣಿಕೆ, ಗಣಂಗೂರು ಟೋಲ್‌ ಪ್ಲಾಜಾಗಳಲ್ಲಿ ತಲಾ 5 ರು. ಟೋಲ್‌ ಶುಲ್ಕ ಹೆಚ್ಚಿಸಲಾಗುತ್ತಿದೆ. ಉಳಿದಂತೆ ಎಲ್ಲ ಟೋಲ್ ಪ್ಲಾಜಾಗಳಲ್ಲಿ ಮಿನಿ ಬಸ್‌, ಟ್ರಕ್‌/ಬಸ್‌, ಆಕ್ಸೆಲ್‌ ವಾಣಿಜ್ಯ ವಾಹನ, ಹೆವಿ ನಿರ್ಮಾನ ವಾಹನ, ಭಾರೀ ವಾಹನಗಳ ಟೋಲ್‌ ಶುಲ್ಕ ₹5 ರಿಂದ ₹30 ವರೆಗೆ ಹೆಚ್ಚಿಸಲಾಗುತ್ತಿದೆ.

ಟೋಲ್‌ ಶುಲ್ಕ ಹೆಚ್ಚಳದ ಜತೆಗೆ ಮಾಸಿಕ ಪಾಸ್‌ ದರದಲ್ಲೂ ಹೆಚ್ಚಳ ಮಾಡಲಾಗುತ್ತಿದೆ. ಅದರ ಪ್ರಕಾರ 3 ಸಾವಿರ ರು. ಇದ್ದಂತಹ ಮಾಸಿಕ ಪಾಸ್‌ ದರವನ್ನು 3,075 ರು.ಹೆ ಏರಿಕೆ ಮಾಡಲಾಗುತ್ತಿದೆ. ಈ ದರವು 2026-27ನೇ ಸಾಲಿಗೆ ಫಾಸ್ಟ್‌ಟ್ಯಾಗ್‌ ಹೊಂದಿರುವ ಖಾಸಗಿ (ವಾಣಿಜ್ಯೇತರ) ವಾಹನಗಳಿಗೆ ಅನ್ವಯವಾಗಲಿದೆ. ಮಾಸಿಕ ಪಾಸ್‌ ಪಡೆದ ವಾಹನಗಳು 200 ಟೋಲ್‌ ಕ್ರಾಸಿಂಗ್‌ವರೆಗೆ ಮಾತ್ರ ಪಾಸ್‌ ಅನ್ವಯವಾಗಲಿದೆ. ಒಂದು ವೇಳೆ 200 ಟೋಲ್‌ ಕ್ರಾಸಿಂಗ್‌ ಮಾಡಿದ್ದರೆ, ವಾರ್ಷಿಕ ಪಾಸ್‌ ಅವಧಿ ಮೀರಿದೆ ಎಂದು ಪರಿಗಣಿಸಿ ಹೆಚ್ಚುವರಿ ಟೋಲ್ ಶುಲ್ಕ ಪಾವತಿಸುವಂತೆ ಮಾಡಲಾಗುತ್ತಿದೆ.

ಯಾವೆಲ್ಲ ಹೆದ್ದಾರಿಗಳಲ್ಲಿ ದರ ಏರಿಕೆ ಅನ್ವಯ:

ಸದ್ಯ ನಿಗದಿ ಮಾಡಿರುವಂತೆ ಬೆಂಗಳೂರು-ಮೈಸೂರು (ಎನ್‌ಎಚ್‌ 275), ಬೆಂಗಳೂರು-ಹೈದರಾಬಾದ್‌ (ಎನ್‌ಎಚ್‌ 44), ಬೆಂಗಳೂರು-ತುಮಕೂರು-ಬೆಳಗಾವಿ (ಎನ್‌ಎಚ್‌ 48), ಬೆಂಗಳೂರು-ಹಾಸನ-ಮಂಗಳೂರು (ಎನ್‌ಎಚ್‌ 75), ಮಂಗಳೂರು-ಉಡುಪಿ-ಕುಂದಾಪುರ (ಎನ್‌ಎಚ್‌ 66), ವಿಜಯಪುರ-ಚಿತ್ರದುರ್ಗ (ಎನ್‌ಎಚ್‌ 50/52) ಹೆದ್ದಾರಿಗಳ ಟೋಲ್‌ ಶುಲ್ಕ ಹೆಚ್ಚಳವಾಗಲಿದೆ.