ಸಾರ್ವಜನಿಕರ ತೀವ್ರ ಆಕ್ರೋಶದ ಹಿನ್ನೆಲೆಯಲ್ಲಿ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಕೆಎಸ್‌ಆರ್‌ಟಿಸಿ ಬಿಎಂಟಿಸಿ ಬಸ್‌ಗಳ ಮೇಲೆ ಗುಟ್ಕಾ ತಂಬಾಕು ಉತ್ಪನ್ನಗಳ ಜಾಹೀರಾತನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ಈಗಾಗಲೇ ಅಳವಡಿಸಿರುವ ಜಾಹೀರಾತುಗಳನ್ನು ತಕ್ಷಣವೇ ತೆಗೆದುಹಾಕಲು ಸೂಚಿಸಿದೆ.

ಬೆಂಗಳೂರು (ಜ.30): ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ಗಳ ಮೇಲೆ ಗುಟ್ಕಾ, ತಂಬಾಕು ಉತ್ಪನ್ನಗಳ ಜಾಹೀರಾತು ರಾರಾಜಿಸುತ್ತಿದ್ದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಶಾಲಾ ಮಕ್ಕಳು ಮತ್ತು ಯುವಜನತೆಯ ಮೇಲೆ ಇದು ಕೆಟ್ಟ ಪ್ರಭಾವ ಬೀರುತ್ತಿದೆ, ಹಣದಾಸೆಗೆ ಬಸ್‌ ಮೇಲೆ ಜಾಹೀರಾತು ಹಾಕುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ನಾಗರಿಕರು ತಿರುಗಿಬಿದ್ದ ಹಿನ್ನೆಲೆ ಇದೀಗ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು, ಕೆಎಸ್‌ಆರ್‌ಟಿಸಿ (KSRTC) ಮತ್ತು ಬಿಎಂಟಿಸಿ (BMTC) ಬಸ್‌ಗಳ ಮೇಲೆ ಇಂತಹ ಜಾಹೀರಾತುಗಳನ್ನು ಪ್ರದರ್ಶಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.

ಸಚಿವರಿಂದ ಕಟ್ಟುನಿಟ್ಟಿನ ಆದೇಶ

ಸಾರಿಗೆ ಸಚಿವರು ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಅಧಿಕೃತ ಸೂಚನಾ ಪತ್ರ ರವಾನಿಸಿದ್ದಾರೆ.'ಸಾರ್ವಜನಿಕರ ಹಿತದೃಷ್ಟಿಯಿಂದ ಈ ಕೂಡಲೇ ಜಾರಿಗೆ ಬರುವಂತೆ, ಬಸ್ಸುಗಳಲ್ಲಿ ಮತ್ತು ಬಸ್ ನಿಲ್ದಾಣಗಳಲ್ಲಿ ತಂಬಾಕು ಉತ್ಪನ್ನಗಳ ಸೇವನೆಗೆ ಉತ್ತೇಜಿಸುವ ನೇರ ಅಥವಾ ಪರೋಕ್ಷವಾದ ಯಾವುದೇ ಜಾಹೀರಾತುಗಳನ್ನು ಪ್ರಚಾರ ಮಾಡುವಂತಿಲ್ಲ ಎಂದು ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ತೆರವಿಗೆ ಗಡುವು ನಿಗದಿ

ಕೇವಲ ಹೊಸ ಜಾಹೀರಾತುಗಳ ನಿಷೇಧ ಮಾತ್ರವಲ್ಲದೆ, ಈಗಾಗಲೇ ಬಸ್‌ಗಳ ಮೇಲೆ ಅಳವಡಿಸಲಾಗಿರುವ ಗುಟ್ಕಾ ಬ್ರಾಂಡ್‌ಗಳ ಚಿತ್ರಗಳನ್ನು ತಕ್ಷಣವೇ ತೆಗೆದುಹಾಕಲು ಸಚಿವರು ಆದೇಶಿಸಿದ್ದಾರೆ. ಜಾಹೀರಾತುಗಳನ್ನು ತೆರವುಗೊಳಿಸಲು ನಿರ್ದಿಷ್ಟ ಸಮಯವನ್ನು ನಿಗದಿಪಡಿಸುವಂತೆ ಮತ್ತು ಆ ಗಡುವಿನೊಳಗೆ ಎಲ್ಲಾ ಪ್ರಚಾರದ ಫಲಕಗಳನ್ನು ಕಿತ್ತೆಸೆಯುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

ಆರೋಗ್ಯಕ್ಕೆ ಆದ್ಯತೆ ನೀಡಿದ ಸಾರಿಗೆ ಇಲಾಖೆ

ಸಾರಿಗೆ ಸಂಸ್ಥೆಯು ಆದಾಯಕ್ಕಿಂತ ಜನರ ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಬೇಕೆಂಬ ನಿಲುವನ್ನು ಸಚಿವರು ತಳೆದಿದ್ದಾರೆ. ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವ ಲಕ್ಷಾಂತರ ಜನರಿಗೆ ತಪ್ಪು ಸಂದೇಶ ರವಾನೆಯಾಗುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ.