ರಂಗಾಯಣದಿಂದ ‘ಟಿಪ್ಪು ನಿಜ ಕನಸುಗಳು’ ನಾಟಕ ಕೃತಿ ನ.13ರಂದು ಬಿಡುಗಡೆ
ರಂಗಾಯಣ, ಅಯೋಧ್ಯಾ ಪ್ರಕಾಶನ ಸಂಯುಕ್ತವಾಗಿ ನ.13ರ ಸಂಜೆ 4ಕ್ಕೆ ವನರಂಗದಲ್ಲಿ ಟಿಪ್ಪು ನಿಜಕನಸುಗಳು ನಾಟಕ ಕೃತಿ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ರಂಗಾಯಣದ ನಿರ್ದೇಶಕ ಹಾಗೂ ಕೃತಿಯ ಕರ್ತೃ ಅಡ್ಡಂಡ ಸಿ. ಕಾರ್ಯಪ್ಪ ತಿಳಿಸಿದರು.
ಮೈಸೂರು (ನ.06): ರಂಗಾಯಣ, ಅಯೋಧ್ಯಾ ಪ್ರಕಾಶನ ಸಂಯುಕ್ತವಾಗಿ ನ.13ರ ಸಂಜೆ 4ಕ್ಕೆ ವನರಂಗದಲ್ಲಿ ಟಿಪ್ಪು ನಿಜಕನಸುಗಳು ನಾಟಕ ಕೃತಿ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ರಂಗಾಯಣದ ನಿರ್ದೇಶಕ ಹಾಗೂ ಕೃತಿಯ ಕರ್ತೃ ಅಡ್ಡಂಡ ಸಿ. ಕಾರ್ಯಪ್ಪ ತಿಳಿಸಿದರು. ನಗರದ ರಂಗಾಯಣ ಆವರಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟಿಪ್ಪು ನಿಜಕನಸುಗಳು ನಾಟಕ ಕೃತಿಯನ್ನು ಬೆಂಗಳೂರಿನ ಅಯೋಧ್ಯಾ ಪ್ರಕಾಶನ ಪ್ರಕಟಿಸಿದೆ. ಈ ಕೃತಿಯನ್ನು ಖ್ಯಾತ ಕಾದಂಬರಿಕಾರ ಡಾ.ಎಸ್.ಎಲ್. ಭೈರಪ್ಪ ಬಿಡುಗಡೆಗೊಳಿಸುವರು.
ಕೃತಿಯ ಬಗ್ಗೆ ಲೇಖಕ ರೋಹಿತ್ ಚಕ್ರತೀರ್ಥ ಮಾತನಾಡುವರು. ಸಂಸದ ಪ್ರತಾಪ್ ಸಿಂಹ, ಸಾಮಾಜಿಕ ಕಾರ್ಯಕರ್ತ ವಾದಿರಾಜ್ ಅತಿಥಿಯಾಗುವರು ಎಂದರು. ನಾನೇ ರಚಿಸಿ, ನಿರ್ದೇಶಿಸಿರುವ ಈ ನಾಟಕಕ್ಕೆ ಹೆಸರಾಂತ ರಂಗವಿನ್ಯಾಸಕ ಶಶಿಧರ ಅಡಪ, ವಸ್ತ್ರ ಪರಿಕರ ವಿನ್ಯಾಸಕಾರ ಪ್ರಮೋದ್ ಶಿಗ್ಗಾಂವ್ ಕೈ ಜೋಡಿಸಿದ್ದಾರೆ. ಈ ನಾಟಕಕ್ಕೆ ಸುಬ್ರಹ್ಮಣ್ಯ, ಧನಂಜಯ ಅವರುಗಳು ಸಂಗೀತ ಸಂಯೋಜಿಸಿದ್ದು, ಮಹೇಶ್ ಕಲ್ಲತ್ತಿ ಬೆಳಕಿನ ವಿನ್ಯಾಸಗೊಳಿಸಿದ್ದಾರೆ. ನಾಟಕಕ್ಕೆ ಕೆಲವು ಹಾಡುಗಳನ್ನು ಎಸ್. ರಾಮನಾಥ ಅವರು ಬರೆದಿದ್ದಾರೆ.
ರಾಜ್ಯದ ಹಿರಿಮೆಗೆ ಕುಂದಾಗದಂತೆ ನೋಡಿಕೊಳ್ಳಬೇಕಿದೆ: ಸಚಿವ ಸೋಮಶೇಖರ್
3 ಗಂಟೆ 20 ನಿಮಿಷಗಳ ಈ ನಾಟಕದ ಮಧ್ಯೆ 10 ನಿಮಿಷಗಳ ವಿರಾಮವಿದೆ ಎಂದು ಅವರು ಹೇಳಿದರು. ರಂಗಾಯಣ ಪ್ರಸ್ತುತಪಡಿಸುವ ಈ ನಾಟಕಕ್ಕೆ ರೆಪರ್ಟರಿಯ 15 ಕಲಾವಿದರೊಂದಿಗೆ 10 ಅತಿಥಿ ಕಲಾವಿದರನ್ನು ನಟನಟಿಯರನ್ನಾಗಿ ಜೋಡಿಸಿದ್ದು, ಸಂಗೀತ ಮತ್ತು ರಂಗ ಹಿನ್ನಲೆಯವರು ಸೇರಿದಂತೆ 30 ಕಲಾವಿದರ ತಂಡವಾಗಿದೆ. ಈ ತಂಡದಿಂದ ರಾಜ್ಯಾದ್ಯಂತ 100 ಪ್ರದರ್ಶನ ನೀಡುವುದು ರಂಗಾಯಣದ ಉದ್ದೇಶವಾಗಿದೆ. ನ.20ರ ಸಂಜೆ 6ಕ್ಕೆ ಈ ನಾಟಕದ ಪ್ರಥಮ ಪ್ರದರ್ಶನ ರಂಗಾಯಣದ ಭೂಮಿಗೀತದಲ್ಲಿ ನಡೆಯಲಿದೆ. ನಂತರ ನ.21, 24, 26, 27, 30 ಹಾಗೂ ಡಿ.4 ರಂದು ಈ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಅವರು ವಿವರಿಸಿದರು.
ಸತ್ಯ ಚರಿತ್ರೆಯ ಅನಾವರಣ: ಟಿಪ್ಪು ನಿಜಕನಸುಗಳು ನಾಟಕ ಸತ್ಯ ಚರಿತ್ರೆಯ ಅನಾವರಣ. ಮೈಸೂರು ಸಂಸ್ಥಾನವನ್ನು ಆಕ್ರಮಿಸಿಕೊಂಡವನು ಪರ್ಷಿಯನ್ ಮೂಲದ ಹೈದರಾಲಿ. ಈತನ ಮಗ ಟಿಪ್ಪು ಸುಲ್ತಾನನ ಬಗ್ಗೆ ಅತಿರಂಜಿತ ಸುಳ್ಳು ಚರಿತ್ರೆಯೇ ನಿರ್ಮಾಣಗೊಂಡಿದೆ. ಭಾರತೀಯ ಸಂಸ್ಕೃತಿಯ ಮೇಲೆ ನಡೆದಿರುವ ಮುಸ್ಲಿಂ ದೊರೆಗಳ ಆಕ್ರಮಣಕಾರಿ ಕೃತ್ಯಗಳನ್ನು ಅತ್ಯಂತ ಜಾಣತನದಿಂದ ಮುಚ್ಚಿಟ್ಟು ಬರೆದಿರುವ ಇತಿಹಾಸಕಾರರ ಚರಿತ್ರೆಯನ್ನೇ ಪಠ್ಯಪುಸ್ತಕವನ್ನಾಗಿಸಿ ಅದನ್ನೇ ಓದಿಸಿಕೊಂಡು ಬರಲಾಗಿದೆ. ಈ ಸುಳ್ಳಿನಲ್ಲಿ ಟಿಪ್ಪು ಸುಲ್ತಾನ ಸೇರುತ್ತಾನೆ ಎಂದರು.
