Mandya: ಮಳೆ ಕೊರತೆಯಿಂದ ಗಿಡಗಳ ಬೆಲೆ ಹೆಚ್ಚಳ: ಅರಣ್ಯ ಕೃಷಿಗೆ ಹಿನ್ನೆಡೆ
ಮುಂಗಾರು ಪೂರ್ವ ಹಾಗೂ ಮಳೆ ಕೊರತೆಯಿಂದ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗೆ ಹಿನ್ನಡೆ ಉಂಟಾಗಿರುವುದಲ್ಲದೆ, ಅರಣ್ಯ ಕೃಷಿಯೂ ಮಂಕಾಗಿದೆ. ಇದರ ಜೊತೆಗೆ ಅರಣ್ಯ ಇಲಾಖೆಯ ವಿತರಿಸಲಾಗುವ ಗಿಡಗಳ ಬೆಲೆಯೂ ಹೆಚ್ಚಳವಾಗಿರುವುದರಿಂದ ಗಿಡಗಳಿಗೆ ಬೇಡಿಕೆಯೇ ಇಲ್ಲದಂತಾಗಿದೆ.
ಮಂಡ್ಯ (ಜು.02): ಮುಂಗಾರು ಪೂರ್ವ ಹಾಗೂ ಮಳೆ ಕೊರತೆಯಿಂದ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗೆ ಹಿನ್ನಡೆ ಉಂಟಾಗಿರುವುದಲ್ಲದೆ, ಅರಣ್ಯ ಕೃಷಿಯೂ ಮಂಕಾಗಿದೆ. ಇದರ ಜೊತೆಗೆ ಅರಣ್ಯ ಇಲಾಖೆಯ ವಿತರಿಸಲಾಗುವ ಗಿಡಗಳ ಬೆಲೆಯೂ ಹೆಚ್ಚಳವಾಗಿರುವುದರಿಂದ ಗಿಡಗಳಿಗೆ ಬೇಡಿಕೆಯೇ ಇಲ್ಲದಂತಾಗಿದೆ. ಕಳೆದ ವರ್ಷ ಕಡಿಮೆ ಬೆಲೆಗೆ ಸಿಗುತ್ತಿದ್ದರಿಂದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಗಿಡಗಳನ್ನು ಕೊಂಡೊಯ್ಯುತ್ತಿದ್ದರು. ಇದರಿಂದ ಅರಣ್ಯ ಇಲಾಖೆಯಿಂದ ವಿತರಿಸಲಾಗುವ ಗಿಡಗಳಿಗೆ ಭಾರಿ ಬೇಡಿಕೆ ಎದುರಾಗಿತ್ತು. ಆದರೆ, ಈ ವರ್ಷ ಇಲಾಖೆ ಗಿಡಗಳಿಗೆ ಬೆಲೆಯನ್ನು ಹೆಚ್ಚಳ ಮಾಡಿರುವುದರಿಂದ ರೈತರು ಗಿಡಗಳನ್ನು ಕೊಳ್ಳುವುದಕ್ಕೆ ಆಸಕ್ತಿ ತೋರಿಸುತ್ತಿಲ್ಲ.
ಗಿಡಗಳ ಬೆಲೆ ಏರಿಕೆ: 8*12 ಮಾದರಿಯ ಸಸಿಗಳ ಬೆಲೆ 3 ರು.ನಿಂದ 23 ರು.ಗೆ ಹೆಚ್ಚಿಸಲಾಗಿದ್ದರೆ, 6*9 ಮಾದರಿಯ ಗಿಡಗಳ ಬೆಲೆ 1ರು.ನಿಂದ 6ರು.ಗೆ ಹೆಚ್ಚಿಸಲಾಗಿದೆ. ಇಲಾಖೆಯಿಂದ ಹೆಬ್ಬೇವು, ಮಹಾಘನಿ, ತೇಗ, ರಕ್ತಚಂದನ, ಶ್ರೀಗಂಧ, ಹುಲಚಿ ಸೇರಿದಂತೆ ಆರೇಳು ಮಾದರಿಯ ಗಿಡಗಳನ್ನು ಮಾರಾಟ ಮಾಡಲಾಗುತ್ತಿದೆ. ಶೀಘ್ರ ಬೆಳವಣಿಗೆ ಕಾಣುವ ಹೆಬ್ಬೇವು, ಮಹಾಘನಿ, ತೇಗ ಮರಗಳಿಗೆ ಸಾಮಾನ್ಯವಾಗಿ ಹೆಚ್ಚಿನ ಬೇಡಿಕೆ ಇದೆ. ಕಳೆದ ವರ್ಷ ಮುಂಗಾರು ಪೂರ್ವ ಮಳೆಯಿಂದಲೇ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಗಿಡಗಳನ್ನು ಕೊಂಡೊಯ್ದು ನೆಟ್ಟು ಬೆಳೆಸಿದ್ದರು. ಈ ವರ್ಷವೂ ರೈತರಿಂದ ಹೆಚ್ಚಿನ ಬೇಡಿಕೆ ಬರಬಹುದೆಂದು ನಿರೀಕ್ಷಿಸಿ ಅತಿ ಹೆಚ್ಚು ಸಂಖ್ಯೆಯಲ್ಲಿ ಗಿಡಗಳನ್ನು ಮಾರಾಟಕ್ಕೆ ಸಿದ್ಧಪಡಿಸಿಟ್ಟುಕೊಂಡಿದ್ದರೂ ಗಿಡಗಳನ್ನು ಕೊಳ್ಳುವುದಕ್ಕೆ ಮುಂದಾಗುತ್ತಿಲ್ಲ.
