ಕಿತ್ತೂರಿನಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿದ ಆರೋಪಿ ರಮೇಶ ಕಿಲ್ಲಾರನ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ಪೊಲೀಸ್ ಪೇದೆ ಷರೀಫ್ ದಫೇದಾರ್‌ಗೆ ಚಾಕುವಿನಿಂದ ಇರಿದ ಆರೋಪಿಯನ್ನು ಬಂಧಿಸಲು ಹೋದಾಗ ಈ ಘಟನೆ ನಡೆದಿದೆ. ಗಾಯಗೊಂಡ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಳಗಾವಿ ಜಿಲ್ಲೆಯ ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು (ಶನಿವಾರ) ಬೆಳಗಿನ ಜಾವ 6 ಗಂಟೆ ಸುಮಾರಿಗೆ ಗಂಭೀರ ಅಪರಾಧಗಳಲ್ಲಿ ಭಾಗಿಯಾಗಿದ್ದ ಆರೋಪಿ ರಮೇಶ ಕಿಲ್ಲಾರನ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ ಘಟನೆ ವರದಿಯಾಗಿದೆ. ಆರೋಪಿ ರಮೇಶ ಕಿಲ್ಲಾರನನ್ನು ಬಂಧಿಸಲು ತೆರಳಿದ್ದ ಪೊಲೀಸರು. ಈ ವೇಳೆ ಪೊಲೀಸರ ಮೇಲೆ ಚಾಕುವಿನಿಂದ ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ಪೊಲೀಸ್ ಪೇದೆ ಷರೀಫ್ ದಫೇದಾರ್‌ಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾನೆ. ಮೊದಲಿಗೆ ಆರೋಪಿಯನ್ನು ಎಚ್ಚರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದರೂ ಆತ ಜಗ್ಗದ ಕಾರಣ, ಕಿತ್ತೂರು ಪಿಎಸ್‌ಐ ಪ್ರವೀಣ ಗಂಗೋಳ್ಳಿ ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ. ಬಳಿಕ ಗಾಯಗೊಂಡ ರಮೇಶ ಕಿಲ್ಲಾರನನ್ನು ತಕ್ಷಣವೇ ಬೆಳಗಾವಿಯ ಬೀಮ್ಸ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ.
2. ಬಾನು ಮುಷ್ತಾಕ್ ಹಣೆಗೆ ಅರಿಶಿಣ, ಕುಂಕುಮ ಹಚ್ಚಿ ದಸರಾ ಉದ್ಘಾಟಿಸಿದರೆ ನಮಗೆ ಅಭ್ಯಂತರವಿಲ್ಲ: ಪ್ರತಾಪ್ ಸಿಂಹ
ಸಾಹಿತಿ ಬಾನು ಮುಷ್ತಾಕ್ ಅವರು ದಸರಾ ಉದ್ಘಾಟನೆಗೆ ಬರುವಾಗ ಮಡಿ ಸೀರೆಯುಟ್ಟು, ಹಣೆಗೆ ಅರಿಶಿಣ, ಕುಂಕುಮ ಹಚ್ಚಿ ಬರಬೇಕು. ಈ ಮೂಲಕ ದಸರಾ ಸಂಪ್ರದಾಯಕ್ಕೆ ಗೌರವ ಕೊಡಬೇಕು. ಹೀಗೆ ಮಾಡಿದರೆ ನಮಗೆ ಅಭ್ಯಂತರವಿಲ್ಲ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ಹಿಂದೂಗಳಲ್ಲಿ ಹೆಣ್ಣನ್ನು ದೇವಿ ಸ್ಪರೂಪವಾಗಿ ನೋಡಲಾಗುತ್ತದೆ. ಹೀಗಾಗಿಯೇ ದೇಶಕ್ಕೆ ಭಾರತ ಮಾತೆ, ಕರ್ನಾಟಕಕ್ಕೆ ಕನ್ನಡಾಂಬೆ ಎಂದು ಕರೆಯುತ್ತೇವೆ. ನಮ್ಮ ಸಂಸ್ಕೃತಿ ಬಗ್ಗೆ ಮುಷ್ತಾಕ್ ಅಸಡ್ಡೆ ಮಾಡುತ್ತಾರೆ. ತಾತ್ಸಾರ ಇಟ್ಟುಕೊಂಡು ನಮ್ಮ ಬೆಟ್ಟಕ್ಕೆ ಹೇಗೆ ಬರುತ್ತಿರಿ? ಎಂದು ಪ್ರಶ್ನೆ ಮಾಡಿದರು.
