Asianet Suvarna News Asianet Suvarna News

ಧರ್ಮ ಇರುವುದು ನಮಗಾಗಿ, ನಾವು ಧರ್ಮಕ್ಕಾಗಿ ಅಲ್ಲ: ಸಿಎಂ ಸಿದ್ದರಾಮಯ್ಯ

ಧರ್ಮ ಇರುವುದು ನಮಗಾಗಿ, ನಾವು ಧರ್ಮಕ್ಕಾಗಿ ಅಲ್ಲ. ಹಿಂದಿನ ಜನ್ಮ-ಮುಂದಿನ ಜನ್ಮ ಎನ್ನುವುದು ಕೂಡ ಇಲ್ಲ. ಈ ಜನ್ಮದಲ್ಲಿ ನಾವು ಮಾಡುವ ಕೆಲಸಗಳೇ ಮುಖ್ಯ. ಈ ಕಾರಣಕ್ಕೆ ಬಸವಾದಿ ಶರಣರು ಮತ್ತು ಕನಕದಾಸರು ಕರ್ಮ ಸಿದ್ಧಾಂತ ಮತ್ತು ಜನ್ಮದ ಮೌಢ್ಯವನ್ನು ಸಾರಾಸಗಟಾಗಿ ತಿರಸ್ಕರಿಸಿದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Religion is for us we are not for religion says cm siddaramaiaha at kaginele rav
Author
First Published Nov 30, 2023, 9:46 AM IST

ಹಾವೇರಿ (ಕಾಗಿನೆಲೆ) (ನ.30) :  ಧರ್ಮ ಇರುವುದು ನಮಗಾಗಿ, ನಾವು ಧರ್ಮಕ್ಕಾಗಿ ಅಲ್ಲ. ಹಿಂದಿನ ಜನ್ಮ-ಮುಂದಿನ ಜನ್ಮ ಎನ್ನುವುದು ಕೂಡ ಇಲ್ಲ. ಈ ಜನ್ಮದಲ್ಲಿ ನಾವು ಮಾಡುವ ಕೆಲಸಗಳೇ ಮುಖ್ಯ. ಈ ಕಾರಣಕ್ಕೆ ಬಸವಾದಿ ಶರಣರು ಮತ್ತು ಕನಕದಾಸರು ಕರ್ಮ ಸಿದ್ಧಾಂತ ಮತ್ತು ಜನ್ಮದ ಮೌಢ್ಯವನ್ನು ಸಾರಾಸಗಟಾಗಿ ತಿರಸ್ಕರಿಸಿದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಶ್ರೀಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠದಲ್ಲಿ ಆಯೋಜಿಸಿದ್ದ ೫೩೬ನೇ ಶ್ರೀ ಕನಕ ಜಯಂತ್ಯುತ್ಸವ ಮತ್ತು ಭಾವೈಕ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಾಗಿನೆಲೆ ಪೀಠ ಯಾವತ್ತೂ ಒಂದು ಜಾತಿಯ ನೆಲೆ ಆಗಬಾರದು. ಇದು ಎಲ್ಲಾ ಶೋಷಿತ ಸಮುದಾಯಗಳ ನೆಲೆ ಆಗಬೇಕು. ಕನಕ ಜಯಂತಿ ಪ್ರಯುಕ್ತ ಭಾವೈಕ್ಯತಾ ಸಮಾವೇಶ ಏರ್ಪಿಡಿಸಿರುವ ಶ್ರೀ ಮಠದ ಗುರುಗಳಿಗೆ ಹೃದಯಪೂರ್ವಕವಾಗಿ ವಂದಿಸುತ್ತೇನೆ. ಇದು ಅತ್ಯಂತ ಅರ್ಥಪೂರ್ಣ ಕಾರ್ಯಕ್ರಮ ಎಂದರು.