Chamarajanagar: ಬೆಳೆ ಹಾನಿ: ಸಮಗ್ರ ವರದಿ ನೀಡಲು ಸಚಿವ ವೆಂಕಟೇಶ್ ಸೂಚನೆ
ಖರೀದಿಗೆ ನಿರಾಸಕ್ತಿ: ರೈತರು ಇಲಾಖೆಗೆ ಬಂದು ಗಿಡಗಳ ಬೆಲೆಯನ್ನು ವಿಚಾರಿಸಿಕೊಂಡು ಹೋಗುತ್ತಿದ್ದಾರೆ. ಆದರೆ, ಖರೀದಿಗೆ ಒಲವನ್ನು ತೋರುತ್ತಿಲ್ಲ. ಇದರಿಂದ ಇಲಾಖೆಯಿಂದ ಗಿಡಗಳು ಮಾರಾಟವಾಗದೆ ಇರುವ ಜಾಗದಲ್ಲೇ ಉಳಿಯುವಂತಾಗಿದೆ. ಮಂಡ್ಯ ತಾಲೂಕು ಒಂದರಲ್ಲೇ 55ಸಾವಿರ ಸಸಿಗಳನ್ನು ರೆಡಿಮಾಡಿಟ್ಟುಕೊಂಡಿದ್ದರೂ ಕೊಳ್ಳಲು ರೈತರು ಬಾರದಂತಾಗಿದೆ. ಮಂಡ್ಯ ತಾಲೂಕೊಂದರಲ್ಲೇ 250 ಮಂದಿ ಅರಣ್ಯ ಕೃಷಿಯನ್ನು ಅವಲಂಬಿಸಿದ್ದಾರೆ. ಹೆಬ್ಬೇವು, ಮಹಾಘನಿ, ಹುಲಚಿ ಸೇರಿದಂತೆ ಕೆಲವು ಮರಗಳ ಬೆಳವಣಿಗೆ ಶೀಘ್ರಗತಿಯಲ್ಲಿರುವುದರಿಂದ ಬಹುತೇಕರು ಇವುಗಳನ್ನು ಬೆಳೆಸುವುದಕ್ಕೆ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ನಗರ-ಪಟ್ಟಣ ಪ್ರದೇಶಗಳ ಜನರು ಖಾಲಿ ಇರುವ ಜಾಗಗಳಲ್ಲಿ ಗಿಡಗಳನ್ನು ತೆಗೆದುಕೊಂಡು ಹೋಗಿ ಬೆಳೆಸುತ್ತಿದ್ದರು. ಈ ಬಾರಿ ಮಳೆಕೊರತೆ ಹಿನ್ನೆಲೆ ರೈತರು ಹಾಗೂ ಜನರು ಗಿಡಗಳನ್ನು ಕೊಳ್ಳುವುದಕ್ಕೆ ನಿರಾಸಕ್ತಿ ತೋರಿದ್ದಾರೆ.
ಮಳೆ ಕೊರತೆ: ಕಳೆದ ನಾಲ್ಕೈದು ವರ್ಷಗಳಿಂದ ಅರಣ್ಯಇಲಾಖೆಯಿಂದ ಬಹಳಷ್ಟುಸಂಖ್ಯೆಯ ರೈತರು ಹಾಗೂ ಜನರು ಗಿಡಗಳನ್ನು ಕೊಂಡು ನೆಟ್ಟು ಬೆಳೆಸುವುದಕ್ಕೆ ಆಸಕ್ತಿ ತೋರುತ್ತಿದ್ದರು. ಆದರೆ, ಈ ಬಾರಿ ಪೂರ್ವ ಮುಂಗಾರು ಹಾಗೂ ಮುಂಗಾರು ಮಳೆ ಕೈಕೊಟ್ಟಿರುವುದರಿಂದ ಗಿಡಗಳನ್ನು ನೆಟ್ಟು ಬೆಳೆಸುವುದು ಕಷ್ಟವಾಗಬಹುದೆಂಬ ಭಯ ಸಹಜವಾಗಿ ಎಲ್ಲರನ್ನೂ ಕಾಡುತ್ತಿದೆ. ಮಳೆ ಶುರುವಾಗಿದ್ದರೆ ಮಾರಾಟಕ್ಕೆ ಸಿದ್ಧವಿರುವ ಸಸಿಗಳಲ್ಲಿ ಬಹುತೇಕ ಮಾರಾಟವಾಗುತ್ತಿದ್ದವು. ಆದರೆ, ಮಳೆ ಸಮರ್ಪಕ ಬಾರದ ಕಾರಣ ಅರಣ್ಯ ಕೃಷಿ ಮಾಡಲು ಮುಂದಾಗಿದ್ದರು. ಈಗ ಅದರಿಂದ ಹಿಂದೆ ಸರಿಯುತ್ತಿರುವ ಮಾತುಗಳು ಕೇಳಿ ಬರುತ್ತಿವೆ.
ಪ್ರಸಕ್ತ ಸಾಲಿನಿಂದ ಅರಣ್ಯ ಇಲಾಖೆಯಿಂದ ವಿತರಿಸಲಾಗುವ ಗಿಡಗಳ ಬೆಲೆಯನ್ನು ರಾಜ್ಯಸರ್ಕಾರ ತುಸು ಹೆಚ್ಚಳ ಮಾಡಿದೆ. ಏರಿಸಿರುವ ಬೆಲೆಯನ್ನು ಕೊಂಚ ಇಳಿಸಬೇಕೆಂಬ ಬೇಡಿಕೆಯೂ ಕೇಳಿಬರುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯಸರ್ಕಾರವೂ ಚಿಂತನೆ ನಡೆಸಿದೆ. ಒಮ್ಮೆ ದರ ಇಳಿಸಿದರೆ, ನಿರೀಕ್ಷೆಯಂತೆ ಮಳೆ ಸುರಿದರೆ ಗಿಡಗಳಿಗೆ ಬೇಡಿಕೆ ಸೃಷ್ಟಿಯಾಗಬಹುದೆಂದು ನಂಬಲಾಗಿದೆ.
ನೀರಿನ ಸಮಸ್ಯೆ ನೀಗಿಸಲು ಕೆರೆಗಳ ಸಮಗ್ರ ಅಭಿವೃದ್ಧಿಗೆ ಕ್ರಮ: ಸಚಿವ ಮುನಿಯಪ್ಪ
ರೈತರು ಬಂದು ಗಿಡಗಳ ಬೆಲೆಯನ್ನು ಕೇಳಿಕೊಂಡು ಹೋಗುತ್ತಿದ್ದಾರೆ. ಖರೀದಿಗೆ ಮಾತ್ರ ಯಾರೂ ಮುಂದಾಗುತ್ತಿಲ್ಲ. ಮಳೆ ಕೊರತೆಯಿಂದಲೋ, ಬೆಲೆ ಹೆಚ್ಚಳ ಎಂಬ ಕಾರಣದಿಂದಲೋ ಗಿಡಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿಲ್ಲ. ಮುಂದೆ ಉತ್ತಮ ಮಳೆಯಾದರೆ ಗಿಡಗಳು ಮಾರಾಟವಾಗಬಹುದೆಂಬ ನಿರೀಕ್ಷೆಯಲ್ಲಿದ್ದೇವೆ.
- ಚೈತ್ರಾ, ವಲಯ ಅರಣ್ಯ ಸಂರಕ್ಷಣಾಧಿಕಾರಿ, ಮಂಡ್ಯ