ಚಿಂತಾಮಣಿ ತಾಲೂಕಿನ ಹೆಬ್ರಿ ಗ್ರಾಮದ ಹಂದಿ ಫಾರಂನಲ್ಲಿ ಆಫ್ರಿಕನ್ ಹಂದಿ ಜ್ವರದಿಂದ 150ಕ್ಕೂ ಹೆಚ್ಚು ಹಂದಿಗಳು ಸಾವನ್ನಪ್ಪಿವೆ. ಉಳಿದ ಹಂದಿಗಳನ್ನು ಕೊಲ್ಲಲಾಗಿದ್ದು, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಜ್ವರ ಮನುಷ್ಯರಿಗೆ ಹರಡುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಿಂತಾಮಣಿ (ಆ.30): ಹಂದಿ ಸಾಕಾಣಿಕೆ ಫಾರ್ಮ್‌ನಲ್ಲಿ ಕಳೆದೊಂದು ವಾರದ ಅವಧಿಯಲ್ಲಿ (ಆ.19ರಿಂದ) ಸುಮಾರು 150ಕ್ಕೂ ಹೆಚ್ಚು ಹಂದಿಗಳು ಸಾವನ್ನಪ್ಪಿದ್ದು, ಹಂದಿ ಜ್ವರದ ಆತಂಕ ಎದುರಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಹೆಬ್ರಿ ಗ್ರಾಮದ ಲಾಯರ್ ವೆಂಕಟರೆಡ್ಡಿ ಎಂಬುವರಿಗೆ ಸೇರಿದ ಫಾರಂನಲ್ಲಿ ಹಂದಿಗಳು ಸಾವನ್ನಪ್ಪಿವೆ.

ಹಂದಿಜ್ವರ ಭೀತಿ: 57 ಹಂದಿಗಳ ಮಾರಣಾಹೋಮ

ಹಂದಿಗಳ ಸರಣಿ ಸಾವಿನ ಬಗ್ಗೆ ಎಚ್ಚೆತ್ತ ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು, ಹಂದಿಗಳ ಮಾದರಿಗಳನ್ನು ಹೆಚ್ಚಿನ ಪರೀಕ್ಷೆಗಾಗಿ ಭೂಪಾಲ್‌ನ ನಿಷಾನ್ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಪ್ರಯೋಗಾಲಯದ ವರದಿಯಲ್ಲಿ ಹಂದಿಗಳ ಸಾವಿಗೆ ಆಫ್ರಿಕನ್ ಹಂದಿ ಜ್ವರವೇ ಕಾರಣ ಎಂದು ತಿಳಿದು ಬಂದಿದೆ. ಹೀಗಾಗಿ, ಮುನ್ನೆಚ್ಚರಿಕಾ ಕ್ರಮವಾಗಿ ಫಾರ್ಮ್‌ನಲ್ಲಿದ್ದ ಉಳಿದ 57 ಹಂದಿಗಳನ್ನು ಕೊಲ್ಲಲಾಗಿದೆ.

ಹಂದಿಜ್ವರ: ಸತ್ತ ಹಂದಿಗಳನ್ನ ಕೆರೆಗೆ ಎಸೆದ ವ್ಯಕ್ತಿ:

ಇಲ್ಲಿನ ಫಾರ್ಮ್‌ನಲ್ಲಿ 200ಕ್ಕೂ ಹೆಚ್ಚು ಹಂದಿಗಳನ್ನು ಅವರು ಸಾಕಾಣಿಕೆ ಮಾಡುತ್ತಿದ್ದರು. ಈ ಪೈಕಿ, ಕಳೆದೊಂದು ವಾರದ ಅವಧಿಯಲ್ಲಿ 150ಕ್ಕೂ ಹೆಚ್ಚು ಹಂದಿಗಳು ಸಾವನ್ನಪ್ಪಿವೆ. ಸತ್ತ ಹಂದಿಗಳನ್ನು ಹೂಳುವ ಬದಲು, ತಾಲೂಕಿನ ದಂಡುಪಾಳ್ಯ ಕೆರೆಗೆ ಬಿಸಾಡಲಾಗಿದೆ. ವಿಷಯ ತಿಳಿದು ತಹಶೀಲ್ದಾರ್ ಮತ್ತಿತರ ಅಧಿಕಾರಿಗಳು ಶುಕ್ರವಾರ ಗ್ರಾಮಕ್ಕೆ ಭೇಟಿ ನೀಡಿದ್ದರು. ಜೆಸಿಬಿ ಮೂಲಕ ಹಂದಿಗಳ ಮೃತದೇಹಗಳನ್ನು ಹೊರತೆಗೆದು, ಅವುಗಳನ್ನು ಗುಂಡಿ ತೋಡಿ, ಮಣ್ಣಿನಲ್ಲಿ ಹೂತು ಹಾಕಿದರು. ಔಷಧಗಳನ್ನು ಸಿಂಪರಣೆ ಮಾಡಿ, ರೋಗ ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ. ಫಾರಂನಲ್ಲಿ ಉಳಿದಿರುವ 57 ಹಂದಿಗಳನ್ನು ಸುರಕ್ಷಿತ ವಿಧಾನದ ಮೂಲಕ ಕೊಂದು ಹಾಕಲಾಗಿದೆ.

ಹಂದಿಜ್ವರ ಹೇಗೆ ಹರಡುತ್ತೆ?

ಆಫ್ರಿಕನ್ ಹಂದಿ ಜ್ವರವು ಒಂದು ಪ್ರಾಣಿಯಿಂದ ಇನ್ನೊಂದು ಪ್ರಾಣಿಗೆ ಮಾತ್ರ ಹರಡುವ ರೋಗವಾಗಿದೆ. ಇದು ಮನುಷ್ಯರಿಗೆ ಹರಡುವುದಿಲ್ಲ. ಆದ್ದರಿಂದ ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಇಲಾಖೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ವೈರಸ್ ಹರಡದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಭರವಸೆ ನೀಡಿದ್ದಾರೆ. ಈ ಘಟನೆಯ ನಂತರ, ಸುತ್ತಮುತ್ತಲಿನ ಪ್ರದೇಶಗಳ ಹಂದಿ ಫಾರ್ಮ್‌ಗಳ ಮೇಲೆ ಇಲಾಖೆ ನಿಗಾ ಇರಿಸಿದೆ.