* ಹಳ್ಳಿಯಲ್ಲಿ ಮನೆಮನೆಗೆ ತೆರಳಿ ಕೋವಿಡ್‌ ಟೆಸ್ಟ್‌* ‘ಸಂಚಾರಿ ಕ್ಲಿನಿಕ್‌’ ಮೂಲಕ ಔಷಧೋಪಚಾರ* ಕಂದಾಯ ಇಲಾಖೆಯಿಂದ ಹೊಸ ಯೋಜನೆ

ಬೆಂಗಳೂರು(ಮೇ.24): ರಾಜ್ಯದ ಗ್ರಾಮೀಣ ಭಾಗದಲ್ಲಿ ಕೋವಿಡ್‌ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮನೆ ಮನೆಗೂ ತೆರಳಿ ರೋಗ ಲಕ್ಷಣ ಹೊಂದಿರುವವರಿಗೆ ರಾರ‍ಯಪಿಡ್‌ ಆ್ಯಂಟಿಜನ್‌ ಕೊರೋನಾ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ಆದೇಶಿಸಿದೆ.

ಅಲ್ಲದೆ, ಕೊರೋನಾಸೋಂಕಿತರ ಪರೀಕ್ಷೆ ಹಾಗೂ ಸೂಕ್ತ ಚಿಕಿತ್ಸೆ ನೀಡುವ ಸಲುವಾಗಿ ವೈದ್ಯರು ಮತ್ತು ವೈದ್ಯ ಸಿಬ್ಬಂದಿ ಹಳ್ಳಿಗಳಿಗೇ ತೆರಳಬೇಕು. ‘ವೈದ್ಯರ ನಡೆ ಹಳ್ಳಿಗಳ ಕಡೆ’ ಎಂಬ ಹೆಸರಿನ ಕಾರ್ಯಕ್ರಮದ ಅಡಿ ‘ಸಂಚಾರಿ ಕ್ಲಿನಿಕ್‌’ ಜೊತೆ ಹಳ್ಳಿಗಳಿಗೆ ಹೋಗಿ ಪರೀಕ್ಷೆ ನಡೆಸಿ ಚಿಕಿತ್ಸೆ ಸೂಚಿಸಬೇಕು. ಅಗತ್ಯವಿರುವವರಿಗೆ ವೈದ್ಯಕೀಯ ಕಿಟ್‌ ಸಹ ನೀಡಬೇಕು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್‌.ಮಂಜುನಾಥ್‌ ಪ್ರಸಾದ್‌ ಆದೇಶ ಹೊರಡಿಸಿದ್ದಾರೆ.

ಕೊರೋನಾ ಗೆದ್ದ ಬಾಣಂತಿಯರು, ಹಸುಗೂಸುಗಳು!

ಸೋಂಕಿತರ ಬಳಿಗೇ ಹೋಗಿ ಪರೀಕ್ಷೆ:

ರಾಜ್ಯದ ಹಲವು ಅರೆ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಸೋಂಕು ಉಲ್ಬಣಿಸುತ್ತಿದೆ. ಗ್ರಾಮೀಣ ವಾಸಿಗಳು ಕೊರೋನಾ ಪರೀಕ್ಷೆಗೆ ಪ್ರಾಮುಖ್ಯತೆ ನೀಡುತ್ತಿಲ್ಲ. ಜತೆಗೆ ಪರೀಕ್ಷಾ ಕೇಂದ್ರಗಳು ಹತ್ತಿರವೂ ಇರುವುದಿಲ್ಲ. ಹೀಗಾಗಿ ಕೊರೋನಾ ಸೋಂಕು ಹೆಚ್ಚಾಗುತ್ತಿದೆ. ಹೀಗಾಗಿ ವೈದ್ಯರು ಹಾಗೂ ಆಶಾ, ಅಂಗನವಾಡಿ ಕಾರ್ಯಕರ್ತರ ತಂಡ ಪ್ರತಿಯೊಂದು ಮನೆಗೆ ತೆರಳಿ ಸೋಂಕು ಲಕ್ಷಣ ಹೊಂದಿರುವವರನ್ನು ಗುರುತಿಸಬೇಕು. ಹೆಚ್ಚೆಚ್ಚು ಸಂಖ್ಯೆಯಲ್ಲಿ ರಾರ‍ಯಪಿಡ್‌ ಆ್ಯಂಟಿಜನ್‌ ಪರೀಕ್ಷೆ ನಡೆಸಿ ಸೋಂಕಿತರನ್ನು ಪತ್ತೆ ಹಚ್ಚಬೇಕು. ‘ಸೋಂಕಿತರು ಎಲ್ಲಿರುವರೋ ಅಲ್ಲೇ ಅವರನ್ನು ಗುರುತಿಸಬೇಕು’ ಎಂದು ಸೂಚನೆ ನೀಡಿದ್ದಾರೆ.

