Asianet Suvarna News Asianet Suvarna News

ಕನಕ ಜಯಂತಿ: ಕೀರ್ತನೆಗಳಿಂದ ಸಮಾಜ ತಿದ್ದಿದ ದಾರ್ಶನಿಕ

ತಿಮ್ಮಪ್ಪನ ಹರಕೆಯಿಂದ ಹುಟ್ಟಿದ ಮಗು ತಿಮ್ಮಪ್ಪ ನಾಯಕನಾಗಿ ಬೆಳೆದು, ವಿಜಯನಗರದ ಮಾಂಡಳಿಕನಾಗಿದ್ದಾಗ ಕೊಪ್ಪರಿಗೆ ಹೊನ್ನು ದಾನ ಮಾಡಿ ಕನಕನಾದ. ತಾಯಿ, ಹೆಂಡತಿಯ ಅಗಲಿಕೆಯಿಂದ ವೈರಾಗ್ಯ ಮೂಡಿ ಕನಕದಾಸನಾದ. ಮುಂದೆ ವ್ಯಾಸಕೂಟ ಸೇರಿ ಭಕ್ತಶ್ರೇಷ್ಠ ಕನಕದಾಸನಾಗಿ ಕೀರ್ತನೆಗಳ ಮೂಲಕ ಸಮಾಜ ತಿದ್ದಿದ.

Today is a special article on the occasion of Kanaka Jayanti rav
Author
First Published Nov 30, 2023, 12:37 PM IST

ಸಿದ್ದವನಹಳ್ಳಿ ವೀರೇಶ್ ಕುಮಾರ್, ಹೊಳಲ್ಕೆರೆ

ತಲ್ಲಣಿಸದಿರು ಕಂಡ್ಯ ತಾಳು ಮನವೇ

ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ

ಎಂದು ಇಡೀ ಸಕಲ ಜೀವರಾಶಿಗಳಿಗೂ ಸಾಂತ್ವನ ನೀಡಿದ ಪಾಳೇಗಾರ, ಶ್ರೇಷ್ಠ ಸಂತ, ಕೀರ್ತನಾಕಾರ, ತತ್ವಜ್ಞಾನಿ, ದಾಸ ಸಾಹಿತ್ಯದ ಅಶ್ವಿನಿ ದೇವತೆಗಳಲ್ಲಿ ಒಬ್ಬರು ಕನಕದಾಸರು.

ವಿಜಯನಗರದ ಅರಸರ ಮಾಂಡಲೀಕನಾಗಿದ್ದ ಬೀರಪ್ಪ ನಾಯಕ, ಆತನ ಮಡದಿ ಬಚ್ಚಮ್ಮ. ಮಕ್ಕಳಾಗದಿದ್ದರಿಂದ ತಿರುಪತಿ ತಿಮ್ಮಪ್ಪನಲ್ಲಿ ಹರಕೆ ಹೊತ್ತರು. 1509ರಲ್ಲಿ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮದಲ್ಲಿ ಗಂಡು ಮಗುವಿನ ಜನನವಾಯಿತು. ಆ ಮಗುವಿಗೆ ತಿಮ್ಮಪ್ಪ ಎಂದೇ ನಾಮಕರಣ ಮಾಡಲಾಯಿತು. ತಂದೆ ಹೇಳಿದ ಪಾಠದಿಂದ ಶಕ್ತಿಶಾಲಿಯಾಗಿ ಬೆಳೆದ ಬಾಲಕ, ಎಳವೆಯಲ್ಲೇ ತಂದೆಯನ್ನು ಕಳೆದುಕೊಂಡು ತಾಯಿಯ ಆತ್ಮ ಬಲದಂತೆಯೇ ಬೆಳೆದ. ಇವರ ಶಕ್ತಿ ಸಾಮರ್ಥ್ಯಗಳಿಂದ ಮುಂದೆ ವಿಜಯನಗರದ ಅರಸರ ಮಾಂಡಲೀಕರಾಗಿ, ತಿಮ್ಮಪ್ಪ ನಾಯಕರದರು.

