Asianet Suvarna News Asianet Suvarna News

Siddaramaiah: ನಾನು ಜಾತಿಗೆ ಸೀಮಿತವಾಗಿ ಬದುಕುತ್ತಿಲ್ಲ: ಸಿದ್ದರಾಮಯ್ಯ

ಕನಕದಾಸರು, ಬುದ್ಧ, ಬಸವ, ಅಂಬೇಡ್ಕರ್‌ ಸೇರಿದಂತೆ ಇಂತಹ ಅನೇಕ ಮಹನೀಯರು ಬಯಸಿದ್ದ ಜಾತ್ಯತೀತ, ಸಮಾನತೆಯ ಸಮಾಜ ನಿರ್ಮಾಣ ಪ್ರತಿಯೊಬ್ಬರ ಸಂಕಲ್ಪವಾಗಬೇಕು. ನಾನು ರಾಜಕೀಯ ಜೀವನದುದ್ದಕ್ಕೂ ಸಂವಿಧಾನ, ಸಮಾನತೆಯ ವಿರೋಧಿಸುವರು ಹಾಗೂ ಕೋಮುವಾದಿಗಳ ವಿರುದ್ಧ ಹೋರಾಟ ನಡೆಸುತ್ತೇನೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

I am not living limited to caste says Siddaramaiah bengaluru rav
Author
First Published Nov 28, 2022, 10:26 AM IST

ಬೆಂಗಳೂರು (ನ.28) : ಕನಕದಾಸರು, ಬುದ್ಧ, ಬಸವ, ಅಂಬೇಡ್ಕರ್‌ ಸೇರಿದಂತೆ ಇಂತಹ ಅನೇಕ ಮಹನೀಯರು ಬಯಸಿದ್ದ ಜಾತ್ಯತೀತ, ಸಮಾನತೆಯ ಸಮಾಜ ನಿರ್ಮಾಣ ಪ್ರತಿಯೊಬ್ಬರ ಸಂಕಲ್ಪವಾಗಬೇಕು. ನಾನು ರಾಜಕೀಯ ಜೀವನದುದ್ದಕ್ಕೂ ಸಂವಿಧಾನ, ಸಮಾನತೆಯ ವಿರೋಧಿಸುವರು ಹಾಗೂ ಕೋಮುವಾದಿಗಳ ವಿರುದ್ಧ ಹೋರಾಟ ನಡೆಸುತ್ತೇನೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಕಾಳಿದಾಸ ಮತ್ತು ಸಂಗೊಳ್ಳಿ ರಾಯಣ್ಣ ವಿದ್ಯಾರ್ಥಿ ನಿಲಯದ ಹಳೆಯ ವಿದ್ಯಾರ್ಥಿಗಳ ಸಂಘವು ಭಾನುವಾರ ನಗರದ ಡಿ.ದೇವರಾಜ ಅರಸು ಭವನದಲ್ಲಿ ಆಯೋಜಿಸಿದ್ದ ‘ಭಕ್ತ ಶ್ರೇಷ್ಠ ಕನಕದಾಸ ಜಯಂತ್ಯೋತ್ಸವ’ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

Karnataka Politics: ಅಧಿಕಾರ ದೊರೆತರೆ ಮತ್ತೆ ಜನಪರ ಆಡಳಿತ: ಸಿದ್ದರಾಮಯ್ಯ

ನಾನು ಮುಖ್ಯಮಂತ್ರಿಯಾಗಿದ್ದಾಗ ಕನಕದಾಸರ ಜಯಂತ್ಯುತ್ಸವ ಆಚರಣೆಗೆ ಚಾಲನೆ ನೀಡಿದ್ದೆ. ಅಷ್ಟೇ ಅಲ್ಲ ನಾಡಪ್ರಭು ಕೆಂಪೇಗೌಡರ ಜಯಂತಿ, ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಸೇರಿದಂತೆ ಅನೇಕ ಮಹನೀಯರ ಜಯಂತಿಗಳ ಆಚರಣೆಗೆ ಚಾಲನೆ ನೀಡಿದ್ದೆವು. ಅದು ಈಗ ಎಲ್ಲರಿಗೂ ಪ್ರೇರಣೆಯಾಗಿದೆ. ಕನಕದಾಸರು ತಮ್ಮ ಕೀರ್ತನೆ ತತ್ವಪದಗಳ ಮೂಲಕ ಜಾತ್ಯತೀತ ತತ್ವವನ್ನು ಜೀವನದುದ್ದಕ್ಕೂ ಸಾರಿದವರು. ಅವರ ಮಾರ್ಗದಲ್ಲಿ ನಾವು ನಡೆಯಬೇಕು. ಇದೇ ಉದ್ದೇಶದಿಂದ ನಾನು ಯಾವುದೇ ಒಂದು ಜಾತಿಗೆ ಸೀಮಿತನಾಗಿ ಉಳಿಯದೆ ಎಲ್ಲರನ್ನೂ ಜೊತೆಯಲ್ಲಿ ಕೊಂಡೊಯ್ಯುವ ಕೆಲಸ ಮಾಡಿದ್ದೇನೆ ಎಂದರು.