ಡಾ.ಐ.ಮಾ. ಮುತ್ತಣ್ಣ, ಆರ್.ಡಿ. ಶರ್ಮಾ, ಡಾ. ಚಿದಾನಂದಮೂರ್ತಿಯವರ ಕೃತಿಗಳಲ್ಲದೆ ಸ್ವತಃ ಟಿಪ್ಪುವಿನ ಕಾಲದ ಇತಿಹಾಸಕಾರ ಹುಸೇನ್ ಅಲಿ ಕಿರ್ಮಾನಿ ರಚಿಸಿರುವ ಹೈದರ್ ನಿಶಾನಿ ಕೃತಿಗಳನ್ನು ಅಧ್ಯಯನಕ್ಕೆ ಒಳಪಡಿಸಿದಾಗ ಟಿಪ್ಪುವಿನ ನಿಜಸ್ವರೂಪ ಬಯಲಾಗುತ್ತದೆ. ಲೇಖಕ ಮತ್ತು ಮೈಸೂರು ವಿವಿ ಮಾಜಿ ಉಪ ಕುಲಪತಿ ಡಾ. ಫಣಿಕ್ಕರ್ ಅವರು ಟಿಪ್ಪು ಪರ್ಷಿಯನ್ ಭಾಷೆಯಲ್ಲಿ ಬರೆದಿರುವ ಪತ್ರಗಳ ಸಂಗ್ರಹವನ್ನು ಬ್ರಿಟೀಷ್ ಗ್ರಂಥಾಲಯದಿಂದ ಪಡೆದು ಮಲಯಾಳಂ ಭಾಷೆಗೆ ಅನುವಾದಿಸಿದ್ದಾರೆ. ಟಿಪ್ಪು ಸ್ವತಃ ಬರೆದಿರುವ ಪತ್ರಗಳೇ ಆತನ ನಿಜವಾದ ಕನಸುಗಳು. ಈ ಪತ್ರಗಳನ್ನು ಖ್ಯಾತ ಸಂಶೋಧಕ ಡಾ. ಚಿದಾನಂದಮೂರ್ತಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ ಎಂದು ಅವರು ಹೇಳಿದರು.
ಟಿಪ್ಪು ಸುಲ್ತಾನನನ್ನು ಮಹಾ ಶೂರ, ಧೀರ, ದೇಶಪ್ರೇಮಿ, ಬ್ರಿಟೀಷರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹೋರಾಟಗಾರ, ವಿಶ್ವಧರ್ಮ ಪ್ರೇಮಿ, ಪ್ರಜಾಪ್ರೇಮಿ, ಮುಸ್ಲಿಂ ಆಗಿದ್ದರೂ ಹಿಂದೂ ದೇವಾಲಯ ಮಠಗಳಿಗೆ ಉದಾರವಾಗಿ ದಾನದತ್ತಿ ನೀಡಿದ ಜಾತ್ಯತೀತವಾದಿ ಹೀಗೆಲ್ಲ ಹೊಗಳಿ ಅಟ್ಟಕ್ಕೇರಿಸಲಾಗಿದೆ. ಈ ಅಟ್ಟದ ಮೇಲಿನ ಟಿಪ್ಪುವಿನ ಹೆಗಲ ಮೇಲೆ ವೋಟ್ ಬ್ಯಾಂಕ್ ನಿರ್ಮಾತರು, ಡೋಂಗಿ ಬುದ್ಧಿಜೀವಿಗಳು ಕೋಟೆಯನ್ನೇ ನಿರ್ಮಾಣ ಮಾಡಿಕೊಂಡಿದ್ದಾರೆ ಎಂದು ಅವರು ದೂರಿದರು. ಅತ್ಯಂತ ಅಘಾತಕಾರಿ ವಿಷಯವೆಂದರೆ ಕನ್ನಡವನ್ನು ಕೊಂದ ಒಬ್ಬ ಮುಸ್ಲಿಂ ಸುಲ್ತಾನನನ್ನು ಕನ್ನಡ ಪ್ರೇಮಿ ಎಂದು ಬಣ್ಣಿಸಿರುವುದು.
ಮೈಸೂರು ಪ್ರಾಂತ್ಯದಲ್ಲಿ ಆಡಳಿತ ಭಾಷೆಯಾಗಿದ್ದ ಕನ್ನಡದ ಬದಲಾಗಿ ಪರ್ಷಿಯನ್ ಭಾಷೆಯನ್ನು ಆಡಳಿತಕ್ಕೆ ತಂದದಲ್ಲದೆ ಹಳೆಯ ಕನ್ನಡದ ಕಂದಾಯದ ಹೆಸರುಗಳು, ಊರ ಹೆಸರಗಳನ್ನು ಬದಲಿಸಿ, ಇಸ್ಲಾಮಿಕ್ ಹೆಸರುಗಳನ್ನು ನಾಮಕರಣ ಮಾಡಿದ್ದನ್ನು ಮುಚ್ಚಲಾಗಿದೆ. ಟಿಪ್ಪುವನ್ನು ವೈಭವೀಕರಿಸಲು ಚಲನಚಿತ್ರಗಳು, ಕಥೆಗಳು, ನಾಟಕಗಳು, ಲಾವಣಿ ಹಾಡುಗಳು ಬಂದು ಹೋಗಿವೆ. ಇದನ್ನೆಲ್ಲ ನೋಡಿಕೊಂಡು ಸತ್ಯ ಚರಿತ್ರೆ ಎಂದು ನಂಬಲಾಗಿದೆ ಎಂದರು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ನಾಟಕಕಾರ ಗಿರೀಶ್ ಕಾರ್ನಾಡರು ಚರಿತ್ರೆಯ ಸತ್ಯದ ತಲೆಗೆ ಹೊಡೆಯುವಂತೆ ‘ಟಿಪ್ಪು ಸುಲ್ತಾನ ಕಂಡ ಕನಸುಗಳು? ಎಂಬ ನಾಟಕ ಬರೆದು ಈ ನಾಟಕವನ್ನು ರಂಗಾಯಣದಲ್ಲಿ ಉತ್ಸಾಹದಿಂದಲೇ ಸ್ವಾತಂತ್ರ್ಯದ ಸುವರ್ಣ ಜಯಂತಿ ನೆನಪಿಗೆಂದು ಸರ್ಕಾರದ ವಿಶೇಷ ಅನುದಾನದಿಂದ ಪ್ರದರ್ಶನ ನೀಡಲಾಗಿತ್ತು ಎಂದರು.
