Asianet Suvarna News Asianet Suvarna News

ರಾಜ್ಯದ ಹಿರಿಮೆಗೆ ಕುಂದಾಗದಂತೆ ನೋಡಿಕೊಳ್ಳಬೇಕಿದೆ: ಸಚಿವ ಸೋಮಶೇಖರ್‌

ಕರ್ನಾಟಕವೆಂದರೆ ಕೇವಲ ಗಡಿ ರೇಖೆಯ ಒಳಗೆ ಸೀಮಿತವಾದ ಒಂದು ಭೌಗೋಳಿಕ ಪ್ರದೇಶವಲ್ಲ. ಅದು ಒಟ್ಟಾರೆ ರಾಷ್ಟ್ರೀಯ ಸಂಸ್ಕೃತಿಯನ್ನು, ಕನ್ನಡದ ಸ್ವಂತ ವ್ಯಕ್ತಿತ್ವದ ಹಿನ್ನೆಲೆಯಲ್ಲಿ ಪ್ರತಿಪಾದಿಸುವ ಅತ್ಯುನ್ನತವಾದ ಭಾವ. ಕರ್ನಾಟಕದ ಹಿರಿಮೆಗೆ ಕುಂದು ಬಾರದಂತೆ ನಾವೆಲ್ಲರೂ ನೋಡಿಕೊಳ್ಳಬೇಕಿದೆ ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ತಿಳಿಸಿದರು. 

The pride of the state should be taken care of says minister st somashekhar at mysuru gvd
Author
First Published Nov 2, 2022, 5:21 PM IST

ಮೈಸೂರು (ನ.02): ಕರ್ನಾಟಕವೆಂದರೆ ಕೇವಲ ಗಡಿ ರೇಖೆಯ ಒಳಗೆ ಸೀಮಿತವಾದ ಒಂದು ಭೌಗೋಳಿಕ ಪ್ರದೇಶವಲ್ಲ. ಅದು ಒಟ್ಟಾರೆ ರಾಷ್ಟ್ರೀಯ ಸಂಸ್ಕೃತಿಯನ್ನು, ಕನ್ನಡದ ಸ್ವಂತ ವ್ಯಕ್ತಿತ್ವದ ಹಿನ್ನೆಲೆಯಲ್ಲಿ ಪ್ರತಿಪಾದಿಸುವ ಅತ್ಯುನ್ನತವಾದ ಭಾವ. ಕರ್ನಾಟಕದ ಹಿರಿಮೆಗೆ ಕುಂದು ಬಾರದಂತೆ ನಾವೆಲ್ಲರೂ ನೋಡಿಕೊಳ್ಳಬೇಕಿದೆ ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ತಿಳಿಸಿದರು. ಜಿಲ್ಲಾಡಳಿತವು ಮೈಸೂರು ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ರಾಷ್ಟ್ರ ಮತ್ತು ಕನ್ನಡ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ನಮ್ಮ ಮಕ್ಕಳು ತಮ್ಮ ಭವಿಷ್ಯದ ಹಾದಿ ಕಂಡುಕೊಳ್ಳಲು ಭಾಷೆಗಳು ನೆರವಾಗಬೇಕು. 

ನಾವು ಕನ್ನಡದ ಅಸ್ಮಿತೆಯನ್ನು ಉಳಿಸಿಕೊಳ್ಳುವುದರ ಜತೆಗೆ ಇತರ ಭಾಷೆ, ಸಂಸ್ಕೃತಿಗಳನ್ನು ನಮ್ಮದಾಗಿಸಿಕೊಳ್ಳಬೇಕಿದೆ ಎಂದು ಹೇಳಿದರು. ಪ್ರಸ್ತುತ ಜಾಗತೀಕರಣದ ಹಿನ್ನೆಲೆಯಲ್ಲಿ ಇಂಗ್ಲಿಷ್‌ ಭಾಷಾ ಜ್ಞಾನ ಅವಶ್ಯಕವಾಗಿದ್ದರೂ ಎಂದಿಗೂ ಮಾತೃ ಭಾಷೆ ಕನ್ನಡಕ್ಕೆ ಮೊದಲ ಆದ್ಯತೆ. ನಮ್ಮ ಶಿಕ್ಷಣ ನೀತಿಯೂ ಮಾತೃ ಭಾಷೆಗೆ ಹೆಚ್ಚಿನ ಒತ್ತನ್ನು ನೀಡಿದ್ದರೂ ಕನ್ನಡ ಭಾಷೆಯನ್ನು ಉಳಿಸಿಕೊಳ್ಳುವಲ್ಲಿ ನಮ್ಮೆಲ್ಲರ ಜವಾಬ್ದಾರಿ ಇದೆ. ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಸರ್ಕಾರ ಕೈಗೊಂಡಿದ್ದು, ಕನ್ನಡ ಭಾಷೆಯ ಸೊಗಡನ್ನು ಉಳಿಸಿಕೊಂಡು ಅದನ್ನು ಇನ್ನೂ ಹೆಚ್ಚಿಸುವ ಕೆಲಸದಲ್ಲಿ ಎಲ್ಲರೂ ಕೈಜೋಡಿಸಬೇಕಾಗಿದೆ ಎಂದರು.