‘ವೈದ್ಯರ ನಡೆ, ಹಳ್ಳಿಗಳ ಕಡೆ’:

ಇನ್ನು ಗ್ರಾಮೀಣ ಭಾಗದ ಜನರ ಹಿತದೃಷ್ಟಿಯಿಂದ ಅಂತಿಮ ವರ್ಷದ ವೈದ್ಯಕೀಯ ಪದವಿ ವ್ಯಾಸಂಗ ಮಾಡುತ್ತಿರುವ ಇಂಟರ್ನ್‌ಶಿಪ್‌ ವಿದ್ಯಾರ್ಥಿಗಳು, ಬಿಎಸ್‌ಸಿ ನರ್ಸಿಂಗ್‌, ಬಿಡಿಎಸ್‌, ಎಂಡಿಎಸ್‌, ಆಯುಷ್‌ ಪದವೀಧರರ ಸೇವೆಯನ್ನು ಎರವಲು ಪಡೆಯಬೇಕು. ಈ ವೈದ್ಯರು, ಆರೋಗ್ಯ ಸಿಬ್ಬಂದಿ ಒಂದೇ ಕಡೆ ರೋಗ ಲಕ್ಷಣಗಳುಳ್ಳವರ ಭೌತಿಕ ಪರೀಕ್ಷೆ, ಗಂಟಲು ಮಾದರಿ ಪರೀಕ್ಷೆ ನಡೆಸುವುದು ಹಾಗೂ ಸೋಂಕಿತರಿಗೆ ಸ್ಥಳದಲ್ಲೇ ಸೂಕ್ತ ಚಿಕಿತ್ಸೆ ನೀಡುವುದನ್ನು ಮಾಡಬೇಕು. ಅಗತ್ಯವಿರುವವರಿಗೆ ವೈದ್ಯಕೀಯ ಕಿಟ್‌ ನೀಡಿ ಅಗತ್ಯ ಮಾಹಿತಿ ನೀಡಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ವೈಟ್‌ ಫಂಗಸ್‌ ಸೋಂಕು: ರಾಜ್ಯದಲ್ಲಿ ಮೊದಲ ಬಲಿ?

ಕಂದಾಯ ಸಚಿವ ಆರ್‌.ಅಶೋಕ್‌ ಆದೇಶದಂತೆ ಕಾರ್ಯಕ್ರಮ ರೂಪಿಸಲಾಗಿದೆ. ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಸಂಬಂಧಪಟ್ಟವರೊಂದಿಗೆ ಸಮನ್ವಯ ಸಾಧಿಸಿ ಯೋಜನೆ ಯಶಸ್ವಿಗೊಳಿಸಬೇಕು. ಇದಕ್ಕಾಗಿ ಈಗಾಗಲೇ ಬಿಡುಗಡೆ ಮಾಡಿರುವ ಎಸ್‌ಡಿಆರ್‌ಎಫ್‌ ಅನುದಾನ ಭರಿಸಬಹುದು ಎಂದು ಮಂಜುನಾಥ್‌ ಪ್ರಸಾದ್‌ ತಿಳಿಸಿದ್ದಾರೆ.

ಏನಿದು ಯೋಜನೆ?

1. ಹಳ್ಳಿಗಳಿಗೆ ಸೋಂಕು ಹರಡುತ್ತಿರುವುದನ್ನು ತಡೆಯಲು ಸರ್ಕಾರ ಯತ್ನ

2. ಎಂಬಿಬಿಎಸ್‌ ವಿದ್ಯಾರ್ಥಿಗಳನ್ನು ಬಳಸಿಕೊಂಡು ಸೇವೆ

3. ಸೋಂಕಿನ ಲಕ್ಷಣ ಇರುವವರಿಗೆ ರಾರ‍ಯಪಿಡ್‌ ಆ್ಯಂಟಿಜನ್‌ ಟೆಸ್ಟ್‌

4. ಸೋಂಕಿತರಿಗೆ ಸರ್ಕಾರದಿಂದಲೇ ಮೆಡಿಕಲ್‌ ಕಿಟ್‌ ವಿತರಣೆ

5. ಆಶಾ, ಅಂಗನವಾಡಿ ಕಾರ‍್ಯಕರ್ತರಿಂದ ಮನೆಮನೆ ಸಮೀಕ್ಷೆ

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona