Asianet Suvarna News Asianet Suvarna News

ಕೃಷಿ ಅರಣ್ಯ ಬೆಳೆಸಿದ ರೈತರಿಗೆ ಸಬ್ಸಿಡಿಯೇ ಇಲ್ಲ; 2 ವರ್ಷದಿಂದ 30 ಕೋಟಿ ರು. ಬಾಕಿ!

ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ (ಕೆಎಪಿವೈ) ರೈತರಿಗೆ ಪಾವತಿಸಬೇಕಿದ್ದ 30 ಕೋಟಿ ರುಪಾಯಿಗೂ ಅಧಿಕ ಪ್ರೋತ್ಸಾಹ ಧನವನ್ನು ಎರಡು ವರ್ಷವಾದರೂ ಪಾವತಿಸದೇ ಅರಣ್ಯ ಇಲಾಖೆ ಬಾಕಿ ಉಳಿಸಿಕೊಂಡಿದ್ದು, ಸಾವಿರಾರು ಅನ್ನದಾತರು ಸಂಕಷ್ಟಪಡುವಂತಾಗಿದೆ.

There is no subsidy for farmers who cultivate agroforestry bengaluru rav
Author
First Published Jul 23, 2023, 6:30 AM IST

ಸಿದ್ದು ಚಿಕ್ಕಬಳ್ಳೇಕೆರೆ

 ಬೆಂಗಳೂರು (ಜು.23) :  ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ (ಕೆಎಪಿವೈ) ರೈತರಿಗೆ ಪಾವತಿಸಬೇಕಿದ್ದ 30 ಕೋಟಿ ರುಪಾಯಿಗೂ ಅಧಿಕ ಪ್ರೋತ್ಸಾಹ ಧನವನ್ನು ಎರಡು ವರ್ಷವಾದರೂ ಪಾವತಿಸದೇ ಅರಣ್ಯ ಇಲಾಖೆ ಬಾಕಿ ಉಳಿಸಿಕೊಂಡಿದ್ದು, ಸಾವಿರಾರು ಅನ್ನದಾತರು ಸಂಕಷ್ಟಪಡುವಂತಾಗಿದೆ.

ರೈತರಿಗೆ ರಿಯಾಯಿತಿ ದರದಲ್ಲಿ ಸಸಿಗಳನ್ನು ಮಾರಾಟ ಮಾಡುವ ಇಲಾಖೆ, ಈ ಸಸಿಗಳನ್ನು ಒಂದು ವರ್ಷ ಪೋಷಿಸಿದ ಬಳಿಕ ಪ್ರತಿ ಗಿಡಕ್ಕೆ 35 ರು., ಎರಡು ವರ್ಷ ಪೋಷಿಸಿದರೆ 40 ಹಾಗೂ ಮೂರು ವರ್ಷ ಪೋಷಿಸಿದ ಬಳಿಕ ಪ್ರತಿ ಸಸಿಗೆ 50 ರುಪಾಯಿ ಸೇರಿದಂತೆ ಒಟ್ಟಾರೆ 125 ರು. ಪ್ರೋತ್ಸಾಹ ಧನ ನೀಡುತ್ತದೆ. ಆದರೆ ಕಳೆದ ಎರಡು ವರ್ಷದಿಂದ ಸಾವಿರಾರು ರೈತರಿಗೆ ಪ್ರೋತ್ಸಾಹ ಧನ ಪಾವತಿಸಿಲ್ಲ.

ರಾಜ್ಯದಲ್ಲಿ 495 ನರ್ಸರಿಗಳಿದ್ದು ರೈತರು ಇಲ್ಲಿಂದ ರಿಯಾಯಿತಿ ಬೆಲೆಯಲ್ಲಿ ಸಾಗುವಾನಿ, ಸಿಲ್ವರ್‌, ಶ್ರೀಗಂಧ, ಹೆಬ್ಬೇವು, ಮಹಾಘನಿ, ನೇರಳೆ ಸೇರಿದಂತೆ ಹಲವು ಜಾತಿಯ ಲಕ್ಷಾಂತರ ಸಸಿಗಳನ್ನು ಪ್ರತಿವರ್ಷವೂ ಕೆಎಪಿವೈ ಯೋಜನೆಯಡಿ ಖರೀದಿಸುತ್ತಾ ಬಂದಿದ್ದಾರೆ. ನೆಟ್ಟಸಸಿಗಳಲ್ಲಿ ಬದುಕಿಳಿದ ಸಸಿಗಳಲ್ಲಿ ಪ್ರತಿ ಫಲಾನುಭವಿಯು ಹೆಕ್ಟೇರ್‌ಗೆ ಗರಿಷ್ಠ 400 ಸಸಿಗೆ ಪ್ರೋತ್ಸಾಹ ಧನ ಪಡೆಯಲು ಅರ್ಹನಾಗಿರುತ್ತಾನೆ.

3 ರೂ. ಇದ್ದ ಒಂದು ಸಸಿ ಬೆಲೆ ಏಕಾಏಕಿ 23 ರೂ.ಗೆ ಏರಿಕೆ: ಕಂಗಾಲಾದ ರೈತ..!

ಅನುದಾನದ ಕೊರತೆಯಿಂದಾಗಿ ಎರಡು ವರ್ಷದಿಂದ ರೈತರರಿಗೆ ಹಣ ಸಂದಾಯವಾಗಿಲ್ಲ. ‘ಮಾತೆತ್ತಿದರೆ ಇಲಾಖೆಯು ಹಸಿರೀಕರಣ ಮಾಡಬೇಕು. ಅರಣ್ಯ ಪ್ರದೇಶದ ಉಳಿವಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಹೇಳುತ್ತದೆಯೇ ವಿನಃ ರೈತರ ಹಣ ಪಾವತಿಗೆ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

2020-21 ರಲ್ಲಿ ಕೆಎಪಿವೈ ಯೋಜನೆಯಡಿ ರೈತರಿಗೆ 15.69 ಕೋಟಿ ರು. ಪಾವತಿಸಲಾಗಿದೆ. 2021-22 ರಲ್ಲಿ 10 ಕೊಟಿ ರು. ಮತ್ತು 2022-23 ರಲ್ಲಿ 20 ಕೋಟಿ ರು. ಪಾವತಿಯಾಗಿದೆ. ಆದರೂ ಅನುದಾನದ ಕೊರತೆಯಿಂದಾಗಿ ಇನ್ನೂ 30 ಕೋಟಿ ರುಪಾಯಿಗೂ ಅಧಿಕ ಹಣವನ್ನು ಎರಡು ವರ್ಷದಿಂದ ಬಾಕಿ ಉಳಿಸಿಕೊಳ್ಳಲಾಗಿದೆ. ಇನ್ನಾದರೂ ತುರ್ತಾಗಿ ಬಾಕಿ ಪಾವತಿ ಮಾಡಬೇಕೆಂದು ರೈತರು ಆಗ್ರಹಿಸಿದ್ದಾರೆ.

ಏನಿದು ಕೆಎಪಿವೈ ಯೋಜನೆ

ರೈತರು, ಸಾರ್ವಜನಿಕರು, ಸಂಘ-ಸಂಸ್ಥೆಗಳನ್ನು ಅರಣ್ಯೀಕರಣ ಮಾಡಲು ಸಕ್ರಿಯಗೊಳಿಸುವ ಯೋಜನೆ ಇದಾಗಿದೆ. ಸಸಿ ಖರೀದಿಸುವಾಗಲೇ ರೈತರ ಬ್ಯಾಂಕ್‌ ಖಾತೆ, ಜಮೀನಿನ ಪಹಣಿ, ಆಧಾರ್‌ ಕಾರ್ಡ್‌ ಜೆರಾಕ್ಸ್‌ ಮತ್ತಿತರ ಮಾಹಿತಿ ಪಡೆಯಲಾಗುತ್ತದೆ. ಸಸಿ ನೆಟ್ಟವರ್ಷದ ಬಳಿಕ ಬದುಕುಳಿದ ಸಸಿಗಳನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಲೆಕ್ಕ ಹಾಕಿ ಅಧಿಕಾರಿಗಳಿಗೆ ವರದಿ ಸಲ್ಲಿಸುತ್ತಾರೆ. ಇದನ್ನು ವಲಯವಾರು ಕ್ರೋಢೀಕರಿಸಿ ಹಣ ಪಾವತಿಗಾಗಿ ಸಮಗ್ರ ವರದಿ ಸಿದ್ಧಪಡಿಸಿ ಪ್ರಧಾನ ಕಚೇರಿಗೆ ಕಳುಹಿಸಲಾಗುತ್ತದೆ. ಬಳಿಕ ಫಲಾನುಭವಿ ರೈತರ ಬ್ಯಾಂಕ್‌ ಖಾತೆಗಳಿಗೆ ನೇರವಾಗಿ ಹಣ ಸಂದಾಯವಾಗುತ್ತದೆ.

Mandya: ಮಳೆ ಕೊರತೆಯಿಂದ ಗಿಡಗಳ ಬೆಲೆ ಹೆಚ್ಚಳ: ಅರಣ್ಯ ಕೃಷಿಗೆ ಹಿನ್ನೆಡೆ

ಕಳೆದ ಎರಡು ವರ್ಷದಿಂದ ಕೆಎಪಿವೈ ಯೋಜನೆಯಡಿ ರೈತರಿಗೆ 30 ಕೋಟಿ ರು. ಬಾಕಿ ಪಾವತಿಸಬೇಕಿದೆ. ಅನುದಾನದ ಕೊರತೆಯಿಂದ ಹಣ ಪಾವತಿ ವಿಳಂಬವಾಗಿದ್ದು, ಈಗಾಗಲೇ ಸರ್ಕಾರದ ಗಮನಕ್ಕೆ ತರಲಾಗಿದೆ. ಶೀಘ್ರದಲ್ಲೇ ಬಾಕಿ ಹಣ ಬಿಡುಗಡೆಯಾಗಲಿದೆ.

- ಬ್ರಿಜೇಶ್‌ಕುಮಾರ್‌ ದೀಕ್ಷಿತ್‌, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅಭಿವೃದ್ಧಿ)

Follow Us:
Download App:
  • android
  • ios