Siddaramaiah: ನಾನು ಜಾತಿಗೆ ಸೀಮಿತವಾಗಿ ಬದುಕುತ್ತಿಲ್ಲ: ಸಿದ್ದರಾಮಯ್ಯ

ಕನಕದಾಸನಾದ ತಿಮ್ಮಪ್ಪ ನಾಯಕ:

ದೇವಸ್ಥಾನ ನಿರ್ಮಾಣಕ್ಕಾಗಿ ಭೂಮಿಯನ್ನು ಅಗೆಯುತ್ತಿರುವ ಸಂದರ್ಭದಲ್ಲಿ ಏಳು ಕೊಪ್ಪರಿಗೆಯಷ್ಟು ಬಂಗಾರ ದೊರಕಿತು. ತಿಮ್ಮಪ್ಪ ನಾಯಕ ಕಾಗಿನೆಲೆಯಲ್ಲಿ ಆದಿಕೇಶವ ದೇವಸ್ಥಾನ ನಿರ್ಮಾಣ ಮಾಡಿ, ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು, ಉಳಿದದ್ದನ್ನು ಬಡಬಗ್ಗರಿಗೆ ಹಂಚಿದ. ಈ ಉದಾರ ಗುಣದಿಂದ ಜನರು ತಿಮ್ಮಪ್ಪ ನಾಯಕನನ್ನು ಕನಕ ಎಂದು ಕರೆದರು.

ಹೆಂಡತಿ ಸುಜ್ಞಾನ ವಧೂಟಿ ಹಾಗೂ ತಾಯಿಯ ಮರಣದಿಂದ ದುಃಖದ ಕೂಪಕ್ಕೆ ತಳ್ಳಲ್ಪಟ್ಟ ಕನಕನಿಗೆ ಭಗವಂತ ಕನಸಿನಲ್ಲಿ ಬಂದು ದಾಸನಾಗುವಂತೆ ಸೂಚಿಸಿದರೂ ಸ್ವೀಕರಿಸಲಿಲ್ಲ. ಶಿಗ್ಗಾಂವಿಯ ಮೇಲೆ ಪರಕೀಯರ ದಾಳಿ ನಡೆದಾಗ ಆತನಿಗೆ ಯುದ್ಧ ಮಾಡುವ ಸನ್ನಿವೇಶ ಎದುರಾಗಿ, ಅಪಾರವಾದ ಗಾಯಕ್ಕೆ ತುತ್ತಾದನು. ಈ ವೇಳೆ ಭಗವಂತನ ದರ್ಶನವಾಗಿ ವೈರಾಗ್ಯ ತಾಳಿದ ಕನಕ ಮೈ ಮೇಲೆ ಒಂದು ಪಂಚೆಯನ್ನುಟ್ಟು, ಹೆಗಲಿಗೆ ಕಂಬಳಿ ಹಾಕಿ, ಕೈಯಲ್ಲಿ ಏಕತಾರೆ ಹಿಡಿದು ಆದಿಕೇಶವನನ್ನು ನೆನೆಯುತ್ತಾ, ಈಶ ನಿನ್ನ ಭಜನೆಯನ್ನು ಆಶೆಯಿಂದ ಮಾಡುವೆನು ಎನ್ನುತ್ತಾ ಕನಕದಾಸನಾದ.

ವ್ಯಾಸಕೂಟ ಸೇರಿದ ದಾಸ:

ಗುರು ವ್ಯಾಸರಾಯರನ್ನು ಹುಡುಕುತ್ತಾ ಹೋರಾಟ ಕನಕದಾಸ ಕೆರೆ ನಿರ್ಮಾಣದಲ್ಲಿ ತೊಡಗಿದ್ದ ಗುರುವನ್ನು ಕಂಡು ತನ್ನನ್ನು ಶಿಷ್ಯನಾಗುವಂತೆ ಕೇಳಿಕೊಂಡ. ಕುರುಬನಿಗೇಕೆ ಕೋಣ ಮಂತ್ರವೆಂದು? ಹೇಳಿದಾಗ ಅದನ್ನೇ ಪಠಿಸಿದ ಕನಕದಾಸ, ಕೋಣವನ್ನೇ ಭೂಮಿಗೆ ಇಳಿಯುವಂತೆ ಮಾಡಿದ. ಇದನ್ನು ಕಂಡ ವ್ಯಾಸರಾಯರು ವ್ಯಾಸಕೂಟಕ್ಕೆ ಬರಲು ತಿಳಿಸಿದರು. ಅಲ್ಲಿಗೆ ಕನಕದಾಸರು ಹೋದಾಗ ಬಾಗಿಲಲ್ಲಿದ್ದವರು ಕೆಳಗಿನ ಕುಲದನೆಂದು ಅವನನ್ನು ಬಿಡದೆ, ನಮ್ಮ ಮನೆಯಲ್ಲಿ ಎಮ್ಮೆ ಕರುವಾಗಿದೆ. ಇದನ್ನು ಪುರಾಣ, ಭಾಗವತದ ಘಟನೆಯನ್ನು ಆಧರಿಸಿ ಹೇಳು ಎಂದ. ಕನಕ ಆ ಕ್ಷಣದಲ್ಲಿಯೇ "ವಿರಾಟ ನಗರದ ಅರಸನ ಅರಸಿಯ ಅನುಜನ ಕತ್ತಲೆಯಲ್ಲಿ ಗುದ್ದಿದವನ ಅಗ್ರಜನ ಪಿತನ ವಾಹನ ಹೆಂಡತಿಗೆ ಹೆರಿಗೆಯಾಯಿತು" ಎಂದರು. ಅಲ್ಲಿದ್ದವನಿಗೆ ಏನೂ ಅರ್ಥವಾಗಲಿಲ್ಲ ಬಿಡಿಸಿ ಹೇಳುವಂತೆ ಕೇಳಿಕೊಂಡಾಗ, ವಿರಾಟ ನಗರದ ಅರಸನ ಅರಸಿ ಸುಧೀಷ್ಣೆ, ಅನುಜ ಎಂದರೆ ಆಕೆಯ ತಮ್ಮ ಕೀಚಕ, ಕತ್ತಲೆಯಲ್ಲಿ ಗುದ್ದಿದವನು ಭೀಮ, ಅಗ್ರಜ ಎಂದರೆ ಭೀಮನ ಅಣ್ಣ ಧರ್ಮರಾಯ, ಪಿತನ ವಾಹನ ಎಂದರೆ ಧರ್ಮರಾಯನ ತಂದೆ ಯಮಧರ್ಮರಾಯ ವಾಹನ ಕೋಣ, ಎಮ್ಮೆಯ ಆದ್ದರಿಂದ ಅದರ ಹೆಂಡತಿ, ಅದಕ್ಕೆ ಹೆರಿಗೆಯಾಗಿದೆ ಎಂದು ಸವಿಸ್ತಾರವಾಗಿ ಹೇಳಿದರು. ಮರು ಮಾತನಾಡದೆ ಬಾಗಿಲಲ್ಲಿದ್ದವ ಅವರನ್ನು ನಮಸ್ಕರಿಸಿ ಒಳಗೆ ಕಳುಹಿಸಿದ, ಇದು ಅವರಿಗಿದ್ದ ಜ್ಞಾನದ ಅಗಾಧತೆಯನ್ನು ತಿಳಿಸುತ್ತದೆ.

ಭಗವಂತನನ್ನು ಭಾವಿಸಿದ ಶಿಷ್ಯ:

ವ್ಯಾಸರಾಯರು ಯಾರು ವೈಕುಂಠಕ್ಕೆ ಹೋಗಬಲ್ಲಿರಿ ಎಂದು ಕೇಳಿದಾಗ ಕನಕ, ನಾನು ಹೋದರೆ ಹೋದೇನು ಎಂದು ಹೇಳಿ, ನಾನು ಎಂಬ ಅಹಂಕಾರಕ್ಕೆ ವೈಕುಂಠದ ಬಾಗಿಲು ಹಿಡಿಸುವುದಿಲ್ಲವೆಂದು ಎಲ್ಲರಿಗೂ ದರ್ಶಿಸಿದರು. ಯಾರೂ ಇಲ್ಲದ ಸ್ಥಳದಲ್ಲಿ ಬಾಳೆಹಣ್ಣನ್ನು ತಿನ್ನಲು ಸಾಧ್ಯವಿಲ್ಲವೆಂದು ತಿಳಿಸಿ ಎಲ್ಲೆಡೆ ಭಗವಂತನ ಇರುವಿಕೆಯನ್ನು ತೋರಿದರು. ಹಿತ್ತಾಳೆಯ ಕೊಡವನ್ನು ತೊಳೆದುಕೊಂಡು ಬರಲು ವ್ಯಾಸರು ಹೇಳಿದಾಗ ಬೇರೆಯವರು ಹೊರಭಾಗ ಫಳಫಳ ಹೊಳೆಯುವಂತೆ ತೊಳೆದಿದ್ದರೆ, ಕನಕರು ಒಳಭಾಗವನ್ನು ಹೊಳೆಯುವಂತೆ ತೊಳೆದು ಅಂತರಂಗ ಶುದ್ಧಿಯೇ ಜೀವನದ ಬೆಳಕೆಂದರು. ನಿರ್ಮಲ ಭಕ್ತಿಯಿಂದ ಕಿಂಡಿಯಲ್ಲಿ ಶ್ರೀಕೃಷ್ಣನ ದರ್ಶನ ಪಡೆದ ಪುಣ್ಯಾತ್ಮರಿವರು. ಅದೇ ಇಂದು ಕನಕ ಕಿಂಡಿಯೆಂದು ಪ್ರಸಿದ್ಧಿ ಪಡೆದಿದೆ. ತಿರುಪತಿ ತಿಮ್ಮಪ್ಪನ ಕೈಯಿಂದಲೇ ಆಹಾರ ಸ್ವೀಕರಿಸಿ, ಜನರು ನೀಡಿದ ನೋವನ್ನು ಸಹಿಸಿಕೊಂಡು ಸತ್ಯದ ಸಾಕ್ಷಾತ್ಕಾರವನ್ನು ಜಗತ್ತಿನ ಮನ ಮುಟ್ಟಿಸಿ ವ್ಯಾಸಕೂಟವನ್ನ ದಾಸಕೂಟವನ್ನಾಗಿಸಿದರು.