ನ.28ರಂದು ನಂಜನಗೂಡಿಗೆ ಸಿಎಂ ಬೊಮ್ಮಾಯಿ ಭೇಟಿ: ಶಾಸಕ ಹರ್ಷವರ್ಧನ್‌

ಧರ್ಮ ಸಹಿಷ್ಣತೆ, ಸಮನ್ವಯತೆ, ಸೌಹಾರ್ದತೆಯಿಂದ ಬದುಕುತ್ತಿರುವ ನಾಡು ನಮ್ಮದು. ಕನ್ನಡ ಭಾಷೆ ಅತ್ಯಂತ ಶ್ರೀಮಂತ ಸಾಹಿತ್ಯ ಹೊಂದಿದ್ದು, ಕನ್ನಡದ 8 ಜನ ಸಾಹಿತ್ಯ ಪರಿಚಾರಕರು, ಸಾಹಿತ್ಯದ ಅತ್ಯುನ್ನತ ಪ್ರಶಸ್ತಿಯಾದ ಜ್ಞಾನಪೀಠ ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾಗಿರುವುದು ಹೆಮ್ಮೆಯ ವಿಷಯವಾಗಿದೆ. ಇಡೀ ದೇಶದಲ್ಲೇ 2ನೇ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಭಾಷೆ ನಮ್ಮ ಕನ್ನಡ ಭಾಷೆ ಎಂದು ಅವರು ತಿಳಿಸಿದರು. ಭಾರತೀಯ ಭಾಷೆ ಮತ್ತು ಸಾಹಿತ್ಯಗಳಲ್ಲಿ ಉನ್ನತ ಶ್ರೇಣಿಯಲ್ಲಿ ಇರುವ ಚೆಲುವ ಕನ್ನಡ ಭಾಷೆಗೆ ಎರಡು ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ. 

ಕರ್ನಾಟಕದ ಸ್ಥಾನ ಇಂದು ಭಾರತದ ಅಭಿವೃದ್ಧಿ ನಕ್ಷೆಯಲ್ಲಿ ಅಗ್ರ ಪಂಕ್ತಿಯಲ್ಲಿದೆ. ಭಾರತದ ಒಟ್ಟಾರೆ ಆರ್ಥಿಕ ವರಮಾನದಲ್ಲಿ ಕರ್ನಾಟಕದ್ದೇ ಸಿಂಹಪಾಲು. ಮಾಹಿತಿ ತಂತ್ರಜ್ಞಾನದ ದಿಗ್ಗಜರು ನಾವು. ಶೈಕ್ಷಣಿಕವಾಗಿ ರಾಷ್ಟ್ರದಲ್ಲೇ ಮುಂಚೂಣಿಯಲ್ಲಿರುವ ನಾಡು ನಮ್ಮದು. ವಿಜ್ಞಾನಿಗಳ ಕರ್ಮಭೂಮಿ ನಮ್ಮ ಕರ್ನಾಟಕ ಎಂದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮರ್ಥ ನಾಯಕತ್ವದಲ್ಲಿ ನಮ್ಮ ರಾಜ್ಯ ಅಭಿವೃದ್ಧಿಯ ಹೊಸ ಮನ್ವಂತರಕ್ಕೆ ತೆರೆದುಕೊಳ್ಳುತ್ತಿದೆ. ರಾಷ್ಟಿ್ರೕಯ ಶಿಕ್ಷಣ ನೀತಿಯನ್ನು ಜಾರಿಗೆ ತಂದ ಮೊದಲ ರಾಜ್ಯ ಎಂಬ ಹೆಗ್ಗಳಿಕೆ ನಮ್ಮದು. ಸುಶಿಕ್ಷಿತ, ಸುಸಂಸ್ಕೃತ ಸಮಾಜವನ್ನು ಕಟ್ಟಿಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಅವರು ಹೇಳಿದರು.

ಸಂಸದ ಪ್ರತಾಪ್‌ ಸಿಂಹ, ಶಾಸಕರಾದ ತನ್ವೀರ್‌ ಸೇಠ್‌, ಎಸ್‌.ಎ. ರಾಮದಾಸ್‌, ಎಲ್‌. ನಾಗೇಂದ್ರ, ಮರಿತಿಬ್ಬೇಗೌಡ, ಸಿ.ಎನ್‌. ಮಂಜೇಗೌಡ, ಮೇಯರ್‌ ಶಿವಕುಮಾರ್‌, ಉಪ ಮೇಯರ್‌ ಡಾ.ಜಿ. ರೂಪಾ, ಮೃಗಾಲಯ ಪ್ರಾಧಿಕಾರ ಅಧ್ಯಕ್ಷ ಎಂ. ಶಿವಕುಮಾರ್‌, ವಸ್ತುಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ, ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ, ಪೊಲೀಸ್‌ ಆಯುಕ್ತ ಡಾ. ಚಂದ್ರಗುಪ್ತ, ಜಿಪಂ ಸಿಇಒ ಬಿ.ಆರ್‌. ಪೂರ್ಣಿಮಾ, ನಗರ ಪಾಲಿಕೆ ಆಯುಕ್ತ ಲಕ್ಷ್ಮೀಕಾಂತ ರೆಡ್ಡಿ, ಎಂಡಿಎ ಆಯುಕ್ತ ದಿನೇಶ್‌ಕುಮಾರ್‌, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಬಿ.ಎಸ್‌. ಮಂಜುನಾಥಸ್ವಾಮಿ, ಎಸ್ಪಿ ಆರ್‌. ಚೇತನ್‌, ಡಿಸಿಪಿಗಳಾದ ಪ್ರದೀಪ್‌ ಗುಂಟಿ, ಎಂ.ಎಸ್‌. ಗೀತಾ, ಹೆಚ್ಚುವರಿ ಎಸ್ಪಿ ನಂದಿನಿ, ಕಸಾಪ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್‌, ಕನ್ನಡಪರ ಹೋರಾಟಗಾರರಾದ ತಾಯೂರು ವಿಠ್ಠಲಮೂರ್ತಿ, ಮೂಗೂರು ನಂಜುಂಡಸ್ವಾಮಿ, ಎಂ. ಮೋಹನ್‌ಕುಮಾರ್‌ಗೌಡ, ಎಸ್‌. ಬಾಲಕೃಷ್ಣ , ವೇಣುಗೋಪಾಲ್‌ ಮೊದಲಾದವರು ಇದ್ದರು.

ಮೈಸೂರು: ಮುಂದಿನ ವರ್ಷದಿಂದ ತಾಲೂಕು ಆಡಳಿತದಿಂದ ರೈತ ದಿನಾಚರಣೆ ಆಚರಿಸಲು ಕ್ರಮ

15 ನಿಮಿಷ ಮುಂಚಿತವಾಗಿ ಆರಂಭ!: ಕನ್ನಡ ರಾಜ್ಯೋತ್ಸವ ನಿಗದಿಗಿಂತ 15 ನಿಮಿಷ ಮುಂಚಿತವಾಗಿಯೇ ಆರಂಭವಾದ ಪ್ರಸಂಗ ಮಂಗಳವಾರ ಜರುಗಿತು. ಬೆಳಗ್ಗೆ 8.30ಕ್ಕೆ ಅರಮನೆ ಆವರಣದಲ್ಲಿರುವ ಶ್ರೀ ಭುವನೇಶ್ವರಿ ದೇವಿಗೆ ಪೂಜೆ, ಬೆಳಗ್ಗೆ 9ಕ್ಕೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಆವರಣದಲ್ಲಿ ಧ್ವಜಾರೋಹಣ ನಿಗದಿಯಾಗಿತ್ತು. ಆದರೆ, ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ಅವರು ಭುವನೇಶ್ವರಿ ದೇವಿಗೆ ನಿಗದಿತ ವೇಳೆಗೆ ಪೂಜೆ ಸಲ್ಲಿಸಿದ ಬಳಿಕ ನೇರವಾಗಿ ವೇದಿಕೆಗೆ ಆಗಮಿಸಿದರು. ಹೀಗಾಗಿ, ಬೆಳಗ್ಗೆ 8.45ಕ್ಕೆ ಕಾರ್ಯಕ್ರಮವು ಆರಂಭವಾಯಿತು.

ಸರ್ವ ಜನಾಂಗದ ಶಾಂತಿಯ ತೋಟವಾಗಿ ಕಂಗೊಳಿಸಿದ ನಮ್ಮ ನಾಡು ಇಂದು, ಮುಂದು, ಎಂದೆಂದೂ ಎಲ್ಲಾ ಜಾತಿ, ಧರ್ಮ, ಶ್ರದ್ಧೆಗಳ ಜನರೂ ಸಾಮರಸ್ಯದಿಂದ ಬದುಕುವ ಒಂದು ಸುಂದರ ತೋಟವಾಗಿಯೇ ಉಳಿಯಬೇಕು.
- ಎಸ್‌.ಟಿ. ಸೋಮಶೇಖರ್‌, ಸಹಕಾರ ಸಚಿವ

Follow Us:
Download App:
  • android
  • ios