ದೇಶದಲ್ಲಿ ಅನೇಕ ಜಾತಿ, ಧರ್ಮಗಳಿವೆ. ಆದರೆ, ಇವ್ಯಾವುದೂ ಮನುಷ್ಯ ಈ ಭೂಮಿ ಮೇಲೆ ಜನ್ಮ ತಳೆದಾಗಲೇ ಹುಟ್ಟಿಮನುಷ್ಯನ ಜೊತೆಯಲ್ಲೇ ಬಂದವಲ್ಲ. ಬುದ್ಧಿವಂತ ಪ್ರಾಣಿ ಮನುಷ್ಯ ಕಾಲ ಕಳೆದಂತೆ ತನ್ನ ಸ್ವಾರ್ಥಕ್ಕಾಗಿ ಜಾತಿ, ಧರ್ಮಗಳನ್ನು ಮಾಡಿಕೊಂಡಿದ್ದಾನೆ. ನಾವು ಯಾವುದೇ ಧರ್ಮ, ಜಾತಿಗೆ ಸೇರಿದರೂ ಮೊದಲು ಮನುಷ್ಯರು ಎಂದು ತಿಳಿದುಕೊಳ್ಳಬೇಕು. ಯಾವ ಮನುಷ್ಯನೂ ಇಂತಹದ್ದೇ ಧರ್ಮ, ಜಾತಿಯಲ್ಲಿ ಹುಟ್ಟಬೇಕೆಂದು ಅರ್ಜಿ ಹಾಕಿಕೊಂಡು ಹುಟ್ಟಿರುವುದಿಲ್ಲ ಎಂದು ತಿಳಿಸಿದರು.

ನಿನ್ನೆ ಸಂವಿಧಾನ ದಿನಾಚರಣೆ ಮಾಡಿದ್ದೇವೆ. ಸಂವಿಧಾನ ಬರುವ ಮುನ್ನ ಸಮಾನ ಅವಕಾಶ ಕೊಡುವ ವ್ಯವಸ್ಥೆ ಇರಲಿಲ್ಲ. ಕೆಳವರ್ಗದವರಿಗೆ ಮತದಾನದ ಹಕ್ಕು ಇರಲಿಲ್ಲ. ಆದರೆ, ಸಂವಿಧಾನ ರಚನೆಯಾದ ಬಳಿಕ ರಾಷ್ಟ್ರಪತಿಯಾಗಲಿ, ಸಾಮಾನ್ಯ ವ್ಯಕ್ತಿಯಾಗಲಿ ಒಬ್ಬರಿಗೆ ಒಂದು ಮತ ಚಲಾಯಿಸುವ ಹಕ್ಕು ಸಿಕ್ಕಿದೆ. ಕನಕ, ಬುದ್ದ, ಬಸವ, ಅಂಬೇಡ್ಕರ್‌ ಅವರ ಆಶಯಗಳಡಿಯೇ ನಮ್ಮ ಸಂವಿಧಾನ ರಚನೆ ಆಗಿದೆ. ಅದನ್ನು ಪ್ರತಿಯೊಬ್ಬರೂ ಗೌರವಿಸಿ ಅರ್ಥಪೂರ್ಣ ಅನುಷ್ಠಾನಕ್ಕೆ ಎಲ್ಲರೂ ಶ್ರಮಿಸಬೇಕು ಎಂದು ಸಿದ್ದರಾಮಯ್ಯ ಕರೆ ನೀಡಿದರು.

ಸಿದ್ರಾಮಣ್ಣರವರೇ 5 ವರ್ಷ ಸಿಎಂ ಆಗಿದ್ರಿ, ಏನು ಮಾಡಿದ್ರೀ?: ಸಿಎಂ ಬೊಮ್ಮಾಯಿ

ಮಾಜಿ ಸಚಿವ ಎಚ್‌.ಎಂ.ರೇವಣ್ಣ ಮಾತನಾಡಿ, ಕುರುಬ ಸಮುದಾಯದ ಮುಂದಿನ ಪೀಳಿಗೆಗೆ ನಾಯಕರನ್ನು ಹುಟ್ಟಿಹಾಕುವ ಕೆಲಸವನ್ನು ಎಲ್ಲ ಕ್ಷೇತ್ರಗಳ ಜನರು ಮಾಡಬೇಕಿದೆ. ಇದು ಕೇವಲ ರಾಜಕೀಯ ಕ್ಷೇತ್ರದಲ್ಲಿ ಇರುವವರಿಗೆ ಮಾತ್ರ ಸೀಮಿತವಾಗಿಲ್ಲ. ಅಧಿಕಾರಿಗಳು ಸಮುದಾಯದ ಜನರಿಗೆ ಸೌಲಭ್ಯವನ್ನು ಕಲ್ಪಿಸಲು ಗಮನ ಹರಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕುರುಬ ಸಮುದಾಯದ 35 ವಿದ್ಯಾರ್ಥಿನಿಯರಿಗೆ ಸಂಘದಿಂದ ವಿದ್ಯಾರ್ಥಿ ವೇತನ ನೀಡಲಾಯಿತು. ಸಮುದಾಯದ ಕೆಎಎಸ್‌ ಮತ್ತು ಐಎಎಸ್‌ ಅಧಿಕಾರಿಗಳನ್ನು ಇದೇ ವೇಳೆ ಸನ್ಮಾನಿಸಲಾಯಿತು. ಕಾಗಿನೆಲೆ ಗುರುಪೀಠದ ಶಿವಾನಂದಪುರಿ ಸ್ವಾಮೀಜಿ, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜು, ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಎಂ.ರಾಮಯ್ಯ ಇದ್ದರು.

Follow Us:
Download App:
  • android
  • ios