ಕೀರ್ತನೆಗಳಿಂದ ಸಮಾಜ ತಿದ್ದಿದ ಕನಕದಾಸರು: ಆತ್ಮ ಸಮರ್ಪಣಾ ಭಾವದಿಂದ ಆದಿಕೇಶವರಾಯ ಎಂಬ ಅಂಕಿತದ ಕೀರ್ತನೆಗಳ ಮೂಲಕ ಸಮಾಜವನ್ನು ತಿದ್ದುವ ಕೆಲಸ ಮಾಡಿದರು. ಆತ್ಮ ಯಾವ ಕುಲ ಜೀವ ಯಾವ ಕುಲ, ಆತನೊಲಿದ ಮೇಲೆ ಯಾತರ ಕುಲವಯ್ಯಾ? ಎಂದು ಒಂದು ಕಡೆ ಪ್ರಶ್ನಿಸಿದರೆ ಮತ್ತೊಂದು ಕಡೆ, ಕುಲ ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ? ಎನ್ನುತ್ತ ಜಾತ್ಯತೀತ ಮನೋಭಾವನೆಯನ್ನು ಬಿತ್ತಿದರು. ಹಳ್ಳ ಹರಿದು ಹೋಗುವಾಗ ಗುಳ್ಳೆ ಬಂದು ಒಡೆಯುವಂತೆ, ಉಳ್ಳೆ ಪೊರೆಯಂತೆ ಕಾಣೋ ಸಂಸಾರದಾಟವು ಎಂಬ ಕೀರ್ತನೆ ರಚಿಸಿ ಸಂಸಾರ ಮೋಹ ತೊರೆಯಲು ಕರೆಕೊಟ್ಟರು. ಮೂಢನಂಬಿಕೆ, ತಿರಸ್ಕಾರ ಹಾಗೂ ಢಾಂಬಿಕಯನ್ನು ಖಂಡಿಸಿದರು. ಅವರ ಕೀರ್ತನೆಗಳಲ್ಲಿ ತೀವ್ರ ಭಕ್ತಿ, ತೀಕ್ಷ್ಣ ದೃಷ್ಟಿ, ಜಾನಪದ ಭಾಷೆ, ಲಯ, ಪೌರಾಣಿಕ ವ್ಯುತ್ಪತ್ತಿ, ಸ್ಪಷ್ಟ ನೇರ ನಿರೂಪಣೆ, ಲೋಕಾನುಭವ, ಚಿತ್ರಕ ಶಕ್ತಿ ಇವುಗಳನ್ನೆಲ್ಲ ಕಾಣಬಹುದು.