3. ಮಹೇಶ್ ಶೆಟ್ಟಿ ತಿಮರೋಡಿಗೆ ಇದೀಗ ದಕ್ಷಿಣ ಕನ್ನಡ ಜಿಲ್ಲೆಯಿಂದ ಗಡೀಪಾರು ಕಂಟಕ
ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಗೆ ಇದೀಗ ದಕ್ಷಿಣ ಕನ್ನಡ ಜಿಲ್ಲೆಯಿಂದ ಗಡೀಪಾರು ಕಂಟಕ ಎದುರಾಗಿದೆ. ಮಂಗಳೂರು ಇತ್ತೀಚಿನ ದಿನಗಳಲ್ಲಿ ಸಾಲು, ಸಾಲು ಹತ್ಯೆಗಳಿಂದ ನಲುಗಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಅವರು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ. ಸಮಾಜಘಾತುಕ ಚಟುವಟಿಕೆಗಳಲ್ಲಿ ಭಾಗಿಯಾದ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದ ಆರೋಪದ ಮೇಲೆ ಮಹೇಶ್ ಶೆಟ್ಟಿ ತಿಮರೋಡಿ ಸಹಿತ 36 ಮಂದಿಯನ್ನು ಗಡೀಪಾರು ಮಾಡುವ ಕುರಿತು ಪೊಲೀಸ್ ಇಲಾಖೆ ಕಾನೂನು ಪ್ರಕ್ರಿಯೆ ಆರಂಭಿಸಿದೆ ಎನ್ನಲಾಗಿದೆ.
4. ರಾಜ್ಯದಲ್ಲಿ ಹಂದಿ ಜ್ವರ ಪತ್ತೆ: 57 ಹಂದಿ ಮಾರಣಹೋಮ!
ಹಂದಿ ಸಾಕಾಣಿಕೆ ಫಾರ್ಮ್‌ನಲ್ಲಿ ಕಳೆದೊಂದು ವಾರದ ಅವಧಿಯಲ್ಲಿ (ಆ.19ರಿಂದ) ಸುಮಾರು 150ಕ್ಕೂ ಹೆಚ್ಚು ಹಂದಿಗಳು ಸಾವನ್ನಪ್ಪಿದ್ದು, ಹಂದಿ ಜ್ವರದ ಆತಂಕ ಎದುರಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಹೆಬ್ರಿ ಗ್ರಾಮದ ಲಾಯರ್ ವೆಂಕಟರೆಡ್ಡಿ ಎಂಬುವರಿಗೆ ಸೇರಿದ ಫಾರಂನಲ್ಲಿ ಹಂದಿಗಳು ಸಾವನ್ನಪ್ಪಿವೆ. ಹಂದಿಗಳ ಸರಣಿ ಸಾವಿನ ಬಗ್ಗೆ ಎಚ್ಚೆತ್ತ ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು, ಹಂದಿಗಳ ಮಾದರಿಗಳನ್ನು ಹೆಚ್ಚಿನ ಪರೀಕ್ಷೆಗಾಗಿ ಭೂಪಾಲ್‌ನ ನಿಷಾನ್ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಪ್ರಯೋಗಾಲಯದ ವರದಿಯಲ್ಲಿ ಹಂದಿಗಳ ಸಾವಿಗೆ ಆಫ್ರಿಕನ್ ಹಂದಿ ಜ್ವರವೇ ಕಾರಣ ಎಂದು ತಿಳಿದು ಬಂದಿದೆ. ಹೀಗಾಗಿ, ಮುನ್ನೆಚ್ಚರಿಕಾ ಕ್ರಮವಾಗಿ ಫಾರ್ಮ್‌ನಲ್ಲಿದ್ದ ಉಳಿದ 57 ಹಂದಿಗಳನ್ನು ಕೊಲ್ಲಲಾಗಿದೆ.
5.ಹಸು ತಿನ್ನುವ ಬಾನು ಪೂಜೆ ಸಲ್ಲಿಸುವುದು ಹೇಗೆ? ಆರ್. ಅಶೋಕ್
ಬಿಜೆಪಿಯಿಂದ ಚಾಮುಂಡೇಶ್ವರಿ ದೇವಾಲಯ ಉಳಿಸಿ ಎಂಬ ಹೋರಾಟ ರೂಪಿಸಲಾಗುತ್ತಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ. ದಸರಾ ಉತ್ಸವದಲ್ಲಿ ಮೊದಲು ನಂದಿ ಧ್ವಜ ಹಾಗೂ ಗೋ ಪೂಜೆಯಾಗಬೇಕು. ಹಸು ತಿನ್ನುವ ಬಾನು ಮುಷ್ತಾಕ್ ಪೂಜೆ ಹೇಗೆ ಮಾಡುತ್ತಾರೆ ಎಂದು ಪ್ರಶ್ನಿಸಿದರು. ಎಲ್ಲವೂ ಹಿಂದೂ ಶಾಸ್ತ್ರ ಪ್ರಕಾರ ನಡೆಯುತ್ತದೆ. ಹಿಂದೂ ಪಂಚಾಂಗದ ಪ್ರಕಾರ ದಿನಾಂಕ ನಿಗದಿಯಾಗುತ್ತದೆ. ಇಷ್ಟೆಲ್ಲ ಇದ್ದರೂ ಇದು ಹಿಂದೂಗಳದ್ದಲ್ಲ ಎನ್ನುತ್ತಾರೆ. ಮುಸ್ಲಿಮರು ಮೂರ್ತಿ ಪೂಜೆ ಮಾಡುವುದಿಲ್ಲ. ಸಚಿವ ಜಮೀರ್ ಅಹ್ಮದ್ ಅವರು ಮೂರ್ತಿ ಪೂಜೆ ಬಗ್ಗೆ ಸ್ಪಷ್ಟನೆ ನೀಡಲಿ ಎಂದು ಆಗ್ರಹಿಸಿದರು.
