ನ.28ರಂದು ನಂಜನಗೂಡಿಗೆ ಸಿಎಂ ಬೊಮ್ಮಾಯಿ ಭೇಟಿ: ಶಾಸಕ ಹರ್ಷವರ್ಧನ್
ಮೂರು ದಶಕಗಳ ರೈತರ ಬಹುಬೇಡಿಕೆಯಾಗಿದ್ದ ನುಗು ಏತ ನೀರಾವರಿ ಹಾಗೂ ಹೆಡಿಯಾಲ ಭಾಗದ 13 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ನ. 28 ರಂದು ಸಿಎಂ ಬಸವರಾಜ ಬೊಮ್ಮಾಯಿ ನಂಜನಗೂಡಿಗೆ ಆಗಮಿಸಲಿದ್ದಾರೆ ಎಂದು ಶಾಸಕ ಬಿ.ಹರ್ಷವರ್ಧನ್ ತಿಳಿಸಿದರು.
ನಂಜನಗೂಡು (ನ.02): ಮೂರು ದಶಕಗಳ ರೈತರ ಬಹುಬೇಡಿಕೆಯಾಗಿದ್ದ ನುಗು ಏತ ನೀರಾವರಿ ಹಾಗೂ ಹೆಡಿಯಾಲ ಭಾಗದ 13 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ನ. 28 ರಂದು ಸಿಎಂ ಬಸವರಾಜ ಬೊಮ್ಮಾಯಿ ನಂಜನಗೂಡಿಗೆ ಆಗಮಿಸಲಿದ್ದಾರೆ ಎಂದು ಶಾಸಕ ಬಿ.ಹರ್ಷವರ್ಧನ್ ತಿಳಿಸಿದರು. ಮೊದಲ ಕಾರ್ತಿಕ ಮಾಸ ಸೋಮವಾರ ಬೇಲದಕುಪ್ಪೆ ಶ್ರೀ ಮಹದೇಶ್ವರಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಹೆಡಿಯಾಲ ಗ್ರಾಮದಲ್ಲಿ ಅವರು ಮಾತನಾಡಿದರು.
ನುಗು ಏತ ನೀರಾವರಿ ಯೋಜನೆ ಕಾರ್ಯಗತವಾಗಬೇಕು ಹಾಗೂ ಹೆಡಿಯಾಲ ಭಾಗದ ಬರಪೀಡಿತ ಪ್ರದೇಶಗಳ ಗ್ರಾಮಗಳಲ್ಲಿ ಕೆರೆಗಳನ್ನು ತುಂಬಿಸುವ ಯೋಜನೆ ಸಾಕಾರಗೊಳಿಸಬೇಕೆಂಬುದು ಈ ಭಾಗದ ರೈತರ ದಶಕಗಳ ಬೇಡಿಕೆಯಾಗಿತ್ತು. ನಾನು ಚುನಾವಣೆ ಪೂರ್ವದಲ್ಲಿ ಪ್ರಚಾರಕ್ಕೆ ಬಂದ ಸಂದರ್ಭದಲ್ಲಿ ಎಲ್ಲಾ ಕಡೆಯೂ ಇದೇ ಕೂಗು ಕೇಳಿಬರುತ್ತಿತ್ತು. ಶಾಸಕನಾಗಿ ಆಯ್ಕೆಗೊಂಡ ಬಳಿಕ ಈ ಯೋಜನೆಗಳನ್ನು ಜಾರಿಗೊಳಿಸಲು ನಾನು ಸಾಕಷ್ಟುಶ್ರಮವಹಿಸಿದ್ದೇನೆ. ಪರಿಣಾಮವಾಗಿ ನುಗು ಯೋಜನೆಗೆ 80 ಕೋಟಿ, ಹೆಡಿಯಾಲ ಭಾಗದ 13 ಕೆರೆ ತುಂಬಿಸುವ ಯೋಜನೆಗೆ 35 ಕೋಟಿ ಅನುದಾನವನ್ನು ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರ ಬಿಡುಗಡೆ ಮಾಡಿದೆ ಎಂದರು.
ಮೈಸೂರು: ಮುಂದಿನ ವರ್ಷದಿಂದ ತಾಲೂಕು ಆಡಳಿತದಿಂದ ರೈತ ದಿನಾಚರಣೆ ಆಚರಿಸಲು ಕ್ರಮ
ಈ ಮಹತ್ತರ ಯೋಜನೆಗಳಿಗೆ ಚಾಲನೆ ನೀಡುವ ಸಲುವಾಗಿ ನ. 28ರಂದು ನಂಜನಗೂಡಿಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಆಗಮಿಸಲಿದ್ದಾರೆ. ಜತೆಗೆ ವರಿಷ್ಠ ನಾಯಕರಾದ ಬಿ.ಎಸ್. ಯಡಿಯೂರಪ್ಪ ಹಾಗೂ ಪಕ್ಷದ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಆಹ್ವಾನಿಸಲಾಗಿದೆ. ಈ ಭಾಗದ ಜನರ ಬೇಡಿಕೆಯನ್ನು ಸಾಕಾರಗೊಳಿಸಲು ಈ ನಾಯಕರ ಪಾತ್ರ ಮಹತ್ತರವಾದದ್ದು. ಹೀಗಾಗಿ ಈ ಭಾಗದ ಜನರು ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸುವಂತೆ ಕೋರಿದರು.
ಇನ್ನು ನಾನು ಯಾವುದೇ ಶುಭ ಕಾರ್ಯ ಮಾಡಬೇಕಾದರೂ ನಾನು ಮೊದಲು ಬೇಲದಕುಪ್ಪೆ ಮಹದೇಶ್ವರಸ್ವಾಮಿ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿಯೇ ಮುಂದುವರೆಯುತ್ತೇನೆ. ಕಾರ್ತಿಕ ಮಾಸದ ಮೊದಲ ಸೋಮವಾರ ಪೂಜೆ ಸಲ್ಲಿಸಿದ್ದೇನೆ. ದಿನಕ್ಕೆ ಎರಡು ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಸಾರ್ವಜನಿಕರ ಅಹವಾಲು ಆಲಿಸುವ ಜತೆಗೆ ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಮತದಾರರನ್ನು ಆಹ್ವಾನಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದಾಗಿ ತಿಳಿಸಿದರು.
ಈ ಬಾರಿ ಚುನಾವಣೆಯಲ್ಲಿ KR Nagar ಕ್ಷೇತ್ರದಲ್ಲಿ ಡಿ. ರವಿಶಂಕರ್ ಗೆಲುವು ಖಚಿತ
ಅಧಿಕಾರಿಗಳಿಗೆ ತರಾಟೆ: ಇನ್ನು ಹೆಡಿಯಾಲ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅರಣ್ಯ ಇಲಾಖೆ ಸುಪರ್ದಿಯಲ್ಲಿರುವ ಪ್ರವಾಸಿ ಮಂದಿರಕ್ಕೆ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆಯನ್ನು ಕಂಡು ಶಾಸಕ ಬಿ. ಹರ್ಷವರ್ಧನ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಮುಂದಿನ ವಾರದಲ್ಲಿ ಮತ್ತೊಮ್ಮೆ ಭೇಟಿ ನೀಡಲಿದ್ದೇನೆ. ಅಲ್ಲಿವರೆಗೆ ಪ್ರವಾಸಿ ಮಂದಿರದಲ್ಲಿ ಪೀಠೋಪಕರಣ ಸೇರಿದಂತೆ ಎಲ್ಲ ರೀತಿಯ ಮೂಲಭೂತ ಸೌಕರ್ಯ ಕಲ್ಪಿಸಿರಬೇಕು. ಇಲ್ಲವಾದಲ್ಲಿ ಇಲಾಖೆಯ ಮೇಲಧಿಕಾರಿಗಳ ಗಮನಕ್ಕೆ ತಂದು ಶಿಸ್ತುಕ್ರಮಕ್ಕೆ ಶಿಫಾರಸ್ಸು ಮಾಡುವುದಾಗಿ ಎಚ್ಚರಿಸಿದರು. ಬಿಜೆಪಿ ಮಂಡಲ ಅಧ್ಯಕ್ಷ ಪಿ. ಮಹೇಶ್, ಕಾರ್ಯದರ್ಶಿ ಸಣ್ಣಯ್ಯ, ಮುಖಂಡರಾದ ಕುಂಬ್ರಹಳ್ಳಿ ಸುಬ್ಬಣ್ಣ, ಬಿ.ಎಸ್. ಮಹದೇವಪ್ಪ, ಕೆಂಡಗಣ್ಣಪ್ಪ, ಚಂದ್ರು, ಪುಟ್ಟಸ್ವಾಮಿ, ಶಿವನಂಜು, ರಂಗಸ್ವಾಮಿ, ಅಬ್ದುಲ್ ರಜಾಕ್ ಇದ್ದರು.