ನ.28ರಂದು ನಂಜನಗೂಡಿಗೆ ಸಿಎಂ ಬೊಮ್ಮಾಯಿ ಭೇಟಿ: ಶಾಸಕ ಹರ್ಷವರ್ಧನ್
ಚರ್ಚೆಗೆ, ಟೀಕೆಗೆ ಒಳಪಟ್ಟಾಗ ಕಾರ್ನಾಡರು ‘ನನ್ನದು ಐತಿಹಾಸಿಕ ವ್ಯಕ್ತಿಯ ಪಾತ್ರವಲ್ಲ, ನನಗೆ ಮನೋರಂಜಿತ ನಾಟಕ ಬರೆಯುವ ಸಾಧ್ಯವಾದಷ್ಟೂಮಟ್ಟಿಗೆ ಸಂಕೀರ್ಣ ಪಾತ್ರವನ್ನು ಸೃಷ್ಟಿಸುವ ಅಗತ್ಯವಿತ್ತು. ಅದಕ್ಕಾಗಿ ತುಘಲಕ್, ಟಿಪ್ಪು ಸುಲ್ತಾನ ನಾಟಕವನ್ನು ಬರೆದೆ? ಎಂದು ಜಾರಿಕೊಂಡಿದ್ದರು. ಆದರೆ ಡಾ.ಎಸ್.ಎಲ್. ಭೈರಪ್ಪನವರು ಇದಕ್ಕೆ ಉತ್ತರವಾಗಿ ‘ಇತಿಹಾಸದ ಸುಳ್ಳು ಚಿತ್ರಣದ ಮೇಲೆ ರಾಷ್ಟ್ರೀಯತೆ ಗಟ್ಟಿಗೊಳಿಸುವುದು ಅಸಾಧ್ಯ’ ಎಂದಿದ್ದರು. ಇಂತಹ ಅಪಾಯಕಾರಿ ಬೌದ್ಧಿಕ ರಿವಾಜುಗಳನ್ನು ಬದಲಿಸಿ, ಡೋಂಗಿ ವಾದವನ್ನು ತಿರಸ್ಕರಿಸಿ ಮತ್ತು ನಿಷ್ಕ್ರಿಯೆಗೊಳಿಸಿ ರಾಷ್ಟ್ರೀಯತೆಯನ್ನು ಗಟ್ಟಿಗೊಳಿಸುವ ದೃಷ್ಟಿಯಿಂದ ಬಚ್ಚಿಡಲಾದ ಅನೇಕ ಸತ್ಯಗಳನ್ನು ಹೊರಚೆಲ್ಲಲು 15 ದೃಶ್ಯಗಳ ಟಿಪ್ಪು ನಿಜಕನಸುಗಳು ನಾಟಕವನ್ನು ರಚಿಸಿ, ಪ್ರಯೋಗಕ್ಕೆ ಸಿದ್ಧಪಡಿಸಲಾಗಿದೆ ಎಂದು ಅವರು ವಿವರಿಸಿದರು. ರಂಗಾಯಣದ ಉಪ ನಿರ್ದೇಶಕಿ ನಿರ್ಮಲಾ ಮಠಪತಿ, ಬಹುರೂಪಿ ಸಂಚಾಲಕ ಜಗದೀಶ್ ಇದ್ದರು.