 

ಬೆಂಗಳೂರು ಟೆಕ್‌ ಸಮ್ಮಿಟ್‌: ಐಟಿಗೆ ಮತ್ತಷ್ಟು ಅಗತ್ಯ ಮೂಲಸೌಕರ್ಯ, ಸಿದ್ದು

ನಾವ್ಯಾರೂ ಅರ್ಜಿ ಹಾಕೊಂಡು ಜಾತಿ-ಧರ್ಮ ಆರಿಸಿಕೊಂಡು ಹುಟ್ಟಿಲ್ಲ. ಮೊದಲು ಮನುಷ್ಯರು ಮನುಷ್ಯರನ್ನು ಪ್ರೀತಿಸಬೇಕು. ಜಾತಿ-ಧರ್ಮ ರಹಿತ ಮನುಷ್ಯ ಪ್ರೇಮವನ್ನೇ ಕನಕದಾಸರು ಜಗತ್ತಿಗೆ ನೀಡಿದರು. ಕನಕಗುರು ಪೀಠ ಸ್ಥಾಪಿಸುವಾಗ ಇದು ಕುರುಬರ ಮಠ ಆಗಬೇಕು ಎಂದು ಇಚ್ಚಿಸಲೇ ಇಲ್ಲ. ಎಲ್ಲಾ ಶೋಷಿತ ಧರ್ಮಗಳ ಮಠ ಆಗಬೇಕು ಎನ್ನುವುದು ನಮ್ಮೆಲ್ಲರ ಉದ್ದೇಶವಾಗಿತ್ತು ಎಂದು ಸ್ಮರಿಸಿಕೊಂಡರು.

ಬಸವಣ್ಣನವರು, ಇವ ನಮ್ಮವ ಇವ ನಮ್ಮವ ಎಂದರೆ, ಕುವೆಂಪು ಅವರು, ಹುಟ್ಟುವಾಗ ಎಲ್ಲರೂ ವಿಶ್ವ ಮಾನವರು ಎಂದರು, ಅಂಬೇಡ್ಕರ್ ಅವರು ಸಮ ಸಮಾಜದ ಬಗ್ಗೆ ಹೇಳಿದರು. ಬಸವಾದಿ ಶರಣರು, ಕನಕದಾಸರು, ಅಂಬೇಡ್ಕರ್, ಕುವೆಂಪು, ಸೂಫಿಗಳ ಆಶಯಗಳೆಲ್ಲಾ ಒಂದೇ ಆಗಿತ್ತು. ಆದ್ದರಿಂದ ನಾವು ಇವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಇದೇ ವೇಳೆ ರೇವಣಸಿದ್ದೇಶ್ವರ, ಬೀರಲಿಂಗೇಶ್ವರ, ಮೈಲಾರಲಿಂಗೇಶ್ವರ, ಮಹಾಸಿದ್ದೇಶ್ವರಿ ದೇವರುಗಳ ಕುಂಭಾಭಿಷೇಕ ನೆರವೇರಿಸಲಾಯಿತು.

ಹುಬ್ಬಳ್ಳಿ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ವಿಜಯಪುರದ ಹಜರತ್ ಹಾಶಿಮ್ ಪೀರ್ ದರ್ಗಾದ ಸೈಯ್ಯದ್ ಮೊಹಮ್ಮದ್ ತನ್ವೀರ್ ಹಾಶ್ಮಿ, ಕರ್ನಾಟಕ ಧರ್ಮಪ್ರಾಂತದ ಧರ್ಮಗುರು ಡಾ. ಫಾ. ಅಲ್ಫೋನ್ಸ್ ಫರ್ನಾಂಡೀಸ್ ಯೇಸು ಸಾನಿಧ್ಯ ವಹಿಸಿದ್ದರು.

ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್, ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ, ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ, ಮುಖ್ಯ ಸಚೇತಕ ಸಲೀಂ ಅಹ್ಮದ್‌, ಮಾಜಿ ಸಚಿವರಾದ ಎಚ್.ಎಂ. ರೇವಣ್ಣ, ಎಚ್‌.ವಿಶ್ವನಾಥ, ಶಾಸಕರಾದ ಬಿ.ಜಿ. ಗೋವಿಂದಪ್ಪ, ಶಾಸಕ ಯು.ಬಿ. ಬಣಕಾರ, ಪ್ರಕಾಶ ಕೋಳಿವಾಡ, ಶ್ರೀನಿವಾಸ ಮಾನೆ ಇತರರು ಇದ್ದರು.

