ಬಿಎಂಟಿಸಿ ಬಸ್ ಜಾಹೀರಾತು ಹರಿದುಹಾಕಿದ ಕನ್ನಡಪರ ಹೋರಾಟಗಾರರು; ಗುಟ್ಕಾ ಪ್ರದರ್ಶನಕ್ಕೆ ಆಕ್ರೋಶ!
ಬೆಂಗಳೂರಿನ ಬಿಎಂಟಿಸಿ ಬಸ್‌ಗಳ ಮೇಲಿನ ಗುಟ್ಕಾ ಜಾಹೀರಾತುಗಳ ವಿರುದ್ಧ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಹಣಕ್ಕಾಗಿ ಸಾರ್ವಜನಿಕ ಆರೋಗ್ಯವನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿದರೆ, ಸಾರಿಗೆ ಸಚಿವರು ಆದಾಯದ ಮೂಲವನ್ನು ಸಮರ್ಥಿಸಿಕೊಂಡು ಜಾಹೀರಾತಿಗೆ ಹೊಸ ಮಾರ್ಗಸೂಚಿ ಪ್ರಕಟಿಸಿದ್ದಾರೆ.

ಗುಟ್ಕಾ ಉತ್ಪನ್ನಗಳ ಜಾಹೀರಾತು
ಬೆಂಗಳೂರು (ಜ.28): ರಾಜಧಾನಿಯ ಜೀವನಾಡಿ ಎನಿಸಿಕೊಂಡಿರುವ ಬಿಎಂಟಿಸಿ (BMTC) ಬಸ್‌ಗಳ ಮೇಲೆ ಪ್ರದರ್ಶಿಸಲಾಗುತ್ತಿರುವ ತಂಬಾಕು ಮತ್ತು ಗುಟ್ಕಾ ಉತ್ಪನ್ನಗಳ ಜಾಹೀರಾತುಗಳ ವಿರುದ್ಧ ಕನ್ನಡ ಪರ ಸಂಘಟನೆಗಳು ಸಮರ ಸಾರಿವೆ. ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಇಂದು ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಬಸ್‌ಗಳ ಮೇಲಿದ್ದ ಜಾಹೀರಾತುಗಳನ್ನು ಹರಿದು ಹಾಕಿ ಸಾರಿಗೆ ಸಂಸ್ಥೆಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದ ಸ್ವಚ್ಛತೆ ಮತ್ತು ಆರೋಗ್ಯದ ಮೇಲೆ ಪೆಟ್ಟು
ಯುವ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ಈ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಸಾರಿಗೆ ಸಂಸ್ಥೆಯು ಕೇವಲ ಹಣದ ಆಸೆಗೆ ಬಿದ್ದು ನಗರದ ಸ್ವಚ್ಛತೆ ಮತ್ತು ಯುವಜನತೆಯ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಅವರು ಆರೋಪಿಸಿದರು. ವಿಮಲ್, ಆರ್ ಎಂಡಿ, ಮತ್ತು ಚೈನಿ ಚೈನಿಯಂತಹ ಗುಟ್ಕಾ ಉತ್ಪನ್ನಗಳ ಬೃಹತ್ ಸ್ಟಿಕ್ಕರ್‌ಗಳನ್ನು ಬಸ್‌ಗಳಿಗೆ ಅಂಟಿಸಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಅನಾರೋಗ್ಯಕರ ವಸ್ತುಗಳನ್ನು ಪ್ರೋತ್ಸಾಹಿಸುವುದು ಎಷ್ಟು ಸರಿ?