ಕನ್ನಡ ಸಾಹಿತ್ಯಕ್ಕೆ ಅನನ್ಯ ಕೊಡುಗೆ:

ಭೋಗಕ್ಕೆ ಮೂಲವಾದ ಶೃಂಗಾರವನ್ನೇ ವಸ್ತುವನ್ನಾಗಿರಿಸಿಕೊಂಡು ಕನಕದಾಸರಿಂದ ಆರಂಭದಲ್ಲಿ ರಚನೆಯಾದ ಕೃತಿ ಮೋಹನ ತರಂಗಿಣಿ, ಭತ್ತ ಮತ್ತು ರಾಗಿಯ ವಾಗ್ವಾದದ ಮೂಲಕ ರಾಮನ ಕಥಾನಕವನ್ನು ವಿವರಿಸುವ ರಾಮಧಾನ್ಯ ಚರಿತೆ, ವಿಧಿಯ ವೈಪರಿತ್ಯದಿಂದ ಸಜ್ಜನರಿಗೆ ಒದಗ ಬಹುದಾದ ವಿಪತ್ತು ಹಾಗೂ ದೈವ ಕೃಪೆಯಿಂದ ಆ ವಿಪತ್ತು ಮಂಜಿನಂತೆ ಹೇಗೆ ಕರಗುತ್ತದೆ ಎಂಬುದನ್ನು ಹೃದ್ಯವಾಗಿ ನಿರೂಪಿಸಿದ, ಭಾಮಿನಿ ಷಟ್ಪದಿಯಲ್ಲಿ ರಚನೆಯಾಗಿರುವ ನಳ ಚರಿತೆ, ದೇವಾ ರಕ್ಷಿಸು ನಮ್ಮನು ಅನವರತಾ ಎಂದು ಹರಿಯ ಮಹಿಮೆಯನ್ನು ಅರುಹಿದ ಹರಿಭಕ್ತ ಸಾರ, ನೃಸಿಂಹಸ್ತವ (ಉಪಲಬ್ಧವಿಲ್ಲ) ಕೃತಿಗಳು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕನಕದಾಸರು ನೀಡಿದ ಅನನ್ಯ ಕೊಡುಗೆಯಾಗಿವೆ.

ಧರ್ಮ ಇರುವುದು ನಮಗಾಗಿ, ನಾವು ಧರ್ಮಕ್ಕಾಗಿ ಅಲ್ಲ: ಸಿಎಂ ಸಿದ್ದರಾಮಯ್ಯ

ಮೇಲಿನ ಕೆಲ ಕಥೆಗಳೆಲ್ಲ ನಡೆದಿವೆಯೋ ಅಥವಾ ಇಲ್ಲವೋ ಎಂದು ಚರ್ಚಿಸುವುದಕ್ಕಿಂತ ಕಥೆ ಮೌಲ್ಯಕ್ಕಾಗಿ ಹುಟ್ಟಿರುತ್ತದೆ ಎಂಬುದನ್ನು ನಾವು ಮರೆಯದೆ ಮೌಲ್ಯಗಳನ್ನ ಅಳವಡಿಸಿಕೊಂಡು ಹೋಗಬೇಕು. ಕನಕ ಕಿಂಡಿಯ ಸಂಘರ್ಷಕ್ಕಿಂತ ನಮ್ಮ ಒಳಗಿನ ಕಿಂಡಿಯ ಸಂಘರ್ಷ ವೇರ್ಪಡಬೇಕು. ಕನಕದಾಸರು ಒಬ್ಬ ಭವಿ, ಮತ್ತೊಬ್ಬ ಅನುಭಾವಿ. ಜಾತ್ಯತೀತತೆಯನ್ನು ಹೊಂದಿದ ಅವರಿಗೆ ನಾವು ಜಾತಿ ಪಟ್ಟ ಕಟ್ಟುವುದು ಸರಿಯೇ? ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ಎಂದು ಜೀವನದ ಸತ್ವ ಸಾರಿದ ಕನಕದಾಸರ ಮಾತು ಸತ್ಯವಲ್ಲವೇ? ಕನಕದಾಸರ ಮೆರವಣಿಗೆ, ಮೂರ್ತಿಗಳ ಪ್ರತಿಷ್ಠಾಪನೆಗಿಂತ ಅವರ ವಿಚಾರಧಾರೆಗಳ ಅನುಷ್ಠಾನವೇ ಮುಖ್ಯವಲ್ಲವೇ? ಕನಕನಂತೆ ನಮ್ಮ ವ್ಯಕ್ತಿತ್ವ ಬಂಗಾರವಾಗಬೇಕಾದರೆ ನಾವು ಅವನ ಮಾಯೆಯೊಳಗೆ ದಾಸರಾಗಬೇಕಾಗಿದೆ.

Follow Us:
Download App:
  • android
  • ios