ಸೇವೆ ಮಾಡುವಾಗ ಜಾತಿ, ಧರ್ಮ ನೋಡಬಾರದು

ರಾಜಕಾರಣ ಎಂಬುದು ಸಮಾಜ ಸೇವೆಯಾಗಿದ್ದು, ಸೇವೆ ಮಾಡುವಾಗ ಯಾವುದೇ ಜಾತಿ, ಧರ್ಮ ನೋಡಬಾರದು. ಎಲ್ಲರ ಸೇವೆ ಮಾಡುವುದೇ ನಿಜವಾದ ಸಮಾಜ ಸೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಆರೋಗ್ಯ ಇಲಾಖೆಯ 262 ಹೊಸ ಆಂಬ್ಯುಲೆನ್ಸ್‌ ಸೇವೆಗಳಿಗೆ ಇಂದು ಸಿಎಂ ಚಾಲನೆ

ಸಮಾಜದ ಕಟ್ಟಕಡೆಯ ಮನುಷ್ಯರನ್ನು ಗುರುತಿಸಿ ಅವರಿಗೆ ಆರ್ಥಿಕ, ಸಾಮಾಜಿಕ ಶಕ್ತಿಯನ್ನು ತುಂಬಬೇಕು. ರಾಜಕೀಯ ಪ್ರಜಾಪ್ರಭುತ್ವ ಸಾಮಾಜಿಕ ಪ್ರಜಾಪ್ರಭುತ್ವದ ತಳಹದಿಯ ಮೇಲೆ ನಿಂತಾಗ ಮಾತ್ರ ರಾಜಕೀಯ ಪ್ರಜಾಪ್ರಭುತ್ವದ ಸೌಧ ಉಳಿಯಲು ಸಾಧ್ಯ. ಇಲ್ಲದಿದ್ದರೆ ಭವಿಷ್ಯದ ದಿನಗಳಲ್ಲಿ ಆ ಕಟ್ಟಡ ಧ್ವಂಸವಾಗುತ್ತದೆ. ಆದ್ದರಿಂದ ರಾಜಕೀಯ ಪ್ರಜಾಪ್ರಭುತ್ವವು ಸಾಮಾಜಿಕ, ಆರ್ಥಿಕ ಪ್ರಜಾಪ್ರಭುತ್ವದ ತಳಹದಿಯಾಗಿ ನಿಲ್ಲಬೇಕು ಎಂದರು.

ಸಂವಿಧಾನವೇ ನಮಗೆ ಧರ್ಮ. ಆ ಧರ್ಮದ ಪ್ರಕಾರ ನಡೆದುಕೊಳ್ಳುವುದೇ ಸರ್ಕಾರದ ಕರ್ತವ್ಯ. ಆ ರೀತಿ ನಡೆದುಕೊಳ್ಳುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಚುನಾವಣೆಗಳ ಸಂದರ್ಭದಲ್ಲಿ ಜನರಿಗೆ ನೀಡುವ ಭರವಸೆಗಳನ್ನು ಈಡೇರಿಸುವ ಕೆಲಸವನ್ನು ಪ್ರಮಾಣಿಕವಾಗಿ ಮಾಡಬೇಕು. ನಾವು ಕೊಟ್ಟಿದ್ದ ಐದು ಗ್ಯಾರಂಟಿಗಳಲ್ಲಿ ಈಗಾಗಲೇ ನಾಲ್ಕು ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದೇವೆ. ಜನರಿಗೆ ಮಾತು ಕೊಟ್ಟಂತೆ ನಡೆದುಕೊಂಡಿದ್ದೇವೆ ಎಂದರು.

Follow Us:
Download App:
  • android
  • ios