'ಇಂತಹ ಅನಾರೋಗ್ಯಕರ ವಸ್ತುಗಳನ್ನು ಪ್ರೋತ್ಸಾಹಿಸುವುದು ಎಷ್ಟು ಸರಿ? ಇವುಗಳನ್ನು ತಿಂದು ಜನರು ಬಸ್ ನಿಲ್ದಾಣಗಳು, ಮೆಟ್ರೋ ಸ್ಟೇಷನ್‌ಗಳು ಮತ್ತು ಪ್ರಮುಖ ವೃತ್ತಗಳಲ್ಲಿ ಉಗಿದು ನಗರದ ಅಂದವನ್ನು ಹಾಳು ಮಾಡುತ್ತಿದ್ದಾರೆ. ಇದಕ್ಕೆ ಸಾರಿಗೆ ಸಂಸ್ಥೆಯೇ ನೇರ ಹೊಣೆ' ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಪ್ರತಿಕ್ರಿಯೆ
ಜಾಹೀರಾತು ಹರಿದು ಹಾಕಿದ ಘಟನೆ ಮತ್ತು ಸಾರ್ವಜನಿಕರ ವಿರೋಧದ ಬಗ್ಗೆ ಪ್ರತಿಕ್ರಿಯಿಸಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ. 'ಬಿಎಂಟಿಸಿ ಒಂದಕ್ಕೇ ಜಾಹೀರಾತುಗಳಿಂದ ವಾರ್ಷಿಕ ಸುಮಾರು 60 ಕೋಟಿ ರೂಪಾಯಿ ಆದಾಯ ಬರುತ್ತಿದೆ. ಕೆಎಸ್‌ಆರ್‌ಟಿಸಿ ಮತ್ತು ವಾಯುವ್ಯ ಸಾರಿಗೆ ಸಂಸ್ಥೆಗಳಿಗೂ ಇದು ದೊಡ್ಡ ಮಟ್ಟದ ಆದಾಯದ ಮೂಲವಾಗಿದೆ' ಎಂದು ಅವರು ತಿಳಿಸಿದರು.
ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದೇನು?
ಗುಟ್ಕಾ ನಿಷೇಧದ ಬಗ್ಗೆ ಮಾತನಾಡಿದ ಸಚಿವರು, 'ಒಂದು ವೇಳೆ ಗುಟ್ಕಾ ಉತ್ಪನ್ನಗಳು ಕೆಟ್ಟದ್ದಾಗಿದ್ದರೆ ಕೇಂದ್ರ ಸರ್ಕಾರ ದೇಶವ್ಯಾಪ್ತಿ ಅವುಗಳನ್ನು ನಿಷೇಧ ಮಾಡಲಿ. ನಾವು ಗುಟ್ಕಾ ನಿಷೇಧಕ್ಕಾಗಿ ಹೋರಾಟ ಮಾಡಬೇಕೋ ಅಥವಾ ಬಸ್ ಮೇಲಿನ ಸ್ಟಿಕ್ಕರ್ ಬಗ್ಗೆಯೋ? ಮೊದಲು ನಿಷೇಧ ಜಾರಿಯಾಗಲಿ, ಆಗ ಜಾಹೀರಾತುಗಳು ತಾನಾಗಿಯೇ ನಿಲ್ಲುತ್ತವೆ' ಎಂದು ಹೇಳಿದರು.
ಹೊಸ ಮಾರ್ಗಸೂಚಿ ಪ್ರಕಟ
ಬಸ್‌ಗಳ ಮೇಲೆ ಅತಿರೇಕದ ಜಾಹೀರಾತು ಪ್ರದರ್ಶನದ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಸಚಿವರು ಹೊಸ ಸೂಚನೆ ನೀಡಿದ್ದಾರೆ. 'ಬಸ್ ಪೂರ್ತಿ ಜಾಹೀರಾತು ಹಾಕುವಂತಿಲ್ಲ. ಕೇವಲ ಶೇ 40% ಭಾಗದಲ್ಲಿ ಮಾತ್ರ ಜಾಹೀರಾತು ಪ್ರದರ್ಶಿಸಲು ಸೂಚಿಸಿದ್ದೇನೆ' ಎಂದು ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದರು.
ಒಟ್ಟಾರೆಯಾಗಿ, ಆದಾಯ ಮತ್ತು ಸಾರ್ವಜನಿಕ ಹಿತಾಸಕ್ತಿಯ ನಡುವಿನ ಈ ಸಂಘರ್ಷ ಈಗ ಬೀದಿಗೆ ಬಂದಿದ್ದು, ಮುಂದಿನ ದಿನಗಳಲ್ಲಿ ಸರ್ಕಾರ ಈ ಬಗ್ಗೆ ಯಾವ ಕಠಿಣ ತೀರ್ಮಾನ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

